ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ ಮಕ್ಕಳಿಗೆ ಮೊಟ್ಟೆ ನೀಡುವ ಶಿಕ್ಷಣ ಇಲಾಖೆಯ ನಿರ್ಧಾರವನ್ನು ಕಾಶಿ ಪೀಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಹಾಗೂ ಶ್ರೀಶೈಲ ಪೀಠದ ಚೆನ್ನಸಿದ್ಧರಾಮ ಪಂಡಿತಾರಾಧ್ಯ ಸ್ವಾಮೀಜಿ ವಿರೋಧಿಸಿದ್ದಾರೆ.
ವೀರಶೈವ-ಲಿಂಗಾಯತ ಮಠಗಳು ನಡೆಸುವ ಅನುದಾನಿತ ವಿದ್ಯಾ ಸಂಸ್ಥೆಗಳಲ್ಲಿ ಮಕ್ಕಳಿಗೆ ಮೊಟ್ಟೆ ನೀಡಬಾರದು ಎಂದು ಇಬ್ಬರೂ ಶ್ರೀಗಳು ಹೇಳಿದ್ದಾರೆ.
ಬಹುತೇಕ ಮಠ-ಮಂದಿರಗಳ ಶಿಕ್ಷಣ ಸಂಸ್ಥೆಗಳು ನಡೆಸುತ್ತಿರುವ ಶಾಲೆಗಳು ಮಠ-ಪೀಠಗಳ ಆವರಣದಲ್ಲಿಯೇ ನಡೆಯುತ್ತಿವೆ. ಅಲ್ಲಿಯ ವಿದ್ಯಾರ್ಥಿಗಳಿಗೆ ಮೊಟ್ಟೆ ವಿತರಣೆ ಮಾಡುವುದು ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗುತ್ತದೆ ಎಂದಿದ್ದಾರೆ.
ಮೊಟ್ಟೆ ನಿರಾಕರಿಸುವ ಮಕ್ಕಳಿಗೆ ನೀಡಿದಂತೆ ಮಠ-ಮಂದಿರಗಳು ನಡೆಸುವ ಶಾಲಾ ವಿದ್ಯಾರ್ಥಿಗಳಿಗೆ ನಿತ್ಯವೂ ಬಾಳೆಹಣ್ಣು ಹಾಗೂ ಶೇಂಗಾಚಿಕ್ಕಿ ವಿತರಣೆ ಮಾಡಲು ಪರಿಷ್ಕೃತ ಆದೇಶ ಹೊರಡಿಸಬೇಕು ಎಂದು ಒತ್ತಾಯಿಸಿದ್ದಾರೆ.
ಮಠ, ಮಂದಿರಗಳು ತಮ್ಮ ಸ್ವಂತ ಖರ್ಚಿನಲ್ಲಿಯೇ ಶಾಲೆಗಳನ್ನು ತೆರೆದು ಲಕ್ಷಾಂತರ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಿವೆ. ಈಗ ಸರ್ಕಾರದ ಅನುದಾನ ಪಡೆಯುತ್ತಿರುವ ಕಾರಣಕ್ಕೆ ಆದೇಶಗಳನ್ನು ಬಲವಂತವಾಗಿ ಹೇರಬಾರದು ಎಂದು ಹೇಳಿದ್ದಾರೆ.
ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ ಮಕ್ಕಳಿಗೆ ವಾರದ ಆರು ದಿನ ಬೇಯಿಸಿದ ಮೊಟ್ಟೆ ನೀಡಲು ಶಾಲಾ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.