ಗದಗ:
ಗದಗ ಜಿಲ್ಲಾ ಲಿಂಗಾಯತ ಸಮಾವೇಶ ಇದೇ 22 ರವಿವಾರದಂದು ಮಧ್ಯಾಹ್ನ 3:30 ಗಂಟೆಗೆ ಶ್ರೀ ಜಗದ್ಗುರು ತೋಂಟದಾರ್ಯ ಸಿದ್ದಲಿಂಗೇಶ್ವರ ಕಲ್ಯಾಣ ಕೇಂದ್ರದಲ್ಲಿ ಜರುಗಲಿದೆಯೆಂದು ಮಹಾಸಭಾ ಮುಖಂಡ, ಶರಣತತ್ವ ಚಿಂತಕ ಅಶೋಕ ಬರಗುಂಡಿ ಅವರು, ಗುರುವಾರ ಇಲ್ಲಿನ ಜಿಲ್ಲಾ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು.
ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕದ ನೇತೃತ್ವದಲ್ಲಿ ನಡೆಯುವ ಸಮಾವೇಶದ ಸಾನಿಧ್ಯವನ್ನು ಗದಗ ಜಗದ್ಗುರು ತೋಂಟದಾರ್ಯ ಮಠದ ಡಾ.ತೋಂಟದ ಸಿದ್ದರಾಮ ಮಹಾಸ್ವಾಮಿಗಳು ವಹಿಸಲಿದ್ದಾರೆ.
ಬೆಳಗಾವಿ ಜಿಲ್ಲೆ, ಬಸವಬೆಳವಿ ಚರಂತೇಶ್ವರ ಮಠದ ಪೂಜ್ಯ ಶರಣಬಸವ ಸ್ವಾಮಿಗಳು ಹಾಗೂ ವಿಜಯಪುರದ ಪ್ರಗತಿಪರ, ಶರಣತತ್ವ ಚಿಂತಕ ಡಾ. ಜೆ.ಎಸ್. ಪಾಟೀಲ ಅವರುಗಳು ಕ್ರಮವಾಗಿ ಲಿಂಗಾಯತ ಬೆಳೆದು ಬಂದ ಬಗೆ, ಅದರ ಇತಿಹಾಸ ಹಾಗೂ ಲಿಂಗಾಯತ ಜ್ವಲಂತವಾಗಿ ಎದುರಿಸುತ್ತಿರುವ ಅನೇಕ ಸಮಸ್ಯೆಗಳ ಕುರಿತಾದ ಚಿಂತನೆಗಳ ಉಪನ್ಯಾಸ ನೀಡಲಿದ್ದಾರೆ.
ಈ ಎಲ್ಲ ಚಿಂತನೆಗಳ ನೇತೃತ್ವವನ್ನು ಸಮಾವೇಶದ ಮುಖ್ಯ ಅತಿಥಿಗಳಾಗಿರುವ, ಜಾಗತಿಕ ಲಿಂಗಾಯತ ಮಹಾಸಭಾ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಎಸ್.ಎಂ. ಜಾಮದಾರ ಅವರು ನಡೆಸಿಕೊಡುತ್ತಾರೆ.
ಅಧ್ಯಕ್ಷತೆಯನ್ನು ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಸ್. ಚೆಟ್ಟಿ ವಹಿಸುತ್ತಾರೆ.
ಸಮಾವೇಶದಲ್ಲಿ ಜಿಲ್ಲೆಯ ಎಲ್ಲಾ ತಾಲೂಕುಗಳಿಂದ ಏಳೆಂಟುನೂರು ಜನ ಭಾಗವಹಿಸುವ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ.
ಅಂದು ಮುಂಜಾನೆ 10:30 ಗಂಟೆಗೆ ಕೇಂದ್ರ ಜಾಗತಿಕ ಲಿಂಗಾಯತ ಮಹಾಸಭಾದ ಆರನೇ ಸರ್ವಸಾಮಾನ್ಯ ವಾರ್ಷಿಕ ಮಹಾಸಭೆ ಜರುಗಲಿದೆ. ಗದಗ ತೋಂಟದಾರ್ಯ ಮಠದ ಡಾ. ತೋಂಟದ ಸಿದ್ದರಾಮ ಮಹಾಸ್ವಾಮಿಗಳ ಸನ್ನಿಧಾನದಲ್ಲಿ ಈ ಮಹಾಸಭೆ ನಡೆಸಲು ಯೋಜಿಸಲಾಗಿದೆ. ಇದರಲ್ಲಿ ಕೇಂದ್ರ ಸಮಿತಿಯ ಪದಾಧಿಕಾರಿಗಳು, ಸದಸ್ಯರು ಕರ್ನಾಟಕದ ಎಲ್ಲಾ ಜಿಲ್ಲಾ, ತಾಲೂಕು ಘಟಕಗಳ ಅಧ್ಯಕ್ಷರು ಸದಸ್ಯರು, ಹೊರದೇಶದ ಪ್ರತಿನಿಧಿಗಳು, ವಿಶೇಷ ಆಹ್ವಾನಿತರು, ಮಹಾಪೋಷಕರು, ದಾಸೋಹಿ ಸದಸ್ಯರು, ಎಲ್ಲಾ ಪ್ರಾತಿನಿಧಿಕ ಸದಸ್ಯರು ಮಹಾಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆಂದು ಬರಗುಂಡಿ ಅವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಸ್. ಚೆಟ್ಟಿ, ಕಾರ್ಯದರ್ಶಿ ಶೇಖಣ್ಣ ಕವಳಿಕಾಯಿ, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಶ್ರೀದೇವಿ ಶೆಟ್ಟರ, ಕಾರ್ಯದರ್ಶಿ ಗೌರಕ್ಕ ಬಡಿಗಣ್ಣವರ, ಜಿಲ್ಲಾ ಮುಖಂಡರಾದ ಎಸ್.ಎ. ಮುಗದ, ಪ್ರಕಾಶ ಅಸುಂಡಿ, ಜಿ.ಬಿ. ಪಾಟೀಲ ಉಪಸ್ಥಿತರಿದ್ದರು.
