“ಮರಣ ಬಂದರೆ ಒಯ್ಯೋ, ಕರುಣ ಬಂದರೆ ಕಾಯೋ ಬಸವಣ್ಣ”
ರಾಮದುರ್ಗ
ವಚನ ದರ್ಶನ ವಿರುದ್ಧ ಗಟ್ಟಿ ಧ್ವನಿಯೆತ್ತಿರುವ ನಾಗನೂರಿನ ಗುರು ಬಸವ ಮಠದ ನಿವೇದಿತಾ ಮತ್ತು ಅವರ ಕುಟುಂಬಕ್ಕೆ ಜೀವ ಬೆದರಿಕೆ ಬಂದಿದೆ.
ಕುಡಿದ ಅಮಲಿನಲ್ಲಿದ್ದ ಸ್ಥಳೀಯ ಯುವಕರ ಸಣ್ಣ ತಂಡ ಮೊದಲು ಬಟಕುರ್ಕಿಯಲ್ಲಿ ನಿವೇದಿತಾ ನಡೆಸುವ ಸಣ್ಣ ಅಂಗಡಿಗೆ (ಆನಲೈನ್ ಕೇಂದ್ರಕ್ಕೆ) ಹೋಗಿ ಅಲ್ಲಿ ಅವರ ತಂದೆ ಪೂಜ್ಯ ಬಸವ ಪ್ರಕಾಶ ಸ್ವಾಮೀಜಿ ಅವರನ್ನು ಬೆದರಿಸಿ ಬಲವಂತವಾಗಿ ಅಂಗಡಿ ಮುಚ್ಚಿಸಿದ್ದಾರೆ.
ಪೂಜ್ಯ ಬಸವ ಪ್ರಕಾಶ ಸ್ವಾಮೀಜಿ ಅವರು 5 ಕಿಲೋಮೀಟರು ದೂರದಲ್ಲಿರುವ ಮಠಕ್ಕೆ ಸ್ಕೂಟಿಯಲ್ಲಿ ಹೋಗುವಾಗ ಇಬ್ಬರು ಯುವಕರು ದಾರಿಯಲ್ಲಿ ನಿಲ್ಲಿಸಿ ಮತ್ತೆ ಬೆದರಿಸಿದ್ದಾರೆ.
ನಂತರ ಸುಮಾರು ಮೂವತ್ತು ಜನರಿದ್ದ ತಂಡವೊಂದು ಮಠಕ್ಕೆ ನುಗ್ಗಿ ವಚನ ದರ್ಶನದ ವಿರುದ್ಧ ಮಾಧ್ಯಮಗಳಲ್ಲಿ ಹೇಳಿಕೆ ಕೊಟ್ಟಿದ್ದಕ್ಕೆ ಇಡೀ ಕುಟುಂಬದ ಮೇಲೆ ಗಲಾಟೆ ಮಾಡಿದ್ದಾರೆ.
ವಿಷಯ ತಿಳಿದ ತಕ್ಷಣವೇ ಒಂದು ಪ್ರಮುಖ ಲಿಂಗಾಯತ ಮಠದ ಶ್ರೀಗಳು, ಜಾಗತಿಕ ಲಿಂಗಾಯತ ಸಭಾ ಮತ್ತು ಇತರ ಬಸವ ಸಂಘಟನೆಗಳ ಮುಖಂಡರು ನಿವೇದಿತಾ ಅವರ ಕುಟುಂಬದ ನೆರವಿಗೆ ಧಾವಿಸಿದ್ದಾರೆ.
ಸ್ಥಳೀಯ ಪೊಲೀಸರು ಮಠಕ್ಕೆ ಭೇಟಿ ನೀಡಿ ಮತ್ತೆ ಯಾರಾದರು ಬಂದು ಬೆದರಿಸಿದರೆ ಕರೆ ಮಾಡುವಂತೆ ಹೇಳಿದ್ದಾರೆ. ನಿವೇದಿತಾ ಬಳಿಯಿದ್ದ ವಚನ ದರ್ಶನ ಪುಸ್ತಕದ, ಅದರಲ್ಲಿ ಗುರುತು ಮಾಡಿಕೊಂಡಿದ್ದ ಭಾಗಗಳ ಫೋಟೋ ತೆಗೆದುಕೊಂಡೂ ಹೋಗಿದ್ದಾರೆ.

ಇಷ್ಟೆಲ್ಲಾ ನಡೆದದ್ದು ಸೆಪ್ಟೆಂಬರ್ 14ರಂದು.
ಪರಿಸ್ಥಿತಿ ಸ್ಪಷ್ಟ ಚಿತ್ರಣ ಪಡೆದುಕೊಳ್ಳುವ ತನಕ ಕಾದು ಈಗ ನಡೆದ ಘಟನೆಗಳ ವಿವರ ಬಸವ ಮೀಡಿಯಾ ಹಂಚಿಕೊಳ್ಳುತ್ತಿದೆ.
ಸೆಪ್ಟೆಂಬರ್ 14ರಂದು ನಡೆದ ಘಟನೆಗಳು.
ಸಂಜೆ 4.45
ಬಟಕುರ್ಕಿಯ ಅಂಗಡಿಯಲ್ಲಿ (ಆನ್ಲೈನ್ ಸೆಂಟರ್) ಪೂಜ್ಯ ಬಸವ ಪ್ರಕಾಶ ಸ್ವಾಮೀಜಿ ಕೆಲಸ ಮಾಡುತ್ತಾ ಕುಳಿತಿದ್ದಾರೆ.
ಆಗ ಬಟಕುರ್ಕಿಯ ಮತ್ತು ನಾಗನೂರಿನ 8-10 ಹುಡುಗರು ಅಂಗಡಿಗೆ ಹೋಗಿ ಗಲಾಟೆ ಮಾಡಿದ್ದಾರೆ.
ನಿಮ್ಮ ಮಗಳು ಮಾಧ್ಯಮಗಳಲ್ಲಿ ಏನೇನೋ ಹೇಳಿದ್ದಾಳೆ… ಅವಳು ಸಾರ್ವಜನಿಕವಾಗಿ ಕ್ಷಮೆ ಕೇಳಬೇಕು…ನೀವು ನಮ್ಮ ಸರಕಾರ ಇದ್ದಾಗ ಅನುದಾನ ತೆಗೆದುಕೊಂಡಿದ್ದೀರಿ ಆದರೆ ಕೃತಜ್ಞತೆ ಇಲ್ಲ …
“ನೀನೇನಾದರೂ 5 ವರ್ಷ ಮುಂಚೆ ಸಿಕ್ಕಿದ್ದರೆ ಕಾಲು ತೆಗೆಯುತ್ತಿದ್ದೆ,” ಎಂದು ತಂಡದಲ್ಲಿದ್ದ ಒಬ್ಬ ಪೂಜ್ಯ ಬಸವ ಪ್ರಕಾಶ ಸ್ವಾಮೀಜಿಯವರನ್ನು ಬೆದರಿಸಿದ್ದಾನೆ.
ಅದೇ ವ್ಯಕ್ತಿ ಮುಂದುವರೆದು “ಇಲ್ಲಿ ನಮ್ಮ ಕಾರ್ಯಕ್ರಮವಿದೆ. ನೀವಿಲ್ಲೇ ಇದ್ದರೆ ನಮ್ಮ ಕಾರ್ಯಕ್ರಮಕ್ಕೆ ಹೊಲಸು ಹಿಡಿಯುತ್ತದೆ, ಅಂಗಡಿ ಮುಚ್ಚಿಕೊಂಡು ಹೋಗಿ,” ಎಂದು ಹೇಳುತ್ತಾನೆ.
ಅಂಗಡಿ ಮುಚ್ಚಿಕೊಂಡು ಪೂಜ್ಯ ಬಸವ ಪ್ರಕಾಶ ಸ್ವಾಮೀಜಿ ಅವರು 5 ಕಿಲೋಮೀಟರು ದೂರದಲ್ಲಿರುವ ಮಠಕ್ಕೆ ಸ್ಕೂಟಿ ಹತ್ತಿ ಹೊರಡುತ್ತಾರೆ.
ತಂಡದಲ್ಲಿದ್ದ ಇಬ್ಬರು ಅವರನ್ನು ಹಿಂಬಾಲಿಸಿ ದಾರಿಯಲ್ಲಿ ನಿಲ್ಲಿಸಿ ಮತ್ತೆ ಬೆದರಿಸಿದ್ದಾರೆ. “ನಾಳೆ ನಮ್ಮ ಸ್ವಾಮೀಜಿಯ ಜೊತೆ ಬರುತ್ತೇವೆ. ನೀವು ಮಠದಲ್ಲಿ ಇರಬೇಕು,” ಎಂದು ಎಚ್ಚರಿಕೆ ನೀಡಿದ್ದಾರೆ.
ಸಂಜೆ 5.30
ಪೂಜ್ಯ ಬಸವ ಪ್ರಕಾಶ ಸ್ವಾಮೀಜಿ ಮಠಕ್ಕೆ ಬರುವಲ್ಲಿ ಅವರ ಹಿಂದೆಯೇ ಸುಮಾರು 30 ಜನ ಮೋಟಾರು ಸೈಕಲ್ಲುಗಳಲ್ಲಿ ಮತ್ತು ಒಂದು ವ್ಯಾಗನ್ ಆರ್ ಕಾರಿನಲ್ಲಿ ಬಂದು ಮಠಕ್ಕೆ ನುಗ್ಗುತ್ತಾರೆ. ಅವರಲ್ಲಿ ಕೆಲವರು ಕುಡಿದಿರುತ್ತಾರೆ. “ನಾವು ಲಿಂಗಾಯತರು ಹಿಂದೂಗಳಲ್ಲ,” ಎಂದು ನಿವೇದಿತಾ ಅವರು ಕೊಟ್ಟಿದ್ದ ಹೇಳಿಕೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಾರೆ.
ನಿವೇದಿತಾ ಅವರ ತಾಯಿ ಬಸವ ಗೀತಾ ಮಾತಾಜಿ, “ಅವಳು ವಚನ ದರ್ಶನದ ವಿರುದ್ಧ ತಾತ್ವಿಕವಾಗಿ ಮಾತಾಡಿದ್ಲು, ನೀವು ಅಪಾರ್ಥ ಮಾಡಿಕೊಂಡಿದೀರಿ,” ಎಂದರು. ಅವರಿಗೆ ಮುಂದೆ ಮಾತನಾಡಲು ಅವಕಾಶ ಕೊಡದೆ ಹುಡುಗರು,” ನೀವು ಖಾವಿ ತೊಟ್ಟಿದೀರಿ, ಖಾವಿಗೆ ಮರ್ಯಾದೆ ಕೊಡಲು ಕಲೀರಿ,” ಎಂದು ದಬಾಯಿಸಿದ್ದಾರೆ.
ಅಷ್ಟರಲ್ಲಿ ನಾಗನೂರಿನ ಇನ್ನೊಬ್ಬರು ಬಂದು ಇಲ್ಲಿ ಪಕ್ಕದಲ್ಲಿ ಒಬ್ಬರು ಲಿಂಗೈಕ್ಯರಾಗಿದ್ದಾರೆ. ನೀವಿಲ್ಲಿ ಗಲಾಟೆ ಮಾಡುತ್ತಿರುವುದು ಸರಿಯಲ್ಲ ಎಂದು ಹೇಳುತ್ತಾರೆ. ಅದನ್ನು ಕೇಳಿ ತಂಡದಲ್ಲಿದ್ದ ಹುಡುಗರಲ್ಲಿ ಒಬ್ಬ ‘ನಾವು ಇವತ್ತು ಏನೂ ಮಾಡುವುದು ಬೇಡ ನಾಳೆ ಬಂದು ಇವರನ್ನು ನೋಡಿಕೊಳ್ಳೋಣ’ ಎಂದು ಎಲ್ಲರನ್ನು ಹೊರಡಿಸಿಕೊಂಡು ಹೋಗುತ್ತಾನೆ.
ಸಂಜೆ 6.30
ಸ್ವಲ್ಪ ಗಾಬರಿಯಾಗಿದ್ದ ನಿವೇದಿತಾ ಅವರು ಬಸವ ಮೀಡಿಯಾ ಸೇರಿದಂತೆ ಕೆಲವರಿಗೆ ಕರೆ ಮಾಡಿ ವಿಷಯ ತಿಳಿಸುತ್ತಾರೆ. ವಿಷಯ ತಿಳಿದು ಒಂದು ಪ್ರಮುಖ ಲಿಂಗಾಯತ ಮಠದ ಸ್ವಾಮೀಜಿಯವರು ತಕ್ಷಣ ಸ್ಪಂದಿಸುತ್ತಾರೆ. ಜೊತೆಗೆ ಬೆಳಗಾವಿ ಮತ್ತು ರಾಮದುರ್ಗ JLM, ಇತರ ಬಸವ ಸಂಘಟನೆಯವರು ಮತ್ತು ಸ್ಥಳೀಯ ಶಾಸಕರು ನೆರವಿಗೆ ಬರುತ್ತಾರೆ.
ನಿವೇದಿತಾ ಕುಟುಂಬದ ಮೇಲೆ ನಡೆದ ದಾಳಿಯ ಬಗ್ಗೆ ಮಾತನಾಡುತ್ತ ಜಾಗತಿಕ ಲಿಂಗಾಯತ ಮಹಾಸಭಾ ಪ್ರಧಾನ ಕಾರ್ಯದರ್ಶಿ ಎಸ್.ಎಂ.ಜಾಮದಾರ ಅವರು, “ಬಸವ ತತ್ವಕ್ಕೆ ಹೋರಾಡುವ ಯಾರ ಮೇಲೆ ಆಕ್ರಮಣ ನಡೆದರೂ JLM ಅವರ ನೆರವಿಗೆ ತಕ್ಷಣ ಬರಲಿದೆ,” ಎಂದು ಹೇಳಿದರು.

ಜಾಗತಿಕ ಲಿಂಗಾಯತ ಮಹಾಸಭಾ ಬೆಳಗಾವಿ ಘಟಕ ಜಿಲ್ಲಾಧ್ಯಕ್ಷ ಬಸವರಾಜ ರೊಟ್ಟಿಯವರು, “ನಾವು ಕುಟುಂಬದ, ಪೋಲೀಸರ ಸಂಪರ್ಕದಲ್ಲಿದ್ದೇವೆ. ಎಲ್ಲಾ ರೀತಿಯಲ್ಲೂ ಅವರನ್ನು ಬೆಂಬಲಿಸುತ್ತಿದ್ದೇವೆ,” ಎಂದು ಹೇಳಿದರು.
ಜಮಖಂಡಿಯ ಬಸವ ಕೇಂದ್ರದ ಮುಖಂಡ ಮತ್ತು ಹಿರಿಯ ವಕೀಲರು ಆದ ರವಿ ಯಡಹಳ್ಳಿ ಅವರು, “ಈ ಘಟನೆಯ ಬಗ್ಗೆ ನನಗೆ ಸೆಪ್ಟೆಂಬರ್ 14 ಸಂಜೆಯೇ ಗೊತ್ತಾಗಿ ತಕ್ಷಣ ಕರೆ ಮಾಡಿದೆ. ನಿವೇದಿತಾ ಅವರ ತಾಯಿ ಬಸವ ಗೀತಾ ಮಾತಾಜಿ ನನಗೆ ಮೂವತ್ತು ವರ್ಷಗಳಿಂದ ಪರಿಚಯ. ಇವರು ಬಹಳ ಬದ್ಧತೆಯಿಂದ ಬಸವ ತತ್ವಕ್ಕೆ ದುಡಿಯುತ್ತಿದ್ದಾರೆ. ತಾಯಿಯ ದಿಟ್ಟತನ ಮಗಳಲ್ಲೂ ಇದೆ,” ಹೇಳಿದರು.
ಬಸವ ಸಂಘಟನೆಗಳು ಜೋರಾಗಿರುವ ಈ ಜಿಲ್ಲೆಯಲ್ಲಿ ಇಂತಹ ಘಟನೆಗಳು ಇಲ್ಲಿಯತನಕ ನಡೆದಿರಲಿಲ್ಲ ಎಂದು ಹೇಳಿದರು.
ಲಿಂಗಾಯತ ಸಂಘಟನೆಯ ಮುಖಂಡ ಶಂಕರ್ ಗುಡಾಸ್ ಅವರು,”ಬಸವ ತತ್ವದ ಜಾಗೃತಿ ಹೆಚ್ಚಾಗುತ್ತಿದೆ. ಲಿಂಗಾಯತ ಧರ್ಮ ಪ್ರಚಾರ ಮಾಡುವವರ ವಿರುದ್ದ ಇದೆ ರೀತಿ ದಾಳಿಗಳು ಬೇರೆ ಕಡೆಯೂ ಆಗಬಹುದು. ಇದನ್ನು ಎದುರಿಸಲು ನಾವು ಸಿದ್ದರಾಗಿರಬೇಕು,” ಎಂದು ಹೇಳಿದರು.
ರಾಮದುರ್ಗ JLMನ ಶರಣಪ್ಪ ಮುರುಗೆಪ್ಪ ಸಕ್ರಿ ಅವರು ಮಠಕ್ಕೆ ನುಗ್ಗಿದವರಲ್ಲಿ ಲಿಂಗಾಯತ ಹುಡುಗರೇ ಹೆಚ್ಚು ಇದ್ದರು ಎಂದು ಹೇಳಿದರು. “ಅವರಿಗೆ ಇತಿಹಾಸ ಗೊತ್ತಿಲ್ಲ, ಪುರಾಣವನ್ನೇ ನಂಬೋ ಹಾಗೆ brain wash ಆಗಿದೆ. ಅವರಲ್ಲಿ ಅರಿವು ಮೂಡಿಸಲು ನಾವು ಹೆಚ್ಚು ಹೆಚ್ಚು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು,” ಎಂದರು.
ಗಲಾಟೆ ಮಾಡಿಸಿ ನಿಮ್ಮ ಧ್ವನಿ ಅಡಗಿಸುವ ಪ್ರಯತ್ನ ಯಾರಾದರು ಮಾಡುತ್ತಿದ್ದಾರಾ ಎಂದು ನಿವೇದಿತಾ ಅವರನ್ನು ಕೇಳಿದೆವು.
“ಅವರೆಲ್ಲ ಬಂದು ಬೆದರಿಕೆ ನೀಡಿದಾಗ ಆತಂಕವಾಯಿತು. ಈಗ ನಮಗೆ ಬಂದಿರುವ ಬೆಂಬಲ ನೋಡಿ ಸಮಾಧಾನವಾಗಿದೆ. ಮೊದಲಿನ ಹಾಗೆಯೆ ಬಸವಣ್ಣನ ಕೆಲಸ ಮುಂದುವರೆಸಿಕೊಂಡು ಹೋಗುತ್ತೇವೆ,” ಎಂದು ಹೇಳಿದರು.
“ಬಸವಣ್ಣನನ್ನೇ ಉಸಿರಾಗಿಸಿಕೊಂಡು ಬದುಕುತ್ತಿರುವ ನಾವು ಹೆದರೋದಿಲ್ಲ. ಬಸವಣ್ಣನೇ ನಮ್ಮನ್ನು ಕಾಯುತ್ತಾರೆ,” ಎಂದು ಪೂಜ್ಯ ಬಸವ ಪ್ರಕಾಶ ಸ್ವಾಮೀಜಿ ಹೇಳಿದರು.
“ಮರಣ ಬಂದರೆ ಒಯ್ಯೋ, ಕರುಣ ಬಂದರೆ ಕಾಯೋ ಬಸವಣ್ಣ ಎಂದುಕೊಂಡು ಇದ್ದೀವಿ,” ಎಂದು ಹೇಳಿದರು.
ಸೆಪ್ಟೆಂಬರ್ 14ರ ನಂತರ ನಿವೇದಿತಾ ಮತ್ತವರ ಕುಟುಂಬವನ್ನು ಬೆದರಿಸುವ ಪ್ರಯತ್ನವನ್ನು ಮತ್ತೆ ಯಾರೂ ಮಾಡಿಲ್ಲ. ವಿಷಯ ರಾಜ್ಯದ ಹಿರಿಯ ಪೊಲೀಸ್ ಅಧಿಕಾರಿಗಳ ಗಮನಕ್ಕೆ ತರಲಾಗಿದೆ.
ಸದ್ಯಕ್ಕೆ ಗಲಾಟೆ ಮಾಡಿದ ಹುಡುಗರ ವಿರುದ್ಧ ಪೊಲೀಸ್ ದೂರು ನೀಡದಿರಲು ಕುಟುಂಬ ನಿರ್ಧರಿಸಿದೆ.
ವಿಡಿಯೋ:
ಇಂತಹ ಘಟನೆಗಳು ಆದಾಗ ಇಡೀ ಬಸವ ಭಕ್ತರು ಒಂದು ಗೂಡಬೇಕು. ತಾತ್ವಿಕವಾಗಿ ಚರ್ಚೆ ಮಾಡಲು ಅಸಾಧ್ಯವಾದಾಗ ಇಂತಹ ಗೂಂಡಾ ಸಂಸ್ಕೃತಿ ಪ್ರಾರಂಭ ಮಾಡುವದು ಸಾಮಾನ್ಯ. ಮುಂದೆ ಸಮೂಹವಾಗಿ ಹೋರಾಟ ಮಾಡೋಣ. ಎಲ್ಲರಿಗೂ ಮಾಹಿತಿ ನೀಡಿ.
|| ಧೈರ್ಯಂ ಸರ್ವ ಅಸ್ತ್ರ ಸಾಧನಂ ||
From: Bilagi. Raju .D
ಇದನ್ನೆ ಇಷ್ಟಕ್ಕೆ ಬಿಡದೆ ಬೆದರಿಕೆ ಹಾಕಿದ ಪುಂಡರನ್ನು
ಮೊದಲು ಸರಿಯಾಗಿ ವಿಚಾರಿಸಿ ಇವರ ಮೇಲೆ ಮಹಿಳಾ ದೌರ್ಜನ್ಯದ ಆಧಾರದ ಮೇಲೆ ಪ್ರಕರಣ ದಾಖಲು ಮಾಡಿ
ಪೋಲಿಸ್ ಠಾಣೆಯಲ್ಲಿ ಕೊಳಿಯುವ ಹಾಗೆ ಮಾಡಬೇಕು
JLM ಮುಂದೆ ಬಂದು ಒಳ್ಳೆಯ ಸಲಹೆ ಮತ್ತು ರಕ್ಷಣೆಯನ್ನು ನೀಡಿದ್ದು ಸ್ಮರಣೀಯ. ನಮ್ಮ ಬಸವ ಸಂಘಟನೆಗಳಲ್ಲಿ ಹಿರಿಯ ನ್ಯಾಯವಾದಿಗಳಿಗೇನು ಕೊರತೆಯಿಲ್ಲ. ಅಂತಹ ನ್ಯಾಯವಾದಿಗಳನ್ನು JLM ಗುರುತಿಸಿ ಯೋಗ್ಯ ಸಂದರ್ಭಗಳಲ್ಲಿ ಅವರ ಸಹಾಯ ಮತ್ತು ಸಹಕಾರ ಪಡೆಯುವುದು ಉತ್ತಮ. ಏನೇ ಆಗಲಿ ಈ ಕುಟುಂಬ ಗಟ್ಟಿಯಾದ ಧ್ವನಿಯನ್ನು ಈ ಸಂದರ್ಭದಲ್ಲಿ ಮಾಡಿದ್ದು ಪ್ರಶಂಸನೀಯ. ಅವರ ಸಹಾಯಕ್ಕೆ ಬಂದಿರುವರೆಲ್ಲರಿಗೂ ಧನ್ಯವಾದಗಳು. ಶರಣಾರ್ಥಿಗಳು.
ಇದು ನಮ್ಮ ದೌರ್ಭಾಗ್ಯವೇ ಸರಿ,ವಚನ ದರ್ಶನದ ಮುಖ್ಯ ಉದ್ದೇಶವೇ ಇದಾಗಿದೆ.ನಮ್ಮ ಲಿಂಗಾಯತ ಸಮುದಾಯದ ಹುಡುಗರನ್ನು ಚು ಬಿಟ್ಟು ಅಶಾಂತಿ ಹುಟ್ಟು ಹಾಕುವುದು.
ನಮ್ಮ ಮೂರ್ಖ ಲಿಂಗಾಯತ ಹುಡುಗರು ಆರೆಸ್ಸೆಸ್ ಬಿಟ್ಟು ಹೊರಗೆ ಬರಬೇಕು.ಇವುಗಳಿಗೆ ಧರ್ಮದ ಅರಿವು ಯಾವಾಗ ಮೂಡುತ್ತದೆಯೋ ಆ ಸೃಷ್ಟಿಕರ್ತ ಲಿಂಗದೇವನೇ ಬಲ್ಲ.
ಸಹೋದರಿ ನೀವೇದಿತಾ ಮತ್ತು ಕುಟುಂಬದ ವರ ಧೈರ್ಯಕ್ಕೆ ಒಂದು ಸಲಾಂ. ಬಸವಣ್ಣನವರ ರಾಜತೇಜದಲ್ಲಿರುವವರು ಯಾರಿಗೂ ಹೆದರಬೇಕಿಲ್ಲ. ಸತ್ಯದ ಬಾಯಿ ಮುಚ್ಚಿಸಲು ಯಾರಿಗೂ ಸಾಧ್ಯವಿಲ್ಲ. ನಾವೆಲ್ಲ ನಿಮ್ಮ ಜೊತೆಗಿದ್ದೇವೆ.
ಶರಣು ಶರಣಾರ್ಥಿ.