ಶರಣರ ಶಕ್ತಿ ಚಿತ್ರ ಸರಿ ಮಾಡಿ ಬಿಡುಗಡೆ ಮಾಡ್ತೀವಿ: ನಿರ್ದೇಶಕ ದಿಲೀಪ್ ಶರ್ಮ

ಎಂ. ಎ. ಅರುಣ್
ಎಂ. ಎ. ಅರುಣ್

ಬಿಡುಗಡೆಗೆ ಸಿದ್ದವಾಗಿರುವ ಶರಣ ಶಕ್ತಿ ಚಿತ್ರ ಲಿಂಗಾಯತ ಧರ್ಮದ ತತ್ವ ಸಿದ್ದಾಂತಕ್ಕೆ ಅಪಚಾರವೆಸಗಿದೆ ಎಂದು ದೊಡ್ಡ ವಿವಾದವೆದ್ದಿದೆ.

ಇತ್ತೀಚೆಗೆ ಬಿಡುಗಡೆಯಾದ ಟ್ರೈಲರ್ ಅನ್ನು ಶ್ರೀ ಗುರುಬಸವ ಮಂಟಪ ಸಂಸ್ಥೆಯ ಶಶಿಧರ ಕರವೀರಶೆಟ್ಟರ್ “ಅಸಹ್ಯ” ಮತ್ತು “ಅಸಂಬದ್ಧ” ಎಂದು ಖಂಡಿಸಿ, ಅದರಲ್ಲಿ ಲಿಂಗಾಯತರನ್ನು ಕೆರಳಿಸುವ ಅನೇಕ ಅಂಶಗಳನ್ನು ಗುರುತಿಸಿದ್ದರು.

ಹಾಗೆಯೆ ಇಡೀ ಚಿತ್ರವನ್ನು ಲಿಂಗಾಯತ ಧರ್ಮವನ್ನು ಅಧ್ಯಯನ ಮಾಡಿರುವವರಿಗೆ ತೋರಿಸಿ ಒಪ್ಪಿಗೆ ಪಡೆಯದಿದ್ದರೆ, ಕೋರ್ಟ್ ತಡೆ ತರಲಾಗುವುದೆಂದು ಎಚ್ಚರಿಸಿದ್ದರು.

ಶರಣರ ಶಕ್ತಿ ಚಿತ್ರ ನಿರ್ದೇಶಕ ದಿಲೀಪ್ ಶರ್ಮ ವಿವಾದದ ಬಗ್ಗೆ ಬಸವ ಮೀಡಿಯಾದ ಜೊತೆ ಬುಧವಾರ ಮಾತನಾಡಿದರು.

“ಒಪ್ಪಿಗೆ ಪಡೆದು ಚಿತ್ರ ಬಿಡುಗಡೆ ಮಾಡ್ತೀವಿ”

ಲಿಂಗಾಯತ ಧರ್ಮದ ಚಿಂತಕರಿಗೆ ಶರಣರ ಶಕ್ತಿ ತೋರಿಸಿ ಅವರ ಒಪ್ಪಿಗೆ ಪಡೆದು ಚಿತ್ರ ಬಿಡುಗಡೆ ಮಾಡ್ತೀವಿ.

ಚಿತ್ರ ಬಿಡುಗಡೆಗೆ ಮುಂಚೆ ಯಾರು ಯಾರಿಗೆ ತೋರಿಸಬೇಕು ಅಂತ ಇನ್ನೂ ನಿರ್ಧಾರವಾಗಿಲ್ಲ. ಯಾವತ್ತು ಚಿತ್ರ ತೋರಿಸಬೇಕು ಅನ್ನುವುದೂ ನಿಗದಿಯಾಗಿಲ್ಲ.

ವೀರಣ್ಣ ರಾಜೂರ, ಕರವೀರಶೆಟ್ಟರ ಅವರಿಗೆ ತೋರಿಸುತ್ತೇವೆ. ಅವರು ಸೂಚಿಸಿದವರಿಗೂ ತೋರಿಸುತೇವೆ. ಅವರು ಸಮಸ್ಯೆಯೆಂದು ಗುರುತಿಸುವ ಭಾಗ, ಸಂಭಾಷಣೆ ತೆಗೆದುಹಾಕ್ತೀವಿ. ಚಿತ್ರದ ಉದ್ದ ಅರ್ಧವಾದರೂ ಪರವಾಗಿಲ್ಲ.

ಇಲ್ಲಿ (ಲಿಂಗಾಯತರಲ್ಲಿ) ನಾಲ್ಕೈದು ಗುಂಪುಗಳಿವೆ, ಅದಕ್ಕೆ ಯಾರಿಗೆ ತೋರಿಸಬೇಕು ಅನ್ನುವ ಗೊಂದಲವೂ ಇದೆ, ಎಂದು ಹೇಳಿದರು.

Trailerನಲ್ಲಿ ಆದ ಸಮಸ್ಯೆ

ಟ್ರೈಲರ್ ಬಗ್ಗೆ ಮಾತನಾಡುತ್ತ ‘ಪಂಚ್’ ಇರಲಿ ಅಂತ ಚಿತ್ರದ ಎಡಿಟರ್ ಕೆಲವು ದೃಶ್ಯಗಳನ್ನು ಎತ್ತಿ ತೋರಿಸಿದರು. ಅವೆಲ್ಲಾ ಸಿನೆಮಾದಲ್ಲಿ ಒಂದು ನಿರ್ದಿಷ್ಟ ಸಂದರ್ಭದಲ್ಲಿ ಬರುತ್ತವೆ. ಉದಾಹರಣೆಗೆ ಬಸವಣ್ಣ ಹತ್ಯೆಯಾಗುವ ದೃಶ್ಯ ಚಿತ್ರದಲ್ಲಿ ಒಂದು ಕನಸು ಮಾತ್ರ. ಆದರೆ ಸಂದರ್ಭವಿಲ್ಲದೆ ಬರೀ ದೃಶ್ಯಗಳು ಕಾಣಿಸಿದ್ದರಿಂದ ತಪ್ಪು ಸಂದೇಶ ಹೋಗಿ ವಿವಾದವಾಯಿತು, ಎಂದು ಹೇಳಿದರು.

ಈಗ ಟ್ರೈಲರ್ ಅನ್ನು ತಿದ್ದುಪಡಿ ಮಾಡಿ ಮತ್ತೆ ಬಿಡುಗಡೆ ಮಾಡಿದ್ದೇವೆ. ಟ್ರೈಲರ್ ನಲ್ಲಿ ಕಾಣುವ ಯಾವ ದೃಶ್ಯಗಳೂ ಚಿತ್ರಕ್ಕೆ ಕೇಂದ್ರವಲ್ಲ. ಚಿತ್ರದ ಕೇಂದ್ರವೆಂದರೆ ಅನುಭವ ಮಂಟಪ ಮತ್ತು ಅಲ್ಲಿಗೆ ಬರುವ ಸಾಮಾನ್ಯ ಶರಣರು. ಉದಾಹರಣೆಗೆ ವೇಶ್ಯೆಯಾಗಿದ್ದ ಸೂಳೆ ಸಂಕವ್ವ ಶರಣೆಯಾಗಿ ಪರಿವರ್ತನೆಯಾಗುವುದು ತೋರಿಸುತ್ತೇವೆ. ಅದೇ ರೀತಿ ತಳವಾರ ಕಾಮಿದೇವಯ್ಯರಂತಹ ಸಾಮಾನ್ಯ ಶರಣರ ಕಥೆಗಳನ್ನೂ ತೋರಿಸಿದ್ದೇವೆ.

ಬೇರೆ ಚಿತ್ರಗಳಿಗಿಂತ ಭಿನ್ನ

ಶರಣ ಶಕ್ತಿ ಬೇರೆ ಚಿತ್ರಗಳಿಗಿಂತ ಭಿನ್ನವಾಗಿದೆ. ಬಿಜ್ಜಳ ಬಸವಣ್ಣರ ಸಂಘರ್ಷ, ಕಲ್ಯಾಣ ಕ್ರಾಂತಿ, ರಕ್ತಪಾತ, ವಚನಗಳನ್ನು ಸುಟ್ಟಿದ್ದು ಯಾವುದೂ ಚಿತ್ರಕ್ಕೆ ಮುಖ್ಯವಲ್ಲ. ಅವೆಲ್ಲಾ ತೋರಿಸೋ ಹಾಗಿದ್ದರೆ ‘ಬಸವ ಶಕ್ತಿ’ ಅಂತ ಹೆಸರಿಡುತ್ತಿದ್ದೆ.

ನಾವು ಬಸವ ತತ್ವಕ್ಕೆ ಹೋಗಿಲ್ಲ, ವೀರಶೈವಕ್ಕೆ ಹೋಗಿಲ್ಲ, ಲಿಂಗಾಯತಕ್ಕೆ ಹೋಗಿಲ್ಲ, ಆ ರೀತಿ ಯಾವ ಪದಾನೂ ಬಳಸಿಲ್ಲ. ಬ್ರಾಹ್ಮಣ ತಂದಿಲ್ಲ…ದಲಿತ ತಂದಿಲ್ಲ…

ಅನುಭವ ಮಂಟಪ ಹೇಗೆ ನಡೆಯುತ್ತಿತ್ತು, ಅಲ್ಲಿಗೆ ಯಾವ ಯಾವ ಶರಣರು ಯಾಕೆ ಬಂದರು ಅದನ್ನು ತೋರಿಸೋದು ಮಾತ್ರ ನಮ್ಮ ಕಾನ್ಸೆಪ್ಟ್. ಅದು ಬಿಟ್ರೆ ಬೇರೆ ಸಿನಿಮಾದಲ್ಲಿ ಬೇರೆ ಏನೂ ಇಲ್ಲ.

ಶರಣರೆಲ್ಲ ಒಂದು ಜಾಗದಲ್ಲಿ ಕೂಡಿದರು, ಅಲ್ಲಿ ಒಂದು ಶಕ್ತಿ ಬಂತು. ಅದೇ ಶರಣ ಶಕ್ತಿ, ಅದೇ ವಚನ ಸಾಹಿತ್ಯ ಶಕ್ತಿ.

ಬಸವಣ್ಣನವರನ್ನ ಬೇರೆ ತರಹ ತೋರಿಸೋದಿಕ್ಕೆ ಪ್ರಯತ್ನ ಪಟ್ಟಿದ್ದೇವೆ. ಈಗ ಯೋಚನೆ ಮಾಡ್ತಾ ಇದೀವಲ್ಲ ಆ ಬಸವಣ್ಣ ಅಲ್ಲ…ಬಸವಣ್ಣ ಅಂದರೆ ಕೆಲಸಕ್ಕೆ ಪ್ರಾಶಸ್ತ್ಯ ಕೊಡುತ್ತಿದ್ದ ಕಾಯಕಯೋಗಿ.

ಮಾಡಿರುವುದು ಕಮರ್ಷಿಯಲ್ ಸಿನೆಮಾ

ಚಿತ್ರಕ್ಕೆ ಸಿದ್ಧತೆ ಮಾಡಿಕೊಳ್ಳುವಾಗ, ತೆಗೆಯುವಾಗ ಲಿಂಗಾಯತ ಧರ್ಮದ ಬಗ್ಗೆ ಆಳವಾದ ಅರಿವು ಹೊಂದಿರುವವರ ಮಾರ್ಗದರ್ಶನ ತೆಗೆದುಕೊಳ್ಳಬೇಕಾಗಿತ್ತು ಎಂದು ಕರವೀರಶೆಟ್ಟರ್ ಹೇಳಿದ್ದರು.

ಆ ಪ್ರಯತ್ನವನ್ನೂ ಮಾಡಿದ್ವಿ. ಆದರೆ ಅವರ ಸಲಹೆ ಪ್ರಕಾರ ನಡೆದಿದ್ದರೆ ಒಂದು ಡಾಕ್ಯುಮೆಂಟರಿ ತರಹ ಬರುತ್ತಿತ್ತು. ನಾವೊಂದು ಕಮರ್ಷಿಯಲ್ ಸಿನೆಮಾ ತೆಗೆಯಬೇಕಿತ್ತು ಅದಕ್ಕೆ ಆ ಪ್ರಯತ್ನ ಮುಂದುವರೆಸಲಿಲ್ಲ ಎಂದರು.

ಅಧ್ಯಯನ, ಸಂಶೋದನೆ

ಚಿತ್ರವನ್ನು ತೆಗೆಯುವ ಮೊದಲು ಲಿಂಗಾಯತ ಧರ್ಮದ ಬಗ್ಗೆ ಅವರು ಮಾಡಿದ ಅಧ್ಯಯನ, ಸಂಶೋದನೆಯೇನು?

ಬಸವ ಪುರಾಣ, ತಿಪ್ಪೇರುದ್ರಸ್ವಾಮಿ ಅವರ ಕಾದಂಬರಿಗಳು ಓದಿದ್ದೀನಿ, ಏಳು ಎಂಟು ಜನರ ಪ್ರವಚನ
ಕೇಳಿದೀನಿ. ತಳವಾರ ಕಾಮಿದೇವಯ್ಯ, ಮಡಿವಾಳ ಮಾಚಿದೇವ ಮುಂತಾದ ಶರಣರ ಮೇಲೆ ಬೇರೆ ಬೇರೆ ಪುಸ್ತಕ ಓದಿದೀನಿ.

ಅವರ ಸಂಶೋದನೆಯಲ್ಲಿ ಲಿಂಗಾಯತ ಧರ್ಮದ ಇತಿಹಾಸಕ್ಕಿಂತ ಪುರಾಣಗಳಿಗೆ ಹೆಚ್ಚು ಒತ್ತು ಕೊಟ್ಟಿದಾರೆಯೇ ಎಂದು ಕೇಳಿದಕ್ಕೆ ಉತ್ತರಿಸಲಿಲ್ಲ.

ಸ್ಕ್ರಿಪ್ಟ್ ಬರೆಯೋದಕ್ಕೆ ಎರಡು ವರ್ಷ, ನಂತರ ಒಂದು ವರ್ಷ ಚಿತ್ರೀಕರಣವಾಯಿತು. ಅವರ ಪತ್ನಿ ಆರಾಧನಾ ಕುಲಕರ್ಣಿ ಚಿತ್ರದ ನಿರ್ಮಾಪಕರೂ ಕೂಡ. ಚಿತ್ರಕ್ಕೆ ಇಲ್ಲಿಯ ತನಕ ಸುಮಾರು 70 ಲಕ್ಷ ಖರ್ಚಾಗಿದೆ ಎಂದು ಹೇಳಿದರು. ಆರಾಧನಾ ಕುಲಕರ್ಣಿ ಅವರು ಅಕ್ಕನಾಗಮ್ಮನವರ ಪಾತ್ರದಲ್ಲಿಯೂ ಕಾಣಿಸಿಕೊಂಡಿದ್ದಾರೆ.

ಚಿತ್ರ ತೆಗೆಯುವಾಗ ಒಳ್ಳೆ ಅನುಭವವಾಗಿತ್ತು. ಜನರಿಂದ, ತಂಡದಿಂದ ಒಳ್ಳೆ ಸಹಕಾರವಿತ್ತು. ಐದು ಚಕ್ಕಡಿ ಬೇಕು ಅಂದ್ರೆ ಜನ ಐವತ್ತು ಚಕ್ಕಡಿ ತರ್ತಿದ್ರು. ಸಿಂಗರ್ ಕೆ. ಕಲ್ಯಾಣ್ ಅವರು ದುಡ್ಡು ತೆಗೆದುಕೊಳ್ಳದೆ ಕೆಲಸ ಮಾಡಿದ್ರು. ಈಗ ಇಷ್ಟೊಂದು ವಿವಾದವಾಗಿರುವುದು ಬೇಜಾರಾಗಿದೆ. ನಾನು ನಾವು ಕಾಂಟ್ರವರ್ಸಿ ಮಾಡೋದಿಕ್ಕೆ ಬಂದಿಲ್ಲ ಎಂದರು.

ದಿಲೀಪ್ ಶರ್ಮ ಅವರಿಗೆ 10 ವರ್ಷ ಡಾ.ರಾಜಕುಮಾರ್ ಕುಟುಂಬದ ವಜ್ರೇಶ್ವರಿ ಕಂಬೈನ್ಸ್ ನಲ್ಲಿ ಕೆಲಸ ಮಾಡಿ ಅನುಭವವಿದೆ. ಇವರು ಮೂಲತಃ ಗದಗಿನ ಲಕ್ಷ್ಮೇಶ್ವರದವರು, ಈಗ ಹುಬ್ಬಳ್ಳಿಯಲ್ಲಿ ಇದ್ದಾರೆ.

Share This Article
7 Comments
  • ದಿಲೀಪ್ ಶರ್ಮರ ವಿಚಾರ ತುಂಬಾ ಚೆನ್ನಾಗಿದೆ, ಕರಿವೀರ ಶೆಟ್ಟರು ಮತ್ತು ರಾ ರಾಜೂರ ಸರ್ ಗೆ ಚಲನಚಿತ್ರವನ್ನು ಒಂದು ಬಾರಿ ಪೂರ್ಣ ತೋರಿಸಿ ಅವರ ಒಪ್ಪಿಗೆಯಂತೆ ಮಾಡಿದರೆ ಅದು ಚೆನ್ನಾಗಿ ಇರುತ್ತದೆ. ಮೇಲೆ ತಿಳಿಸಿದ ಇಬ್ಬರೂ ಹುಬ್ಬಳ್ಳಿಯಲ್ಲಿ ಸಿಗುತ್ತಾರೆ ಮತ್ತು ಬಸವ ತತ್ವ ನಿಷ್ಠರಾಗಿದ್ದಾರೆ.

  • ಎಚ್ ಸಿ ಸಿದ್ದರಾಮಯ್ಯ. ಡಾ. ಮೀನಾಕ್ಷಿ ಬಾಳಿ. ಡಾ. ವಿರಣ್ಣ ರಾಜೂರ. ಎಸ್ ಎಮ್ ಜಾಮದಾರ. ಅರವಿಂದ ಜತ್ತಿ. ಈ ಐದು ಜನರಿಂದ ಮಾರ್ಗದರ್ಶನ ತೊಗೊಂಡು ಸಿನೇಮಾ ಮುಂದುವರೆಸಿ…
    ಶರಣಾರ್ಥಿ

  • ಡಾ. ಮೀನಾಕ್ಷಿ ಬಾಳಿ, ಆರ್ ಕೆ ಹುಡುಗಿ, ಡಾ. ವೀರಣ್ಣ ರಾಜೂರ, ಅರವಿಂದ್ ಜತ್ತಿ, ಎಚ್ ಸಿ ಸಿದ್ದರಾಮಯ್ಯ.. ಈ ಐದು ಜನರಿಂದ ಮಾರ್ಗದರ್ಶನ ತೊಗೊಂಡು ಸಿನೇಮಾ ಮುಂದುವರೆಸಿ…

  • ವಚನ ದರ್ಶನ ಆಯ್ತು ಈಗ ಶರಣರ ಶಕ್ತಿ.
    ಎಲ್ಲ ಬಸವ ಪರ ಸಂಘಟನೆಗಳು ಒಂದಾಗಿ ಒಂದು ನಿರ್ಣಯ ತೆಗೆದುಕೊಂಡು ಹೋರಾಟದ ರೂಪುರೇಷೆ ಸಿದ್ಧ ಪಡಿಸಬೇಕು.
    ಇದು ಯಾಕೆ ಯಾರಿಗೂ ಅರ್ಥವಾಗತಾ ಇಲ್ಲ ?

  • ನೀವು ಬಸವ ತತ್ವವನ್ನು ಬಳಸಿಕೊಂಡು ಕಮರ್ಷಿಯಲ್ (ಹಣಮಾಡುವ)…ಚಿತ್ರ ತೆಗೆಯಲು ಯೋಚಿಸಿದ್ದೀರಾ ಶರ್ಮಾ …. ‘ಸ್ತ್ರೀ ಕುಲದ ತಿಲಕ’ ವಚನ ಗಂಗೋತ್ರಿ‌ ವಚನಗಳ ಸಂರಕ್ಷಕಿ ಹಾಗೂ ಬಸವಣ್ಣನವರ ವಿಚಾರಧಾರೆಗಳಿಗೆ ಶಕ್ತಿ ತುಂಬಿದ ಮಹಾತಾಯಿಯನ್ನು….ಅಕ್ಕನಾಗಮ್ಮ ಎಂದು ಏಕವಚನದಲ್ಲಿ ಸಂಬೋದಿಸಲು ಸಹ ವಿಚಾರ ಮಾಡಬೇಕು! ಅಂತಹ ತಾಯಿಯ ಪತಿ ಪೂಜ್ಯ ಶಿವಸ್ವಾಮಿ ಯವರ ಮಗನಾದ ಪೂಜ್ಯ ಚಿನ್ಮಯ ಜ್ಞಾನಿ ಚೆನ್ನಬಸವಣ್ಣನವರಾಗಿದ್ದಾರೆ.. …..ಮಿಂಡ ಜಂಗಮಕ್ಕೆ ಹುಟ್ಟಿದ ಕೂಸೆಂದು ನಾರಾಯಣ ಭಟ್ಟ ಹೇಳುತ್ತಾನೆ ಎಂಬ ದೃಶ್ಯವನ್ನು ಟ್ರೈಲರ್ ನಲ್ಲಿ ಬಿಟ್ಟು ..ಮಜಾ ತೆಗೆದುಕೊಳ್ಳುವ ನಿಮ್ಮಂತಹ ನೀಚ..ವಿಕೃತ ಕತೆ ಬರಹಗಾರಿಕೆ ನಿರ್ದೇಶನಕ್ಕೆ ಧಿಕ್ಕಾರ….ಬಸವಾಧಿ ಶರಣರು ಕಟ್ಟಿದ ಈ ಪವಿತ್ರ ಧರ್ಮವನ್ನು ಅರ್ತ ಮಾಡಿಕೊಳ್ಳಲು ನಿಮಗೆ ಯೋಗ್ಯತೆ ಇರಬೇಕು…..ನೀವು ವೈದಿಕ ಸಾಂಪ್ರದಾಯವನ್ನು ಆಚರಿಸುತ್ತಿರುವ ನಿಮಗೆ….’ಬಸವ ತತ್ವ’ವು ಹೇಗೆ ಅರ್ತವಾಗುತ್ತದೆ….ಎಚ್ಚರ ದಿಲೀಪ್ ಶರ್ಮಾ….ರವರೆ ಬಸವ ತತ್ವಕ್ಕೆ ಬಸವಾದಿ ಶರಣರಿಗೆ ಚ್ಯೂತಿಯಾಗುವಂತಹ ಯಾವುದೇ….ಸಂದರ್ಭ ನಿಮ್ಮ ಚಿತ್ರದಲ್ಲಿ ಮೂಡಿ ಬಂದರೆ ಖಂಡಿತಾ..ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲಾ….ಎಚ್ಚರ ಮುಂದಿನ ದಿನಮಾನಗಳಲ್ಲಿ ಯಾರೂ ಸಹ ಶರಣರ ಬಗ್ಗೆ ಮಾತನಾಡಲು ನೂರು ಸಾರಿ …ವಿಚಾರ ಮಾಡಬೇಕು ಅಂತಹ ಶಿಕ್ಷೆ ನಿಮಗಾಗುತ್ತದೆ ಎಚ್ಚರ!

  • ಇವರು ಈ ಚಲನ ಚಿತ್ರ ನಿರ್ಮಾಣ ಮಾಡಿರುವದೇ ತಾವೂ ಕೂಡಾ ನಾರಯಣ ಪಂಡಿತನ ವಂಶಸ್ಥರು ಎಂದು ತೋರಿಸುವ ಸಲುವಾಗಿ ಎನಿಸುತ್ತಿದೆ, ಇವರು ತೋರಿಸಿದ ಆ ಟ್ರೈಲರ್ ನಿಂದಲೆ ತಿಳಿಯುತ್ತದೆ ಇವರು ಬಸವಾದಿ ಶರಣರ ತತ್ವಗಳನ್ನು ವಿರೋಧಿಸಿ ಕೊಲ್ಲಲಾಗದೆ ಅಪ್ಪಿ ಕೊಲ್ಲುವ ತಮ್ಮ ನೀಚ ಬುದ್ದಿಯನ್ನು ಇದರಲ್ಲಿ ಹರಿಬಿಟ್ಟರುವರೆಂದು ಅದಕ್ಕಾಗಿ ಈ ಚಿತ್ರವನ್ನು ಬಿಡುಗಡೆ ಮಾಡದಂತೆ ಕಾನೂನು ಕ್ರಮ ಕೈಗೊಳ್ಳುವದೇ ಸೂಕ್ತ.

Leave a Reply

Your email address will not be published. Required fields are marked *