ಬೆಂಗಳೂರು
ಲಿಂಗಾಯತ ಸಮಾಜದಲ್ಲಿ ವಿವಾದದ ಸುಂಟರಗಾಳಿಯೆಬ್ಬಿಸಿರುವ ಶರಣರ ಶಕ್ತಿ ಚಿತ್ರ ಮತ್ತು ವಚನ ದರ್ಶನ ಪುಸ್ತಕ ಒಂದೇ ತಂಡದ ಪ್ರಯತ್ನ ಎಂದು ಜಾಗತಿಕ ಲಿಂಗಾಯತ ಮಹಾಸಭಾ ಹೇಳಿದೆ.
ಚಿತ್ರ ಮತ್ತು ಪುಸ್ತಕ ಮಾಡಿರುವವರು ಒಂದೇ ಉದ್ದೇಶದಿಂದ ಪರಸ್ಪರ ಹೊಂದಾಣಿಕೆಯಿಂದ ಕೆಲಸ ಮಾಡುತ್ತಿದ್ದಾರೆ. ಇದು ಬಹಳ ದೂರದೃಷ್ಟಿಯಿಂದ ಲಿಂಗಾಯತ ಸಮಾಜವನ್ನು ಮೆಲ್ಲನೆ ವಶಪಡಿಸಿಕೊಳ್ಳುವ ಆರೆಸೆಸ್ಸಿನ ಸಂಚು. ಅಪಾರ ಹಣದ, ಜನರ ಬಂಡವಾಳ ಹಾಕಿ ನಡೆಸುತ್ತಿರುವ ಪ್ರಯತ್ನ ಎಂದು ಪ್ರೊಫೆಸ್ಸರ್ ವೀರಭದ್ರಯ್ಯ ಶನಿವಾರ ಹೇಳಿದರು.
ಪ್ರೊಫೆಸ್ಸರ್ ವೀರಭದ್ರಯ್ಯ ಜಾಗತಿಕ ಲಿಂಗಾಯತ ಮಹಾಸಭಾದ ಬೆಂಗಳೂರು ಘಟಕದ ಅಧ್ಯಕ್ಷರು.
ಕಳೆದ ಕೆಲವು ದಿನಗಳಿಂದ ವಚನ ದರ್ಶನ ವಿವಾದದಿಂದ ತಮಗೆ ತೊಂದರೆಯಾಗುತ್ತಿದೆ ಎಂದು ಶರಣರ ಶಕ್ತಿಯ ನಿರ್ದೇಶಕ ದಿಲೀಪ್ ಶರ್ಮ ಲಿಂಗಾಯತ ಮುಖಂಡರ ಹತ್ತಿರ ಹೇಳಿಕೊಳ್ಳುತ್ತಿದ್ದಾರೆ. ಆದರೆ ವಾಸ್ತವದಲ್ಲಿ ಎರಡೂ ತಂಡಗಳು ಒಟ್ಟಿಗೆ ಕೆಲಸ ಮಾಡುತ್ತಿವೆ ಎನ್ನುವುದಕ್ಕೆ ಸಾಕಷ್ಟು ಆಧಾರಗಳಿವೆ.
ಉದಾಹರಣೆಗೆ ದಿಲೀಪ್ ಶರ್ಮ ಅವರ ಫೇಸ್ಬುಕ್ನಲ್ಲಿ ಎರಡೂ ತಂಡಗಳ ನಡುವೆ ಇರುವ ಹತ್ತಿರದ ಸಂಬಂಧ ಕಾಣಿಸುತ್ತದೆ. ಇದನ್ನು ತೋರಿಸುವ ಕೆಲವು ಸ್ಸ್ಕ್ರೀನ್ ಶಾಟ್ ಮತ್ತು ಲಿಂಕುಗಳನ್ನು ಬಿಡುಗಡೆ ಮಾಡುತ್ತಿದ್ದೇವೆ. ಇವರ ಫೇಸ್ಬುಕ್ನಲ್ಲಿ ಸಂಘ ಪರಿವಾರದ ಹಿನ್ನಲೆ ಸ್ಪಷ್ಟವಾಗಿ ಗೋಚರಿಸುತ್ತದೆ, ಎಂದು ಹೇಳಿದರು.
1) Trailer ಬಿಡುಗಡೆಯಾದಾಗ ಇವರು ಆರೆಸ್ಸೆಸ್ ನಾಯಕ ಶಂಕರಾನಂದ ಬಿ ಆರ್ ಅವರಿಗೆ ಟ್ಯಾಗ್ ಮಾಡಿದ್ದಾರೆ. (ಸೆಪ್ಟೆಂಬರ್ 12)
2) ವಚನ ದರ್ಶನದ ಪ್ರಚಾರಕ್ಕೆ ಓಡಾಡುತ್ತಿರುವ ಗದಗಿನ ಸದಾಶಿವಾನಂದ ಸ್ವಾಮಿಯೇ ಶರಣರ ಶಕ್ತಿಯ ಪೋಸ್ಟರ್ ಬಿಡುಗಡೆ ಮಾಡಿದ್ದಾರೆ (ಜೂಲೈ 5)
3) ಧಾರವಾಡದ ವಚನ ದರ್ಶನ ಬಿಡುಗಡೆ ಕಾರ್ಯಕ್ರಮದಲ್ಲಿ ಶರಣರ ಶಕ್ತಿಯನ್ನು ಪ್ರಮೋಟ್ ಮಾಡಲಾಗಿದೆ (ಜೂನ್ 29)
ಕಳೆದ ನಾಲಕ್ಕು ತಿಂಗಳಿಂದ ಬಸವ ತತ್ವದ ವಿರುದ್ಧವಾಗಿರುವ “ವಚನ ದರ್ಶನ” ಪುಸ್ತಕ ಭಾರಿ ಪ್ರಚಾರದ ಮೂಲಕ ಬಿಡುಗಡೆಯಾಗುತ್ತಿದೆ.
ಈ ಪುಸ್ತಕದ ಮೂಲ ಉದ್ದೇಶ 12ನೇ ಶತಮಾನದಲ್ಲಿ ನಡೆದ ಶರಣ ಕ್ರಾಂತಿಯನ್ನು ನಿರಾಕರಿಸಿ, ವಚನಗಳ ಸಾಮಾಜಿಕ ಕಳಕಳಿ ತಿರಸ್ಕರಿಸಿ, ಅವುಗಳನ್ನು ವೇದ, ಉಪನಿಷತ್ತುಗಳ ವಿಸ್ತರಣೆಯೆಂದು ಬಿಂಬಿಸುವುದು.
ವೇದಗಳ, ಜಾತಿ ವ್ಯವಸ್ಥೆಯ, ಸಂಸ್ಕೃತದ ವಿರುದ್ಧ ಸಂಗ್ರಾಮ ಸಾರಿದ್ದ ವಚನಗಳಿಗೆ ವೈದಿಕತೆಯ ಲೇಪ ಹಚ್ಚಿ ಅವು ಕೇವಲ ಭಕ್ತಿಯ, ಆತ್ಮ ಸಾಕ್ಷಾತ್ಕಾರದ ಸಾಧನಗಳೆಂದು ವಚನ ದರ್ಶನ ಪ್ರಚಾರ ಮಾಡುತ್ತಿದೆ.
“ಶರಣರ ಶಕ್ತಿ” ಚಿತ್ರ ಇದೇ ಉದ್ದೇಶದ ಮುಂದುವರೆದ ಪ್ರಯತ್ನ. “ಶರಣರ ಶಕ್ತಿ” ಮತ್ತು “ವಚನ ದರ್ಶನ” ತಂಡಗಳ ನಡುವೆ ಹತ್ತಿರದ ಸಂಬಂಧವಿರುವುದು ಈ ಚಿತ್ರದ ಉದ್ದೇಶದ ಬಗ್ಗೆ ಮತ್ತಷ್ಟು ಅನುಮಾನಕ್ಕೆ ಎಡೆಮಾಡಿದೆ.
ಶರಣರ ಶಕ್ತಿ ಮತ್ತು ವಚನ ದರ್ಶನ ತಂಡಗಳ ಹೇಳಿಕೆಗಳಲ್ಲೂ ಸಾಮ್ಯತೆಯಿದೆ.
ವಿಜಯಪುರದಲ್ಲಿ ಪುಸ್ತಕ ಬಿಡುಗಡೆಯಾದ ಕಾರ್ಯಕ್ರಮದಲ್ಲಿ ಶಂಕರಾನಂದ ಬಿ ಆರ್ ಅವರು ವಚನಗಳು ಕ್ರಾಂತಿಯಲ್ಲ, ಚಳುವಳಿಯಲ್ಲ. ಅವುಗಳನ್ನು ಯಾರೂ ಬರೆಯಲಿಲ್ಲ, ಅವು ದೈವೀ ಶಕ್ತಿಯಿಂದ ಸ್ವಯಂ ಉದ್ಬವವಾದವು ಎಂದು ಹೇಳಿದ್ದರು.
ಇತ್ತೀಚೆಗೆ ಸಂದರ್ಶನವೊಂದರಲ್ಲಿ ದಿಲೀಪ್ ಶರ್ಮ “ಬಿಜ್ಜಳ ಬಸವಣ್ಣರ ಸಂಘರ್ಷ, ಕಲ್ಯಾಣ ಕ್ರಾಂತಿ, ರಕ್ತಪಾತ, ವಚನಗಳನ್ನು ಸುಟ್ಟಿದ್ದು ಯಾವುದೂ ಚಿತ್ರಕ್ಕೆ ಮುಖ್ಯವಲ್ಲ….ಶರಣರೆಲ್ಲ ಒಂದು ಜಾಗದಲ್ಲಿ ಕೂಡಿದರು, ಅಲ್ಲಿ ಒಂದು ಶಕ್ತಿ ಬಂತು. ಅದೇ ಶರಣ ಶಕ್ತಿ, ಅದೇ ವಚನ ಸಾಹಿತ್ಯ ಶಕ್ತಿ,” ಎಂದು ಹೇಳಿದ್ದಾರೆ.
ಕಲ್ಯಾಣದ ಕ್ರಾಂತಿಯ ನಿರಾಕರಿಸುವ ಪ್ರಯತ್ನವನ್ನು ಈ ಇಬ್ಬರೂ ಮಾಡುತ್ತಿದ್ದಾರೆ.
ಕರ್ನಾಟಕದ ಬಹು ದೊಡ್ಡ ಸಮುದಾಯ ಲಿಂಗಾಯತರಲ್ಲಿ ಇಷ್ಟೆಲ್ಲಾ ಸಂಶಯ ಹುಟ್ಟಿಸಿರುವ ಶರಣರ ಶಕ್ತಿ ಮತ್ತು ವಚನ ದರ್ಶನ ತಮ್ಮ ಸಂಬಂಧದ ಬಗ್ಗೆ ಸ್ಪಷ್ಟನೆ ತಕ್ಷಣ ನೀಡಬೇಕು, ಎಂದರು.
ಪ್ರೊಫೆಸ್ಸರ್ ವೀರಭದ್ರಯ್ಯ ನೀಡಿರುವ ದಿಲೀಪ್ ಶರ್ಮರ ಫೇಸ್ಬುಕ್ ಸ್ಕ್ರೀನ್ಶಾಟ್ ಮತ್ತು ಲಿಂಕುಗಳು
https://www.facebook.com/share/p/W41XkonMKTkDcXxk/?mibextid=qi2Omg
https://www.facebook.com/share/p/Wi1nSiGAkceCKd6D/?mibextid=qi2Omg
ಪ್ರೊಫೆಸರ್ ಆತಂಕ ನಿಜವೆಂದು ಲಗತ್ತಿಸಿದ ಲಿಂಕ್ ಗಳೇ ಸಾರಿ ಹೇಳುತ್ತಿವೆ. ಎಲ್ಲ ಮೂಲೆಗಳಿಂದ ಬಸವಾದಿ ಶರಣರ ರನ್ನು ಏಣಿ ಹತ್ತಿಸಿ ಕೆಳಗೆ ಬೀಳಿಸುವ ನಯ ವಂಚಕತನ ಬಸವ ವಿರೋಧಿಗಳ ಹೊಸ ವರಸೆ, ಲಿಂಗಾಯತರು ಧ್ವನಿಯೆತ್ತದಿದ್ದರೆ ಉಳಿಗಾಲವಿಲ್ಲ!