ಮುರುಘ ಮಠದ ಶರಣ ಸಂಸ್ಕೃತಿ ಉತ್ಸವ ಈ ಬಾರಿ ಜಯದೇವ ಸ್ವಾಮೀಜಿಯ 150ನೇ ಜಯಂತ್ಯುತ್ಸವದೊಂದಿಗೆ ಆಚರಣೆಗೊಳ್ಳುತ್ತಿದೆ. ಮಠದ ಅಂಗಳದಲ್ಲಿ ಸಿದ್ಧತೆಗಳು ಭರದಿಂದ ಸಾಗಿದ್ದು, ವಿದ್ಯುತ್ ದೀಪಾಲಂಕಾರದಿಂದ ಮಠ ಕಂಗೊಳಿಸುತ್ತಿದೆ.
ಅ. 5ರಿಂದ 13ರವರೆಗೆ ಅಧ್ಯಾತ್ಮ, ಆರೋಗ್ಯ, ಶಿಕ್ಷಣ, ವಚನ, ಕೃಷಿ ಕಾರ್ಯಕ್ರಮಗಳು ನಡೆಯಲಿವೆ.
ಅ. 5ರಂದು ವಚನಕಮ್ಮಟ ಗೋಷ್ಠಿ, ಸಾಮೂಹಿಕ ವಿವಾಹ, ವಚನ ಕಮ್ಮಟ ಪರೀಕ್ಷೆ ರ‍್ಯಾಂಕ್ ವಿಜೇತರಿಗೆ ಬಹುಮಾನ ವಿತರಣೆ, ಜಯದೇವ ಕಪ್ ಕ್ರೀಡಾಕೂಟ ಅಂಗವಾಗಿ ಬೈಕ್ ಜಾಥಾ, ಜಯದೇವ ಶ್ರೀಗಳ ಬೆಳ್ಳಿಮೂರ್ತಿಯ ಪಲ್ಲಕ್ಕಿ ಉತ್ಸವ ಹಾಗೂ ಹೊನಲು ಬೆಳಕಿನ ಕ್ರೀಡಾಕೂಟ ಉದ್ಘಾಟನೆಯಾಗಲಿದೆ.
6ರಂದು ಮಹಿಳಾ ಕ್ರೀಡಾಕೂಟ, 7ರಂದು ಸಂಜೆ 6 ಗಂಟೆಗೆ ಜಯದೇವ ಕಪ್ ಸಮಾರೋಪ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭ ಹಳೆಯ ಮಾಧ್ಯಮಿಕ ಶಾಲಾ ಆವರಣದಲ್ಲಿ ನಡೆಯಲಿದೆ.
8ರಂದು ಬೆಳಿಗ್ಗೆ 7.30ಕ್ಕೆ ಅನುಭವ ಮಂಟಪದ ಮುಂಭಾಗ ಬಸವ ಸಮಿತಿ ಅಧ್ಯಕ್ಷ ಅರವಿಂದ ಜತ್ತಿ ಬಸವತತ್ವ ಧ್ವಜಾರೋಹಣ ನೆರವೇರಿಸುವರು. 10 ಗಂಟೆಗೆ ಕೃಷಿ ಮತ್ತು ಕೈಗಾರಿಕೆ ವಸ್ತು ಪ್ರದರ್ಶನವನ್ನು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಕೃಷಿ ಸಚಿವ ಎನ್.ಚೆಲುವರಾಯಸ್ವಾಮಿ ಉದ್ಘಾಟಿಸುವರು. ಸಂಜೆ 6 ಗಂಟೆಗೆ ಜಯದೇವ ಸ್ವಾಮೀಜಿಯ 150ನೇ ಜಯಂತ್ಯುತ್ಸವ ನಡೆಯಲಿದೆ.
9ರಂದು ಬೆಳಿಗ್ಗೆ 10 ಗಂಟೆಗೆ ಜಯದೇವ ಸ್ವಾಮೀಜಿಯ ಜೀವನ ಮತ್ತು ಸಾಧನೆ ಕುರಿತು ವಿಷಯ ಚಿಂತನೆ ನಡೆಯಲಿದೆ. 10ರಂದು ಸಂಜೆ 6 ಗಂಟೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ‘ಜಯದೇವ ದಿಗ್ವಿಜಯ’ ಸಂಸ್ಮರಣ ಸಂಪುಟ ಬಿಡುಗಡೆ ಮಾಡಲಿದ್ದಾರೆ. 11ರಂದು ಮಹಿಳಾ ಸಮಾವೇಶ, 12ರಂದು ಬೆಳಿಗ್ಗೆ 10.30ಕ್ಕೆ ಶರಣ ಸಂಸ್ಕೃತಿ ಉತ್ಸವ ಹಾಗೂ ಜಾನಪದ ಕಲಾಮೇಳ ಆರಂಭವಾಗಲಿದೆ. ಸಂಜೆ 4.30ಕ್ಕೆ ಮೇಲುದುರ್ಗದ ಮುರುಘಾಮಠದ ಆವರಣದಲ್ಲಿ ಶ್ರೀಗಳಿಗೆ ಭಕ್ತಿ ಸಮರ್ಪಣೆ, 6ಗಂಟೆಗೆ ಮಕ್ಕಳ ಸಂಭ್ರಮ ನಡೆಯಲಿದೆ.
ಅ. 13ರಂದು ಬೆಳಿಗ್ಗೆ 9.30ಕ್ಕೆ ಶ್ರೀಮಠದ ರಾಜಾಂಗಣದಲ್ಲಿ ಶೂನ್ಯಪೀಠ ಪರಂಪರೆಯ ಮುರಿಗೆ ಶಾಂತವೀರ ಸ್ವಾಮಿಗಳ ಮೂರ್ತಿಯ ಶೂನ್ಯ ಪೀಠಾರೋಹಣ ನಡೆಯಲಿದೆ. ನಂತರ ಶ್ರೀಮಠದ ಆವರಣದಲ್ಲಿ ಧರ್ಮಗುರು ಬಸವಣ್ಣ ಮತ್ತು ಶೂನ್ಯಪೀಠದ ಪ್ರಥಮ ಅಧ್ಯಕ್ಷ ಅಲ್ಲಮಪ್ರಭು ದೇವರ ಭಾವಚಿತ್ರ ಹಾಗೂ ಪ್ರಾಚೀನ ಹಸ್ತಪ್ರತಿಗಳ ಮೆರವಣಿಗೆ ಸಾಗಲಿದೆ.
13ರಂದು ಬೆಳಿಗ್ಗೆ 11.30ಕ್ಕೆ ಜಯದೇವ ಜಂಗೀ ಕುಸ್ತಿ, ಶ್ವಾನ ಪ್ರದರ್ಶನ ಹಾಗೂ ಸಂಜೆ 6 ಗಂಟೆಗೆ ಸಾಂಸ್ಕೃತಿಕ ಸಮಾರಂಭದ ಮೂಲಕ ಉತ್ಸವಕ್ಕೆ ವಿದ್ಯುಕ್ತ ತೆರೆ ಬೀಳಲಿದೆ.
ಪ್ರತಿದಿನ ಬಳಿಗ್ಗೆ ಸಹಜ ಶಿವಯೋಗ ನಡೆಯಲಿದ್ದು, ಶಾಂತವೀರ ಗುರುಮುರುಘರಾಜೇಂದ್ರ ಸ್ವಾಮೀಜಿ, ಗುರುಮಹಾಂತ ಸ್ವಾಮೀಜಿ, ಮರುಳಸಿದ್ದ ಸ್ವಾಮೀಜಿ ಶಿವಯೋಗ ಪ್ರಾತ್ಯಕ್ಷಿಕೆ ನಡೆಸಿಕೊಡುವರು.
Good.