“ಸಂಶೋಧಕ ಬಹಳ ಸೂಕ್ಷ್ಮ ಇರ್ತಾನೆ ಮತ್ತು ತಮ್ಮ ಕಾಲದಕ್ಕಿಂತ ಬಹಳ ಮುಂದಕ್ಕಿರ್ತಾನೆ. ಅವರನ್ನ ಅರ್ಥಮಾಡಿಕೊಳ್ಳಲಿಕ್ಕೆ ಸಮಾಜ ಸೋಲ್ತಾ ಇರ್ತದೆ.”
ಕರ್ನಾಟಕದ ಧಾರ್ಮಿಕ ಇತಿಹಾಸದ ರಹಸ್ಯಗಳನ್ನು ಭೇದಿಸಲು ಹೊರಟ ಎಂ.ಎಂ. ಕಲ್ಬುರ್ಗಿಯವರು ಹಾಯ್ದ ಅಗ್ನಿಕುಂಡಗಳು ಹಲವಾರು.
ಅವರು ತಮ್ಮ ಬದುಕಿನ ಉದ್ದಕ್ಕೂ ಎದುರಿಸಿದ ಸಂಘರ್ಷವನ್ನು ವಿಸಾಜಿ ಅವರು ರಕ್ತ ವಿಲಾಪದಲ್ಲಿ ತಾತ್ವಿಕವಾಗಿ ಗ್ರಹಿಸಲು ಪ್ರಯತ್ನಿಸಿದ್ದಾರೆ. ಈ ನಾಟಕದಲ್ಲಿ ಮೂಡುವುದು ಒಬ್ಬ ಹಠವಾದಿ ಸಂಶೋಧಕ ಎದುರಿಸುವ ಪ್ರತಿರೋಧ ಮಾತ್ರವಲ್ಲ. ಸತ್ಯವನ್ನು ಅರಗಿಸಿಕೊಳ್ಳುವಲ್ಲಿ ಸೋಲುವ ಒಂದು ಸಮಾಜದ ದುರಂತ.
ರಕ್ತ ವಿಲಾಪದ ಕಲ್ಪನೆ ಮತ್ತದು ಕಲ್ಬುರ್ಗಿಯವರ ಸಂಶೋಧನೆಯನ್ನು ಅರ್ಥೈಸುವ ರೀತಿಯನ್ನು ಬಸವ ಮೀಡಿಯಾದ ರವೀಂದ್ರ ಹೊನವಾಡ ಅವರಿಗೆ ಡಾ. ವಿಕ್ರಮ ವಿಸಾಜಿ ವಿವರಿಸಿದ್ದಾರೆ.
ಮೀಡಿಯಾ: ಇದು ಕಲಬುರ್ಗಿ ಅವರ ಹತ್ಯೆಯ ಮೇಲಿನ ನಾಟಕವೆ?
ವಿಕ್ರಮ್ : ಎಂ.ಎಂ. ಕಲಬುರ್ಗಿಯವರ ಏನ್ ಹತ್ಯೆಯಾಯ್ತಲ್ಲ, ಅವರ ಜೀವನ ಇಟ್ಕೊಂಡು, ಅವರ ಕೆಲವು ವಿಚಾರಗಳು, ಚಿಂತನೆಗಳನ್ನು ಇಟ್ಕೊಂಡು ಈ ನಾಟಕವನ್ನು ಬರೆದಿರುವೆ.
ಜೊತೆಗೆ ಬಹಳಷ್ಟು ನನ್ನ ಕಲ್ಪನೆಗಳನ್ನೂ ಸೇರಿಸಿದ್ದೀನಿ. ನನ್ನ ಓದು, ನನ್ನ ಕಲ್ಪನೆ, ನನಗೆ ಕಲಬುರ್ಗಿಯವರ ಜೊತೆಗಿದ್ದಂತ ಒಡನಾಟ ಮತ್ತು ಅವರ ಮಾರ್ಗಸಂಪುಟದಲ್ಲಿ ಬರೆದಂತಹ ಅನೇಕ ಬರಹಗಳು, ಅವರ ಸಂಶೋಧನಾ ಕ್ರಮ, ವಿಧಾನ ಈ ಎಲ್ಲ ಬಳಸಕೊಂಡು ಇದಕ್ಕೊಂದು ಕಲಾ ರೂಪ, ನಾಟಕಕಲೆಯ ರೂಪ, ರಂಗಭೂಮಿಯ ರೂಪ ಕೊಡಲಿಕ್ಕೆ ಪ್ರಯತ್ನ ಮಾಡಿದ್ದೀನಿ.
ಮೀ: ನಾಟಕ ನೋಡ್ದೇ ಇರುವವರಿಗೆ ನಾಟಕ ಪರಿಚಯ ಮಾಡಿ ಕೊಡ್ತೀರಾ …
ವಿ: ಇಲ್ಲಿ ಕಥೆ ಅಂತಂದ್ರ ಒಂದೇ ಲೈನ್ ನಲ್ಲಿ ಸಾಗಲ್ಲ. ಸಂಶೋಧಕನ ನಾಲ್ಕೈದು ಮುಖಗಳು, ಘಟನೆಗಳು ನಾನಿಲ್ಲಿ ತಗೊಂಡು ಬರೆದಿರುವೆ.
ಒಂದನೇದರಲ್ಲಿ ಏನ್ ಮಾಡ್ತೀನಿ ಅಂತಂದ್ರೆ, ಸಂಶೋಧಕನನ್ನ ಕೊಲೆ ಮಾಡಲಿಕ್ಕೆ ಬಂದಂತ ಯುವಕ, ಅವರಿಬ್ಬರ ನಡುವೆ ಒಂದು ತೀವ್ರವಾದ ಮಾತುಕತೆ ನಡಿತಾ ಇರ್ತದೆ. ಅಂದ್ರೆ ಈ ಯುವಕ ಅವರಿಗೆ ಪ್ರಶ್ನೆ ಹಾಕ್ತಾ ಇರ್ತಾನೆ, ಇವನ ಸಿಟ್ಟು ಇವನ ಒಂತರದ ತಹತಹಕ್ಕೆ ಅವರು ಉತ್ತರ ಕೊಡ್ತಾ ಇರ್ತಾರೆ, ಈ ಥರದ ಸಂಭಾಷಣೆ ರೂಪದಲ್ಲಿ ಘಟನೆ ಇದೆ.
ಆಮೇಲೆ ಎರಡನೇ ಘಟನೆ ಅಂದ್ರೆ ಅದು ನ್ಯಾಯಾಲಯದ ಘಟನೆ. ನ್ಯಾಯಾಲಯದಲ್ಲಿ ಅವರ ಜೊತೆ ವಾದ. ಅವ್ರು ತಮ್ಮದೇ ರೀತಿಯಲ್ಲಿ ತಾನು ತನ್ನ ಹುಡುಕಾಟದ ಕ್ರಮ ಏನು, ತನ್ನ ಸಂಶೋಧನಾ ವ್ಯಕ್ತಿತ್ವ ಹೇಗಿದೆ, ನಾನೇನು ಮಾಡಲಿಕ್ಕೆ ಪ್ರಯತ್ನಿಸುತ್ತಿದ್ದೀನಿ ಅನ್ನೋದು ಅವ್ರು ಹೇಳ್ಕೊಂತ ಇರ್ತಾರೆ.
ಮೂರನೇ ಘಟನೆಯಲ್ಲಿ ಏನ್ಮಾಡ್ತೀನಿ ಅಂತಂದ್ರೆ ಆ ಸಹ ಸಂಶೋಧಕರು ಏನಿರ್ತಾರಲ್ಲ, ಅಂದ್ರೆ ಅವರ ಸಹೋದ್ಯೋಗಿಗಳು ಅವರ ಜೊತೆ ಸಂಶೋಧನೆ ಮಾಡ್ತಾ ಇರುವಂಥ ಬೇರೆಯವರು. ಅವರ ಮನಸ್ಸಿನಲ್ಲಿ ಏನು ಪ್ರಶ್ನೆಗಳು ಕಾಡ್ತಾ ಇದ್ದಾವೆ ಇವ್ರ ಬಗ್ಗೆ, ಅದರದೊಂದು ಚರ್ಚೆ ಇಟ್ಕೊಂಡಿರುವೆ.
ಆಮೇಲೆ ಕೊನೆಗೆ ಆ ಯುವಕ-ಸಂಶೋಧಕ ಪುನಃ ಮುಖಾಮುಖಿಯಾಗಿ ಅನೇಕ ವಿಷಯಗಳನ್ನು ಚರ್ಚಿಸ್ತಿರ್ತಾರೆ. ಧರ್ಮದ ಬಗ್ಗೆ, ಸಮಾಜದ ಬಗ್ಗೆ, ರಾಜಕಾರಣದ ಬಗ್ಗೆ ಈ ಎಲ್ಲವುಗಳ ಬಗ್ಗೆ ಚರ್ಚೆ ಮಾಡ್ತಾ ಇರ್ತಾರೆ. ಒಟ್ಟು ನಾಲ್ಕು ಘಟನೆಗಳಲ್ಲಿ ಇಡೀ ಆ ನಾಟಕ ಹಿಡಿದಿಡಲಿಕ್ಕೆ ಪ್ರಯತ್ನ ಮಾಡಿರುವೆ.
ಮೀ: ನಾಟಕ ಬರೆಯಲಿಕ್ಕೆ ಮಾಡಿದ ಸಂಶೋಧನೆ…
ವಿ: ಅವರ ಎಂಟು ಮಾರ್ಗ ಸಂಪುಟಗಳು ನನ್ನತ್ರ ಇದ್ದವು. ಕಳೆದ 20-25 ವರ್ಷಗಳಿಂದ ಅವರನ್ನ ಓದ್ತಾನೆ ಬರ್ತಿದ್ವಿ, ಅವರು ವಚನ ಸಾಹಿತ್ಯದ ಬಗ್ಗೆ ಅವರು ವಚನಕಾರರ ಬಗ್ಗೆ ಹೊಸ ಹೊಳವುಗಳನ್ನು ಕೊಡ್ತಾ ಇದ್ದರು, ಹೊಸ ನೋಟಗಳನ್ನು ಕೊಟ್ಟರು ಅಂತೇಳಿ ಓದ್ತಿದ್ವಿ. ಅವರು ತಂದಂತಹ ಆದಿಲ್ ಶಾಹಿ ಸಂಪುಟಗಳು, ಬಸವರಾಜ ಕಟ್ಟೀಮನಿ ಸಂಪುಟಗಳು, ಆಮೇಲೆ ಬೇಂದ್ರೆ ಟ್ರಸ್ಟ್ ನ ಅಧ್ಯಕ್ಷರಾಗಿದ್ದಾಗ ಮಾಡಿದ ಕೆಲಸಗಳು, ಹಂಪಿ ವಿಶ್ವವಿದ್ಯಾಲಯ ಕುಲಪತಿಯಾಗಿದ್ದಾಗ ಮಾಡಿದ ಕೆಲಸ, ಆಮೇಲೆ ಅಪ್ರಕಟಿತ ಹಸ್ತಪ್ರತಿಗಳ ಯೋಜನೆಯಲ್ಲಿ ಅವರು ತೊಡಗಿಸಿಕೊಂಡಂಥ ರೀತಿ, ಇತ್ಯಾದಿ.
ಹಿಂಗಾಗಿ ಅವೆಲ್ಲದರ ಅಧ್ಯಯನ ಇತ್ತು ಮತ್ತು ಕಳೆದ ಒಂದು 10-12 ವರ್ಷಗಳಿಂದ ಅವರು ಸಾಯೋವರೆಗೂ ನಮ್ಜೊತೆ ಒಂದಷ್ಟು ಸಣ್ಣ ಸಂಬಂಧಾನೂ ಇತ್ತು. ಅವರು ಬಂದಾಗೆಲ್ಲ ಕರಿತಾ ಇದ್ರು, ಮಾತಾಡ್ತಾ ಇದ್ವಿ, ಇಲ್ಲಿ ವೀರಣ್ಣ ದಂಡೇ ಸರ್ ಸಿಕ್ಕಾಗೆ, ಅವ್ರೆಲ್ಲ … ಹೀಗೆ ಹಿಂಗಾಗಿ ಅವರ ಸಂಬಂಧಾನೂ ಸ್ವಲ್ಪ ಅನುಕೂಲ ಆಯ್ತು.
ಮೀ: ನಾಟಕ ರಚನೆಗೆ ತಗೊಂಡಂಥ ಸಮಯ …
ವಿ: ಇದು 2022 ರಲ್ಲಿ ಪ್ರಕಟವಾಯ್ತು. ಕರೋನ ಸಂದರ್ಭದ ಎರಡು ವರ್ಷದ ಅವಧಿ ಏನಿತ್ತಲ್ಲ, ಕಲಬುರ್ಗಿ ಅವರು ತೀರಿಹೋದ ಮೇಲೆ ತಲೆಯಲ್ಲಿ ಏನೋ ಒಂಥರಾ ನಡೆದಿತ್ತು. ಆದರೆ ನಾಟಕ ರೂಪಾನೇ ಕೊಡ್ತೀನಿ ಅಂಥ ಏನಿರಲಿಲ್ಲ ಮನಸ್ಸಿನಲ್ಲಿ.
ಆಮೇಲೆ ನನಗೆ ವಿಚಾರ ಮಾಡ್ತಾ ಮಾಡ್ತಾ, ಬೇರೆ ಬೇರೆ ನಾಟಕ ಅಂದ್ರೆ ಬ್ರೇಕ್ಟ್ ನ ಗೆಲಿಲಿಯೋ ನಾಟಕ ಓದಿದೆ. ಗೆಲಿಲಿಯೋಗು ಇಂಥದೇ ಒಂದು ಶಿಕ್ಷೆ ಆಗಿಬಿಡುತ್ತದೆ. ಆಮೇಲೆ ಇನ್ನೊಂದು ಮರ್ಡರ್ ಇಂದ ಕೆಥೆಡ್ರಲ್ ಅಂತೇಳಿ ಒಂದು ಟಿ.ಎಸ್. ಎಲಿಯಟ್ ನಾಟಕ ಇದೆ, ಆ ನಾಟಕ ಓದಿದೆ. ಆಮೇಲೆ ಸೇಂಟ್ ಜಾನ್ಸ್ ನಾಟಕ ಇದೆ. ಹೀಗೆ ಅನೇಕ ನಾಟಕಗಳನ್ನು ಓದಿದಾಗ ನನಗೆ ಈ ಒಂದು ವ್ಯಕ್ತಿತ್ವವನ್ನು ಒಂದು ನಾಟಕ ರೂಪದಲ್ಲಿ ಕಟ್ಟಬೇಕು ಅಂತ ಅನಿಸ್ತು. ಹೀಗಾಗಿ ಕರೋನಾ ಸಮಯದಲ್ಲಿ ಒಂದುವರೆ ವರ್ಷ ಅದರ ಮೇಲೆ ವರ್ಕ್ ಮಾಡಿ ನಾಟಕ ಬರೆದೆ. ಒಟ್ಟ ಒಂದೂವರೆಯಿಂದ ಎರಡು ವರ್ಷ ತಗೊಂಡೆ.
ಮೀ: ನಾಟಕದಲ್ಲಿ ಕಲಬುರ್ಗಿ ಅವರ ಸಂಶೋಧನೆಯನ್ನು ವಿಮರ್ಶಿಸುವ ಪ್ರಯತ್ನವಿದೆಯೇ
ವಿ: ಅವರ ಬಗ್ಗೆ ಸಮಾಜದೊಳಗೆ ಏನೇನು ತಪ್ಪು ಕಲ್ಪನೆಗಳಿದ್ದವು ನೋಡ್ರಿ, ಅವ್ರು ಸಂಶೋಧನೆಯಲ್ಲಿ ಅವಸ್ರ ಮಾಡ್ತಾರೆ, ಅವರು ತಮಗೆ ಬೇಕಾದಂತಹ ನಿಲುವೇ ತಗೊಳ್ತಾರೆ ಅನ್ನುವಂತದ್ದು ಏನಿದ್ದವಲ್ಲ, ಅವನ್ನೆಲ್ಲ ತಗೊಂಡು ನಾನು ಅದಕ್ಕೆ ಒಂದು ಸಂಶೋಧನಾತ್ಮಕವಾದಂತ ಅವರದೇ ಉತ್ತರ ಕೊಡಲಿಕ್ಕೆ ಪ್ರಯತ್ನ ಮಾಡಿದ್ದೀನಿ.
ಮೀ: ಕಲಬುರ್ಗಿ ಎದುರಿಸಿದ ಘರ್ಷಣೆಯನ್ನು ನೀವು ಗ್ರಹಿಸಿರುವ ರೀತಿ
ವಿ: ಸಂಶೋಧಕ ಬಹಳ ಸೂಕ್ಷ್ಮ ಇರ್ತಾನೆ ಮತ್ತು ಕಾಲದಕ್ಕಿಂತ ಬಹಳ ಮುಂದಕ್ಕಿರ್ತಾರೆ. ಅವರನ್ನ ಅರ್ಥಮಾಡಿಕೊಳ್ಳಲಿಕ್ಕೆ ಸಮಾಜ ಸ್ವಲ್ಪ ಸೋಲ್ತಾ ಇರ್ತದೆ. ಯಾಕಂದ್ರೆ ಸಮಾಜ ಬಹಳ ಭಾವನಾತ್ಮಕವಾಗಿ ವಿಚಾರ ಮಾಡ್ತಿರ್ತದೆ. ಆದರೆ ಸಂಶೋಧಕರು ಬಹಳ ಸತ್ಯದಿಂದ ಸಮಾಜವನ್ನು ವಿಚಾರ ಮಾಡ್ತಾ ಇರ್ತಾರೆ. ಹೀಗಾಗಿ ಆ ವ್ಯತ್ಯಾಸ ಏನು ಅನ್ನುವದು ಒಂದು ಸ್ವಲ್ಪ ಹುಡುಕಲಿಕ್ಕೆ ಪ್ರಯತ್ನ ಮಾಡ್ದೆ.
ನಮ್ಮ ಕಾಲದ ಎಲ್ಲಾ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಏನೇನು ಸಮಸ್ಯೆಗಳಿದ್ದಾವೆ, ಬಿಕ್ಕಟ್ಟುಗಳಿದ್ದಾವೆ ಆಮೇಲೆ ಒಬ್ಬ ಸಂಶೋಧಕ ಯಾವ್ಯಾವ ಅಗ್ನಿಕುಂಡಗಳನ್ನು ಹಾಯಬೇಕಾಗ್ತದೆ, ಸಂಶೋಧಕನಿಗೆ ಎದುರಾಗುವಂಥ ಸವಾಲುಗಳು, ಸಂಶೋಧಕ ಮತ್ತು ಸಮಾಜದ ಸಂಬಂಧ, ಸಂಶೋಧಕ ಮತ್ತು ಧಾರ್ಮಿಕ ಸಂಶೋಧನೆಯ ಸಂಕಟಗಳು ಇವೆಲ್ಲಾ ಸಂಗತಿಗಳನ್ನಿಟ್ಟುಕೊಂಡು ನಾನು ನಾಟಕ ಬರೆದಿದ್ದೀನಿ.
ಆ ಎಲ್ಲವೂ ಕೂಡ ಒಂದು ರೀತಿಯ ಅವರ ವ್ಯಕ್ತಿತ್ವ ಅನಾವರಣ ಮಾಡ್ತಾ ಹೋಗ್ತವೆ. ಒಂದು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕಾಗಿ ಎಷ್ಟು ಚಡಪಡಿಸಬೇಕಾಗ್ತದೆ, ಯಾಕಂತಂದ್ರೆ ಏನೋ ಒಂದು ತನ್ನ ಆಳದಲ್ಲಿ ಒಳೆದಂತಹದ್ದನ್ನು ಹೇಳಬೇಕಾದರೆ ಏನೆಲ್ಲಾ ಅಡ್ಡಿ ಆತಂಕಗಳು ಉಂಟಾಗ್ತವೆ, ಅಂತಹ ಮಾರ್ಗದಲ್ಲಿ ಸಂಶೋಧಕ ನಡೆಯುವಂತ ಅನಿವಾರ್ಯತೆ ಯಾಕ್ ಉಂಟಾಗ್ತದೆ ಎಂಬ ಫಿಲಾಸಫಿಕಲ್ ಪ್ರಶ್ನೆಗಳು, ಸೂಕ್ಷ್ಮ ಪ್ರಶ್ನೆಗಳು ಎತ್ಕೊಂಡು ಅಲ್ಲಿ ಬರೀಲಿಕ್ಕೆ ಪ್ರಯತ್ನ ಮಾಡಿದೆ.
ಮೀ: ನಾಟಕಕ್ಕೆ ಬಂದ ಪ್ರತಿಕ್ರಿಯೆ …
ವಿ: ನನಗೆ ಬಹಳ ಆಶ್ಚರ್ಯ ಆಯ್ತು, ಬಹಳ ಒಂದೊಳ್ಳೆ ಪ್ರತಿಕ್ರಿಯೆ ಬರ್ತಾ ಇದೆ ಎಲ್ಲಾ ಕಡೆಯಿಂದ. ರಾಯಚೂರು ಸಮುದಾಯದವರು ಹಾಗೂ ಪ್ರವೀಣ್ ರೆಡ್ಡಿ ಗುಂಜಹಳ್ಳಿ ನಿರ್ದೇಶಕರು ಬಹಳ ಒಳ್ಳೆಯ ಪ್ರಯತ್ನ ಮಾಡಿದ್ದರಿಂದಾಗಿ ಅದು ನಾಡಿನ ಬಹಳ ಕಡೆ ಪ್ರದರ್ಶನ ಆಗಿದೆ, ಆಗ್ತಾ ಇದೆ.
ಮೀ: ಕಲಬುರ್ಗಿಯವರ ಪಾತ್ರ ಬಹಳ ನೈಜವಾಗಿ ಮೂಡಿಬಂದಿದೆ ಅದು ಹೇಗೆ ಸಾಧ್ಯವಾಯ್ತು ಅಂತೀರಿ …
ವಿ: ಪ್ರವೀಣ್ ರೆಡ್ಡಿ ಗುಂಜಹಳ್ಳಿ ಅವರು ನೀನಾಸಂ ಪದವೀಧರರು. ನಾಟಕ ಕಲೆ ಬಗ್ಗೆ ಒಳ್ಳೆಯ ತರಬೇತಿ ತಗೊಂಡಿದ್ದಾರೆ. ಆಮೇಲೆ ಕಲಬುರ್ಗಿಯವರ ಅನೇಕ ಯುಟ್ಯೂಬ್ ವಿಡಿಯೋಗಳನ್ನು ನೋಡಿದ್ದಾರೆ, ಅವರು ಮಾತಾಡೋ ಕ್ರಮಗಳನ್ನು ಗಮನಿಸಿದ್ದಾರೆ, ಅವರ ಹಾವಭಾವ, ಅವರು ಕೈ ಮಾಡೋ ರೀತಿ, ಅವರ ಮುಖದ ಎಕ್ಸ್ಪ್ರೆಶನ್ ಗಳು , ಅವರು ನಿಂದ್ರೋ ರೀತಿ, ನಡೆಯೋ ರೀತಿ ಈ ಎಲ್ಲವುಗಳನ್ನು ಹತ್ತಿರದಿಂದ, ಕ್ಲೋಸ್ ಆಗಿ ಗಮನಿಸಿದ್ದಾರೆ. ಆಮೇಲೆ ಅವರು ನಟ ಆಗಿರುವುದರಿಂದ, ಇಂಥ ಪಾತ್ರಗಳನ್ನು ಹೆಂಗೆ ಮನಸ್ಸಿನಲ್ಲಿ ಇಳಿಸಿಕೊಂಡು ಅಭಿವ್ಯಕ್ತಿಸಬೇಕೆಂಬ ಕಲೆ ಕರಗತವಾಗಿದೆ.
ನಿಮ್ಮ ಹೇಳಿಕೆಯಲ್ಲಿ ಕುತೂಹಲ ಕೆರಳಿಸುತ್ತಿದೆ ನಾಟಕವನ್ನುನೋಡಬೇಕೆಂಬ ಆಸೆ ಆಗುತ್ತಿದೆ. ನಿಜಕ್ಕೂ ಕಲ್ಬುರ್ಗಿ ಎಂದರೆ ಶರಣ ಸಂಸ್ಕೃತಿಯ ಆಸ್ತಿ ಎನ್ನಬಹುದು. ಆ ಹೆಸರಿಗೊಂದು ವಿಶೇಷ ಶಕ್ತಿ ಇದೆ ಅಂತಹ ಅದ್ಭುತ ಸಾಹಿತ್ಯವನ್ಶೋನು ಸಂಶೋಧಿಸಿದ ಪುಣ್ಯಾತ್ಮರಿಗೆ ಸಹಿಸಲಾರದ ಕುಹಕಿಗಳು ಮಾಡಿದ ಕುತಂತ್ರಕ್ಕೆ ಈ ಜೀವ ಬಲಿಯಾಗಬೇಕಾಯಿತು. ಅವರ ಅಂತರಂಗದಲ್ಲಿ ಅದೆಷ್ಟು ಸತ್ಯಗಳು ಅಡಗಿ ಹೋದವು ತಿಳಿಯದು. ಅವರ ಧೈರ್ಯ ನೇರ ನಡೆ-ನುಡಿಗಳು ಎಂದೆಂದಿಗೂ ಸ್ಫೂರ್ತಿ.
ನಿಜವಾದ ಮಹಾ ಸಾಧಕರು ನಮ್ಮ ಲಿಂ.ಎಂ ಎಂ ಕಲ್ಬುರ್ಗಿ..ಯವರು ವಚನ ಸಂಪುಟಗಳ ಪರಿಷ್ಕರಣೆಯಲ್ಲಿ ತಮ್ಮ ಅಪಾರ ಅನುಭವ ಹಾಗೂ ಶ್ರಮ ಅನುಭವವನ್ನು ಬಳಸಿಕೊಂಡು ಬಸವಾದಿ ಶರಣರ ಆಶಯವನ್ನು ಸಾಧನೆಯ ಅಂತ ಅಂತ ಮಜಲುಗಳ ಸ್ಥಲಗಳನ್ನು ಸೂಕ್ಷ್ಮ ವಾಗಿ ಪರಿಷ್ಕರಿಸಿದ್ದಾರೆ….. ಕಲ್ಬುರ್ಗಿ ಯವರು ಸಾಧಿಸಿದ ಎಲ್ಲಾ ವಿಚಾರಗಳು ನಾಡಿನ ಸಾಧಕರಿಗೆ ಆದರ್ಶಪ್ರಾಯವಾಗಲಿ.
ಈ ನಾಟಕ ಅದ್ಭುತವಾದ ಯಶಸ್ಸು ಕಾಣಲಿ ಅಂತಾ ಹಾರೈಸುತ್ತ 💐💐. ಸಂದರ್ಶನ ಲೇಖನ ಚೆನ್ನಾಗಿ ಬಂದಿದೆ. ಶರಣು ಶರಣಾಥಿ೯ಗಳು 🙏🙏