ಇಂದು ಪ್ರಜ್ವಲಿಸಲು ಆರಂಭಿಸಿರುವ ಬಸವ ಪ್ರಜ್ಞೆಯ ಕಿಡಿಯನ್ನು ಹಚ್ಚಿದವರಲ್ಲಿ ಡಾ.ಎಂ.ಎಂ.ಕಲಬುರ್ಗಿ ಪ್ರಮುಖರು.
ಅವರು ಪರಿಷ್ಕರಿಸಿ ಸಂಪಾದಿಸಿರುವ ವಚನ ಸಂಪುಟಗಳು 12ನೇ ಶತಮಾನದ ಶರಣರ ನೈಜ ಧ್ವನಿಯೆಂದು ಇಂದು ಎಲ್ಲರೂ ಒಪ್ಪಿಕೊಂಡಿದ್ದಾರೆ. ವಚನಗಳನ್ನು ತಿರುಚಲು ಹೊರಟಿರುವ ವಿವಾದಿತ ವಚನ ದರ್ಶನ ಪುಸ್ತಕದ ಸಂಪಾದಕರೂ ಕಲಬುರ್ಗಿಯವರ ಅಧಿಕೃತ ಮುದ್ರೆಯಿರುವ ವಚನಗಳನ್ನು ಮಾತ್ರ ಬಳಸಿಕೊಂಡಿದ್ದಾರೆ.
ಇತಿಹಾಸದಲ್ಲಿ ಹುದುಗಿಹೋಗಿದ್ದ ಲಿಂಗಾಯತ ಧರ್ಮದ ನಿಜ ಇತಿಹಾಸವನ್ನು ಸಾವಿರಾರು ಶಾಸನ, ಹಸ್ತಪ್ರತಿಗಳನ್ನು ಶೋಧಿಸಿ ಕಲಬುರ್ಗಿ ಹೊರತೆಗೆದರು. ಕರ್ನಾಟಕದ ಬಹುಜನರ, ದೇಶಿಯ ಧರ್ಮವಾಗಿ ಶುರುವಾದ ಲಿಂಗಾಯತ, ವೈದಿಕ ಪರಂಪರೆಯ ವೀರಶೈವರ, ಪಂಚಾಚಾರ್ಯರ ಕಪಿಮುಷ್ಟಿಗೆ ಸಿಲುಕಿದ ದುರಂತವನ್ನು ಸಾಕ್ಷಿಗಳ ಸಮೇತ ದಾಖಲಿಸಿದರು.

ಶರಣ ಸಂಸ್ಕೃತಿ ಒಂದು ವೈಚಾರಿಕತೆಯ ಸಂಸ್ಕೃತಿ, ವೈಯಕ್ತಿಕ ಆಧ್ಯಾತ್ಮದಷ್ಟೇ ಸಮಾಜದ ಒಳಿತಿಗೆ ದುಡಿಯುವ ಪರಂಪರೆ ಎಂದು ತೋರಿಸಿಕೊಟ್ಟರು. ಜಾಗತಿಕ ಲಿಂಗಾಯತ ಮಹಾಸಭಾದ ಎಸ್.ಎಂ. ಜಾಮದಾರ್ ಹೇಳುವಂತೆ “ಹಳಕಟ್ಟಿ ವಚನಗಳನ್ನು ಹುಡುಕಿಕೊಟ್ಟರೆ ಅವುಗಳನ್ನು ಓದಲು ಕಲಿಸಿಕೊಟ್ಟವರು ಕಲಬುರ್ಗಿ.”
ಇದು ಜೇನುಗೂಡಿಗೆ ಕೈ ಹಾಕಿಸಿದ ಸಂಶೋಧನೆ. ಇದರಿಂದ ಬಂದ ಪ್ರತಿರೋಧ, ಬೆದರಿಕೆಗಳಿಗೆ ಜಗ್ಗದೆ ಸತ್ಯವನ್ನು ಹುಡುಕಲು ತಮ್ಮ ಶೋಧನೆ ಮುಂದುವರೆಸಿ ಕೊನೆಗೆ ತಮ್ಮ ಪ್ರಾಣವನ್ನೇ ತೆತ್ತ ಕಲಬುರ್ಗಿಯವರ ಜೀವನ ರಕ್ತ ವಿಲಾಪ ನಾಟಕದ ಕಥಾವಸ್ತು.

ಒಬ್ಬ ಸಂಶೋಧಕನಿಗೆ ಎದುರಾಗುವಂಥ ಸವಾಲುಗಳು, ಅವರು ಯಾವ್ಯಾವ ಅಗ್ನಿಕುಂಡಗಳನ್ನು ಹಾಯಬೇಕಾಗ್ತದೆ ಅಂತ ತೋರಿಸಲು ನಾನು ರಕ್ತ ವಿಲಾಪ ಬರೆದಿದ್ದೀನಿ, ಎಂದು ನಾಟಕ ರಚಿಸಿರುವ ಡಾ.ವಿಕ್ರಮ ವಿಸಾಜಿ ಹೇಳುತ್ತಾರೆ.
ರಕ್ತ ವಿಲಾಪ ಅವರ ವ್ಯಕ್ತಿತ್ವದ, ಸಂಘರ್ಷದ ವಿವಿಧ ಆಯಾಮಗಳನ್ನು ಪರಿಚಯಿಸುತ್ತದೆ. ಸಂಶೋಧಕನನ್ನ ಕೊಲೆ ಮಾಡಲು ಬಂದ ಯುವಕನೊಂದಿಗೆ ಅವರ ಸಂವಾದವಿದೆ, ನ್ಯಾಯಾಲಯದ ವಿಚಾರಣೆಯ ಸಮಯದಲ್ಲಿ ತಮ್ಮ ಹುಡುಕಾಟದ ಕ್ರಮ ಏನು, ತಾವು ಮಾಡುತ್ತಿರುವುದೇನು ಎಂದು ವಿವರಿಸುವ ಕಲ್ಬುರ್ಗಿಯವರ ಸಮರ್ಥನೆಯಿದೆ.

ಅವರ ನಿಷ್ಠುರ ಸಂಶೋಧನೆಗೆ ಬಂದ ಪ್ರತಿರೋಧವನ್ನು ಗ್ರಹಿಸಲು ನಾಟಕ ಪ್ರಯತ್ನಿಸುತ್ತದೆ.
“ಸಂಶೋಧಕರು ಬಹಳ ಸೂಕ್ಷ್ಮ ಇರ್ತಾರೆ ಮತ್ತು ಕಾಲದಕ್ಕಿಂತ ಬಹಳ ಮುಂದಕ್ಕಿರ್ತಾರೆ. ಅವರನ್ನ ಅರ್ಥಮಾಡಿಕೊಳ್ಳಲಿಕ್ಕೆ ಸಮಾಜ ಸ್ವಲ ಸೋಲ್ತಾ ಇರ್ತದೆ. ಯಾಕಂದ್ರೆ ಸಮಾಜ ಬಹಳ ಭಾವನಾತ್ಮಕವಾಗಿ ವಿಚಾರ ಮಾಡ್ತಿರ್ತದೆ. ಆದರೆ ಸಂಶೋಧಕರು ಬಹಳ ಸತ್ಯದಿಂದ ಸಮಾಜವನ್ನು ವಿಚಾರ ಮಾಡ್ತಾ ಇರ್ತಾರೆ,” ಎನ್ನುತ್ತಾರೆ ಡಾ.ವಿಕ್ರಮ ವಿಸಾಜಿ.
ಈ ನಾಟಕ ಒಬ್ಬ ಕಲಬುರ್ಗಿಯ ಕಥೆಯಲ್ಲ. ಅವರು ಹೇಳುವಂತೆ: “ನಮ್ಮ ಕಾಲದ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಏನೇನು ಸಮಸ್ಯೆಗಳಿದ್ದಾವೆ, ಬಿಕ್ಕಟ್ಟುಗಳಿದ್ದಾವೆ, ಒಂದು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕಾಗಿ ಎಷ್ಟು ಚಡಪಡಿಸಬೇಕಾಗ್ತದೆ ಎಂದು ರಕ್ತ ವಿಲಾಪ ತೋರಿಸುತ್ತದೆ,”

“ಜಗತ್ತಿನಲ್ಲಿ ಸತ್ಯ ಹೇಳೋದಿಕ್ಕೆ ನಿಂತವರು ಯಾವ್ಯಾವ ರೀತಿ ಅನಾಹುತಗಳನ್ನು ಅನುಭವಿಸಿದ್ದಾರೆ… ಎಂಥ ಅಪಾಯಕಾರಿ ಪರಿಸ್ಥಿತಿಯಲ್ಲಿ ನಾವು ಬದಕುತ್ತಾ ಇದ್ದೇವೆ ಎಂಬುದನ್ನು ಈ ನಾಟಕದ ಮೂಲಕ ಹೇಳುವುದಕ್ಕೆ ಪ್ರಯತ್ನ ಮಾಡಿದ್ದೇವೆ,” ಎನ್ನುತ್ತಾರೆ ನಾಟಕ ನಿರ್ದೇಶಿಸಿ, ಕಲಬುರ್ಗಿಯವರ ಪಾತ್ರದಲ್ಲಿಯೂ ಕಾಣಿಸಿಕೊಳ್ಳುತ್ತಿರುವ ಪ್ರವೀಣ್ ರೆಡ್ಡಿ ಗುಂಜಹಳ್ಳಿ.
ಸಮುದಾಯ ರಾಯಚೂರು ಪ್ರಸ್ತುತಪಡಿಸುವ ರಕ್ತ ವಿಲಾಪ ಈಗಾಗಲೇ ಆರು ಪ್ರದರ್ಶನ ಕಂಡಿದೆ. ಮೂರು ಪ್ರದರ್ಶನಗಳು ವಿಜಯಪುರ-ಅಕ್ಟೋಬರ್ 06,
ಬೆಂಗಳೂರು-ಅಕ್ಟೋಬರ್ 19, ಮೈಸೂರು-ಸೆಪ್ಟೆಂಬರ್ 29ರಂದು ನಡೆಯಲಿವೆ.

ನಾಟಕದ ಪಾತ್ರಗಳಲ್ಲಿ ಕಾಣಿಸಿಕೊಳ್ಳುವವರು
ಡಾ ಕಲಬುರ್ಗಿ – ಪ್ರವೀಣ್ ರೆಡ್ಡಿ ಗುಂಜಹಳ್ಳಿ
ಯುವಕ – ಸಾಗರ ಇಟೇಕರ್
ನ್ಯಾಯಾಧೀಶೆ – ನಿರ್ಮಲಾ ವೇಣುಗೋಪಾಲ
ವಕೀಲ – ಶಿವರಾಜ ಹೆಗ್ಗಸನಳ್ಳಿ
ವಿದ್ವಾಂಸರು – ನಾಗರಾಜು, ಮಹೇಶ, ಗುರುಶಾಂತ, ನರಸಿಂಹಲು
ಮೇಳ (ಮುಖವಾಡಗಳ ಥರ ಬಳಸಿದ್ದು) – ಶಾಂತಮೂರ್ತಿ, ಚಂದ್ರಕಲಾ, ವಿಮಲಾ, ಅಮರೇಶ.
ಸಂಗೀತ ಸಂಯೋಜನೆ ಇನ್ಸಾಫ್ ಪಟೇಲ್, ಬೆಳಕಿನ ಸಂಯೋಜನೆ ಲಕ್ಷಣ ಮಂಡಲಗೇರಾ, ಪ್ರಸಾದನ ವೆಂಕಟ ನರಸಿಂಹಲು, ರಂಗಸಜ್ಜಿಕೆ ನಾಗರಾಜ ಸಿರವಾರ.
ಕಾಲೇಜು ವಿದ್ಯಾರ್ಥಿಗಳು, ಹವ್ಯಾಸಿ ಕಲಾವಿದರು ನಾಟಕದಲ್ಲಿ ಅಭಿನಯಿಸಿದ್ದಾರೆ.
ನಾಟಕ 90 ನಿಮಿಷದ ಅವಧಿಯದ್ದಾಗಿದೆ.

ರಕ್ತವಿಲಾಪ ನಾಟಕದ ಕುರಿತು, ತುಂಬಾ ಚೆನ್ನಾಗಿ ವರದಿ ಮಾಡಿದ್ದೀರಿ. ಶರಣು ಶರಣಾರ್ಥಿಗಳು.
ಚೆನ್ನಾದ ವರದಿ..
ಪಾತ್ರ ಪರಿಚಯ ಮಾಡಿದ್ದು ಹಿಡಿಸಿತು.
ಸಮುದಾಯ ರಾಯಚೂರಿಗೆ ಅಭಿನಂದನೆಗಳು..
ನಾಟಕ ಹೆಚ್ಚು ಪ್ರದರ್ಶನ ಕಾಣಲಿ..
ರವೀಂದ್ರ ಹೊನವಾಡರ ವರದಿಗಾರಿಕೆಗೆ ಶರಣು..