ಮಡಿವಾಳ ಮಾಚಿದೇವರು ವಚನ ಸಾಹಿತ್ಯ ರಕ್ಷಿಸಿದ ಧೀರ: ಡಾ. ಶ್ರೀಕಾಂತ ಪಾಟೀಲ

ಬಸವ ಮೀಡಿಯಾ
ಬಸವ ಮೀಡಿಯಾ

ಬೀದರ:

ಶರಣ ಮಡಿವಾಳ ಮಾಚಿದೇವರು ವಚನ ಸಾಹಿತ್ಯವನ್ನು ರಕ್ಷಿಸಿ ಉಳವಿಗೆ ತಲುಪಿಸಿದ ಧೀರ ಎಂದು ಸರ್ಕಾರಿ ಪ್ರಥಮದರ್ಜೆ ಮಹಿಳಾ ಕಾಲೇಜಿನ ಸಹ ಪ್ರಾಧ್ಯಾಪಕ ಡಾ. ಶ್ರೀಕಾಂತ ಪಾಟೀಲ ಬಣ್ಣಿಸಿದರು.

ಇಲ್ಲಿಯ ಬಸವಗಿರಿಯ ಲಿಂಗಾಯತ ಮಹಾಮಠದಲ್ಲಿ ಮರಣವೇ ಮಹಾನವಮಿ ಹಾಗೂ ಕಲ್ಯಾಣ ಕ್ರಾಂತಿ ವಿಜಯೋತ್ಸವದ ಮೂರನೇ ದಿನ, ಶನಿವಾರ ನಡೆದ ‘ವಚನ ಸಂರಕ್ಷಣೆಯಲ್ಲಿ ಮಡಿವಾಳ ಮಾಚಿದೇವರು’ ಚಿಂತನ ಗೋಷ್ಠಿಯಲ್ಲಿ ಅವರು ವಿಶೇಷ ಉಪನ್ಯಾಸ ನೀಡಿದರು.

ಕಲ್ಯಾಣ ಕ್ರಾಂತಿಯ ಕೊನೆಯ ಘಟ್ಟದಲ್ಲಿ ಗುರುತರವಾದ ಜವಾಬ್ದಾರಿ ಹೊತ್ತವರು ಮಡಿವಾಳ ಮಾಚಿದೇವ. ಶರಣ ಧರ್ಮ ಹಾಗೂ ವಚನ ಸಾಹಿತ್ಯದ ಸಂರಕ್ಷಣೆಯ ದಂಡನಾಯಕತ್ವ ವಹಿಸಿದರು.
ಚನ್ನಬಸವಣ್ಣ, ಅಕ್ಕನಾಗಮ್ಮ, ಕಿನ್ನರಯ್ಯ ಮೊದಲಾದವರೊಂದಿಗೆ ಸಂಪ್ರದಾಯವಾದಿಗಳನ್ನು, ಕಲಚೂರ್ಯ ಮರಿ ಅರಸ ರಾಯಮುರಾರಿಯನ್ನು ಎದುರಿಸಿ ಸೋಲಿಸಿದರು ಎಂದು ತಿಳಿಸಿದರು.

ತತ್ವದ ಆಚರಣೆಯಲ್ಲಿ ರಾಜ ಬಿಜ್ಜಳನನ್ನು ಎದುರಿಸುವ ಎದೆಗಾರಿಕೆ, ಬಸವ ನಿಷ್ಠೆ, ಸಮಾಜ ಪ್ರೇಮ, ನರಸತ್ತವರಲ್ಲಿಯೂ ಕೆಚ್ಚಿನ ಕಿಚ್ಚು ಹೊತ್ತಿಸುವ ಸ್ವಭಾವ ಅವರದ್ದಾಗಿತ್ತು. ಅಂತೆಯೇ ಜನಪದರು ‘ಲಿಂಗವಂತರ ಚಿನ್ಹೆ ಉಳಿಸಿದ ಮಡಿವಾಳ ಮಾಚಯ್ಯನೆಂದು’ ಹಾಡಿ ಹರಸಿದ್ದಾರೆ ಎಂದು ಹೇಳಿದರು.

ಬಸವ ಧರ್ಮದ ಪಂಚಾಚಾರಗಳಲ್ಲಿ ಕೊನೆಯದಾದ ಗಣಾಚಾರ ಪಾಲಿಸಿಕೊಂಡು ಬಂದಿದ್ದ ಮಾಚಿದೇವರು ವೀರ ಗಣಾಚಾರಿ ಎಂದೇ ಹೆಸರಾಗಿದ್ದರು. ಬಸವಣ್ಣನೆ ಗುರು, ಪ್ರಭುದೇವರೆ ಲಿಂಗ, ಸಿದ್ದರಾಮಯ್ಯನೆ ಜಂಗಮ, ಮಡಿವಾಳಯ್ಯನೆ ಎನ್ನ ಹೆತ್ತ ತಂದೆ ಎಂಬ ಅಕ್ಕನ ವಚನ ಮಾಚಿದೇವರಲ್ಲಿ ಕಂಡ ಪಿತೃ ಪ್ರೇಮದ ದ್ಯೋತಕ. ಡಾಂಬಿಕ ಭಕ್ತಿ, ಕ್ಷುದ್ರ ದೇವತೆಗಳ ಆರಾಧನೆ, ವೇಷಧಾರಿಗಳ ವರ್ತನೆಗಳನ್ನು ಅವರು ಖಂಡಿಸಿದರು. ಅವರ 353 ವಚನಗಳು ದೊರೆತಿವೆ ಎಂದು ತಿಳಿಸಿದರು.

ವಚನ ಓದಿ ಗೋಷ್ಠಿಗೆ ಚಾಲನೆ ನೀಡಿದ ಜಿಲ್ಲಾ ಪಂಚಾಯಿತಿ ಮುಖ್ಯ ಲೆಕ್ಕಾಧಿಕಾರಿ ಶ್ರೀಕಾಂತ ವೈರಾಗೆ ಮಾತನಾಡಿ, ಮಾಚಿದೇವರ ವೀರತನವನ್ನು ಯುವ ಪೀಳಿಗೆ ಅಳವಡಿಸಿಕೊಳ್ಳಬೇಕು. ಅವರ ವಚನಗಳನ್ನು ಅನುಸರಿಸಬೇಕು ಎಂದು ಸಲಹೆ ಮಾಡಿದರು.

ಅಧ್ಯಕ್ಷತೆ ವಹಿಸಿದ್ದ ಗ್ರಾಮೀಣ ಕೈಗಾರಿಕೆ ಇಲಾಖೆಯ ಉಪ ನಿರ್ದೇಶಕ ರಾಜಕುಮಾರ ಪಾಟೀಲ ಮಾತನಾಡಿ, ಮಡಿವಾಳ ಮಾಚಿದೇವರು ಬಟ್ಟೆ ಮಡಿ ಮಾಡುವುದಷ್ಟೇ ಅಲ್ಲ, ಜನರ ಮನದ ಮೈಲಿಗೆಯನ್ನೂ ತೊಳೆದು ಮಡಿ ಮಾಡಿದರು. ಶರಣ ಪಥಕ್ಕೆ ಸಲ್ಲುವಂತೆ ಮಾಡಿದರು. ಅನುಭವ ಮಂಟಪದ ಮಹತ್ವದ ಪ್ರಸಂಗಗಳಲ್ಲಿ ಮಾರ್ಗ ತೋರಿದರು ಎಂದು ಹೇಳಿದರು.

ಗುರುಶ್ರೀ ಮಠಪತಿ ವಚನ ಗಾಯನ, ಲಿಂಗಾಯತ ಸೇವಾ ದಳದ ಸಂದೀಪ ಚಿದ್ರೆ ವಚನ ಪಠಣ, ಕಂಟೆಪ್ಪ ಗಂದಿಗುಡೆ, ಮಹೇಶ್ ಬಿರಾದಾರ ಹಾಗೂ ರೇವಣಪ್ಪ ಮೂಲಗೆ ವಚನ ಭಜನೆ ನಡೆಸಿಕೊಟ್ಟರು.
ಗಾಂಧಿಗಂಜ್ ಸಹಕಾರ ಬ್ಯಾಂಕ್ ನಿವೃತ್ತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಿವಕುಮಾರ ಶೆಟಕಾರ್, ಉದ್ಯಮಿ ವಿವೇಕಾನಂದ ಧನ್ನೂರ, ನೀಲಮ್ಮನ ಬಳಗದ ಸುರೇಖಾ ಎನ್. ವಡ್ಡನಕೇರಿ, ಸಾಹಿತಿ ರಮೇಶ ಮಠಪತಿ ಉಪಸ್ಥಿತರಿದ್ದರು.

ಜೆಸ್ಕಾಂ ನಿವೃತ್ತ ಎಇಇ ವಿವೇಕಾನಂದ ಕೋಟೆ ಭಕ್ತಿ ದಾಸೋಹಗೈದರು. ಸಂತೋಷ ಹಂಗರಗಿ ಸ್ವಾಗತಿಸಿದರು. ಪ್ರವೀಣ ಸ್ವಾಮಿ ನಿರೂಪಿಸಿದರು.

Share This Article
Leave a comment

Leave a Reply

Your email address will not be published. Required fields are marked *