ಶರಣರ ವಚನಗಳಲ್ಲಿನ ಆರೋಗ್ಯದ ಗುಟ್ಟು ತಿಳಿಸಿದ ಡಾ. ವಚನಶ್ರುತಿ

ಬಸವ ಮೀಡಿಯಾ
ಬಸವ ಮೀಡಿಯಾ

ಬೀದರ

ಹನ್ನೆರಡನೇ ಶತಮಾನದ ಅನೇಕ ಶರಣರು ತಮ್ಮ ವಚನಗಳಲ್ಲಿ ಆರೋಗ್ಯದ ಗುಟ್ಟು ಹೇಳಿದ್ದಾರೆ ಎಂದು ಜಿಲ್ಲಾ ಆಯುಷ್ ಆಸ್ಪತ್ರೆಯ ತಜ್ಞ ವೈದ್ಯೆ ಡಾ. ವಚನಶ್ರುತಿ ಪುರಾಣಿಕ ಮಠ ನುಡಿದರು.

ನಗರದ ಬಸವಗಿರಿಯ ಲಿಂಗಾಯತ ಮಹಾಮಠದಲ್ಲಿ ಮರಣವೇ ಮಹಾನವಮಿ ಮಹೋತ್ಸವ ಹಾಗೂ ಕಲ್ಯಾಣ ಕ್ರಾಂತಿ ವಿಜಯೋತ್ಸವದ ಐದನೇ ದಿನ, ಸೋಮವಾರ ನಡೆದ ವಚನಗಳಲ್ಲಿ ಆರೋಗ್ಯ ಚಿಂತನಗೋಷ್ಠಿಯಲ್ಲಿ ಅವರು ಮಾತನಾಡಿದರು.

ವೈದ್ಯ ಸಂಗಣ್ಣ, ಅಕ್ಕ ಮಹಾದೇವಿ ಮೊದಲಾದವರು ತಮ್ಮ ವಚನಗಳಲ್ಲಿ ಆರೋಗ್ಯದ ಕುರಿತು ವಿವರಿಸಿದ್ದಾರೆ ಎಂದು ತಿಳಿಸಿದರು. ಸಪ್ತಧಾತುಗಳಿಂದ ಮನುಷ್ಯನ ಶರೀರವಾಗಿದೆ. ಅವುಗಳಲ್ಲಿ ಏರು ಪೇರಾದರೆ ರೋಗಗಳು ಬರುತ್ತವೆ. ವಾತ-ಪಿತ್ತ-ಕಫಗಳೆಂಬ ತ್ರಿದೋಷದಿಂದ ವ್ಯಾಧಿಗಳು ಹುಟ್ಟುತ್ತವೆ ಎಂದು ಹೇಳಿದರು.

ಆಣವ-ಮಾಯಾ-ಕಾರ್ಮಿಕ ಮಲದಿಂದ ಮನಸ್ಸಿಗೆ ರೋಗ ಆಡರವವು. ಮನುಷ್ಯ ಆರೋಗ್ಯವಾಗಿರಬೇಕಾದರೆ ಇವೆಲ್ಲವನ್ನು ಸಮಪ್ರಮಾಣದಲ್ಲಿಟ್ಟುಕೊಳ್ಳಬೇಕು ಎಂದರು.

ಆರೋಗ್ಯದಿಂದಿರಲು ಇಂದ್ರೀಯ, ಮನಸ್ಸು, ಆತ್ಮಗಳ ಪ್ರಸನ್ನತೆ ಅವಶ್ಯಕ. ಇಷ್ಟಲಿಂಗ ಪೂಜೆಯಿಂದ ಈ ಮೂರನ್ನೂ ಪ್ರಸನ್ನವಾಗಿರಿಸಲು ಸಾಧ್ಯ. ಇಷ್ಟಲಿಂಗ ಪೂಜೆ, ಕಣ್ಣು, ಕಿವಿ, ಮೂಗು, ಬಾಯಿ, ಚರ್ಮ ಹೀಗೆ ಒಂದೊಂದೇ ಇಂದ್ರೀಯ ಜಾಗೃತವಾಗಿಸುತ್ತಾ ಪ್ರಸನ್ನತೆ ನೀಡುತ್ತದೆ ಎಂದು ತಿಳಿಸಿದರು.

ಉತ್ತಮ ಆರೋಗ್ಯಕ್ಕಾಗಿ ‘ಆಹಾರವ ಕಿರಿದು ಮಾಡಿರಣ್ಣಾ’ ಎಂದು ಮಹಾದೇವಿಯಕ್ಕ ಹೇಳಿದ್ದಾರೆ. ಹಾಗಾದರೆ ಎಷ್ಟು ಉಣ್ಣಬೇಕು?, ಹೊಟ್ಟೆಯ ಅರ್ಧ ಭಾಗ ಪೌಷ್ಟಿಕ ಆಹಾರ, ಗಿರ್ಧ ಭಾಗ ನೀರು, ಇನ್ನುಳಿದ ಗಿರ್ಧ ಭಾಗ ಗಾಳಿಯಿಂದ ತುಂಬಿಕೊಳ್ಳಬೇಕು. ದಿನಾಲು 4 ರಿಂದ 5 ಲೀಟರ್ ನೀರು ಕುಡಿಯಬೇಕು. ಏಳೆಂಟು ತಾಸು ನಿದ್ರಿಸಬೇಕು ಎಂದು ಹೇಳಿದರು.

ಊಟಗಳ ಮಧ್ಯೆ ಅಂತರ ಬೇಕು. ಒಂದೊತ್ತು ಉಂಡವ ಯೋಗಿ, ಎರಡು ಹೊತ್ತು ಉಂಡವ ಭೋಗಿ, ಮೂರ್ಹೊತ್ತು ಉಂಡವ ರೋಗಿಯೆಂಬ ಅರಿವು ಇರಬೇಕು. ಪಾನಿ ಪುರಿ, ಬಿಸ್ಕತ್, ಬ್ರೆಡ್‍ಗಳಂಥ ಬೇಕರಿ ಪದಾರ್ಥಗಳನ್ನು ತೊರೆಯಬೇಕು. ಜಂಕ್ ಫುಡ್‍ಗಳನ್ನು ಸೇವಿಸಲೇಬಾರದು. ರೋಗ ಬರದಂತೆ ಅನ್ನಪಾನಾದಿಗಳನ್ನು ನಿರ್ವಹಿಸುವುದು ಜಾಣತನ ಎಂದು ತಿಳಿಸಿದರು.

ಸಣ್ಣ ಪುಟ್ಟ ಕಾಯಿಲೆಗಳಿಗೆ ಅಡುಗೆ ಮನೆಯಲ್ಲಿನ ಪದಾರ್ಥಗಳೇ ಔಷಧಗಳಾಗಿವೆ. ಯಾವ ರೋಗಕ್ಕೆ ಯಾವ ಪದಾರ್ಥ ಬೇಕೆಂಬ ಪಟ್ಟಿಯನ್ನೇ ಅವರು ನೀಡಿದರು.

ಸಾನಿಧ್ಯ ವಹಿಸಿದ್ದ ಪ್ರಭುದೇವ ಸ್ವಾಮೀಜಿ ಮಾತನಾಡಿ, ಬಹುರೂಪಿ ಚೌಡಯ್ಯ ಅವರು ಹೇಳಿದಂತೆ ಮಿತ ಭೋಜನ, ಮಿತ ವಾಕ್, ಮಿತ ನಿದ್ರೆಗಳಿಂದ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದರು.

ಆಹಾರದಂತೆ ವಿಹಾರ-ವಿಚಾರಗಳಾದ್ದರಿಂದ ಸಾತ್ವಿಕ ಆಹಾರ ಉಣ್ಣಬೇಕು. ಶರಣರು ದೇಹವನ್ನು ದೇವಾಲಯವೆಂದಿದ್ದಾರೆ. ದೇವರನ್ನು ಒಲಿಸಲು ಬಂದ ಈ ಪ್ರಸಾದ ಕಾಯವನ್ನು ಕೆಡಿಸಿಕೊಳ್ಳಬಾರದು. ದೇಹ ಶುದ್ಧವಿದ್ದರೆ ಮಾತ್ರ ಏನಾದರೂ ಸಾಧಿಸಬಹುದು ಎಂದು ಹೇಳಿದರು.

ರಾಜ್ಯ ಬೀಜ ಅಭಿವೃದ್ಧಿ ನಿಗಮದ ನಿವೃತ್ತ ಸಹಾಯಕ ಪ್ರಧಾನ ವ್ಯವಸ್ಥಾಪಕ ಅನಿಲರಾಜ್ ಬಿರಾದಾರ ಹಾಗೂ ನಿವೃತ್ತ ಮುಖ್ಯಶಿಕ್ಷಕ ಮಲ್ಲಿಕಾರ್ಜುನ ಔರಾದೆ ಜಂಟಿಯಾಗಿ ಪರಿಸರ ಸ್ನೇಹಿ ಪಟಾಕಿ ಸಿಡಿಸಿ ಗೋಷ್ಠಿಯನ್ನು ಉದ್ಘಾಟಿಸಿದರು.

ನಿವೃತ್ತ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಸೂರ್ಯಕಾಂತ ಬಿರಾದಾರ, ಉದ್ಯಮಿ ಕಂಟೆಪ್ಪ ಗಂದಿಗುಡೆ, ರೋಟರಿ ಕಲ್ಯಾಣ ಝೋನ್ ಸಹಾಯಕ ಗವರ್ನರ್ ಸೂರ್ಯಕಾಂತ ರಾಮಶೆಟ್ಟಿ, ಸಾಹಿತಿ ರಮೇಶ ಮಠಪತಿ, ನೀಲಮ್ಮನ ಬಳಗದ ನೀಲಾಂಬಿಕೆ ಪಾಖಾಲ, ಶೋಭಾ ಕೂಡಂಬಲ ಉಪಸ್ಥಿತರಿದ್ದರು.

ಶಿವಕುಮಾರ ರಮೇಶ ಹಂಗರಗಿ ವಚನ ಪಠಣ ಮಾಡಿದರು. ಶ್ಯಾಮಲಾ ಎಲಿ, ಡಾ. ದೀಪ್ತಿ ಗೋರನಾಳೆ ಆಕರ್ಷಕ ವಚನ ನೃತ್ಯ ಪ್ರದರ್ಶಿಸಿದರು. ಸೃಷ್ಟಿ ಅರವಿಂದ ಕೂಡಂಬಲ ಭಕ್ತಿ ದಾಸೋಹಗೈದರು. ಸಂಗೀತಾ ವಡ್ಡನಕೇರಿ ಸ್ವಾಗತಿಸಿದರು. ಅಭಿಷೇಕ ಮಠಪತಿ ನಿರೂಪಿಸಿದರು

Share This Article
Leave a comment

Leave a Reply

Your email address will not be published. Required fields are marked *