ಚೆನ್ನಬಸವಣ್ಣನವರ ದೇವರಕಾಡು ಬೂದನ ಗುಡ್ಡ ಅಭಿವೃದ್ಧಿಪಡಿಸಲು ಖಂಡ್ರೆಗೆ ಮನವಿ

ಕುಮಾರಣ್ಣ ಪಾಟೀಲ್
ಕುಮಾರಣ್ಣ ಪಾಟೀಲ್

ಹುಬ್ಬಳ್ಳಿ:

ನಗರದ ಸಮೀಪದ ಚಳಮಟ್ಟಿಯಲ್ಲಿರುವ ರಮಣೀಯವಾದ ದೇವರಕಾಡು ಬೂದನಗುಡ್ಡವನ್ನು ಯಾತ್ರಾ ಸ್ಥಳವಾಗಿ ಅಭಿವೃದ್ಧಿಪಡಿಸಿ ಭಕ್ತರಿಗೆ ಅನುಕೂಲ ಮಾಡಿಕೊಡಬೇಕೆಂದು ಶ್ರೀಕ್ಷೇತ್ರ ಬೂದನಗುಡ್ಡ ಬಸವಣ್ಣ ದೇವಸ್ಥಾನ ಸಮಿತಿ ಅಧ್ಯಕ್ಷರಾದ ಈರಪ್ಪ ಎಮ್ಮಿ ಹಾಗೂ ಸದಸ್ಯರು ಅರಣ್ಯ ಇಲಾಖೆ ಸಚಿವರಾದ ಸನ್ಮಾನ್ಯ ಶ್ರೀ ಈಶ್ವರ ಖಂಡ್ರೆಯವರನ್ನು ಭೇಟಿಯಾಗಿ ಮನವಿ‌ ಪತ್ರವನ್ನು ಸಲ್ಲಿಸಿದರು.‌

ಸಚಿವರು ದಾಂಡೇಲಿಯಿಂದ ಹುಬ್ಬಳ್ಳಿಗೆ ಬಂದು, ಹುಬ್ಬಳ್ಳಿಯಿಂದ ವಿಮಾನದಲ್ಲಿ ಬೆಂಗಳೂರಿಗೆ ತೆರಳುವ ಸಂದರ್ಭ, ವಿಮಾನನಿಲ್ದಾಣದಲ್ಲಿ ಸಚಿವರಿಗೆ ಮನವಿ ನೀಡಲಾಯಿತು.

ಚೆನ್ನಬಸವಣ್ಣನವರು ನಡೆದಾಡಿ ಹೋದ ಈ ಸ್ಥಳ ಐತಿಹಾಸಿಕ ಪವಿತ್ರ ಕ್ಷೇತ್ರವಾಗಿದೆ. ಶರಣರು ಭೇಟಿ ನೀಡಿದ ಸ್ಮರಣಾರ್ಥವಾಗಿ ಮೊದಲು ಇಲ್ಲಿ ನಂದಿ ವಿಗ್ರಹವನ್ನು ಸ್ಥಾಪಿಸಿದ್ದಾರೆ. ಇದೀಗ ಚೆನ್ನಬಸವಣ್ಣನವರ ಕಲ್ಲಿನ ಪುತ್ಥಳಿಯನ್ನೂ ಪ್ರತಿಷ್ಠಾಪನೆ ಮಾಡಲಾಗಿದೆ.

ಪ್ರತಿವರ್ಷ ಶ್ರಾವಣಮಾಸದ ಮೊದಲನೆಯ ಸೋಮವಾರ ಇಲ್ಲಿ ಜಾತ್ರೆ ನಡೆಯುತ್ತದೆ. ಸುತ್ತಲಿನ ಗ್ರಾಮ, ನಗರಗಳಿಂದ ಅಪಾರ ಪ್ರಮಾಣದಲ್ಲಿ ಭಕ್ತರು ಇಲ್ಲಿ ಬಂದು ಸೇರುತ್ತಾರೆ, ಆದರೆ ಇಲ್ಲಿ ಭಕ್ತಾದಿಗಳಿಗೆ ಉಳಿದುಕೊಳ್ಳಲು ಯಾವುದೇ ಅನುಕೂಲತೆಗಳಿಲ್ಲದೆ, ಕ್ಷೇತ್ರ ಸಂಪೂರ್ಣ ನಿರ್ಲಕ್ಷ್ಯಕ್ಕೆ ಒಳಗಾಗಿದೆ.

ಮನವಿ ಆಲಿಸಿದ ಸಚಿವರು ಆಸಕ್ತಿಯಿಂದ ಸ್ಥಳದ ಎಲ್ಲ ಮಾಹಿತಿ ಪಡೆದರು. ಸ್ಥಳಕ್ಕೆ ಶೀಘ್ರದಲ್ಲೆ ಭೇಟಿ ನೀಡಿ ಶರಣರ ದರ್ಶನ ಮಾಡುವುದಾಗಿಯೂ ತಿಳಿಸಿದರು ಹಾಗೂ ಕ್ಷೇತ್ರದ ಅಭಿವೃದ್ಧಿಯನ್ನು ಮಾಡಿಸಿಕೊಡುವುದಾಗಿ ಭರವಸೆಯನ್ನು ನೀಡಿದರು.

ಈ ಸಂದರ್ಭದಲ್ಲಿ ಮಾಜಿ ಆಹಾರ ನಿಗಮದ ರಾಜ್ಯ ಉಪಾಧ್ಯಕ್ಷ ಮೋಹನ ಅಸುಂಡಿ, ಬಸವರಾಜ ಹುಲ್ಲೋಳಿ, ಭೀಮಪ್ಪ ವಾಲಿಕಾರ, ರವಿ ಬಡ್ನಿ, ಸಿದ್ದು ರಾಯನಾಳ, ಮಂಜುನಾಥ ದಾಸ್ತಿಕೋಪ್ಪ , ಪ್ರಭು ಶೆಟ್ಟರ್, ರಾಯನಗೌಡ್ರ, ಮಾಹಾಂತೇಶ ಗಿರಿಮಠ, ಚಂದ್ರು ಕೋರಿ ಮತ್ತೀತರರು ಉಪಸ್ಥಿತರಿದ್ದರು.

Share This Article
Leave a comment

Leave a Reply

Your email address will not be published. Required fields are marked *