ಸಾಮೂಹಿಕ ಇಷ್ಟಲಿಂಗ ಪೂಜೆಯೊಂದಿಗೆ ಶುರುವಾದ ಸಹಕಾರಿ ಬ್ಯಾಂಕ್ ಶಾಖೆ

ರವೀಂದ್ರ ಹೊನವಾಡ
ರವೀಂದ್ರ ಹೊನವಾಡ

ಬೆಳಗಾವಿ

ನಗರದ ಸಹಕಾರಿ ಬ್ಯಾಂಕಿನ ಶಾಖೆಯೊಂದು ಇತ್ತೀಚೆಗೆ ನಿಜಾಚರಣೆಯ ಅನುಸಾರವಾಗಿ ಉದ್ಘಾಟನೆಯಾಯಿತು.

ಶ್ರೀ ಬಸವೇಶ್ವರ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘ ನಿಯಮಿತ ಬೈಲಹೊಂಗಲ, ಚಾವಟಗಲ್ಲಿ, ಬೆಳಗಾವಿ ಶಾಖೆಯನ್ನು ಧರ್ಮಗುರು ಬಸವಣ್ಣನವರ ಭಾವಚಿತ್ರಕ್ಕೆ 108 ನಾಮಾವಳಿಯೊಂದಿಗೆ ಪುಷ್ಪವೃಷ್ಠಿ ಹಾಗೂ ಸಾಮೂಹಿಕ ಇಷ್ಟಲಿಂಗ ಪೂಜಾ ಕಾರ್ಯಕ್ರಮದ ಮುಖಾಂತರ ಆರಂಭಿಸಲಾಯಿತು.

ಕಾರ್ಯಕ್ರಮದ ವಚನಮೂರ್ತಿಗಳಾಗಿ ಬೆಳಗಾವಿ ರಾಷ್ಟ್ರೀಯ ಬಸವದಳದ ಪದಾಧಿಕಾರಿಗಳು, ಸದಸ್ಯರು ವಹಿಸಿಕೊಂಡು ಕಾರ್ಯನಿರ್ವಹಿಸಿದರು. ಬ್ಯಾಂಕ್ ಇನ್ನಷ್ಟು ಅಭಿವೃದ್ಧಿ ಹೊಂದಲಿ, ಶಾಖೆಗಳು ಇನ್ನಷ್ಟು ಹೆಚ್ಚಿ ಜನರಿಗೆ ಹೆಚ್ಚೆಚ್ಚು ಸೇವೆ ಒದಗಿಸಲೆಂದು, ಅಧ್ಯಕ್ಷ ಕಿವಡಸಣ್ಣವರ ಅವರಿಗೆ ಕೂಡಿಸಿ ರಾಷ್ಟ್ರೀಯ ಬಸವದಳದ ವತಿಯಿಂದ ಪುಷ್ಪವೃಷ್ಟಿ ಮಾಡಿ ಶುಭ ಹಾರೈಸಲಾಯಿತು.

ಬಸವೇಶ್ವರ ಕೋ-ಆಪರೇಟಿವ್ ಬ್ಯಾಂಕ್ ಶುರುವಾಗಿದ್ದು 1994ರಲ್ಲಿ. ಅದನ್ನು ಸ್ಥಾಪಿಸಿ, ಅಧ್ಯಕ್ಷರಾಗಿ 30 ವರ್ಷಗಳಿಂದ ಸಫಲವಾಗಿ ನಡೆಸಿಕೊಂಡು ಬರುತ್ತಿರುವ ಬಸಪ್ಪ ಎಸ್. ಕಿವಡಸಣ್ಣವರ ಪರಿಶ್ರಮಪಟ್ಟು ಮೌಢ್ಯ, ಕಂದಾಚಾರಗಳನ್ನು ನಂಬದೆ ಬಸವಣ್ಣನವರ ಕಾಯಕತತ್ವದ ದಾರಿಯಲ್ಲಿ ಸಾಗುತ್ತಿದ್ದಾರೆ.

ನಿಜಾಚರಣೆಯ ಮೂಲಕ ಉದ್ಘಾಟನೆ ಮಾಡಿದ್ದರಿಂದ ರಾಹು ಕಾಲ, ಯಮಗಂಡ ಕಾಲ, ಗುಳಿಕ ಕಾಲ ಯಾವುದನ್ನೂ ನೋಡುವ ಅಗತ್ಯವಿರುವುದಿಲ್ಲ. ಕಳೆದ 14-15 ವರ್ಷಗಳಿಂದ ಬಸವಣ್ಣವರ ಪೂಜಾ ಕಾರ್ಯ ನಡೆಸುತ್ತಿದ್ದೇವೆ. ನಮ್ಮ ತಂದೆ ಕೃಷಿಕರಾಗಿದ್ದರಿಂದ ಅವರ ಕಾಯಕತತ್ವ ನಮಗೂ ಸ್ವಲ್ಪಮಟ್ಟಿಗೆ ಅಳವಟ್ಟಿದೆ ಎನ್ನುತ್ತಾರೆ.

ನ್ಯಾಯವಾದಿ ಆಗಿರುವ ಇವರು ಬಾರ್ ಕೌನ್ಸಿಲ್ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ.

ಬೈಲಹೊಂಗಲ ಪಟ್ಟಣದಲ್ಲಿ ಕೇಂದ್ರ ಕಛೇರಿ ಹೊಂದಿರುವ ಬ್ಯಾಂಕ್, ಈಗಾಗಲೇ 08 ಶಾಖೆ ಹೊಂದಿದೆ. ಬೈಲಹೊಂಗಲ, ನೇಸರ್ಗಿ, ಸಂಪಗಾಂವ, ನೇಗಿನಾಳ, ಕಿತ್ತೂರು, ಎಂ.ಕೆ.ಹುಬ್ಬಳ್ಳಿ, ಹೊಸಕಾದರವಳ್ಳಿ ಹಾಗೂ ಬೆಳಗಾವಿಗಳಲ್ಲಿ ಶಾಖೆಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ.

ಶಾಖೆಗಳಲ್ಲಿ ಒಟ್ಟು 50 ಜನ ಉದ್ಯೋಗಿಗಳು ದುಡಿಯುತ್ತಿದ್ದಾರೆ. ಸಂಸ್ಥೆ ವಾರ್ಷಿಕವಾಗಿ 40ರಿಂದ 50 ಲಕ್ಷ ನಿವ್ವಳ ಲಾಭವನ್ನು ಪಡೆಯುತ್ತ ಸಾಗಿದೆ. ಶಾಖೆಗಳೆಲ್ಲ ಬಾಡಿಗೆ ಕಟ್ಟಡಗಳಲ್ಲಿ ನಡೆಯುತ್ತಿವೆ, ಕೆಲವು ಕಡೆ ಸ್ವಂತ ಜಾಗ ಹೊಂದಲಾಗಿದೆ, ಸ್ವಂತ ಕಟ್ಟಡ ಹೊಂದಬೇಕಾಗಿದೆ ಎಂದು 28 ವರ್ಷದಿಂದ ಸೇವೆ ಸಲ್ಲಿಸುತ್ತಿರುವ ಬ್ಯಾಂಕಿನ ಹಿರಿಯ ವ್ಯವಸ್ಥಾಪಕರಾಗಿರುವ ವೀರಣ್ಣ ಶಿವಶಿಂಪಿ ಅವರು ಹೇಳುತ್ತಾರೆ.

ರಾಷ್ಟ್ರೀಯ ಬಸವದಳದ ಅಧ್ಯಕ್ಷ ಅಶೋಕ ಬೆಂಡಿಗೇರಿ, ಕಾರ್ಯದರ್ಶಿ ಆನಂದ ಗುಡಸ, ಕೆ. ಶರಣಪ್ರಸಾದ, ಮುತ್ತಪ್ಪ ಗೋಡಿಹಾಳ, ಮಲ್ಲಿಕಾರ್ಜುನ ದೊಡ್ಡಮನಿ, ಶರಣು ಲಿಂಗಾಯತ, ಅಕ್ಕನಾಗಲಾಂಬಿಕ ಮಹಿಳಾ ಗಣದ ಅಧ್ಯಕ್ಷೆ ನೀಲಗಂಗಾ ಪಾಟೀಲ, ಶಿವಲೀಲಾ ಗೋಡಿಹಾಳ, ಶೀಲಾ ಗುಡಸ, ಕಲಾವತಿ ದೊಡ್ಡಮನಿ ಮತ್ತೀತರರು ಇದ್ದರು.

ಬ್ಯಾಂಕ್ ನಿರ್ದೇಶಕಿ ವಿದ್ಯಾ ಕಿವಡಸಣ್ಣವರ, ಬ್ಯಾಂಕ್ ಅಧಿಕಾರಿಗಳಾದ ರುದ್ರಪ್ಪ ತೋಟಗಿ, ನೀಲಕಂಠ ಮುದುಕನಗೌಡ್ರ, ಉಮೇಶ ಕದಡಿ, ಸಿದ್ದಪ್ಪ ನಾಗನೂರ, ಉಮೇಶ ಚಬ್ಬಿ, ಶಿವಬಸಪ್ಪ ನಿಂಬೆಣ್ಣವರ, ಸಂತೋಷ ಮುರಗೋಡ ಹಾಗೂ ಸಿಬ್ಬಂದಿ ವರ್ಗದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಬಸಪ್ಪ ಎಸ್. ಕಿವಡಸಣ್ಣವರ (ಎಡ) ವೀರಣ್ಣ ಶಿವಶಿಂಪಿ
Share This Article
Leave a comment

Leave a Reply

Your email address will not be published. Required fields are marked *