ಇದು ಬಾಳೆಹೊನ್ನೂರು ಶ್ರೀಮದ್ರಂಭಾಪುರಿ ಪಂಚಪೀಠದ ಶಾಖಾಮಠ
ಎರಡು ದಿನಗಳ RSS ಶಿಬಿರ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಕುಪ್ಪೂರು ಗದ್ದಿಗೆ ಮಠದಲ್ಲಿ ನಡೆಯುತ್ತಿರುವುದು (ಅಕ್ಟೋಬರ್ 18-20) ಹಲವಾರು ಲಿಂಗಾಯತ ಸಂಘಟನೆಗಳ ಗಮನ ಸೆಳೆದು ಚರ್ಚೆ ಹುಟ್ಟುಹಾಕಿತ್ತು.
ಲಿಂಗಾಯತ ಮಠದಲ್ಲಿ ಬಸವ ತತ್ವಕ್ಕೆ ವಿರೋಧವಾಗಿರುವ ಸಂಘಟನೆಯ ಶಿಬಿರಕ್ಕೆ ಅವಕಾಶ ಮಾಡಿಕೊಟ್ಟಿರುವುದರ ಬಗ್ಗೆ ವ್ಯಾಪಕವಾದ ಅಸಮಾಧಾನ ವ್ಯಕ್ತವಾಗಿತ್ತು.
ಆದರೆ RSS ಶಿಬಿರ ನಡೆಯುತ್ತಿರುವ ಕುಪ್ಪೂರು ಗದ್ದಿಗೆ ಮಠ ಲಿಂಗಾಯತ ಮಠವಲ್ಲ. ಇದು ಬಾಳೆಹೊನ್ನೂರು ಶ್ರೀಮದ್ರಂಭಾಪುರಿ ಪಂಚಪೀಠದ ಶಾಖಾಮಠ, ಅಂದರೆ ಅಪ್ಪಟ ವೀರಶೈವ ಮಠ.
ಕುಪ್ಪೂರಿನಲ್ಲಿರುವ ಗದ್ದುಗೆ 15-16 ನೇ ಶತಮಾನದಲ್ಲಿದ್ದ ಮರುಳಸಿದ್ದ ಶ್ರೀಗಳದ್ದು.
ಇವತ್ತು ಶ್ರೀಶೈಲದ ಭ್ರಮರಾಂಬಿಕೆ ಮಲ್ಲಿಕಾರ್ಜುನರನ್ನು ಒಲಿಸಿಕೊಂಡು ಸಾಕ್ಷಾತ್ ಅನ್ನಪೂಣೇಶ್ವರಿಯು ತಮ್ಮಲ್ಲಿರುವಂತೆ ವರವನ್ನು ಪಡೆದು ಅನ್ನದಾನಿ ಶ್ರೀ ಗುರುಮರುಳಸಿದ್ದೇಶ್ವರರಾದರು ಎಂಬ ಪುರಾಣವಿದೆ. ಅಂದಿನಿಂದ ಮಠದಲ್ಲಿ ತ್ರಿಕಾಲ ಪೂಜೆ, ದಾಸೋಹ ತಪ್ಪದೆ ನಡೆಯುತ್ತಿದೆ.
ಕುಪ್ಪೂರಿನಲ್ಲಿನ ಸಮಾಧಿ ಗದ್ದುಗೆ ಮೇಲೆ ಗರ್ಭಗುಡಿಯಲ್ಲಿ ಪ್ರತಿಷ್ಠಾಪಿಸಲಾಗಿದೆ. ಅಲ್ಲಿ ಮರುಳಸಿದ್ದರ ಬೆಳ್ಳಿಯ ಮುಖಪದ್ಮರೂಪದ ಮೂರ್ತಿಯನ್ನು ಗರ್ಭಗುಡಿಯಲ್ಲಿ ಪ್ರತಿಷ್ಠಾಪಿಸಲಾಗಿದೆ.
ಹಿಂದಿನ ಪೀಠಾಧಿಪತಿ ಡಾ. ಯತೀಶ್ವರ ಶಿವಾಚಾರ್ಯ ಸ್ವಾಮೀಜಿ ವೀರಶೈವ ಸಂಪ್ರದಾಯದಂತೆ ಮಠವನ್ನು ನಿರ್ವಹಿಸಿಕೊಂಡಿದ್ದರು. ಪ್ರತಿ ಅಮಾವಾಸ್ಯೆ ಶ್ರೀಗಳ ಸಾನ್ನಿಧ್ಯದಲ್ಲಿ ಸತ್ಚಿಂತನೆ ಧಾರ್ಮಿಕ ಪುರಾಣ ನಡೆಯುತ್ತಿತ್ತು. ಪ್ರತಿವರ್ಷ ಮಾರ್ಗಶಿರ ಶುದ್ಧಪೌರ್ಣಮಿ ದಿವಸ ಮರುಳಸಿದ್ದೇಶ್ವರನಿಗೆ ಅಡ್ಡಪಲ್ಲಕ್ಕಿ ಉತ್ಸವ, ದೊಡ್ಡಜಾತ್ರೆಯನ್ನು ಭಕ್ತರು ವಿಜೃಂಭಣೆಯಿಂದ ನಡೆಸುತ್ತಿದ್ದರು.
ಅವರು ಜ್ಯೋತಿಷ್ಯ ಹೇಳುವುದರಲ್ಲಿ ಪ್ರಸಿದ್ದರಾಗಿ ಸಂಘ ಪರಿವಾರಕ್ಕೆ ಹತ್ತಿರವಾಗಿದ್ದರು.
ಯತೀಶ್ವರ ಶಿವಾಚಾರ್ಯ ಶ್ರೀಗಳು 2021ರಲ್ಲಿ ಕೇವಲ 48ನೇ ವಯಸ್ಸಿನಲ್ಲಿ ಹೃದಯಾಘಾತವಾಗಿ ಲಿಂಗೈಕ್ಯರಾದರು. ಮಠದ ಉತ್ತರಾಧಿಕಾರಿಯಾಗಿ ಸಹೋದರನ ಮಗ ತೇಜಸ್ ಹೆಸರು ಘೋಷಣೆಯಾಗಿದೆ. ಅವರು ಹೆಚ್ಚಿನ ಅಧ್ಯಯನಕ್ಕೆ ಸುತ್ತೂರುಗೆ ಕಳಿಸಲು ಕುಟುಂಬ ಹಾಗೂ ಇತರ ಸ್ವಾಮೀಜಿಗಳು ನಿರ್ಧಾರ ಮಾಡಿದ್ದಾರೆ.