ಲಿಂಗಾಯತರಲ್ಲಿ ಬೆಳೆಯುತ್ತಿರುವ ಜಾಗೃತಿಯಿಂದ ಮನುವಾದಿಗಳು ಕಂಗಾಲು

ವಿಶ್ವ ಪೂಜಾರ
ವಿಶ್ವ ಪೂಜಾರ

ವೈದಿಕತೆಯ ಜೀವವಿರೋಧಿ ಸಿದ್ಧಾಂತದ ವಿರುದ್ಧದ ಸಂಘರ್ಷ ಇವತ್ತು ನಿನ್ನೆಯದಲ್ಲ, ಅದಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಅಲ್ಲಿಂದ ನಿರಂತರವಾಗಿ ಇವತ್ತಿಗೂ ಘರ್ಷಣೆ ನಡದೇ ಇದೆ. ಕರ್ನಾಟಕದ ಮಟ್ಟಿಗೆ ಹೇಳುವುದಾದರೆ 12ನೇ ಶತಮಾನದಲ್ಲಿ ಈ ಸಂಘರ್ಷ ತೀವ್ರವಾಗಿತ್ತು.

ಹೆಣ್ಣು ಅಡುಗೆ ಮನೆಗೆ ಸೀಮಿತ, ಗಂಡನ ಸೇವೆಯೇ ಅವಳ ಪರಮಧರ್ಮ, ತಾಯಿಯಾದರೆ ಮಾತ್ರ ಅವಳ ಬದುಕು ಪರಿಪೂರ್ಣ ಎನ್ನುವ ಸಂಪ್ರದಾಯ ಮುಖವಾಡದ ಸ್ತ್ರೀ ವಿರೋಧಿ ಧೋರಣೆಗಳ ಜೊತೆಜೊತೆಗೆ ಅವಳು ಮುಟ್ಟಾದರೆ ಮನೆಯೊಳಗೆ ಬರುವಂತಿಲ್ಲ, ಯಾರನ್ನೂ ಮುಟ್ಟುವಂತಿಲ್ಲ, ದೇವಸ್ಥಾನಕ್ಕೆ ಹೋಗುವಂತಿಲ್ಲ ಎಂಬ ನಿಯಮಗಳು ಬೇರೆ.

ಇನ್ನೊಂದು ಕಡೆ ಅದೇ ಹೆಣ್ಣಿಗೆ ದೇವಿ, ಮಾತೆ ಎಂಬ ಬಿರುದು ಕೊಟ್ಟು ದೇವಸ್ಥಾನದಲ್ಲಿ ಪೂಜೆ. ಇಂಥಹ ಇಬ್ಬಗೆ ನೀತಿಯನ್ನು, ಲಿಂಗತಾರತಮ್ಯವನ್ನು, ಸ್ತ್ರೀಶೋಷಣೆಯನ್ನು ಶರಣರು ಖಂಡತುಂಡವಾಗಿ ವಿರೋಧಿಸಿದರು. ಬಸವಣ್ಣ, ಡೋಹರ ಕಕ್ಕಯ್ಯ, ಮಾದಾರ ಚನ್ನಯ್ಯ, ನುಲಿಯ ಚಂದಯ್ಯ, ಅಲ್ಲಮಪ್ರಭು ಮುಂತಾದ ಅನೇಕ ಶರಣರ ಸರಿಸಮವಾಗಿಯೇ ಅಮುಗೆ ರಾಯಮ್ಮ, ಆಯ್ದಕ್ಕಿ ಲಕ್ಕಮ್ಮ, ಅಕ್ಕಮಹಾದೇವಿ, ಕಾಳವ್ವೆ, ಮಸಣಮ್ಮ, ಇತ್ಯಾದಿ ಮಹಿಳಾ ಶರಣೆಯರೂ ಕೂಡ ಇದ್ದರು.

ಲಿಂಗತಾರತಮ್ಯದ ವಿರುದ್ಧದ ತಮ್ಮ ಹೋರಾಟದಲ್ಲಿ ಜೇಡರ ದಾಸಿಮಯ್ಯನವರ ಒಂದು ವಚನ ಹೀಗಿದೆ:

“ಮೊಲೆ ಮುಡಿ ಬಂದಡೆ ಹೆಣ್ಣೆಂಬರು.
ಗಡ್ಡ ಮೀಸೆ ಬಂದಡೆ ಗಂಡೆಂಬರು.
ನಡುವೆ ಸುಳಿವ ಆತ್ಮನು
ಹೆಣ್ಣೂ ಅಲ್ಲ ಗಂಡು ಅಲ್ಲ ಕಾಣಾ ರಾಮನಾಥ.”

ಈ ಹೋರಾಟ ಬರೀ ಲಿಂಗತಾರತಮ್ಯಕ್ಯಷ್ಟೇ ಸೀಮಿತವಾಗಿರಲಿಲ್ಲ. ಜಾತಿಯ ತಾರತಮ್ಯ, ಮೇಲು ಕೀಳು ಎಂಬ ರೋಗಗ್ರಸ್ಥ ಮನಸ್ಸುಗಳ ವಿರುದ್ಧವೂ ಹೋರಾಟ ನಿರಂತರವಾಗಿತ್ತು. ಶರಣರೆಂದರೆ ಕೇವಲ ಒಂದು ಜಾತಿ, ಸಮಾಜ ಅಥವಾ ಪಂಗಡಕ್ಕೆ ಸೇರಿದವರಾಗಿರಲಿಲ್ಲ. ಸಮಾನತೆಗಾಗಿ ಧ್ವನಿ ಎತ್ತಿದವರೆಲ್ಲ ಶರಣರಾದರು. ಅಲ್ಲಿ ಎಲ್ಲರೂ ಇದ್ದರು.

ಒಬ್ಬ ವ್ಯಕ್ತಿ ಎಲ್ಲಿ ಹುಟ್ಟುತ್ತಾನೆ, ಹೇಗೆ ಹುಟ್ಟುತ್ತಾನೆ, ಯಾವ ಜಾತಿಯಲ್ಲಿ ಹುಟ್ಟುತ್ತಾನೆ ಎಂಬುದರ ಮೇಲೆ ಆ ವ್ಯಕ್ತಿಯ ಸ್ಥಾನಮಾನಗಳು, ಗೌರವ ಸನ್ಮಾನಗಳನ್ನ ನಿರ್ಧಾರಿತವಾಗಬಾರದು, ಅವೆಲ್ಲವೂ ಆ ವ್ಯಕ್ತಿಯ ವ್ಯಕ್ತಿತ್ವದ ಮೇಲೆ ನಿರ್ಧಾರವಾಗಬೇಕು ಎಂದು ಬಲವಾಗಿ ನಂಬಿದವರು ಶರಣರು. ಈ ವಿಷಯದಲ್ಲಿ ಬಸವಣ್ಣನವರ ಒಂದು ವಚನ ಈಗಿನ ಸಮಾಜದಲ್ಲಿರುವ ನಮಗೂ ಸಹ ಅರಗಿಸಿಕೊಳ್ಳಲು ಕಷ್ಟವೇ…

“ಚೆನ್ನಯ್ಯನ ಮನೆಯ ದಾಸನ ಮಗನು,
ಕಕ್ಕಯ್ಯನ ಮನೆಯ ದಾಸಿಯ ಮಗಳು,
ಇವರಿಬ್ಬರು ಹೊಲದಲಿ ಬೆರಣಿಗೆ ಹೋಗಿ, ಸಂಗವ ಮಾಡಿದರು.
ಇವರಿಬ್ಬರಿಗೆ ಹುಟ್ಟಿದ ಮಗ ನಾನು,
ಕೂಡಲಸಂಗಮದೇವ ಸಾಕ್ಷಿಯಾಗಿ.”

ಇವತ್ತಿಗೂ ದೇವಸ್ಥಾನ ಪ್ರವೇಶಿಸಿದ್ದಕ್ಕೆ ಬಹಿಷ್ಕಾರ, ದಂಡ, ಶುದ್ದೀಕರಣ ಎಂಬೆಲ್ಲ ವರದಿಗಳಾಗುತ್ತವೆ. ಇನ್ನು 12ನೇ ಶತಮಾನದಲ್ಲಿ ನಮ್ಮಗಳ ಸ್ಥಿತಿ ಹೇಗಿರಬಹುದು? ಈ ದೇವಸ್ಥಾನಗಳನ್ನು ಕಟ್ಟಲು ನಮ್ಮನ್ನು ಬಳಸಿಕೊಂಡು ಕೊನೆಗೆ ಅದರೊಳಗಡೆ ನಮಗೇ ಪ್ರವೇಶವಿರದ ಈ ವ್ಯಾಪಾರಿ ದೇವರನ್ನ, ಧರ್ಮವನ್ನು ಶರಣರು ನೇರವಾಗಿ ವಿರೋಧಿಸಿದರು.

ದೇವಸ್ಥಾನದೊಳಗಡೆಗೆ ಬರಲು ನೀವೇನು ನಮ್ಮನ್ನು ನಿರ್ಬಂಧಿಸುವುದು, ನಾವುಗಳೇ ದೇವಸ್ಥಾನವನ್ನು, ನಿಮ್ಮ ದೇವರನ್ನು ತಿರಸ್ಕರಿಸುತ್ತೇವೆ. ದೇವರನ್ನು ಪ್ರಾರ್ಥಿಸಲು ಪೂಜಾರಿ ಎಂಬ ದಲ್ಲಾಳಿಯ ಅವಶ್ಯಕತೆ ನಮಗೆ ಇಲ್ಲ. ಆತನಿಗೆ ಹೂ ಹಣ್ಣು, ಸೀರೆ, ವಡವೆ ವಸ್ತ್ರಗಳ ಅವಶ್ಯಕತೆಯಿಲ್ಲ. ಆತನಿಗೆ ಬೇಕಿರುವುದು ನಿಷ್ಕಲ್ಮಶವಾದ ಮನಸ್ಸು. ಅದನ್ನ ಹೊರತು ಪಡಿಸಿ ಆತ ನಮ್ಮಿಂದ ಏನನ್ನೂ ನಿರೀಕ್ಷಿಸಲಾರ ಎಂಬುದನ್ನು ಶರಣರು ಸ್ವತಃ ಆಚರಿಸಿ, ಅನುಭವಿಸಿ ನಮಗೆ ತೋರಿದರು. ಹಡಪದ ಅಪ್ಪಣ್ಣನವರಂತೂ ಬಹಳ ನಿಷ್ಟುರವಾಗಿಯೇ ಹೇಳಿದ್ದಾರೆ…

“ಕಲ್ಲುದೇವರ ನಂಬಿದವರೆಲ್ಲ
ಕಲಿಯುಗದ ಕತ್ತಲೆಯೊಳಗಾಗಿ ಕತ್ತೆಗಳಾಗಿ ಹೋದರು.
ಅದೇನು ಕಾರಣವೆಂದರೆ:
ತಮ್ಮ ದೇವರು ಇಕ್ಕಿದ ಓಗರವನುಣ್ಣಲೊಲ್ಲದೆ, ಒಡನೆ ಮಾತಾಡದು.
ಗುಡಿಯ ಕಲ್ಲು ಮೇಲೆ ಬಿದ್ದರೆ ಒಡೆದು ಹಾಳಾಗಿ ಹೋಗುತ್ತದೆ.
ಇಂತಪ್ಪ ಕಲ್ಲ ಪೂಜಿಸಿ, ಸಲ್ಲದೆ ಹೋದರು. ಅದಂತಿರಲಿ,
ಮಣ್ಣ ದೇವರು ಎಂದು ಪೂಜಿಸಿ,
ಮಜ್ಜನಕ್ಕೆ ನೀಡಲಮ್ಮದೆ, ಲಜ್ಜೆಗೆಟ್ಟು ನಾಯಾಗಿ ಬೊಗುಳಿ ಹೋದರು.
ಆದಂತಿರಲಿ,
ಮರನ ದೇವರೆಂದು ಪೂಜಿಸಿ ಧೂಪ ದೀಪವ ಮುಂದಿಡಲಮ್ಮರು.
ಅದೊಂದು ವ್ಯಾಪಾರಕ್ಕೊಳಗಾಗಿ,
ತಾಪತ್ರಯಕ್ಕೆ ಸಿಲ್ಕಿ ಪಾಪಿಗಳಾಗಿ ಸತ್ತುಹೋದರು.
ಸಲ್ಲದು ಶಿವನಲ್ಲಿ.
ಎಮ್ಮ ಭಕ್ತರಿಗೆ ಈ ಪರಿಯಲ್ಲ ಕೇಳಿರಣ್ಣಾ.
ಇದೆಲ್ಲ ಪಾಪಿಗಳ ಹಾಗೆ, ಎನ್ನ ದೇವ ನಡೆವ, ನುಡಿವ,
ಇಕ್ಕಿದರುಂಬ, ಕೊಟ್ಟರೆ ತಕ್ಕೊಂಬ, ಪೂಜಿಸಿದರೆ ಪೂಜೆಗೊಂಬ,
ಅನೇಕ ಪೂಜೆಯಲ್ಲಿ.
ತನ್ನ ನಂಬಿದ ಭಕ್ತರಿಗೆ-ಬುದ್ಧಿಯ ಹೇಳುವ, ಶುದ್ಧಾತ್ಮನ ತೋರುವ.
ತಾ ಮುದಿನಲ್ಲಿ ಸಜ್ಜನ ಸದ್ಭಕ್ತರಲ್ಲಿ ಇದ್ದೂ ಇಲ್ಲದಂತಿಪ್ಪ.
ಪ್ರಸಿದ್ಧ ಜಂಗಮಲಿಂಗವ ಪೂಜಿಸಿ, ಸ್ವಯಲಿಂಗಿಗಳಾದರು ಎಮ್ಮ ಶರಣರು.
ಅವರು ಹೋದ ಹಾದಿಯ ನೋಡಿದರೆ, ಎನಗೊಂದು ಹಾದಿ ಸಿಕ್ಕಿತ್ತು.
ಆ ಹಾದಿಗೊಂಡು ಹೋಗಿ ಅವರ ಪಾದವಕಂಡು,
ಕೆಟ್ಟು ಬಟ್ಟಬಯಲಾದೆ ನಯ್ಯಾ,
ಬಸವಪ್ರಿಯ ಕೂಡಲಚೆನ್ನಬಸವಣ್ಣಾ.”

ಶರಣ ಚಳುವಳಿ ಕೇವಲ ವೈದಿಕತೆಯನ್ನು ವಿರೋಧಿಸುವುದಕ್ಕಷ್ಟೇ ಸಿಮಿತವಾಗಿರಲಿಲ್ಲ. ಸರಳ ಬದುಕಿಗೆ ಅವಶ್ಯವಾಗಿ ಬೇಕಾದ ಕಾಯಕ, ಕಾಯಕದಿಂದ ಬಂದದ್ದರಲ್ಲೇ ದಾಸೋಹಗೈದು ಆರ್ಥಿಕ ಸಮಾನತೆಯೆಡೆಗೂ, ಸ್ವಾವಲಂಬನೆ ಬದುಕಿಗೆ ಬುನಾದಿ ಹಾಕುವುದಾಗಿತ್ತು. ಅಂಥಹ ಶರಣರ ಕ್ರಾಂತಿಯ ಕುರಿತು ಜನಸಾಮಾನ್ಯರಿಗೆ ತಿಳಿಸುವುದು ಇಂದಿನ ತುರ್ತು.

ಅಂಥಹ ಶರಣರ ಕ್ರಾಂತಿಯನ್ನು, ವೈಚಾರಿಕ ಬೆಳಕನ್ನು ಜನರಿಗೆ ತಲುಪಿಸಲು ನಡೆಯುತ್ತಿರುವ ಪ್ರಾಮಾಣಿಕ ಪ್ರಯತ್ನಗಳಿಂದ ಕಂಗಾಲಾಗಿರುವ ಕರ್ಮಠರಿಗೆ ಇನ್ನಿಲ್ಲದ ಉರಿ ಶುರುವಾಗಿದೆ. ಶರಣರ ಕ್ರಾಂತಿಯ ಸತ್ಯ ಜನರಿಗೆ ಅರ್ಥವಾದರೆ ಕರ್ಮಠರ ಹಿಡಿತ ಸಡಿಲವಾಗುವುದಂತೂ ಸತ್ಯ.

Share This Article
Leave a comment

Leave a Reply

Your email address will not be published. Required fields are marked *