ಹಾರಕೂಡ ಶ್ರೀಗಳಿಂದ ಒಂದು ಲಕ್ಷ ರೂಪಾಯಿ ದೇಣಿಗೆ ಘೋಷಣೆ
ಬಸವ ಕಲ್ಯಾಣ
ಬೆಂಗಳೂರಿನ ಕುಂಬಳಗೋಡಿನಲ್ಲಿ ನಿರ್ಮಾಣವಾಗುತ್ತಿರುವ 112 ಅಡಿ ಬಸವ ಪುತ್ಥಳಿ ಕಾರ್ಯಕ್ಕೆ ಕೈಜೋಡಿಸಲು ಬಸವ ಭಕ್ತರನ್ನು ಕೂಡಲಸಂಗಮ ಬಸವಧರ್ಮ ಪೀಠಾಧ್ಯಕ್ಷೆ ಮಾತೆ ಗಂಗಾದೇವಿ ಮನವಿ ಮಾಡಿಕೊಂಡಿದ್ದಾರೆ.
23ನೇ ಕಲ್ಯಾಣ ಪರ್ವದ ಕಾರ್ಯಕ್ರಮದಲ್ಲಿ ಮಾತನಾಡುತ್ತ ವಚನ ಸಾಹಿತ್ಯ ವಿಶ್ವಕ್ಕೆ ಮುಟ್ಟಬೇಕು ಎಂಬ ದೃಷ್ಟಿಯಿಂದಾಗಿ ಬಸವಕಲ್ಯಾಣದಲ್ಲಿ ಪೂಜ್ಯ ಮಾತೆ ಮಹಾದೇವಿ ಅವರು 108 ಅಡಿ ಬಸವ ಪುತ್ಥಳಿ ನಿರ್ಮಿಸಿದರು. ಅಲ್ಲದೆ, ಬೆಂಗಳೂರಿನ ಕುಂಬಳಗೋಡಿನಲ್ಲಿ 112 ಅಡಿ ಬಸವ ಪುತ್ಥಳಿ ನಿರ್ಮಿಸಲು ಸಂಕಲ್ಪ ಮಾಡಿದ್ದರು.
ಹೀಗಾಗಿ ಆ ಕಾರ್ಯ ಮುಂದೆ ಸಾಗಬೇಕಾದರೆ ಬಸವ ಭಕ್ತರು ಸಹಕಾರ ನೀಡಬೇಕು ಎಂದು ಶುಕ್ರವಾರ ಮನವಿ ಮಾಡಿದರು.
ಮತ್ತೆ ರವಿವಾರ ಅದೇ ಕಾರ್ಯಕ್ರಮದಲ್ಲಿ ಮಾತನಾಡುತ್ತ ಕುಂಬಳಗೋಡಿನ ಬಸವ ಪುತ್ಥಳಿಯ ನಿರ್ಮಾಣ ಕಾರ್ಯಕ್ಕೆ ಬಸವ ಭಕ್ತರು ಮುಂದೆ ಬಂದು ತನು, ಮನ, ಧನದಿಂದ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಈ ಮನವಿಗೆ ಹಾರಕೂಡದ ಡಾ.ಚೆನ್ನವೀರ ಶಿವಾಚಾರ್ಯರು ತಕ್ಷಣ ಸ್ಪಂದಿಸಿದರು. ಕಲ್ಯಾಣ ಪರ್ವದ ಧರ್ಮ ಚಿಂತನಾ ಗೋಷ್ಠಿಯ ಸಾನಿಧ್ಯ ವಹಿಸಿ ಮಾತನಾಡುತ್ತಾ ಬೆಂಗಳೂರು-ಮೈಸುರ ಹೆದ್ದಾರಿಯಲ್ಲಿ 111 ಅಡಿ ಎತ್ತರದ ಬಸವ ಪುತ್ಥಳಿಯನ್ನು ಸ್ಥಾಪಿಸುತ್ತಿರುವುದು ಐತಿಹಾಸಿಕ ಕಾರ್ಯವಾಗಿದೆ ಇದಕ್ಕೆ ತಮ್ಮ ಮಠದಿಂದ ಒಂದು ಲಕ್ಷದ ರೂಪಾಯಿಗಳು ದೇಣಿಗೆ ನೀಡುವುದಾಗಿ ಘೋಷಿಸಿದರು.
ಪೂಜ್ಯ ಗಂಗಾ ಮಾತಾಜಿ ಅವರು 40 ವರ್ಷಗಳಿಂದ ಬಸವ ತತ್ವಕ್ಕೆ ದುಡಿಯುತ್ತಿದ್ದಾರೆ. ಅವರಿಗೆ ಕೈ ಜೋಡಿಸುವುದು ಎಲ್ಲರ ಕರ್ತವ್ಯ ಎಂದು ಹೇಳಿದರು.