ಉದಯಿಸಿತೊಂದು”ಕ್ರಾಂತಿಯ ಕಿಡಿ,
ವೇಣು ಗ್ರಾಮದ ಕಾಕತಿಯಡಿ.
ಧೂಳಪ್ಪಗೌಡ, ಪದ್ಮಾವತಿಯರ ಪುಣ್ಯ ಉದರದಿ.
ನುಡಿತು ಗುರುವಾಣಿ ಆಗುವರು ವೀರಮಾತೆ ಎಂದು.
ಬಾಲ್ಯದಿ ಕರಗತ ಕತ್ತಿವರಸೆ ಕುದುರೆ ಸವಾರಿ.
ಮಲಪ್ರಭೆಯ ಒಡಲೊಳಗನ ಮುತ್ತು ಕಿತ್ತೂರು.
ವರಸಿದರು ಕಿತ್ತೂರ ದೊರೆ ಮಲ್ಲಸರ್ಜರನು.
ಹಿಡಿದರು ಕಿತ್ತೂರ ಸಂಸ್ಥಾನದ ಚುಕ್ಕಾಣಿಯನು.
ತಾಯ ಮಕ್ಕಳಿವರೆ ರಾಯ, ಬಾಳ, ಚನ್ನ.
ಕಪ್ಪ ಬೇಕೆಂದವರಿಗೆ ಉತ್ತಿರೆ?, ಬಿತ್ತಿರೆ? ಎಂದರು.
ಕ್ರಾಂತಿಗೆ ನಾಂದಿ ಆಯ್ತು ದತ್ತಕ ನಿಷೇದ ಕಾಯ್ದೆ.
“ಶಾಂತಿಗೆ ಬದ್ಧರು,ಯುದ್ಧಕ್ಕೂ ಸಿದ್ಧರು” ಇದೇ ತಾಯ್ನುಡಿಯು.
ಇಡಿಗಳಾದರೆ ಬದುಕುವೆವು; ಬಿಡಿಗಳಾದರೆ ಉಳಿವಿಲ್ಲೆಂದರುಹಿದೆ.
ತಾಯಿಯೇ ಕುದುರೆಯೇರಿ ಕತ್ತಿ ಹಿಡಿದು ರಣರಂಗದಿ ಚಂಡಿಯಾದೆ.
ಹರ ಹರ ಮಹಾದೇವ ಎನುವ ರಣ ಘೋಷದಿ.
ಮಂಕಾಯ್ತು ಬ್ರಿಟಿಷ್ ಸೇನೆ ನಿಮ್ಮ ರಣತಂತ್ರದ ಮುಂದೆ.
ಅಂತರಂಗದ ‘ಕ್ರಾಂತಿ’ಯ ಜ್ವಾಲೆಗೆ ಭಸ್ಮವಾಯ್ತು “ಥ್ಯಾಕರೆ” ಎಂಬ ಕ್ರಿಮಿ.
ಅಸ್ತಂಗತನಾದ ಆಂಗ್ಲ ಸೂರ್ಯನಂದು.
ವಿಜಯೋತ್ಸವವಾಯ್ತು ನಾಡ ಜನತೆಗದೆ.
ನಮ್ಮವರೇ ನಮಗೆ ಉರುಲಾದರು, ಕುಂದಿತು ತಾಯಶಕ್ತಿ ಕುತಂತ್ರಕ್ಕೆ.
ಸೆರೆಮನೆ ವಾಸ ಕಳೆದಿರಿ ಗುರು, ಲಿಂಗ, ಜಂಗಮ ಪೂಜೆಯಲಿ.
ಲಿಂಗೈಕ್ಯರಾದಿರಿ ನಂದಿ ದ್ವಜ ಹಾರುವುದೆಂಬ ನಂಬುಗೆಯಲಿ.
ಸ್ವಾತಂತ್ರ್ಯ ಸಂಗ್ರಾಮಕ್ಕೆ ಸ್ಪೂರ್ತಿಯಾದಿರಿ.
ಆಂಗ್ಲರ ವಿರುದ್ಧ ಹೋರಾಡಿದ ಮೊದಲಿಗರಾದಿರಿ.
ಸ್ಪೂರ್ತಿಯ ಸೆಲೆ-ನೆಲೆ ಎಂದಿಗೂ ನೀವ ನಮಗೆ.
ಅಜರಾಮರ ನೀವ ಭೂಮಿ ಬಾನ ಇರುವವರೆಗೆ…!
ಸ್ವತಂತ್ರ ಸಂಗ್ರಾಮದ ಬೆಳ್ಳಿಚುಕ್ಕಿ ನನ್ನವ್ವ ಚೆನ್ನವ್ವ…!