ದಾವಣಗೆರೆ:
ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಮತ್ತು ಕದಳಿ ಮಹಿಳಾ ವೇದಿಕೆ ವತಿಯಿಂದ ನಗರದ ಕನ್ನಡ ಕುವೆಂಪು ಭವನದಲ್ಲಿ ಈಚೆಗೆ 17 ನೇ ವಾರ್ಷಿಕೋತ್ಸವ ನಡೆದು ಡಾ . ಎಂ.ಎಸ್. ಆಶಾದೇವಿ ಅವರಿಗೆ ‘ಕದಳಿಶ್ರೀ’ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಸಮಾರಂಭ ಅತ್ತಿವೇರಿ ಬಸವಧಾಮದ ಪೂಜ್ಯ ಬಸವೇಶ್ವರಿ ಮಾತಾಜಿಯವರ ಸಾನಿಧ್ಯ ಹಾಗೂ ಜಿಲ್ಲಾ ಕದಳಿ ವೇದಿಕೆಯ ಅಧ್ಯಕ್ಷೆ ಮಮತಾ ನಾಗರಾಜ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಪ್ರಾಧ್ಯಾಪಕರು, ಮಹಾಮನೆ ಮಾಸಪತ್ರಿಕೆಯ ಸಂಪಾದಕರು ಆಗಿರುವ ಡಾ. ಆಶಾದೇವಿ ಅವರು ಪ್ರಶಸ್ತಿ ಸ್ವೀಕರಿಸಿ ಮಾತನಾಡುತ್ತಾ, “ವಿವೇಕ, ಅಂತ:ಕರಣ ಇಲ್ಲದಿದ್ದರೆ ಜಗತ್ತು ಎಷ್ಟು ಭೀಕರವಾಗಿರುತ್ತದೆ ಎಂಬುದಕ್ಕೆ ಇಂದಿನ ದಿನಗಳಲ್ಲಿ ಉದ್ಭವಿಸಿರುವ ಪರಿಸ್ಥಿತಿಯೇ ಒಳ್ಳೆಯ ಉದಾಹರಣೆ.
ಸಮಕಾಲಿನ ಜಗತ್ತಿನಲ್ಲಿ ಕಂಡು ಬರುತ್ತಿರುವ ಜಟಿಲ ಸಮಸ್ಯೆಗಳಿಗೆ ದಿವ್ಯ ಔಷಧವೆಂದರೆ ಶರಣ ಸಾಹಿತ್ಯ. ಶರಣೆ ಅಕ್ಕಮಹಾದೇವಿ ಲೇಖಕಿ ಮಾತ್ರವಲ್ಲ ಒಂದು ದಿವ್ಯ ಬೆಳಕು. ಸಾಹಿತ್ಯ ಮತ್ತು ವ್ಯಕ್ತಿತ್ವದಲ್ಲಿ ಶರಣೆ ಅಕ್ಕಮಹಾದೇವಿ ಸಮನಕ್ಕೆ ಯಾರೂ ತಲುಪಿಲ್ಲ. ಅವರ ಸ್ಥಾನವನ್ನು ತುಂಬಬಲ್ಲಂತಹ ವ್ಯಕ್ತಿಯೇ ಇಲ್ಲವೆಂದು ಹೇಳಬಹುದು. ಅವರ ಜೀವನ ಪ್ರತಿಯೊಬ್ಬರಿಗೂ ದಾರಿದೀಪ” ಎಂದು ಹೇಳಿದರು.
“ಹೆಣ್ಣು ಮತ್ತು ಕುಟುಂಬ ಬೇರೆ ಬೇರೆಯಲ್ಲ, ಕುಟುಂಬಕ್ಕಾಗಿ ಅವಳು ತನ್ನ ಜೀವನವನ್ನೇ ಮುಡಿಪಾಗಿಟ್ಟಿದ್ದಾಳೆ. ಗಂಡಿಗಿಂತ ಹೆಚ್ಚಿನ ಮಟ್ಟದಲ್ಲಿ ಕೆಲಸ ಮಾಡುವ ಹೆಣ್ಣಿಗೆ ಸಮಾಜದಲ್ಲಿ ಪ್ರತಿಯೊಂದು ಕ್ಷೇತ್ರದಲ್ಲೂ ಮನ್ನಣೆ ದೊರಕಬೇಕು” ಎಂದು ಆಶಯ ವ್ಯಕ್ತಪಡಿಸಿದರು.

“ಮಹಿಳೆ ಏನೆಲ್ಲಾ ಸಾಧಿಸಿದ್ದರೂ ಸಹ ಅವಳ ಮೇಲೆ ದೌರ್ಜನ್ಯ, ಶೋಷಣೆ, ಅತ್ಯಾಚಾರಗಳು ಕಡಿಮೆಯಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಪ್ರಶಸ್ತಿ ಪ್ರದಾನ ಮಾಡಿದ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ಸಿ. ಸೋಮಶೇಖರ ಅವರು ಮಾತನಾಡಿ, ಇಂದಿನ ಜಾಗತಿಕ ಸಂಘರ್ಷದ ಕಾಲದಲ್ಲಿ ಬಸವಣ್ಣನವರ ‘ದಯೆಯೇ ಧರ್ಮದ ಮೂಲವಯ್ಯ’ ಎಂಬ ಸಂದೇಶ ಶಾಂತಿ, ನೆಮ್ಮದಿಯ ಪರಮೌಷಧವಾಗಿದೆ. ಪ್ರಸ್ತುತ ಜಗತ್ತಿನಲ್ಲಿ ಅಶಾಂತಿ, ದ್ವೇಷಾಸೂಯೆ, ಕ್ರೂರತನಗಳು ಹೆಚ್ಚಾಗುತ್ತಿವೆ, ಮಾನವ ಸಂಬಂಧಗಳ ಕೊಂಡಿ ಕಳಚಿಕೊಳ್ಳುತ್ತಿವೆ.
ಈಗಿನ ಪರಿಸ್ಥಿತಿಯಲ್ಲಿ ಶರಣರು ರೂಪಿಸಿದ ಜೀವನ ಸಂವಿಧಾನದ ಸೂತ್ರಗಳನ್ನು ಅಳವಡಿಸಿಕೊಂಡರೆ ಸುಂದರ ರಾಷ್ಟ್ರ ಮಾತ್ರವಲ್ಲ ಸುಂದರ ಜಗತ್ತನ್ನೇ ಸೃಷ್ಟಿಸಬಹುದು ಎಂದರು. ಅಕ್ಕಮಹಾದೇವಿ ಅವರ ಆತ್ಮವಿಶ್ವಾಸದ ನಡೆ ಇಂದಿನ ಮಹಿಳೆಯರ ಸಬಲೀಕರಣಕ್ಕೆ ದಾರಿದೀಪವಾಗಿದೆ” ಎಂದು ಹೇಳಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಹಾಗೂ ಕದಳಿಶ್ರೀ ಪ್ರಶಸ್ತಿಯ ಆಯ್ಕೆ ಸಮಿತಿ ಸದಸ್ಯರಲ್ಲೊಬ್ಬರಾದ ಬಿ. ವಾಮದೇವಪ್ಪನವರು ಅಶಾದೇವಿಯವರ ಬಗ್ಗೆ ಮತ್ತು ಬಿ.ಕೆ. ಸಿದ್ದಪ್ಪ ಮತ್ತು ಸಾವಿತ್ರಮ್ಮ ಅವರು ಯಶ ಹಾಗೂ ದಿನೇಶ್ ಅವರ ಬಗ್ಗೆ ಅಭಿನಂದನಾ ನುಡಿಗಳನ್ನು ಆಡಿದರು.
ಮಮತಾ ಅವರು ಅಧ್ಯಕ್ಷತೆ ಅವಧಿ ಪೂರ್ಣಗೊಳಿಸಿದ ಹಿನ್ನೆಲೆ ಹಾಗೂ ಸಮಾರಂಭದ ಅಧ್ಯಕ್ಷೀಯ ನುಡಿಯಲ್ಲಿ “ನಿಮ್ಮ ಮಂಡೆಗೆ ಹೂವ ತರುವವನಲ್ಲದೆ ಹುಲ್ಲ ತಾರೆನು ಎಂಬಂತೆ ಕೆಲಸ ಮಾಡಿದ್ದೇನೆ. ನನ್ನ ಕೈಲಾದಷ್ಟು ವೇದಿಕೆಯ ಯಶಸ್ಸಿಗೆ ಶ್ರಮಿಸಿದ್ದೇನೆ, ಈ ಯಶಸ್ಸಿಗೆ ವೇದಿಕೆಯ ಪದಾಧಿಕಾರಿಗಳು, ನಿರ್ದೇಶಕರು, ಸಲಹಾ ಸಮಿತಿಯವರು, ಶರಣ ಸಾಹಿತ್ಯ ಪರಿಷತ್ತಿನವರು, ಸದಸ್ಯರು ಕಾರಣ” ಎಂದರು. ಹಾಗೂ ತನುಮನದಿಂದ ಸಹಾಯ ಮಾಡಿದವರನ್ನು ನೆನೆಸುತ್ತಾ “ಪ್ರತಿಯೊಬ್ಬರೂ ಅದ್ಭುತ ನಿಧಿಯಾದ ವಚನಗಳನ್ನು ಕಲಿಯಬೇಕು, ವಚನ ಸಂಪುಟವನ್ನು ಮನೆಯಲ್ಲಿ ಪಠಣ ಮಾಡಬೇಕು ಎಂದು ಹೇಳಿದರು.

ಪೂಜ್ಯ ಬಸವೇಶ್ವರಿ ಮಾತಾಜಿಯವರು ತಮ್ಮ ಆಶೀರ್ವಚನದಲ್ಲಿ “ವಚನ ಸಾಹಿತ್ಯದ ಪ್ರಾಮುಖ್ಯತೆಯನ್ನು ಹಾಗೂ ಶರಣ ತತ್ವದ ಮಹತ್ವವನ್ನು ತಿಳಿಸಿದರು. ಹಾಗೂ ವಚನಗಳನ್ನು ಕಲಿಯಬೇಕು ಮತ್ತು ಅದರಂತೆ ನಡೆಯಬೇಕು ಎಂದು ತಿಳಿಸಿದರು.
ಕದಳಿ ವೇದಿಕೆಯ ರಾಜ್ಯ ಉಪಸಂಚಾಲಕರಾದ ಪ್ರಮೀಳಾ ನಟರಾಜ, ಶರಣ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷರಾದ ಕೆ.ಬಿ. ಪರಮೇಶ್ವರಪ್ಪ ಅವರು ಆಶಯ ನುಡಿಗಳನ್ನಾಡಿದರು.
ಪ್ರಬಂಧ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ದತ್ತಿ ಶರಣೆ ಸಾವಿತ್ರಮ್ಮ ಸಿದ್ದಪ್ಪ, ದತ್ತಿದಾಸೋಹಿಗಳಾದಂತಹ ಅನಮೋಲ್ ವಿದ್ಯಾಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ದಿನೇಶ್ ಸಿ.ಜಿ. ಹಾಗೂ ಕದಳಿ ವೇದಿಕೆಯ ಗೌರವ ಸಲಹೆಗಾರರಾದ ಯಶಾ ದಿನೇಶ್, ತಾಲ್ಲೂಕು ಘಟಕದ ಅಧ್ಯಕ್ಷರಾದ ನಿರ್ಮಲಾ ಶಿವಕುಮಾರ್ ಅವರು, ಕದಳಿ ವೇದಿಕೆ ಪದಾಧಿಕಾರಿಗಳು ಉಪಸ್ಥಿತರಿದ್ದರು.

ವಸಂತ ಕೆ. ಆರ್. ಸ್ವಾಗತಿಸಿದರು. ನಿರ್ಮಲ ಶಿವಕುಮಾರ ಪ್ರಾಸ್ತಾವಿಕ ನುಡಿಗಳನ್ನು ಆಡಿದರು. ವಿಜಯ ಚಂದ್ರಶೇಖರ ಅವರು ಕದಳಿಶ್ರೀ ಪ್ರಶಸ್ತಿ ಪುರಸ್ಕೃತರಾದ ಆಶಾದೇವಿಯವರ ಪರಿಚಯ ಮಾಡಿದರು. ನಂದಿನಿ ಗಂಗಾಧರ ಸೇವಾ ಕಾರ್ಯವನ್ನು ನಡೆಸಿಕೊಟ್ಟರು. ವಾಣಿ ರಾಜ್ ಮತ್ತು ಪೂರ್ಣಿಮಾ ಪ್ರಸನ್ನಕುಮಾರ ಕಾರ್ಯಕ್ರಮವನ್ನು ನಿರೂಪಿಸಿದರು. ಸೌಮ್ಯ ಸತೀಶ ಅವರು ಸಾಂಸ್ಕೃತಿಕ ಕಾರ್ಯಕ್ರಮವನ್ನು ನಡೆಸಿಕೊಟ್ಟರು.
ಕದಳಿಶ್ರೀ ಪ್ರಶಸ್ತಿಯು ಶರಣೆ ಸಾವಿತ್ರಮ್ಮ, ಶರಣ ಪ್ರೊ. ಬಿ.ಕೆ. ಸಿದ್ದಪ್ಪ ಬಾಡ ಅವರ ದತ್ತಿಯಾಗಿದ್ದು, ತಮ್ಮ ತಂದೆ-ತಾಯಿ ಹೆಸರಿನಲ್ಲಿ ಯಶ ದಿನೇಶ್ ಮತ್ತು ದಿನೇಶ್ ಸಿ. ಜಿ. ಅವರು ಶರಣ ಸಾಹಿತ್ಯ ಪರಿಷತ್ತಿನಲ್ಲಿ ಸ್ಥಾಪಿಸಿದ್ದಾರೆ.
