ಅನುಭವ: ಚಾಮರಾಜನಗರದಲ್ಲಿ ಇತಿಹಾಸ ನಿರ್ಮಿಸಿದ ಅಭಿಯಾನ

ಚಾಮರಾಜನಗರ

ಬಸವ ಸಂಸ್ಕೃತಿ ಅಭಿಯಾನಕ್ಕೆ ಚಾಮರಾಜನಗರದಲ್ಲಿ ದೊರೆತ ಬೃಹತ್ ಯಶಸ್ಸು ಇಡೀ ರಾಜ್ಯದ ಬಸವ ಭಕ್ತರಿಗೆ ಉತ್ಸಾಹ ತುಂಬಿತು. ಅದರ ಅನುಭವವನ್ನು ಜಿಲ್ಲಾ ಅಭಿಯಾನ ಸಮಿತಿ ಕಾರ್ಯದರ್ಶಿ ಎಚ್.ಎಸ್. ಮಹಾದೇವಸ್ವಾಮಿ (ಎನ್‌ರಿಚ್) ಬಸವ ಮೀಡಿಯಾದೊಂದಿಗೆ 1) ಹಂಚಿಕೊಂಡಿದ್ದಾರೆ.

  1. ಚಾಮರಾಜನಗರ ಜಿಲ್ಲೆಯಲ್ಲಿ ಅಭಿಯಾನಕ್ಕೆ ಸಜ್ಜಾಗಿದ್ದು ಹೇಗೆ? ಜನರನ್ನು ಸಂಘಟಿಸಿದ್ದು ಹೇಗೆ?

ಚಾಮರಾಜನಗರ ಜಿಲ್ಲೆಯ ಎಲ್ಲಾ ಬಸವ ಪರ ಸಂಘಟನೆಗಳೊಂದಿಗೆ ಸಮನ್ವಯ ಸಾಧಿಸಿ ಬಸವ ಸಂಸ್ಕೃತಿ ಅಭಿಯಾನ ಸಮಿತಿ ರಚಿಸಲಾಯಿತು. ಸಮಿತಿಯಲ್ಲಿ ಗೌರವಾಧ್ಯಕ್ಷರಾಗಿ ಸಂತೆಮರಳ್ಳಿ ಎಂ. ವೇದಮೂರ್ತಿ, ಅಧ್ಯಕ್ಷರಾಗಿ ಕೋಡಿ ಮೊಳೆ ರಾಜಶೇಖರ್, ಕಾರ್ಯದರ್ಶಿಯಾಗಿ ಎನ್‌ರಿಚ್ ಮಹಾದೇವಸ್ವಾಮಿ, ಖಜಾಂಚಿಯಾಗಿ ಸಿದ್ದಮಲ್ಲಪ್ಪ, ಹಾಗೂ ಜಿಲ್ಲಾ ನೌಕರರ ಸಂಘದ ಅಧ್ಯಕ್ಷರನ್ನು ಗೌರವ ಸಲಹೆಗಾರರಾಗಿ, ವಕೀಲರಾದ ಆರ್. ವಿರೂಪಾಕ್ಷರನ್ನು ಸೇರಿಸಿ ಸಮಿತಿಯನ್ನು ರಚಿಸಲಾಯಿತು.

ನಂತರ, ಚಾಮರಾಜನಗರ ಸಿದ್ದಮಲ್ಲೇಶ್ವರ ವಿರಕ್ತಮಠದ ಆವರಣದಲ್ಲಿ ಜಿಲ್ಲೆಯ ಎಲ್ಲಾ ಮಠಾಧಿಪತಿಗಳ ಸಭೆ ಕರೆಯಲಾಯಿತು. ಅವರು ಅಭಿಯಾನವನ್ನು ಇತಿಹಾಸದಲ್ಲಿ ದಾಖಲಿಸಲು ಸರ್ವ ರೀತಿಯ ಸಹಕಾರ ನೀಡಲು ಒಪ್ಪಿದರು. ಮಠಾಧಿಪತಿಗಳ ಪ್ರತಿನಿಧಿಗಳಾಗಿ 5 ತಾಲ್ಲೂಕಿಗೆ ಒಬ್ಬೊಬ್ಬ ಸ್ವಾಮೀಜಿಯನ್ನು ನೇಮಕ ಮಾಡಲಾಯಿತು.

ಪ್ರತಿ ತಾಲ್ಲೂಕಿನಲ್ಲಿ ಪ್ರಚಾರ ಸಮಿತಿಗಳನ್ನು, ಜೊತೆಗೆ ಅಲಂಕಾರ, ಮೆರವಣಿಗೆ, ವೇದಿಕೆ, ಪ್ರಸಾದ ಮತ್ತು ಹಣಕಾಸು ಸಮಿತಿಗಳನ್ನು ರಚಿಸಲಾಯಿತು.

ಹಳ್ಳಿಗಳ ಪ್ರತಿಯೊಂದು ಮನೆಗೂ ಕರಪತ್ರ ತಲುಪುವಂತೆ ನೋಡಿಕೊಳ್ಳಲಾಗಿದ್ದು, ಸಾಮಾಜಿಕ ಜಾಲತಾಣಗಳ ಮೂಲಕ ಪ್ರಚಾರ ಕಾರ್ಯವನ್ನು ಉರಿದುಂಬಿಸಲಾಯಿತು. ಜನರನ್ನು ಸಂಘಟಿಸುವಲ್ಲಿ ನೇರವಾಗಿ ಮಠಾಧಿಪತಿಗಳ ಪಾಲ್ಗೊಳ್ಳಿಕೆಯಿಂದ ಅಭಿಯಾನ ಯಶಸ್ವಿಯಾಗಿ ಸಾಗಿತು.

2) ಜನರ ಸ್ಪಂದನೆ ಹೇಗಿತ್ತು?

ತನು (ಶ್ರಮ): ಜನರು ಸಭೆ, ವಚನಪಾಠ, ಸತ್ಸಂಗ, ಮೆರವಣಿಗೆ, ವೇದಿಕೆ ಕಾರ್ಯಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡರು.

ಮನ (ಮನಸ್ಸು/ಭಕ್ತಿ): ತಮ್ಮ ಭಕ್ತಿ ಮತ್ತು ಆಸಕ್ತಿಯಿಂದ ಅಭಿಯಾನದ ಉದ್ದೇಶವನ್ನು ಬೆಂಬಲಿಸಿದರು, ಮಕ್ಕಳನ್ನು ಹಾಗೂ ಸಮುದಾಯದವರನ್ನು ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಪ್ರೇರೇಪಿಸಿದರು.

ಧನ (ಆರ್ಥಿಕ ನೆರವು): ಹಲವರು ತಮ್ಮ ಶಕ್ತಿಯನುಸಾರವಾಗಿ ದಾಸೋಹ ನೀಡಿ ಕಾರ್ಯಕ್ರಮಗಳ ವೆಚ್ಚ, ಅಲಂಕಾರ, ಪ್ರಸಾದ ವಿತರಣೆಗಳಲ್ಲಿ ನೆರವು ನೀಡಿದರು.

3) ಅಭಿಯಾನದ ಬಗ್ಗೆ ಅವರ ನಿರೀಕ್ಷೆಗೆ ಏನಿತ್ತು. ನಿಮ್ಮ ನಿರೀಕ್ಷೆಗೆ ತಕ್ಕಂತೆ ಅಭಿಯಾನ ನಡೆಯಿತೆ?

ಅಭಿಯಾನದ ಮೂಲಕ ಸಾಮಾಜಿಕ ಸಮಾನತೆ, ಧಾರ್ಮಿಕ ಜಾಗೃತಿ ಮೂಡಿಸಲು ಪ್ರಯತ್ನಿಸಿದ್ದೆವು. ಯುವಕರು, ಮಹಿಳೆಯರು ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಮಾಡಲು, ಗ್ರಾಮಮಟ್ಟದಲ್ಲಿ ಬಸವ ತತ್ತ್ವ, ಸತ್ಸಂಗ, ವಚನಪಾಠ ರೂಢಿಸಲು ಇದು ಅವಕಾಶವಾಗಿತ್ತು.

ಅಭಿಯಾನವು ನಿರೀಕ್ಷೆಗೆ ತಕ್ಕಂತೆ ಯಶಸ್ವಿಯಾಗಿ ನಡೆದಿತು. ಯುವಕರು, ಮಹಿಳೆಯರು ಮತ್ತು ಸಮುದಾಯದ ಎಲ್ಲಾ ವರ್ಗದ ಜನರು ಭಾಗವಹಿಸಿ ಒಗ್ಗಟ್ಟಿನ ಶಕ್ತಿ ಮತ್ತು ಬಸವ ಚಿಂತನೆಯ ಮೌಲ್ಯಗಳನ್ನು ಬಲಪಡಿಸಿದರು.

4) ಅಭಿಯಾನದಲ್ಲಿ ನಿಮ್ಮ ಗಮನ ಸೆಳೆದ ಅಂಶಗಳೇನು?

ಗ್ರಾಮಮಟ್ಟದಿಂದ ನಡೆದ ಪ್ರಚಾರ, ನಾಟಕ, ಸಂವಾದ, ಬೃಹತ್ ಮೆರವಣಿಗೆ, ವಚನ ಗಾಯನ ತಂಡಗಳ ಭಾಗವಹಿಸುವಿಕೆ, ಐವತ್ತಕ್ಕೂ ಹೆಚ್ಚು ಹಳ್ಳಿಗಳಿಂದ ಬಂದ ಬಸವೇಶ್ವರ ಭಾವಚಿತ್ರವಿದ್ದ ರಥಗಳು ಎಲ್ಲರ ಗಮನ ಸೆಳೆದವು.

ಯುವಕರ, ಮಹಿಳೆಯರ ಸಕ್ರಿಯ ಪಾಲ್ಗೊಳ್ಳಿಕೆ, ಸಂಘಟನೆಗಳ ಸಮನ್ವಯ ಮತ್ತು ಬಲವಾದ ಸಹಕಾರ, ಮಠಾಧೀಶರ ಮಾರ್ಗದರ್ಶನ ಕೂಡ ವಿಶೇಷವಾಗಿದ್ದವು.

5) ಅಭಿಯಾನದಲ್ಲಿ ಸಮಾಜಕ್ಕೆ ಬಂದ ಸಂದೇಶಗಳೇನು?

“ಸಮಾನತೆ, ಶ್ರಮ, ಸತ್ಯ, ಸೇವೆ” ಎಂಬ ಬಸವ ತತ್ವಗಳು ಸಮಾಜದಲ್ಲಿ ಪುನರುಜ್ಜೀವನಗೊಂಡವು. ಧರ್ಮವು ಜನರ ಹಿತಕ್ಕಾಗಿ ಇರಬೇಕು ಎಂಬ ಸಂದೇಶ ಜನಮನದಲ್ಲಿ ಬಲವಾಗಿ ನೆಲೆಗೊಂಡಿತು.

ಜಾತಿ-ಮತ ಬೇಧ ನಿವಾರಣೆ, ನೈತಿಕ ಜೀವನ, ಸಾಮಾಜಿಕ ಬಾಂಧವ್ಯಗಳ ಮಹತ್ವ ಅರಿತುಕೊಳ್ಳುವ ಅವಕಾಶ ದೊರೆಯಿತು.

ಲಿಂಗಾಯಿತ ಪ್ರತ್ಯೇಕ ಧರ್ಮದ ಕೂಗು ಬಲಗೊಂಡಿತು.

6) ಅಭಿಯಾನ ಜನರ ಮೇಲೆ ಮತ್ತು ಬಸವ ಸಂಘಟನೆಗಳ ಮೇಲೆ ಮಾಡಿದ ಪರಿಣಾಮವೇನು?

ಜನರಲ್ಲಿ ಧಾರ್ಮಿಕ ಜಾಗೃತಿ ಮತ್ತು ಸಾಮಾಜಿಕ ಜವಾಬ್ದಾರಿ ಹೆಚ್ಚಿದೆ.

ಸಂಘಟನೆಗಳ ನಡುವಿನ ಏಕತೆ ಮತ್ತು ಸಮನ್ವಯ ಬಲಗೊಂಡಿದೆ.

ಯುವಜನರಲ್ಲಿ, ಮಹಿಳೆಯರಲ್ಲಿ ಹಾಗೂ ರೈತರಲ್ಲಿ ಹೊಸ ಉತ್ಸಾಹ ಮೂಡಿದೆ.

ತಾಲ್ಲೂಕು ಮತ್ತು ಗ್ರಾಮಮಟ್ಟದಲ್ಲಿ ಹೊಸ ಬಸವ ವೇದಿಕೆಗಳು ಮತ್ತು ಚಟುವಟಿಕೆಗಳು ಆರಂಭವಾಗುವಂತೆ ಪ್ರೇರಣೆ ನೀಡಿದೆ.

7) ಅಭಿಯಾನದಲ್ಲಿ ಮಠಾಧೀಶರ ಒಕ್ಕೊಟದ, ಬಸವ ಸಂಘಟನೆಗಳ ಸಹಯೋಗ ಹೇಗಿತ್ತು?

ಮಠಾಧೀಶರ ಮಾರ್ಗದರ್ಶನ, ಆಶೀರ್ವಾದ, ಸನ್ನಿಧಾನದಿಂದ ಅಭಿಯಾನ ಯಶಸ್ಸುಕಂಡಿತು.

ಮಠಾಧೀಶರ ನೇರ ಪಾಲ್ಗೊಳ್ಳುವಿಕೆಯಿಂದ ಜನರನ್ನು ಸಂಘಟಿಸಲು ಮತ್ತು ಸಹಕಾರ ಪಡೆಯಲು ಸುಲಭವಾಯಿತು.

8) ಮುಂದಿನ ವರ್ಷ ಮತ್ತೆ ಅಭಿಯಾನ ಮಾಡಿದರೆ ಹೇಗೆ ಸುಧಾರಿಸಬಹುದು?

ಪ್ರತಿ ಐದು ವರ್ಷಕ್ಕೊಮ್ಮೆ ಅಭಿಯಾನ ನಡೆದರೆ ಒಳ್ಳೆಯದೆಂದು ನನ್ನ ವೈಯಕ್ತಿಕ ಭಾವನೆ. ಅದಾಗಿಯೂ ರಾಜ್ಯಮಟ್ಟದ ಮಠಾಧಿಪತಿಗಳ ಒಕ್ಕೂಟ ಪ್ರತಿ ವರ್ಷ ಅಭಿಯಾನ ನಡೆಸಲು ಸಾಧ್ಯವಾದರೆ ಈ ಕೆಳಕಂಡ ಅಂಶಗಳು ಸುಧಾರಣೆಗೊಳ್ಳಬೇಕು:

ಪೂರ್ವಯೋಜನೆ ಮತ್ತು ಸ್ಪಷ್ಟ ಕಾರ್ಯಕ್ರಮ ಕ್ಯಾಲೆಂಡರ್ ರೂಪಿಸುವುದು.

ಯುವಕರಿಗೆ ತರಬೇತಿ ಶಿಬಿರಗಳು, ವಚನ ಸ್ಪರ್ಧೆ, ಪಾಠಶಾಲೆ ಆಯೋಜನೆ.

ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಪ್ರಚಾರ.

ಕಾರ್ಯಕ್ರಮದ ನಂತರ ಮೌಲ್ಯಮಾಪನ ಸಭೆ ನಡೆಸಿ ಅನುಭವ ಹಂಚಿಕೆ.

ಪ್ರತಿಯೊಂದು ಜಿಲ್ಲೆಯಲ್ಲೂ ಶಾಶ್ವತ ಬಸವ ಸಂಸ್ಕೃತಿ ಅಭಿಯಾನ ವೇದಿಕೆಗಳು ರಚನೆಯಾಗಬೇಕು.

ಬೆಸ್ಟ್ ಆಫ್ ಬಸವ ಮೀಡಿಯಾ ಪುಸ್ತಕ – ಈಗ ಆನ್ಲೈನ್ ಖರೀದಿಸಿ
https://basavamedia.com/buy-basavamedia-book/

Share This Article
2 Comments
  • ಬಿದರಿನಿಂದ ಚಾಮರಾಜದವರೆಗೆ ಬಸವ ಸಂಸ್ಕೃತಿ ಅಭಿಯಾನ ಹರಡಿದೆ. ಜೈಬಸವ ಜೈಲಿಂಗಾಯತ.

  • ಉತ್ತಮ ಸಲಹೆ, ಪ್ರತಿ ಜಿಲ್ಲೆಯಲ್ಲಿ ಶಾಶ್ವತ ಮತ್ರು ನಿರಂತರ ಬಸವ ಸಂಸ್ಕ್ರತಿ ಅಭಿಯಾನದ ವೇದಿಕೆಗಳು ಕಾರ್ಯನಿರ್ವಹಿಸುವ ಸಲಹೆ ಜಾರಿಗೆ ಬಂದರೆ ಅಮೂಲಾಗ್ರ ಬದಲಾವಣೆಯಾಗುತ್ತೆ.

    ನಾವು ಮಾಸಿಕ ಕಾರ್ಯಕ್ರಮಗಳ ಮುಖಾಂತರ ಮನೆಮನ, ಯುವಕರನ್ನು, ವಿದ್ಯಾರ್ಥಿಗಳನ್ನು ನಿರಂತರವಾಗಿ ತಲುಪಬಹುದು.

Leave a Reply

Your email address will not be published. Required fields are marked *