ಪ್ರಶ್ನಿಸಲು ಕಲಿಸಿದ ಬಸವಾದಿ ಶರಣರು: ಡಾ. ಬಸವರಾಜ ಸಾದರ್

ರಾಯಚೂರು

ನಗರದ ಗಂಜ್ ಕಲ್ಯಾಣ ಮಂಟಪದಲ್ಲಿ ಬಸವ ಸಂಸ್ಕೃತಿ ಅಭಿಯಾನದ ಸಂವಾದ ಕಾರ್ಯಕ್ರಮ ಶುಕ್ರವಾರ ಯಶಸ್ವಿಯಾಗಿ ನಡೆಯಿತು.

ಕಾರ್ಯಕ್ರಮದಲ್ಲಿ ಮಾತನಾಡಿದ ಶರಣ ಚಿಂತಕ ಡಾ. ಬಸವರಾಜ ಸಾದರ್ ಪ್ರಶ್ನೆ ಮಾಡುವ ಪ್ರವೃತ್ತಿಯನ್ನು ಮೊಟ್ಟ ಮೊದಲ ಬಾರಿಗೆ ಜಾರಿಗೆ ತಂದವರು ಬಸವಾದಿ ಶರಣರು.

ಬಸವಣ್ಣನವರು ತಮ್ಮ ಎಂಟನೇ ವಯಸ್ಸಿನಲ್ಲಿಯೇ ಬಿಟ್ಟು ಬಂದ ಧರ್ಮವನ್ನೇ ಪ್ರಶ್ನೆ ಮಾಡಿದರು. ಶರಣರು ದೇವರಿಗೂ ಪ್ರಶ್ನೆ ಮಾಡಿದರು. ಪ್ರಶ್ನಿಸುವುದು, ಅನ್ಯಾಯದ ವಿರುದ್ಧ ಪ್ರತಿಭಟಿಸುವ ಪ್ರವೃತ್ತಿ ನಮ್ಮದಾಗಬೇಕು. ಹಾಗಂತ ಪ್ರಶ್ನೆಗಳು ಸ್ವೇಚ್ಛೆಯಿಂದ ಕೂಡಿರಬಾರದು ಎಂದು ಹೇಳಿದರು.

ಇಂದು ಹೆಚ್ಚಿನ ಪ್ರಶ್ನೆಗಳು ಮಹಿಳೆಯರಿಂದ ಬಂದವು, ಮಹಿಳೆಯರಲ್ಲಿ ಪ್ರಶ್ನೆ ಕೇಳುವ ಛಾತಿ ಬಂದಿರುವುದು ಆರೋಗ್ಯಕರ ಬೆಳವಣಿಗೆ. ಇದು ಇಂದಿನ ದಿನಮಾನಗಳಲ್ಲಿ ಮಹಿಳೆಯರಲ್ಲಿ ಬಹಳಷ್ಟು ಸಮಸ್ಯೆಗಳಿವೆ ಅವೆಲ್ಲವುಗಳಿಗೆ ವಚನ ಸಾಹಿತ್ಯ, ಬಸವತತ್ವದಲ್ಲಿ ಉತ್ತರವಿದೆ.

ಇಂದಿನ ಈ ಬಸವ ಸಂಸ್ಕೃತಿ ಅಭಿಯಾನ 12ನೇ ಶತಮಾನದ ಅನುಭವ ಮಂಟಪದ ಪ್ರತೀಕವಾಗಿದೆ. ಮೊದಲ ಸಂಸತ್ತು ಸಂವಿಧಾನ ಕೊಟ್ಟವರು ಶರಣರು. ಇದು ಜಂಗಮ ಅನುಭವ ಮಂಟಪ. ಗಿರೀಶ್ ಕಾರ್ನಾಡ್ ಅವರು ತಮ್ಮ ತಲೆದಂಡ ನಾಟಕದಲ್ಲಿ ಹೇಳುವಂತೆ ನೋಯುವ ಹಲ್ಲಿಗೆ ನಾಲಿಗೆಯು ಮತ್ತೆ ಮತ್ತೆ ಹೊರಳುವಂತೆ ವಚನ ಸಾಹಿತ್ಯದ ಕಡೆ ಇಂದು ಜನ ಮನಸ್ಸು ಕೊಡುತ್ತಿದ್ದಾರೆ ಎಂದು ನೆನಪಿಸಿಕೊಂಡರು.

ಇಂದಿನ ಜಗತ್ತು ಯುದ್ಧದ ಮನಸ್ಥಿತಿಯಲ್ಲಿದೆ, ಅಂತಹ ಕೆಟ್ಟ ಮನಸ್ಥಿತಿ ದೂರವಾಗಲು ವಚನ ಸಾಹಿತ್ಯದಲ್ಲಿ ಪರಿಹಾರವಿದೆ ಎಂದು ನುಡಿದರು.

ಕಾರ್ಯಕ್ರಮದಲ್ಲಿ ಮಾತಾಡಿದ ಶಾಸಕ ಡಾ. ಶಿವರಾಜ ಪಾಟೀಲ್ ಬಸವಣ್ಣನವರು 12ನೇ ಶತಮಾನದಲ್ಲಿ ಎಲ್ಲಾ ಸಮಾಜದವರನ್ನು ಒಗ್ಗೂಡಿಸಿಕೊಂಡು ಬಹುದೊಡ್ಡ ಸಂಘಟನೆಯನ್ನು ಮಾಡಿದರು. ಇಂದಿನ ವೇದಿಕೆ ಮೇಲಿರುವ ಪರಮಪೂಜ್ಯರು ವಿಶ್ವಗುರು ಬಸವಣ್ಣನವರ ಸಂಕಲ್ಪದಂತೆ ಇಂದಿನ ರಾಜಕಾರಣಿಗಳಿಗೆ ಸರಿಯಾದ ದಾರಿಯಲ್ಲಿ ಹೋಗುವಂತೆ ಮಾರ್ಗದರ್ಶನವನ್ನು ನೀಡಬೇಕಾದ ಅನಿವಾರ್ಯತೆ ಇದೆ ಎಂದು ನುಡಿದರು.

ಸಂವಾದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಪೂಜ್ಯ ಡಾ. ಬಸವಲಿಂಗ ಪಟ್ಟದ್ದೇವರು ಮಾತನಾಡುತ್ತ, ಇಂದಿನ ಸಂವಾದ ಕಾರ್ಯಕ್ರಮದಲ್ಲಿ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಜನ ಸೇರಿರುವುದು ನಮಗೆ ಬಹಳ ಖುಷಿ, ಸಂತೋಷವಾಗಿದೆ.

ಬಸವ ಸಂಸ್ಕೃತಿ ಅಭಿಯಾನದ ಉದ್ದೇಶವೇನೆಂದರೆ ಎಲ್ಲರಲ್ಲಿ ಬಸವಪ್ರಜ್ಞೆ ಮೂಡಿಸುವುದಾಗಿದೆ. ನಾವೆಲ್ಲರೂ ಬಸವಣ್ಣನಿಂದ ಹಾಗೂ ವಚನಗಳಿಂದ ದೂರ ಸರಿದಿದ್ದೇವೆ, ಹಾಗಾಗಿ ಮೌಢ್ಯ, ಕಂದಾಚಾರಗಳು,‌ ಹೋಮ-ಹವನಾಚರಣೆಗಳು ನಡೆಯುತ್ತಿವೆ, ಹಾಗಾಗಬಾರದು. ಮತ್ತೆ ನಾವು ಬಸವಣ್ಣನನ್ನ ಮತ್ತು ವಚನ ಸಾಹಿತ್ಯವನ್ನು ಅಪ್ಪಿಕೊಳ್ಳಬೇಕಾಗಿದೆ ಹತ್ತಿರವಾಗಬೇಕಾಗಿದೆ. ಬಸವಣ್ಣ ವಚನಗಳನ್ನು ಎಂದೂ ಮರೆಯದೆ ಪಾಲನೆ ಆಗಬೇಕು.

ಬಸವಣ್ಣನ ಹಾಗೂ ವಚನ ಸಾಹಿತ್ಯವನ್ನು ಗಟ್ಟಿಯಾಗಿ ಹಿಡಿದುಕೊಂಡವರಿಗೆ ಬದುಕು ಸುಂದರವಾಗಿರುತ್ತದೆ. ನಮ್ಮ ಉದ್ದೇಶ ಭಾರತದಾದ್ಯಂತ ಅಷ್ಟೇ ಅಲ್ಲ ದೇಶ-ವಿದೇಶಗಳಲ್ಲಿ ಬಸವತತ್ವವನ್ನು ಹರಡಬೇಕು, ಅದಕ್ಕಾಗಿ ನಾವೆಲ್ಲರೂ ಅಕ್ಟೋಬರ್ ಐದರಂದು ಬೆಂಗಳೂರಿನಲ್ಲಿ ನಡೆಯುವ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ, ಜಗತ್ತಿಗೆ ಬಸವ ಸಂದೇಶವನ್ನ ಸಾರಬೇಕು ಎಂದು ಕರೆ ನೀಡಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/KVCwk6IT1VBLPSuFiyKvN1

Share This Article
Leave a comment

Leave a Reply

Your email address will not be published. Required fields are marked *