ರಾಯಚೂರು ಅಭಿಯಾನ: ಹುಟ್ಟು ಲಿಂಗಾಯತರು ಮಾತ್ರ ಲಿಂಗಾಯತರಲ್ಲ

ರಾಯಚೂರು

“ಹುಟ್ಟಿನಿಂದ ಲಿಂಗಾಯತರಾದವರು ಮಾತ್ರ ಲಿಂಗಾಯತರಲ್ಲ. ಲಿಂಗಾಯತ ಎನ್ನುವುದು ಜಾತಿ ಸೂಚಕವಲ್ಲ ಅದು ಧರ್ಮ ಎನ್ನುವುದನ್ನು ಮರೆಯಬಾರದು. ಬಸವ ಧರ್ಮ ಎಲ್ಲಾ ಕಡೆ ಹರಡಬೇಕಾದರೆ ಎಲ್ಲಾ ವರ್ಗದ ಜನರಿಗೆ ಲಿಂಗಧಾರಣೆ ಮಾಡುವ ಕೆಲಸ ಮಾಡಬೇಕಾಗಿದೆ. ಹಾಗೆಯೇ ಬಸವಣ್ಣನವರನ್ನು ಧರ್ಮಗುರು ಎಂದು ನಾವೆಲ್ಲರೂ ಒಪ್ಪಿಕೊಳ್ಳಬೇಕು,” ಎಂದು ರಾಯಚೂರು ಜಿಲ್ಲಾ ಜಾಗತಿಕ ಲಿಂಗಾಯತ ಮಹಾಸಭಾದ ಅಧ್ಯಕ್ಷರಾದ ರುದ್ರಪ್ಪ ಪಿ ಶುಕ್ರವಾರ ಹೇಳಿದರು.

ನಗರದ ಗಂಜ್ ಕಲ್ಯಾಣ ಮಂಟಪದಲ್ಲಿ ಅದ್ಧೂರಿಯಾಗಿ ನಡೆದ ಬಸವ ಸಂಸ್ಕೃತಿ ಅಭಿಯಾನದ ಸಾರ್ವಜನಿಕ ಸಮಾರಂಭದಲ್ಲಿ ಮಾತನಾಡುತ್ತ ಅಭಿಯಾನದ ಪ್ರಚಾರದ ಸಂದರ್ಭದಲ್ಲಿ ಹಳ್ಳಿಯ ಜನರ ಸಕಾರಾತ್ಮಕ ಪ್ರತಿಕ್ರಿಯೆ ನಮಗೆ ಕೆಲಸ ಮಾಡಲು ಹುಮ್ಮಸ್ಸು ತಂದುಕೊಟ್ಟಿತು. ಮಠಾಧೀಶರ ಒಕ್ಕೂಟವು ಕೈಗೊಂಡಿರುವ ಅಭಿಯಾನ ಬಸವಪ್ರಜ್ಞೆ ಜಾಗೃತಿಗೊಳಿಸಲು ಬಹುದೊಡ್ಡ ಕೊಡುಗೆಯಾಗಿ ರೂಪುಗೊಂಡಿದೆ, ಎಂದರು.

ಲಿಂಗಾಯತ ಧರ್ಮದಲ್ಲಿ ಹಸ್ತಮಸ್ತಕ ಸಂಯೋಗದಿಂದ ಉದ್ಧರಿಸಲು ಸಾಧ್ಯವಿದೆ ಹೊರತು ಪಾದಮಸ್ತಕದಿಂದ ಅಲ್ಲ ಎನ್ನುವುದನ್ನು ತಿಳಿಯಬೇಕಾಗಿದೆ. ಲಿಂಗಾಯತರಾದ ನಮಗೆ ಹಾಗೂ ಇನ್ನೊಂದು ಗುಂಪಿಗೆ ಬಹಳಷ್ಟು ವ್ಯತ್ಯಾಸವಿದೆ ಎಂಬುದನ್ನು ತಿಳಿಯಬೇಕಾಗಿದೆ ಎಂದು ಹೇಳಿದರು.

ಪೂಜ್ಯ ಸಾಣೆಹಳ್ಳಿಯ ಪಂಡಿತಾರಾಧ್ಯ ಶ್ರೀಗಳು ‘ವಚನದರ್ಶನ ಮಿಥ್ಯ / ಸತ್ಯ’ ಕೃತಿಯನ್ನು ಬಿಡುಗಡೆ ಮಾಡಿದರು.

ಶರಣರ ರಾಷ್ಟ್ರೀಯ ಪರಿಕಲ್ಪನೆ
ಮುಖ್ಯ ಅತಿಥಿಗಳಾಗಿ ಡಾ. ಬಸವರಾಜ ಸಾದರ ಅವರು ‘ಶರಣರು ಕಂಡ ರಾಷ್ಟ್ರೀಯ ಪರಿಕಲ್ಪನೆ’ ವಿಷಯ ಕುರಿತು ಮಾತನಾಡತ್ತಾ, ಇಂದಿನ ರಾಜಕೀಯ ವ್ಯವಸ್ಥೆಯಲ್ಲಿ ಭ್ರಷ್ಟ, ದುಷ್ಟ ಪರಿಸ್ಥಿತಿ ಇದೆ. ಇದಕ್ಕೂ ವಚನಗಳಲ್ಲಿ ಪರಿಹಾರವಿದೆ ಅದನ್ನು ಕಂಡುಕೊಳ್ಳಬಹುದಾಗಿದೆ. ಇಂದು ಭ್ರಷ್ಟ ವ್ಯವಸ್ಥೆ ನಿರ್ಮಾಣವಾಗಲು ರಾಜಕೀಯ ವ್ಯಕ್ತಿಗಳು ಕಾರಣವೋ ಅಥವಾ ಅವರನ್ನು ಆರಿಸಿ ಕಳಿಸಿರುವ ಜನರು ಕಾರಣವೋ ಒಂದೂ ಗೊತ್ತಾಗುತ್ತಿಲ್ಲ, ಎಂದು ಹೇಳಿದರು.

ಅವೈದಿಕ, ಸಮಾನತೆಯ ಧರ್ಮ
ಸಾನಿಧ್ಯವಹಿಸಿ ಗುರುಬಸವ ಮಹಾಸ್ವಾಮಿಗಳು ಪಾಂಡೋವಟ್ಟಿ ಮಾತನಾಡುತ್ತಾ, ನಮ್ಮದು ಲಿಂಗಾಯತತತ್ವ ನಾವು ವೈದಿಕ ತತ್ವದವರು ಅಲ್ಲ. ನಮ್ಮ ತತ್ವದಲ್ಲಿ ಲಿಂಗೈಕರಾದಾಗ ಭಕ್ತರು, ಗುರುಗಳನ್ನು ಅಂತ್ಯಸಂಸ್ಕಾರ ಮಾಡುತ್ತಾರೆ. ವೈದಿಕದಲ್ಲಿ ಗುರುವನ್ನು ಮಾತ್ರ ಅಂತಿಮ ಸಂಸ್ಕಾರ ಮಾಡುತ್ತಾರೆ. ಇತರರನ್ನು ಚಿತೆಯಲ್ಲಿ ಸುಡುತ್ತಾರೆ. ಸಮಸಮಾಜ, ಮಾನವೀಯ ಮೌಲ್ಯ , ಮೌಡ್ಯಮುಕ್ತ ಬದುಕು ಬಸವ ಸಂಸ್ಕೃತಿ ಅಭಿಯಾನದ ಉದ್ದೇಶವಾಗಿದೆ.

ಬಹುದೇವೋಪಾಸನೆಗೆ ಅವಕಾಶವಿಲ್ಲ ಏಕದೇವೋಪಾಸನೆ ನಮ್ಮದು. ಪ್ರತಿಯೊಬ್ಬರು ಇಷ್ಟ ಲಿಂಗಧಾರಿಗಳಾಗಬೇಕು. ಕುಲಜ ಅಕುಲಜರೆಂಬ ಭೇದ ನಮ್ಮಲ್ಲಿಲ್ಲ. ಲಿಂಗವಂತನೆ ಕುಲಜನು. ನಮ್ಮ ಎಲ್ಲ ಮಠಗಳು ಭಕ್ತರಿಗೆ ಕಾಯಕದ ಮಹತ್ವವನ್ನು ಹೇಳಿಕೊಡಬೇಕು ಹಾಗೆಯೇ ನಿಮ್ನ ವರ್ಗದ ಜನರನ್ನು ಅಪ್ಪಿಕೊಳ್ಳಬೇಕು. ಹಣೆಯಲ್ಲಿ ವಿಭೂತಿ, ಕೊರಳಲ್ಲಿ ರುದ್ರಾಕ್ಷಿ ಮತ್ತು ಲಿಂಗ ಇಲ್ಲದವರ ಮುಖ ನೋಡಲಾಗದು ಎಂದು ಶರಣರು ಹೇಳಿದ್ದಾರೆ.

ಬಸವಧರ್ಮ ಸಮಾನತೆಯ ಧರ್ಮ. ಈ ವೇದಿಕೆಯಲ್ಲಿ ಭಕ್ತರಿಗೂ ಗುರುಗಳಿಗೂ ಸಮಾನ ಆಸನಗಳಿವೆ. ಇಲ್ಲಿ ಯಾರು ಮೇಲು ಅಲ್ಲ ಯಾರು ಕೀಳು ಅಲ್ಲ ಇದೆ ಲಿಂಗಾಯತ ಧರ್ಮದ ವಿಶೇಷತೆ.

ಬಸವಣ್ಣನವರು ಆರ್ಥಿಕ ತಜ್ಞರು ಹಾಗೂ ಸಾತ್ವಿಕ ಸಮಾಜದ ನಿರ್ಮಾತೃಗಳು ಎನ್ನುವುದನ್ನು ಸಾರುವ ಕೆಲಸ ಈ ಅಭಿಯಾನದ ಮೂಲಕ ನಡೆಯುತ್ತಿದೆ ಎಂದು ನುಡಿದರು.

ಶರಣರ ಸಿದ್ಧಾಂತ ದಾರಿದೀಪ
ಶಾಸಕರಾದ ಹಂಪನಗೌಡ ಬಾದರ್ಲಿ ಅವರು ಮಾತನಾಡುತ್ತಾ, ಕತ್ತಲೆ ಮುಸುಕಿದ ಸಮಾಜಕ್ಕೆ ಬೆಳಕನ್ನು ಮೂಡಿಸುವ ಕಾರ್ಯಕ್ರಮ ಇದಾಗಿದೆ, ಇಂತಹ ಅಮೂಲ್ಯ ಕಾರ್ಯಕ್ರಮಕ್ಕೆ ಕೈ ಹಾಕಿರುವ ಎಲ್ಲಾ ಮಠಾಧೀಶರಿಗೆ ಅಭಿನಂದನೆಗಳು. ಬಸವಾದಿ ಶರಣರ ಕಾಯಕ ಸಿದ್ಧಾಂತ ನಮ್ಮ ನಿಮ್ಮೆಲ್ಲರಿಗೆ ದಾರಿದೀಪವಾಗಲಿ ಎಂದು ಆಶಿಸಿದರು.

ಶರಣರ ಎದೆಗಾರಿಕೆ
ರಾಯಚೂರು ವಾಲ್ಮೀಕಿ ವಿಶ್ವವಿದ್ಯಾಲಯದ ಕುಲಪತಿಗಳಾದ ಶಿವಾನಂದ ಕೆಳಗಿನಮನಿ ಅವರು ಮಾತನಾಡುತ್ತ, ರಾಜಪ್ರಭುತ್ವದಲ್ಲಿದ್ದುಕೊಂಡೇ ರಾಜತ್ವವನ್ನೇ ಖಂಡಿಸುವ ಎದೆಗಾರಿಕೆ ಶರಣರಲ್ಲಿತ್ತು. ಬಸವಣ್ಣ ತಾಯಿತನದ ನೆಲೆಯಾಗಿದ್ದರು. ಕೆಳವರ್ಗದ ಕರುಣಾಮಯಿಗಳಾಗಿದ್ದರು. ಅವರು ಜಗತ್ತಿನ ಯಾವ ದಾರ್ಶನಿಕರಿಗೂ ಕಡಿಮೆ ಇಲ್ಲದ ನಮ್ಮ ನೆಲದ ನಾಯಕರು. ವೇದಿಕೆಯಲ್ಲಿನ ರಾಜಕೀಯದವರು ಬಸವಣ್ಣನನ್ನು ಅನುಕರಿಸಿದ್ದೆಯಾದರೆ ಸಮ ಸಮಾಜ ನಿರ್ಮಾಣವಾಗಲಿದೆ ಎಂದು ಹೇಳಿದರು.

‘ಲಿಂಗಾಯತ’ ಎಂದು ಬರೆಸಿ
ಮಾಜಿ ಸಚಿವರಾದ ವೆಂಕಟರಾವ್ ನಾಡಗೌಡ್ರ ಮಾತನಾಡುತ್ತಾ, ಇಂದಿನ ಸಂವಿಧಾನದ ಆಶಯಗಳನ್ನು ವಚನಗಳಲ್ಲಿ ಕಾಣಬಹುದಾಗಿದೆ. ನಾವು ರಾಜಕಾರಣವನ್ನು ಮನಸಾಕ್ಷಿಗೆ ವಿರುದ್ಧವಾಗಿ ಮಾಡುತ್ತಿದ್ದೇವೆ. ಎಷ್ಟೋ ಸಂದರ್ಭದಲ್ಲಿ ಯಾವುದೋ ಒತ್ತಡಕ್ಕೆ ಒಳಗಾಗಿ ಬೇಡವಾದ ಕೆಲಸವನ್ನು ಮಾಡಬೇಕಾಗುತ್ತದೆ. ಭ್ರಷ್ಟಾಚಾರದ ಮೂಲವನ್ನು ಹುಡುಕುತ್ತಾ ಹೋದರೆ ಅದು ಮತದಾರನ ಬಾಗಿಲಲ್ಲಿ ಬಂದು ನಿಲ್ಲುತ್ತದೆ. ಮುಂಬರುವ ಜಾತಿಗಣತಿಯಲ್ಲಿ ಹಿಂದೂ ಎಂಬುದು ಬಿಟ್ಟು ಧರ್ಮದ ಕಾಲಂನಲ್ಲಿ ‘ಲಿಂಗಾಯತ’ ಎಂದು ಬರೆಸಬೇಕು ಎಂದು ಕರೆ ನೀಡಿದರು.

ವೇದಿಕೆಯಲ್ಲಿ ವಿವಿಧ ಕಾಯಕ ಸಮಾಜದ ಮುಖಂಡರು, ಮಠಾಧೀಶರು ಉಪಸ್ಥಿತರಿದ್ದರು. ಕೊನೆಗೆ ಸಾಣೇಹಳ್ಳಿಯ ಶಿವಸಂಚಾರ ಕಲಾತಂಡದಿಂದ ‘ಜಂಗಮದೆಡೆಗೆ’ ನಾಟಕ ಪ್ರದರ್ಶನಗೊಂಡಿತು. ರೇಖಾ ಪಾಟೀಲ ಕಾರ್ಯಕ್ರಮ ನಿರೂಪಿಸಿದರು. ಮಂಗಲ ಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.

ಪಕ್ಷಾತೀತ ಸಮಾರಂಭ
ಡಾ. ಬಸವಲಿಂಗ ಪಟ್ಟದೇವರು ಇವತ್ತಿನ ವೇದಿಕೆಯಲ್ಲಿ ಎಲ್ಲಾ ಪಕ್ಷದವರು ಸೇರಿರುವುದು ವಿಶೇಷವಾಗಿದೆ. ತಾವೆಲ್ಲರೂ ಸಮಾರೋಪ ಸಮಾರಂಭದ ಯಶಸ್ಸಿಗೆ ಕೈಜೋಡಿಸಬೇಕು ಎಂದು ವಿನಂತಿಸಿದರು. ಮಕ್ಕಳಲ್ಲಿ ಬಸವಾದಿ ಶರಣರ ವಿಚಾರಗಳು ಮೂಡಿ ಬರಬೇಕಾದರೆ ರಾಜ್ಯ ಮತ್ತು ಕೇಂದ್ರದ ಪಠ್ಯ ಪುಸ್ತಕಗಳಲ್ಲಿ ಶರಣರ ಕುರಿತು ಪಾಠಗಳನ್ನು ಅಳವಡಿಸಬೇಕು. ಹಾಗೂ ರಾಜ್ಯದಲ್ಲಿ ಬಸವ ಜಯಂತಿ ಆಚರಿಸಿದಂತೆ ದೇಶದಾದ್ಯಂತ ಬಸವ ಜಯಂತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲು ವೇದಿಕೆಯಲ್ಲಿನ ರಾಜಕೀಯ ವ್ಯಕ್ತಿಗಳು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಬೇಕೆಂದು ಕರೆ ನೀಡಿದರು.

ಸರ್ವ ಸಮಾಜಗಳು ಭಾಗಿ
ಬಲಿಜ, ಕುರುಬ, ಆರ್ಯವೈಶ್ಯ, ಚಲವಾದಿ, ಗಂಗಾಮತಸ್ಥ, ವಾಲ್ಮೀಕಿ, ಮಾದಿಗ, ಯಾದವ, ಬೋವಿ, ಉಪ್ಪಾರ, ಮಡಿವಾಳ, ಗೌಳಿ, ಈಡಿಗ, ಮೇದಾರ, ಹಡಪದ, ನೇಕಾರ, ಹೂಗಾರ, ವಿಶ್ವಕರ್ಮ ಮತ್ತಿತರ ಕಾಯಕ ಸಮಾಜದ ಮುಖಂಡರು ಸದಸ್ಯರು ಭಾಗವಹಿಸಿದ್ದರು.

ಸರ್ವ ಸಂಘಟನೆಗಳು ಭಾಗಿ
ಬಸವ ಸಂಸ್ಕೃತಿ ಅಭಿಯಾನ ಸಮಿತಿ, ಬಸವಕೇಂದ್ರ, ಜಾ.ಲಿಂ.ಮಹಾಸಭಾ, ಶರಣ ಸಾಹಿತ್ಯ ಪರಿಷತ್ತು, ಕದಳಿ ವೇದಿಕೆ, ವೀರಶೈವ ಲಿಂಗಾಯತ ಸಮಾಜ, ವೀರಶೈವ ಲಿಂಗಾಯತ ಮಹಾಸಭಾ, ಅಕ್ಕನ ಬಳಗ, ವೀರಶೈವ ರುದ್ರಸೇನೆ ಮತ್ತಿತರ ಸಂಘಟನೆಗಳು ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.

ಸ್ವಾಗತ ಸಮಿತಿ ಅಧ್ಯಕ್ಷ ಎಸ್. ಶಿವರಾಜ ಪಾಟೀಲ, ಸಂಯೋಜಕ ಹರವಿ ನಾಗನಗೌಡ, ಸಚಿವ ಎನ್. ಬೋಸರಾಜು, ಉಪನ್ಯಾಸಕ ಬಸವರಾಜ ಸಾದರ, ರಾಚನಗೌಡ ಕೋಳೂರ, ಮಸ್ಕಿ ನಾಗರಾಜ, ಲಲಿತಾ ಬಸನಗೌಡ, ಎಂ. ಶಿವಶರಣರೆಡ್ಡಿ, ಶರಣಭೂಪಾಲ ನಾಡಗೌಡ, ಚಂದ್ರಶೇಖರ ಪಾಟೀಲ, ಹರವಿ ನಾಗನಗೌಡ, ಡಾ. ಸರ್ವಮಂಗಳ ಸಕ್ರಿ, ಜಗದೇವಿ ಚೆನ್ನಬಸವಣ್ಣ, ಚನ್ನಬಸವಣ್ಣ ಮಹಾಜನಶೆಟ್ಟಿ ಮತ್ತಿತರರು ವೇದಿಕೆಯಲ್ಲಿದ್ದರು.

ಒಳಬಳ್ಳಾರಿ ಸಿದ್ದಲಿಂಗ ಸ್ವಾಮೀಜಿ, ಮಹಾಲಿಂಗ ಸ್ವಾಮೀಜಿ, ಗುರುಬಸವ ಪಟ್ಟದ್ದೇವರು, ಗುರುಬಸವ ಸ್ವಾಮೀಜಿ, ಬಸವದೇವರು ಮತ್ತಿತರ ಪೂಜ್ಯರು ವೇದಿಕೆಯಲ್ಲಿ ಆಸೀನರಾಗಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/BC3ULQcPxmhAhKS4XV9R1G

Share This Article
1 Comment

Leave a Reply

Your email address will not be published. Required fields are marked *