ಬಸವಣ್ಣ ಸಾಂಸ್ಕೃತಿಕ ನಾಯಕರೆಂದು ಘೋಷಿಸಿದ ಮುಖ್ಯಮಂತ್ರಿಗೆ ಸಮಾರೋಪ ಸಮಾರಂಭದಲ್ಲಿ ಸನ್ಮಾನ
ಬೆಂಗಳೂರು
ಬಸವ ಸಂಸ್ಕೃತಿ ಅಭಿಯಾನದ ಸಮಾರೋಪ ಸಮಾರಂಭಕ್ಕೆ ಬೆಂಗಳೂರಿನಲ್ಲಿ ಲಕ್ಷಾಂತರ ಲಿಂಗಾಯತ ಅನುಯಾಯಿಗಳನ್ನು ಸೇರಿಸಿ ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕರೆಂದು ಘೋಷಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸನ್ಮಾನಿಸಲಾಗುವುದು, ಎಂದು ಎಂದು ಬೃಹತ್ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಅವರು ಹೇಳಿದರು.
ಶನಿವಾರ ನಗರದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಲಿಂಗಾಯತ ಮಠಾಧೀಶರ ಒಕ್ಕೊಟ ಹಾಗೂ ಬಸವ ಪರ ಸಂಘಟನೆಗಳು ಅಭಿಯಾನದ ಸಮಾರೋಪ ಸಮಾರಂಭವನ್ನು ಅಕ್ಟೋಬರ್ ಒಂದರಿಂದ ಅಕ್ಟೋಬರ್ ಐದಕ್ಕೆ ಮುಂದೂಡಲು ತೀರ್ಮಾನಿಸಿದರು.
ಒಕ್ಕೂಟದ ಸ್ವಾಮೀಜಿಗಳು ನಂತರ ಎಂ.ಬಿ.ಪಾಟೀಲ ಅವರನ್ನು ಭೇಟಿಯಾಗಿ ಅಭಿಯಾನವನ್ನು ಯಶಸ್ವಿಯಾಗಿ ನಡೆಸಲು ಮಾಡಿಕೊಳ್ಳಬೇಕಾದ ಸಿದ್ದತೆಗಳ ಬಗ್ಗೆ ಚರ್ಚಿಸಿದರು.

ಸಭೆಯ ನಂತರ ಮಾತನಾಡಿದ ಪಾಟೀಲ ‘ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ರಾಜ್ಯ ಸರ್ಕಾರವು ಘೋಷಿಸಿ ಒಂದು ವರ್ಷವಾಗುತ್ತಿದ್ದು, ಅದನ್ನು ಸಂಭ್ರಮಿಸಲು ಪ್ರತಿ ಜಿಲ್ಲೆಯಲ್ಲಿ ಬಸವ ಸಂಸ್ಕೃತಿ ಅಭಿಯಾನ ನಡೆಸಲು ಲಿಂಗಾಯತ ಮಠಾಧಿಪತಿಗಳ ಒಕ್ಕೂಟವು ನಿರ್ಧರಿಸಿದೆ.
ಅಭಿಯಾನದಲ್ಲಿ ಪ್ರತಿದಿನವೂ ಕಾಲೇಜು ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರ ಜತೆ ಸಂವಾದ, ಪಾದಯಾತ್ರೆ, ವಚನ ಸಂಗೀತ, ಸ್ವಾಮೀಜಿಗಳು ಮತ್ತು ಆಹ್ವಾನಿತ ಉಪನ್ಯಾಸಕರ ಭಾಷಣ ಹಾಗೂ ಪಂಡಿತಾರಾಧ್ಯ ಶಿವಾಚಾರ್ಯರು ಬರೆದಿರುವ ‘ಜಂಗಮದೆಡೆಗೆ’ ನಾಟಕ ಪ್ರದರ್ಶನ ನಡೆಯಲಿದೆ’ ಎಂದು ತಿಳಿಸಿದರು.

ಡಾ.ಬಸವಲಿಂಗ ಪಟ್ಟದೇವರು ಭಾಲ್ಕಿ, ಶಿವರುದ್ರ ಸ್ವಾಮೀಜಿ ಬೆಂಗಳೂರು, ಡಾ.ಅಲ್ಲಮಪ್ರಭು ಸ್ವಾಮೀಜಿ ಬೆಳಗಾವಿ, ಶಿವಕುಮಾರ ಸ್ವಾಮೀಜಿ ಹುಲಸೂರು, ಗುರುಬಸವ ಪಟ್ಟದ್ದೇವರು ಭಾಲ್ಕಿ, ಅಥಣಿಯ ಚೆನ್ನಬಸವ ಸ್ವಾಮೀಜಿ, ನೆಲಮಂಗಲದ ಪವಾಡ ಶ್ರೀಮಠದ ಸಿದ್ಧಲಿಂಗ ಸ್ವಾಮೀಜಿ, ಗೊರವಣ್ಣ ದೇವರ ಮಠದ ನಂಜುಂಡ ಸ್ವಾಮೀಜಿ, ನಿಜಗುಣ ಮಠದ ಇಮ್ಮಡಿ ನಿಜಗುಣ ಸ್ವಾಮೀಜಿ, ಬಸವ ಧರ್ಮಪೀಠದ ಬಸವಯೋಗಿ ಸ್ವಾಮೀಜಿ, ಚನ್ನಪಟ್ಟಣದ ಬೇಗೂರು ಮಠದ ಮೃತ್ಯುಂಜಯ ಸ್ವಾಮೀಜಿ ಸಭೆಯಲ್ಲಿ ಭಾಗಿಯಾಗಿದ್ದರು.