ಬೆಂಗಳೂರು
ಅಕ್ಟೊಬರ್ ಐದರಂದು ಬೆಂಗಳೂರಿನಲ್ಲಿ ನಡೆಯಲಿರುವ ಬಸವ ಸಂಸ್ಕೃತಿ ಅಭಿಯಾನದ ಸಮಾರೋಪ ಸಮಾರಂಭವನ್ನು ಅರಮನೆ ಮೈದಾನದಲ್ಲಿ ಆಯೋಜಿಸಲು ನಿರ್ಣಯಿಸಲಾಗಿದೆ.
ಅಭಿಯಾನದ ಆಯೋಜಕರೊಬ್ಬರು ಸಮಾರೋಪ ಸಮಾರಂಭ ಅರಮನೆ ಮೈದಾನದ ಗಾಯತ್ರಿ ವಿಹಾರದಲ್ಲಿ ನಡೆಯುವುದು ಖಚಿತವಾಗಿದೆ ಎಂದು ಬಸವ ಮೀಡಿಯಾಗೆ ತಿಳಿಸಿದರು.
ಇತ್ತೀಚೆಗೆ ನಗರದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಲಿಂಗಾಯತ ಮಠಾಧೀಶರ ಒಕ್ಕೊಟ ಹಾಗೂ ಬಸವ ಪರ ಸಂಘಟನೆಗಳು ಅಭಿಯಾನದ ಸಮಾರೋಪ ಸಮಾರಂಭವನ್ನು ಅಕ್ಟೋಬರ್ ಒಂದರಿಂದ ಅಕ್ಟೋಬರ್ ಐದಕ್ಕೆ ಮುಂದೂಡಲು ತೀರ್ಮಾನಿಸಿದರು.
ಆದರೆ ಸಮಾರೋಪದ ಸ್ಥಳದ ಬಗ್ಗೆ ಒಮ್ಮತ ಮೂಡಿರಲಿಲ್ಲ. ಕೆಲವರು ಕಾರ್ಯಕ್ರಮವನ್ನು ಅರಮನೆ ಮೈದಾನದಲ್ಲಿ ನಡೆಸಲು ಬಯಸಿದರೆ ಮತ್ತೆ ಕೆಲವರು ಅಷ್ಟು ದೊಡ್ಡ ಸ್ಥಳದಲ್ಲಿ ಸಾವಿರಾರು ಜನರನ್ನು ಸೇರಿಸುವ ಸವಾಲುಗಳ ಬಗ್ಗೆ ಆತಂಕ ವ್ಯಕ್ತಪಡಿಸಿದ್ದರು.
ಈಗ ರಾಜಕೀಯ ಬೆಂಬಲವೂ ಸ್ವಲ್ಪ ಬಂದಿರುವುದರಿಂದ ಕಾರ್ಯಕ್ರಮ ದೊಡ್ಡ ಪ್ರಮಾಣದಲ್ಲಿಯೇ ನಡೆಯುವ ಸಾಧ್ಯತೆಯಿದೆ ಎಂದು ಬಸವ ಸಂಘಟನೆಯ ಪ್ರಮುಖರೊಬ್ಬರು ಹರ್ಷ ವ್ಯಕ್ತಪಡಿಸಿದರು.