ಗುಳೇದಗುಡ್ಡ:
ಬಸವ ಕೇಂದ್ರದ ಮನೆಯಲ್ಲಿ ಮಹಾಮನೆ ಕಾರ್ಯಕ್ರಮ ಶನಿವಾರ ಶರಣ ಸುರೇಶ ಮೆಂತೇದ ಅವರ ಮನೆಯಲ್ಲಿ ನಡೆಯಿತು.
ವಚನ ವಿಶ್ಲೇಷಣೆಗಾಗಿ ಆಯ್ದುಕೊಂಡ ಬಸವ ತಂದೆಗಳ ವಚನ ಹೀಗಿದೆ –
ಒಲವಿಲ್ಲದ ಪೂಜೆ, ನೇಹವಿಲ್ಲದ ಮಾಟ
ಆ ಪೂಜೆಯು ಆ ಮಾಟವು
ಚಿತ್ರದ ರೂಹು ಕಾಣಿರಣ್ಣಾ
ಚಿತ್ರದ ಕಬ್ಬು ಕಾಣಿರಣ್ಣಾ
ಅಪ್ಪಿದಡೆ ಸುಖವಿಲ್ಲ, ಮೆಲದಡೆ ರುಚಿಯಿಲ್ಲ
ಕೂಡಲಸಂಗಮದೇವಾ
ನಿಜವಿಲ್ಲದವನ ಭಕ್ತಿ ಇಂತುಟು.
ಈ ವಚನವನ್ನು ಚಿಂತನೆಗೆ ಒಳಪಡಿಸಿದ ಮಹಾಲಿಂಗಪ್ಪ ಕರನಂದಿಯವರು – ಧರ್ಮಗುರು ಬಸವಣ್ಣನವರು ಲಿಂಗಪೂಜೆ ಹೇಗಿರಬೇಕೆಂಬುದನ್ನಿಲ್ಲಿ ವರ್ಣಿಸಿದ್ದಾರೆ. ಪ್ರೀತಿ ವಿಶ್ವಾಸಗಳಿಲ್ಲದ ಪೂಜೆಯು ವ್ಯರ್ಥವಾದುದು. ಅದು ಚಿತ್ರದಲ್ಲಿನ ರೂಪ ಹಾಗೂ ಕಬ್ಬಿನಂತಿರುತ್ತದೆ. ಇದನ್ನು ಅಪ್ಪಿದರೂ ಸುಖವಿಲ್ಲ ಮೇಲಿದರೂ ರುಚಿಯಿಲ್ಲವಾಗುತ್ತದೆ. ಹೀಗೆ ನಿಜವಿಲ್ಲದವನ ಭಕ್ತಿ ವ್ಯರ್ಥವಾಗುತ್ತದೆ ಎಂದು ಹೇಳಿದ್ದಾರೆ. ಭಕ್ತಿ ಎನ್ನುವದು ಅಂತರಂಗದಿಂದ ಹೊಮ್ಮಬೇಕು ಅದಿಲ್ಲದೆ ಕೇವಲ ತೋರಿಕೆಯದಾದರೆ ಆ ಕೂಡಲಸಂಗಮದೇವನೂ ಒಪ್ಪಲಾರ ಎಂದು ಹೇಳಿದರು.
ಪ್ರೊ. ಸುರೇಶ ರಾಜನಾಳ ಅವರು ವಚನವನ್ನು ವಿವರಿಸುತ್ತ – ಹನ್ನೆರಡನೆಯ ಶತಮಾನದಲ್ಲಿ ಎಲ್ಲ ಶರಣರ ರೂಹಿನ ರೂಪವೇ ಇಷ್ಟಲಿಂಗ. ಅದರಲ್ಲಿ ಭೇದವಿಲ್ಲದ, ಯಾವ ಅಸಮಾನತೆ ಇಲ್ಲದ ನಾಡನ್ನು ಕಟ್ಟುವ ಕನಸಿತ್ತು ಅದರ ದ್ಯೋತಕವಾಗಿ ದೇಹವೇ ದೇವಾಲಯವನ್ನಾಗಿಸಿ, ತಾನು ತನ್ನನ್ನೇ ಅರಿಯಲು ಇಷ್ಟಲಿಂಗವನ್ನು ದಯಪಾಲಿಸಿದರು. ಇದನ್ನು ತನು ಮನದ ಒಲವು ಹಾಗೂ ಸ್ನೇಹದಿಂದ ಪೂಜಿಸಬೇಕು. ಅಲ್ಲದೆ ಇದು ಅನುಸಂಧಾನ ಮಾರ್ಗದಿಂದ ಸಾಧ್ಯ. ಹೀಗಿಲ್ಲದೆ ಹೋದರೆ ಇಚ್ಛಿತ ಫಲ ದೊರೆಯದು. ಅದು ಚಿತ್ರದಲ್ಲಿನ ರೂಪ ಹಾಗೂ ಚಿತ್ರದಲ್ಲಿನ ಕಬ್ಬಿನಂತೆ ಕಾಣುತ್ತದಯೇ ವಿನಃ ನಿಜವಾದ ಅನುಭಾವ ಉಂಟಾಗದು. ಇದು ನಿಜವಿಲ್ಲದವನ ಭಕ್ತಿಯಾಗುತ್ತದೆ ಎಂದು ವಿವರಿಸಿದರು.

ಪ್ರೊ. ಸಿದ್ಧಲಿಂಗಪ್ಪ ಬ. ಬರಗುಂಡಿಯವರು ಈ ವಚನವನ್ನು ಸಮಾರೋಪಗೊಳಿಸುತ್ತ – ಶರಣ ಧರ್ಮದಲ್ಲಿನ ಪೂಜೆಯು ಮಾಡು-ನೋಡು-ಕೂಡು ಎಂಬ ಜನಪ್ರಿಯ ಮಾತಿನಲ್ಲಿ ಅಡಗಿದೆ. ಇಲ್ಲಿನ ಪೂಜೆಯು ಸ್ಥಾವರದಂತೆ ಅಲ್ಲದೆ ಅಷ್ಟಾವರಣ ಸಂಪನ್ನತೆ, ಪಂಚಾಚಾರಗಳ ಶುದ್ಧ ಆಚರಣೆಯನ್ನು ಒಳಗೊಂಡಿದೆ. ಇಲ್ಲಿ ತನು ಮನ ಭಾವಗಳಿಂದ ಪೂಜೆಯು ಸಾಗಬೇಕಾಗಿದೆ. ತನು ಮನ ಭಾವಗಳ ಶುದ್ಧತೆಯೇ ಪೂಜೆ.
ಅದು ಕೇವಲ ಪತ್ರಿ ಪುಷ್ಪಗಳಿಂದ ಸಿದ್ಧಿಸದು. ಲಿಂಗ ಪೂಜೆಯು ಒಲವಿನಿಂದ ಕೂಡಿರತಕ್ಕದ್ದು, ಲಿಂಗದ ಮೇಲಿನ ಪೂಜೆಯು ನಿಷ್ಠೆಯಿಂದ ಕೂಡಿರತಕ್ಕದ್ದು.
ಅಂದರೆ ತನುವಿನ ಶುದ್ಧತೆ ಮುಖ್ಯವಾಗುತ್ತದೆ. ಅಹಂಕಾರ ಮಮಕಾರವಳಿದಾಗ ಮನವೂ ಶುದ್ಧಗೊಳ್ಳುತ್ತದೆ. ತನು ಮನದಿಂದ ಮಾಡುವ ಈ ಕಾರ್ಯಗಳೆಲ್ಲ ಒಲವಿನ ಪೂಜೆ ಹಾಗೂ ನೇಹದ ಮಾಟವಾಗುತ್ತವೆ. ಇದರಿಂದ ತಾನು ತಾನಾಗುತ್ತಾನೆ. ಇದಿಲ್ಲದೆ ಕೇವಲ ಡಾಂಭಿಕವಾಗಿ ಪೂಜೆ ಮಾಡುವುದು ಯಾಂತ್ರಿಕವಾಗುತ್ತದೆ. ಇದನ್ನೆ ಬಸವಣ್ಣನವರು ಸೂಕ್ಷ್ಮವಾಗಿ ಟೀಕಿಸುತ್ತಾರೆ.

ಚಿತ್ರಪಟದಲ್ಲಿನ ರೂಪಕ್ಕೂ ಹಾಗೂ ಕಬ್ಬಿಗೂ ಹೋಲಿಸುತ್ತಾರೆ. ಚಿತ್ರದಲ್ಲಿನ ರೂಪವು ಬಹಳ ಚೆನ್ನಾಗಿದೆ. ಅದು ಮಗುವಿನ ಚಿತ್ರವೇ ಆಗಿರಬಹುದು. ಇನ್ನೊಂದು ಆಗಿರಬಹುದು. ಅದನ್ನು ಅಪ್ಪಿಕೊಳ್ಳಲು ಹೋದರೆ ಸುಖ ಸಿಕ್ಕೀತೆ? ಆ ಚಿತ್ರದಲ್ಲಿನ ಕಬ್ಬನ್ನು ಕಿತ್ತಿ ಮುರಿದು ತಿನ್ನಬೇಕೆನಿಸುತ್ತದೆ. ಅದನ್ನು ತಿಂದರೆ ರುಚಿಯಾಗುತ್ತದೆಯೆ? – ಇಲ್ಲ. ಇದನ್ನು ನಮ್ಮಿಂದಲೇ ಉತ್ತರ ಹೊರಡಿಸುತ್ತಾರೆ.
ಒಲವಿಲ್ಲದ ಪೂಜೆ, ನೇಹವಿಲ್ಲದ ಮಾಟವು ಈ ಚಿತ್ರದ ರೂಹು ಹಾಗೂ ಚಿತ್ರದಲ್ಲಿನ ಕಬ್ಬಿನಂತೆ ಇರುತ್ತದೆ. ಅಲ್ಲಿ ಸುಖವಾಗಲಿ, ರುಚಿಯಾಗಲಿ ಇಲ್ಲ. ಈ ಸುಖ-ರುಚಿಗಳು ಸಿಗಬೇಕಾಗಿದ್ದರೆ ಕರಸ್ಥಲದ ಲಿಂಗವನ್ನು ತನು ಮನ ಭಾವಗಳಿಂದ, ಪ್ರೀತಿಯಿಂದ ಕೂಡಿದ ಅನುಸಂಧಾನವನ್ನು ಮಾಡಿದರೆ ಲಿಂಗಯ್ಯನ ಸಮರಸದ ಸುಖ ಲಭ್ಯವಾಗುತ್ತದೆ. ಅದು ನಿಜವಾದ ಭಕ್ತಿಯೆಂದು ಬಸವಣ್ಣನವರು ಈ ವಚನದ ಮೂಲಕ ತಿಳಿಸಿದ್ದಾರೆ ಎಂದರು.
ವಚನ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮ, ಶರಣರ ವಚನ ಮಂಗಲದೊಂದಿಗೆ ಮುಕ್ತಾಯವಾಯಿತು. ಮಹಾಮನೆ ಜರುಗಲು ಅವಕಾಶ ಮಾಡಿಕೊಟ್ಟ ಮಹಾಮನೆಯ ಕುಟುಂಬದವರಿಗೆ ಹಾಗೂ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವರೆಲ್ಲರಿಗೂ ಕಾರ್ಯಕ್ರಮದ ನಿರೂಪಕರು ಸ್ವಾಗತಿಸಿ ಕೊನೆಯಲ್ಲಿ ಶರಣು ಸಮರ್ಪಣೆ ಗೈದರು.

ಕಾರ್ಯಕ್ರಮದಲ್ಲಿ ಪುತ್ರಪ್ಪ ಬೀಳಗಿ, ಪಾಂಡಪ್ಪ ಕಳಸಾ, ಬಸಯ್ಯ ಕಂಬಾಳಿಮಠ, ಕುಮಾರ ಅರುಟಗಿ, ರಾಚಣ್ಣ ಕೆರೂರ, ಮಹಾಲಿಂಗಪ್ಪ ಕರನಂದಿ, ಶ್ರೀದೇವಿ ಶೇಖಾ, ವಿಶಾಲಕ್ಷೀ ಗಾಳಿ, ದಾಕ್ಷಾಯಣಿ ತೆಗ್ಗಿ, ಬಸವರಾಜ ಖಂಡಿ, ಬಸವರಾಜ ಕಲ್ಯಾಣಿ, ಈರಣ್ಣ ಶಿವಪ್ಪ ಚಾರಖಾನಿ, ಗಣೇಶ ಅರುಟಗಿ, ಮಹಾಮನೆಯ ಕುಟುಂಬದ ಬಂಧುಗಳಲ್ಲದೆ ನೆರೆಹೊರೆಯವರು, ಮೊದಲಾದರು ಸೇರಿದಂತೆ ಬಸವ ಭಾಂಧವರಲ್ಲದೆ ಪಟ್ಟಣದ ಹೊರವಲಯದ ಬಸವ ಕೇಂದ್ರದ ಸದಸ್ಯರು ಪ್ರೊ. ಮಹಾದೇವಯ್ಯ ನೀಲಕಂಠಮಠ, ಡಾ. ಗೀರಿಶ ನೀಲಕಂಠಮಠ, ಪ್ರೊ. ಚಂದ್ರಶೇಖರ ಹೆಗಡೆ, ಬಸಯ್ಯ ಭಂಡಾರಿ, ಡಾ. ಸಣ್ಣವೀರಣ್ಣ ದೊಡ್ಡಮನಿ, ಜ್ಯೋತಿ ಶೇಬಿನಕಟ್ಟಿ, ಕವಿತಾ ಬರಗುಂಡಿ, ಶಿವಾನಂದ ಸಿಂದಗಿ, ಕಲಬುರ್ಗಿಯಿಂದ ಮಂಗಳೂರ ಸಿ. ಎಸ್., ಮಹೇಂದ್ರಕರ, ಬೆಂಗಳೂರಿನಿಂದ ಶಿರೂರ ಸರ್ ಮುಂತಾದವರು google meet ಮೂಲಕ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
