‘ಅಕ್ಕ ಗಂಗಾಂಬಿಕೆ, ಗುರುಬಸವ ಶ್ರೀಗಳಲ್ಲಿ ಕಾಣುತ್ತಿರುವುದು ಸ್ವಾರ್ಥ, ಮುಗ್ದತೆಯಲ್ಲ’

ಕೆ. ನೀಲಾ
ಕೆ. ನೀಲಾ

(ಆರೆಸ್ಸೆಸ್ ಉತ್ಸವಕ್ಕಾಗಿ ಹೊರಡಿಸಿರುವ ಸೇಡಂ ರಥವನ್ನು ಬೆಂಬಲಿಸಿ ಅಕ್ಕ ಗಂಗಾಂಬಿಕೆ ಮತ್ತು ಶ್ರೀ ಗುರುಬಸವ ಪಟ್ಟದ್ದೇವರು ಬಸವ ಭಕ್ತರು ಮತ್ತು ಪ್ರಗತಿಪರರಿಂದ ಚೀಮಾರಿ ಹಾಕಿಸಿಕೊಳ್ಳುತ್ತಿದ್ದಾರೆ.

ಇಂದು ಪ್ರಜಾವಾಣಿಯಲ್ಲಿ ಬಂದಿರುವ ವರದಿಯಲ್ಲಿ ಅಕ್ಕ ಗಂಗಾಂಬಿಕೆ ‘ಬಸವರಾಜ ಪಾಟೀಲ ಸೇಡಂ ಆರ್‌ಎಸ್‌ಎಸ್‌ ಬ್ಯಾನರ್‌ನಡಿ ಕಾರ್ಯಕ್ರಮ ಮಾಡುತ್ತಿಲ್ಲ. ಬಸವಣ್ಣನವರ ತತ್ವ ಪ್ರಸಾರಕ್ಕೆ ಯಾರೇ ಬಂದರೂ ಅವರಿಗೆ ಬೆಂಬಲ ಸೂಚಿಸುತ್ತೇವೆ,’ ಎಂದು ಹೇಳಿ ಸಮರ್ಥಿಸಿಕೊಂಡಿದ್ದಾರೆ.

ಸಾಮಾನ್ಯವಾಗಿ ಕರೆಗಳಿಗೆ ಉತ್ತರಿಸುವ ಗುರುಬಸವ ಪಟ್ಟದ್ದೇವರು ಈ ವಿಷಯದಲ್ಲಿ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ.

ಇಬ್ಬರೂ ಗುರುಗಳ ನಿಲುವಿಗೆ ಸೌಹಾರ್ದ ಕರ್ನಾಟಕದ ಕೆ ನೀಲಾ ಅವರ ತೀಕ್ಷ್ಣ ಪ್ರತಿಕ್ರಿಯೆ.)

ಬೀದರ್

ಅಕ್ಕ ಗಂಗಾಂಬಿಕೆಯವರ ತಿಳುವಳಿಕೆಯಲ್ಲಿಯೇ ದ್ವಂದ್ವವಿದೆ. ಮತ್ತು ತಪ್ಪು ನಂಬಿಕೆಯಿದೆ. ಶರಣರ ಚರಿತ್ರೆಯನ್ನು ತಾತ್ವಿಕ ನೆಲೆಯಲ್ಲಿ ಅಧ್ಯಯನ ಮಾಡದೇ ಇದ್ದರೆ ಮತ್ತು ಶರಣರ ಬದ್ಧತೆ ಮತ್ತು ತ್ಯಾಗದ ಬಗ್ಗೆ ಹೃದಯ ಸ್ಪಂದನೆ ಇರದೇ ಇದ್ದರೆ ಹೀಗಾಗುವುದು.

ಲಾಂಛನಕ್ಕೆ ತಕ್ಕ ನಡೆಯಿಲ್ಲ

ಶರಣ ಚಳುವಳಿಯನ್ನು ಸಮತೆಯ ನಾಡಿಗಾಗಿ ಸಮಗ್ರ ಬದಲಾವಣೆಯ ಗುರಿ ಹೊಂದಿತ್ತು ಎಂಬುದು ಗಂಗಾಂಬಿಕೆಯವರು ಮನನ ಮಾಡಿಕೊಳ್ಳಬೇಕು. ಶರಣ ಚಳುವಳಿಯ ಲಾಂಛನಗಳನ್ನು ಮಾತ್ರ ಪ್ರಧಾನವಾಗಿ ಪರಿಗಣಿಸಿದ್ದಾರೆ. ಆದರೆ ಲಾಂಛನಕ್ಕೆ ತಕ್ಕ ನಡೆ ಇಲ್ಲವೆಂದರೆ ಅವರು ವಚನಗಳನ್ನು ಸೈದ್ಧಾಂತಿಕ ನೆಲೆಯಲ್ಲಿ ಅರಿತುಕೊಂಡಿಲ್ಲ ಅಂತ ಅರ್ಥ. ಹಾಗೆ ನೋಡಿದರೆ ವಚನ ಆಶಯಗಳ ವಿರೋಧಿ ನೆಲೆಯಿಂದಲೇ ಅವರ ಕಾರ್ಯಚಟುವಟಿಕೆ ಆರಂಭಿಸಿದ್ದಾರೆ.

ವಚನಗಳಲ್ಲಿ ಎಲ್ಲಿಯೂ ಸನ್ಯಾಸತ್ವ, ಮಠ ಪೀಠಗಳ ಅಗತ್ಯವೆಂದು ಹೇಳಿಲ್ಲ. ಆದರೆ ಇವರು ಸನ್ಯಾಸಿ ಎಂದು ಘೋಷಿಸಿಕೊಂಡು, ಬಿಳಿಯುಡುಗೆ ಧರಿಸಿ (ಕಾವಿಯಂತೆ), ಮಠ-ಪೀಠದಿಂದ ಬಸವ ವಚನ ಬೋಧನೆ ಆರಂಭಿಸಿರುವರು. ಈ ಬಗ್ಗೆ ಬಹಳ ಸಾರಿ ಅವರೊಂದಿಗೆ ಮಾತಾಡಿದ್ದೇನೆ. ಇಂತಹ ಪ್ರವೃತ್ತಿಯನ್ನು ವಿಮರ್ಶಿಸಿ, ವಿಶ್ಲೇಷಿಸಿ ವೈಜ್ಞಾನಿಕ ಮತ್ತು ನೈಸರ್ಗಿಕ ನೆಲೆಯಲ್ಲಿ ಶರಣರು ಅನೇಕ ವಚನಗಳನ್ನು ಬರೆದಿರುವರು. ಇದೆಲ್ಲ ಒತ್ತಟ್ಟಿಗಿರಲಿ.

ಸ್ವಾರ್ಥದ ಸಮರ್ಥನೆ

ಮುಖ್ಯವಾಗಿ ಇವರದ್ದಾಗಲಿ ಭಾಲ್ಕಿಯ ಸ್ವಾಮಿಯವರದ್ದಾಗಲಿ ವಾದವೇನೆಂದರೆ, ‘ಎಲ್ಲಿಯೇ ಹೋದರು ವಚನಗಳನ್ನೇ ಅವುಗಳ ಸಮಾನತೆಯ ಆಶಯಗಳನ್ನೇ ಹೇಳುತ್ತೇವೆ. ಮತ್ತು ಬಸವಣ್ಣನ ಹೆಸರಿನಲ್ಲಿ ಯಾರೇ ಕಾರ್ಯಕ್ರಮ ಮಾಡಿದರೆ ತಾವದಕ್ಕೆ ಬೆಂಬಲ’ ಎಂದು.

ಹಾಲ ಹರವಿಯನ್ನು ಸಿಂಧಿ ಗಿಡದ ಬುಡದಲ್ಲಿ ತರುವುದ್ಯಾಕೆ? ಶತೃಗಳ ಷಡ್ಯಂತ್ರ ಅರಿಯದಷ್ಟು ಮುಗ್ಧರೆಂದು ನನಗೆ ಅನಿಸುವುದಿಲ್ಲ. ಅವರಿಗೆ ಇವರ ಉಪಸ್ಥಿತಿ ಮಾತ್ರ ಸಾಕು ಜನರನ್ನು ದಿಕ್ತಪ್ಪಿಸಲು. ಇಷ್ಟಕ್ಕೂ ತತ್ವ ವಿರೋಧಿ ಪಾಳಯದಿಂದ ಈಗಾಗಲೆ ವಚನ ದರ್ಶನ ಪುಸ್ತಿಕೆಯ ಮೂಲಕ ಬಹಿರಂಗ ಸಮರ ಸಾರಿದ್ದಾರೆ. ವೈದಿಕತೆಯ ಮುಂದುವರಿಕೆ ವಚನಗಳು ಎಂಬುದನ್ನು ಹೇಳುತ್ತಿರುವುದು ಬಸವರಾಜ ಪಾಟಿಲ ಸೇಡಂ ಪಾಳೆಯದವರೇ. ಅರ್ಥಾತ್ ಭಾರತೀಯ ಸಂಸ್ಕೃತಿ ಉತ್ಸವದ ರೂವಾರಿಗಳೇ. ಹೀಗಿದ್ದಾಗ ಮತ್ತಲ್ಲಿ ಹೋಗುವುದಕ್ಕಾಗಿ ಕೊಡುವ ಸಮರ್ಥನೆಯು ಅತ್ಯಂತ ಸ್ವಾರ್ಥದಿಂದ ಕೂಡಿದೆ.

ಇವರು ಶರಣರೇ?

ರಕ್ಷಣಾ ವಲಯದಲ್ಲಿ ಪ್ರಚಾರ ಪ್ರಸಿದ್ಧಿಯೊಂದಿಗೆ ಬದುಕುವ ಇರಾದೆ ಇವರದೆಂದು ಇವರ ನಿಲುವಿನಿಂದ ಸಾಬೀತಾದಂತೆ. ವಚನ ಚಳುವಳಿಯು ಸಂಘರ್ಷದ ಮೂಸೆಯಿಂದ ಅರಳಿ ಬಂದಿದೆ. ವೈದಿಕರು ಅಂದು ಹರಳಯ್ಯ ಮಧುವರಸ ದಂಪತಿಗಳ ಕಣ್ಣುಗಳನ್ನು ಕಿತ್ತಿ ಆನೆ ಕಾಲಿಗೆ ಕಟ್ಟಿ ಕಲ್ಯಾಣದ ಪಟ್ಟಣದ ತುಂಬ ಎಳೆಹೂಟೆ ಮಾಡಿದರು.

ಜಾತಿ ವ್ಯವಸ್ಥೆಯನ್ನು ಕಾಪಾಡುತ್ತಿದ್ದ ಪಾಳೇಗಾರಿ ಮನುವಾದಿ ಪುರೋಹಿತಶಾಹಿಯು ಇಷ್ಟೊಂದು ಕ್ರೌರ್ಯದ ಧಾಳಿ ನಡೆಸಿದಾಗ ಶರಣರು ಮರಣವೇ ಮಹಾನವಮಿ ಎಂದರು. ಅಳುವ ಪ್ರಭುತ್ವಕ್ಕೆ ಸವಾಲೆಸೆದರು. ಅವರ ಬಟ್ಟೆಗಳು ಹರಿದು, ಅವರ ಮೈಯ ರಕ್ತದಲ್ಲಿ ಕಲ್ಯಾಣದ ಬೀದಿಯು ಕಣ್ಣೀರಿಡುವಾಗ ಈ ವಿಪ್ಲವವನ್ನು ಬಳಸಿ ಪ್ರಚಾರ ಗಿಟ್ಟಿಸುವವರಿಗೆ ಶರಣರು ಅರ್ಥವಾಗಲು ಹೇಗೆ ಸಾಧ್ಯ?
ವಚನಗಳನ್ನು ಇನ್ನೊಮ್ಮೆ ಓದಲಿ. ಮನುಷ್ಯರಂತೆ.

Share This Article
5 Comments
  • ಆ ವಚನಾನಂದ ಕುಂಭ ಮೇಳದ ನೀರಲ್ಲಿ ಮುಳುಗಿ ಪವಿತ್ರನಾಗಿದ್ದಾನೆ…ಸನಾತನ ಆಗಿದ್ದಾನೆ. ಚಿರಾಯು ಆಗಿದ್ದಾನೆ…ಮೊದಲು ಹೆಸರನ್ನು ಕುಂಭಾನಂದ ಎಂದು ಬದಲಾಯಿಸಿಕೊಳ್ಳಲು ಹೇಳಬೇಕು….

  • ಸತ್ಯದ ಅನಾವರಣ ಮಾಡಿದ್ದಕ್ಕೆ ಶರಣು ಶರಣಾರ್ಥಿ.

  • ಕೆ ನಿಲಾ ಅಕ್ಕನವರ ಪ್ರಶ್ನೇ ಗಳು & ವ್ಯಾಖ್ಯಾನಗಳು ಸರಿಯಾಗಿವೆ .

  • ಅನುಕೂಲಸಿಂಧು ವಾತಾವರಣ ನಿರ್ಮಿಸಿಕೊಂಡು, ಕೇವಲ ಅಗ್ಗದ ಪ್ರಚಾರಕ್ಕಾಗಿ ಓಡಾಡುವವರಿಗೆ ಕ್ಷಮೆಯಿಲ್ಲ.

Leave a Reply

Your email address will not be published. Required fields are marked *

ಕೆ ನೀಲಾ ಅವರು ಕಲಬುರಗಿಯಲ್ಲಿರುವ ಚಿಂತಕಿ, ಹೋರಾಟಗಾರ್ತಿ