ಹುಲಸೂರು :
ವಿಶ್ವದ ಮೊದಲ ಮಹಿಳಾ ತತ್ವಜ್ಞಾನಿ ಎಂದರೆ ಅಕ್ಕಮಹಾದೇವಿ. ಮೊದಲ ಕವಿಯತ್ರಿಯು ಅಕ್ಕನೆ. ಅಕ್ಕನ ಆದರ್ಶಗಳು ಬದುಕಿಗೆ ದಾರಿ ದೀಪ. ಮಹಾದೇವಿ ಅಕ್ಕನ 400ಕ್ಕೂ ಅಧಿಕ ವಚನಗಳು ಲಭ್ಯವಿದ್ದು ಸ್ವರ ವಚನ, ಕೊರವಂಜಿ ಸಾಹಿತ್ಯ, ಸೃಷ್ಟಿಯ ವಚನಗಳಂತಹ ಅಮೂಲ್ಯ ಸಾಹಿತ್ಯವನ್ನು ಆಧ್ಯಾತ್ಮದ ಜಗತ್ತಿಗೆ ನೀಡಿದ್ದಾರೆ ಎಂದು ತಜ್ಞವೈದ್ಯರಾದ ಡಾ. ವಚನ ಶ್ರುತಿ ಪುರಾಣಿಕಮಠ ಅವರು ನುಡಿದರು.
ಅವರು ಲಿಂಗಾಯತ ಮಹಾಮಠ ಗೋರ್ಟದಲ್ಲಿ ಜರುಗಿದ ಜಗನ್ಮಾತೆ ಅಕ್ಕ ಮಹಾದೇವಿ ಜಯಂತ್ಯುತ್ಸವದಲ್ಲಿ ಮುಖ್ಯ ಅನುಭವ ನೀಡಿದರು.
ಮುಂದುವರೆದು ಅಕ್ಕನ ವಚನಗಳಲ್ಲಿ ಸರ್ವ ಸಮಸ್ಯೆಗಳಿಗೂ ಪರಿಹಾರವಿದೆ. ಆರೋಗ್ಯವೇ ಭಾಗ್ಯವಾಗಿದ್ದು ಆರೋಗ್ಯದ ಕುರಿತಾಗಿಯೂ ವೈದ್ಯ ಜಗತ್ತು ಆಶ್ಚರ್ಯ ಪಡುವಂತೆ ಅಕ್ಕ ವಿವರಿಸಿದ್ದಾರೆ.
ಆರೋಗ್ಯವಂತರಾಗಿ ಇರಬೇಕಾದರೆ ನಾವು ಉಣ್ಣುವ ಆಹಾರ ಕುರಿತು ಜಾಗೃತಿ ವಹಿಸಬೇಕು. ‘ಆಹಾರವ ಕಿರಿದು ಮಾಡಿರಣ್ಣ’ ಎಂಬ ವಚನದಲ್ಲಿ ಅತೀ ಆಹಾರ ಸೇವನೆಯಿಂದ ಆದಿ ವ್ಯಾದಿಗಳಿಗೆ ತುತ್ತಾಗ ಬೇಕಾಗುತ್ತದೆ. ನಮ್ಮ ಆಹಾರ ಕ್ರಮದಲ್ಲಿ ಹಣ್ಣು ತರಕಾರಿ ಸೇರಿದಂತೆ ಘನ ಪದಾರ್ಥಗಳು ಅರ್ಧಭಾಗ, ದ್ರವ ಪದಾರ್ಥಗಳು ಗಿರ್ದಭಾಗ ಮತ್ತು ಉಳಿದ ಗಿರ್ದಭಾಗ ಖಾಲಿಯಾಗಿಡಬೇಕು. ಒಂದು ಹೊತ್ತು ಉಂಡವ ಯೋಗಿ, ಎರಡು ಹೊತ್ತು ಉಂಡವ ಭೋಗಿ, ಮೂರು ಹೊತ್ತು ಉಂಡವ ರೋಗಿ, ನಾಲ್ಕು ಹೊತ್ತು ಉಂಡವನಿಗೆ ಎತ್ಕೊಂಡ ಹೋಗಿ ಎಂಬುದುನರಿತು ಉಣ್ಣಬೇಕು ಎಂದು ವಿವರಿಸುತ್ತ ಅನೇಕ ಮನೆಮದ್ದುಗಳ ಕುರಿತು ಹೇಳಿದರು.
ಬಸವಜ್ಯೋತಿ ಬೆಳಗಿಸಿ ಜಯಂತ್ಯುತ್ಸವ ಉದ್ಘಾಟಿಸಿದ ಹುಲುಸೂರು ತಾಲೂಕು ಬಸವ ಕೇಂದ್ರದ ಅಧ್ಯಕ್ಷ ಆಕಾಶ ಖಂಡಾಳೆ ಅವರು, ಅಕ್ಕ ಅನ್ನಪೂರ್ಣ ತಾಯಿಯವರ ಹೆಜ್ಜೆಯಲ್ಲಿ ಹೆಜ್ಜೆ ಹಾಕುತ್ತಿರುವ ಪ್ರಭುದೇವರು ಬಸವ ತತ್ವ ಪ್ರಸಾರವನ್ನು ವ್ಯವಸ್ಥಿತವಾಗಿ ಮಾಡುತ್ತಿರುವ ಇಂದಿನ ಯುವ ಸ್ವಾಮೀಜಿಯಾಗಿದ್ದಾರೆಂದು ಬಣ್ಣಿಸಿದರು.
ಮುಖ್ಯ ಅತಿಥಿಗಳಾಗಿದ್ದ ಪುಣೆಯ ಯೋಗ ಶಿಕ್ಷಕಿ ಪ್ರಿಯಾಂಕ ಬಿರಾದಾರ ಅವರು ಮಾತನಾಡಿ, ಎಲ್ಲಾ ಯೋಗಕ್ಕಿಂತ ಶರಣರ ಶಿವಯೋಗವೇ ಮೇಲೆಂದರು.

ಸಮ್ಮುಖವಹಿಸಿದ್ದ ಬಸವತತ್ವ ಪ್ರಸಾರಕರಾದ ಬಸವದೇವರು ಅಕ್ಕನ ಜೀವನ ವಿವರಿಸಿದರೆ, ಅನಿಲ ಮಹಾರಾಜರು ಕಲಖೇರಾ ಅವರು ಅಕ್ಕನ ಆದರ್ಶ ಮೈಗೂಡಿಸಿಕೊಳ್ಳಬೇಕು ಎಂದು ಕರೆಯನಿತ್ತರು.
ಸಾನಿಧ್ಯ ವಹಿಸಿದ್ದ ಪ್ರಭುದೇವ ಮಹಾಸ್ವಾಮೀಜಿ, ಅಕ್ಕನ ಜೀವನ ಮತ್ತು ಆದರ್ಶಗಳನ್ನು ಜನಮನದಲ್ಲಿ ಬಿತ್ತಬೇಕೆಂದು ಪ್ರತಿವರ್ಷವೂ ಶ್ರೀಮಠದಿಂದ ವಾರ್ಷಿಕ ಕಾರ್ಯಕ್ರಮವಾಗಿ ಅಕ್ಕನ ಜಯಂತ್ಯುತ್ಸವ ಆಚರಿಸಲಾಗುತ್ತಿದೆ. 770 ಶರಣ ಶರಣೆಯರಿಂದ ಅಕ್ಕನ ಯೋಗಾಂಗ ತ್ರಿವಿಧಿ ಸಾಮೂಹಿಕ ಪಠಣ ಇದರ ಮುಖ್ಯ ಭಾಗವಾಗಿದೆ ಎಂದು ನುಡಿದರು.
ಪರುಷ ಕಟ್ಟೆ ಚನ್ನಬಸವಣ್ಣ, ಗುರುಶ್ರೀ ಅವರು ವಚನ ಗಾಯನ ಮಾಡಿದರು.
ಪ್ರಾರಂಭದಲ್ಲಿ ಬೀದರಿನ ಲಾವಣ್ಯ ಹಂಗರಗಿ ಅವರು ಷಟಸ್ಥಲ ಧ್ವಜಾರೋಹಣ ಮಾಡಿದರು.
ಲಾವಣ್ಯ ಮಾತಾಜಿ, ನೀಲಮ್ಮನ ಬಳಗದ ರೂಪ ಬಿರಾದರ, ಮೀನಾಕ್ಷಿ ಧರ್ಮಣ್ಣವರ ಉಚ್ಚಾ, ಲಿಂಗಾಯತ ಸೇವಾದಳದ ಅಭಿಷೇಕ ಮಠಪತಿ, ಪ್ರೇಮ ರಾಜಭವನ, ಸುಪ್ರೀತ ಪತಂಗೆ, ಹಾಲಹಳ್ಳಿಯ ಸದಾನಂದ ಬಿರಾದರ ಇದ್ದರು.
ಬಸವರಾಜ ದುಗುಲಗುಂಡೆ ಅಧ್ಯಕ್ಷತೆ ವಹಿಸಿದ್ದರು. ಎಂಟು ದಿನಗಳ ಕಾಲ ಬಸವ ದರ್ಶನ ಪ್ರವಚನ ಗೈದ ಶಿವಕುಮಾರ ಮಾಶೆಟ್ಟಿ ಅವರಿಗೆ ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ನೀಲಮ್ಮನ ಬಳಗದ ಸಹೋದರಿಯರು ಅಕ್ಕನ ತೊಟ್ಟಿಲು ಇಟ್ಟು ಸಂಭ್ರಮಿಸಿದರು. ಅಕ್ಕನ ಜೋಗುಳ ಹಾಡಿ – ಪಾಡಿ ಭಕ್ತಿಭಾವ ಸಮರ್ಪಿಸಿ ನಲಿದಾಡಿದರು. ಸ್ವಾಗತ ಶಿವರಾಜ ಕನಕಟ್ಟೆ, ನಿರೂಪಣೆ ಪ್ರಜ್ವಲ ಪತಂಗೆ ಮಾಡಿದರು.
