ಅಕ್ಕನ ವಚನಗಳು ಅನುಭಾವದ ಮೇರುಗಿರಿ
ಬಸವಕಲ್ಯಾಣ:
ಶರಣೆ ಅಕ್ಕಮಹಾದೇವಿ ಅವರ ವಚನಗಳು ಅನುಭಾವದ ಮೇರುಗಿರಿ. ಅಕ್ಕ ಸ್ತ್ರೀಕುಲಕ್ಕೆ ಭರವಸೆಯ ಬೆಳಕು. ಭಕ್ತಿ ವಿರಕ್ತಿ ಜ್ಞಾನಗಳು ಮುಪ್ಪುರಿಗೊಂಡ ಭವ್ಯ ದಿವ್ಯ ಶಕ್ತಿ ಸ್ವರೂಪಿಣಿ ಎಂದು ಹಂದಿಗುಂದ ಸಿದ್ದೇಶ್ವರ ಮಠದ ಪೂಜ್ಯ ಶಿವಾನಂದ ಮಹಾಸ್ವಾಮಿಗಳು ನುಡಿದರು.
ಅವರು ಅಕ್ಕಮಹಾದೇವಿ ಅನುಭಾವ ಪೀಠದ ವತಿಯಿಂದ ಇಲ್ಲಿನ ಬಂದವರ ಓಣಿ ಅಕ್ಕಮಹಾದೇವಿ ಗವಿಯಲ್ಲಿ ಜರುಗಿದ ಅಕ್ಕಮಹಾದೇವಿ ಜಯಂತ್ಯುತ್ಸವದಲ್ಲಿ ಮುಖ್ಯ ಅನುಭಾವ ನೀಡಿದರು.

ಚೆನ್ನಬಸವಣ್ಣನವರಂತು ಅಕ್ಕನ ವಚನಗಳಿಗೆ ಸರಿಸಾಟಿಯಿಲ್ಲವೆಂದು ಹೇಳುತ್ತಾ, ಪ್ರಭುದೇವರ ಐದು ವಚನಕ್ಕೆ ಮಹಾದೇವಿಯಕ್ಕನ ಒಂದು ವಚನ ನಿರ್ವಚನ ಕಾಣಾ ಕೂಡಲಸಂಗಮದೇವಾ ಎಂದು ಹೇಳಿರುವುದು ಅಕ್ಕನ ವಚನದ ಮಹತ್ವ ತಿಳಿಸುತ್ತದೆ.
ಅವರ ವಚನದಂತೆ ಲೋಕದಲ್ಲಿ ಹುಟ್ಟಿದ ಬಳಿಕ ಸ್ತುತಿ ನಿಂದೆಗಳು ಬಂದರೆ ಮನದಲ್ಲಿ ಕೋಪವ ತಾಳದೆ ಸಮಾಧಾನಿಯಾಗಿರಬೇಕು. ಎಂಬ ನಿಲುವು ಮಹತ್ವದ್ದಾಗಿದೆ. ಆತ್ಮವಿಶ್ವಾಸ ಬಂದಾಗ ಮಾತ್ರ ದೇವರ ಜೊತೆ ಅನುಸಂಧಾನವಾಗುತ್ತದೆ.
ಶರಣ ಸಂಸ್ಕೃತಿಯ ಪುನರುತ್ಥಾನ ಕಲ್ಯಾಣವೆಂದು ಅಕ್ಕ ಗೌರವಿಸಿದರು ಎಂದು ಶಿವಾನಂದ ಶ್ರೀ ನುಡಿದರು. ಜೇವರ್ಗಿಯ ಜಗದ್ಗುರು ಮರುಳ ಶಂಕರದೇವ ಗುರುಪೀಠದ ಪೂಜ್ಯ ಸಿದ್ಧಬಸವ ಕಬೀರ ಸ್ವಾಮಿಗಳು ಕಾರ್ಯಕ್ರಮ ಉದ್ಘಾಟಿಸಿ, ಬಸವಕಲ್ಯಾಣ ಕೇವಲ ಒಂದು ಭೂ ಪ್ರದೇಶವಲ್ಲ. ಇದು ಒಳಗೂ ಹೊರಗೂ ಒಂದಾದವರ ಕಲ್ಯಾಣ. ಇಲ್ಲಿಗೆ ಬಂದರೆ ಜೀವನವೇ ಕಲ್ಯಾಣವಾಗುತ್ತದೆ.

ನಮ್ಮಲ್ಲಿಯ ವಿಕಾರ ಮನೋಭಾವಗಳನ್ನು ತೆಗೆದು ಹಾಕಬೇಕು. ಆಸೆಯೆಂಬುದು ಭವದ ಬೀಜ, ನಿರಾಸೆಯೆಂಬುದು ನಿತ್ಯ ಮುಕ್ತಿ. ಜಗತ್ತಿನ ಸರ್ವ ಸಂಗ ಪರಿತ್ಯಾಗಿ ಅಕ್ಕ. ಮಹಿಳೆಯರ ಹೋರಾಟಕ್ಕೆ ಅಕ್ಕನ ವಚನಗಳೇ ಸ್ಪೂರ್ತಿ. ಅಕ್ಕನ ಬದುಕು ಅರ್ಥಮಾಡಿಕೊಂಡು ಜೀವನದೊಳಗೆ ಪೈಪೋಟಿ ಮಾಡಬೇಕು ಎಂದರು.
ನೇತೃತ್ವ ವಹಿಸಿದ್ದ ಪೂಜ್ಯ ಡಾ. ಗಂಗಾಂಬಿಕಾ ಅಕ್ಕ ಮಾತನಾಡಿ, ಪೃಥ್ವಿಯ ಮೇಲೆ ಅಕ್ಕನ ಘನ ವ್ಯಕ್ತಿತ್ವ ಸಾಕ್ಷಾತ್ ಪರಮಾತ್ಮನ ಅಭಿವ್ಯಕ್ತಿಯಾಗಿದೆ. ಅಕ್ಕನ ನಂತರ ಅಧ್ಯಾತ್ಮದಲ್ಲಿ ನವ ವೈಜ್ಞಾನಿಕ ನವಯುಗ ಆರಂಭವಾಗಿದೆ. ಹೆಚ್ಚುತ್ತಿರುವ ಸ್ತ್ರೀ ಶೋಷಣೆ, ಅತ್ಯಾಚಾರಗಳು ದೂರವಾಗಿ ಸ್ತ್ರೀ ಅರ್ಧರಾತ್ರಿಯಲ್ಲಿ ನಿರ್ಭಯದಿಂದ ಓಡಾಡುವ ವಾತಾವರಣ ನಿರ್ಮಾಣವಾಗಲು ಸ್ತ್ರೀ ಕುಲಕ್ಕೆ ಅಕ್ಕನ ವಚನಗಳು ಧೈರ್ಯ ತುಂಬುತ್ತವೆ ಎಂದರು.
ಸಾನಿಧ್ಯ ವಹಿಸಿದ ಅನುಭವ ಮಂಟಪದ ಅಧ್ಯಕ್ಷರಾದ ಪೂಜ್ಯ ಬಸವಲಿಂಗ ಪಟ್ಟದ್ದೇವರು ಆಶೀರ್ವಚನ ನೀಡಿ, ೧೨ನೇ ಶತಮಾನದಲ್ಲಿ ಕಲ್ಯಾಣಕ್ಕೆ ಬರುವ ಶರಣರಿಗೆ ಬಂದವರ ಓಣಿ ಆಶ್ರಯತಾಣವಾಗಿತ್ತು. ಇಲ್ಲಿನ ಕಣ-ಕಣಗಳಲ್ಲಿ ದೈವಿಶಕ್ತಿ ಅಡಗಿದೆ. ಅಕ್ಕಮಹಾದೇವಿಯವರ ಚರಿತ್ರೆ ಉತ್ತರ ಭಾರತದ ರಾಜ್ಯಗಳ ಪಠ್ಯಪುಸ್ತಕಗಳಲ್ಲಿ ಅಳವಡಿಸಬೇಕು ಅಂದಾಗ ಅಕ್ಕನ ಚರಿತ್ರೆ ಅವರಿಗೂ ಗೊತ್ತಾಗುತ್ತದೆ. ಅಕ್ಕನಂತೆ ಜೀವನದಲ್ಲಿ ಗುರಿ ಮತ್ತು ಸ್ಪಷ್ಟತೆಯಿರಬೇಕು ನಿಜವನರಿದು ನಿಶ್ಚಿಂತನಾಗಿರಬೇಕು ಎಂದು ನುಡಿದರು.
ಪೂಜ್ಯ ಸತ್ಯಕ್ಕತಾಯಿ ಪ್ರಾಸ್ತಾವಿಕವಾಗಿ ಮಾತನಾಡಿ, ಅಕ್ಕನ ಜೀವನ ಭಕ್ತಿ ತ್ಯಾಗದ ಹಾಗೂ ಆತ್ಮಸಾಕ್ಷತ್ಕಾರದ ಪ್ರತೀಕವಾಗಿದೆ. ಅಂತರಂಗದ ಅಂಧಕಾರ, ಆಲಸ್ಯ ಹೋಗಲಾಡಿಸಿಕೊಂಡು ಜಾಗೃತರಾಗಬೇಕು. ಕಾಯಕದಲ್ಲಿ ನಿಷ್ಠೆ, ಆಚಾರ– ವಿಚಾರ ಅಳವಡಿಸಿಕೊಂಡು ಮನೆ ಮನಗಳಲ್ಲಿ ಸಂಸ್ಕಾರ ನೀಡಬೇಕು. ಶರಣರು ನಡೆದ ದಾರಿಯಲ್ಲಿ ನಡೆದು ಅವರಂತೆ ದಿವ್ಯಪಥ ಕಂಡುಕೊಳ್ಳಬೇಕು ಎಂದು ಆಶಯ ವ್ಯಕ್ತಪಡಿಸಿದರು.

ಶ್ರೀ ಬಸವೇಶ್ವರ ದೇವಸ್ಥಾನ ಪಂಚಕಮಿಟಿ ಉಪಾಧ್ಯಕ್ಷ ಮಲ್ಲಿಕಾರ್ಜುನ ಕುರಕೋಟೆ ಧ್ವಜಾರೋಣ ಮಾಡಿದರು. ಪೂಜ್ಯ ಗಾಯತ್ರಿತಾಯಿ, ಪೂಜ್ಯ ಸತ್ಯದೇವಿತಾಯಿ, ಪೂಜ್ಯ ಸುಗುಣತಾಯಿ, ಮಾತೆ ಕಲ್ಯಾಣಮ್ಮ, ರವೀಂದ್ರ ಕೋಳಕುರ ಉಪಸ್ಥಿತರಿದ್ದರು.
ರಂಜನಾ ಭುಶೆಟ್ಟಿ, ಮಂಜುನಾಥ ಹೇಮಶೆಟ್ಟಿ ವಚನ ಸಂಗೀತ ನಡೆಸಿಕೊಟ್ಟರು, ಕದಳಿ ವೇದಿಕೆ ಅಧ್ಯಕ್ಷೆ ನಿರ್ಮಲಾ ಶಿವಣಕರ್ ಸ್ವಾಗತಿಸಿದರು. ಸಂಗಮೇಶ ತೋಗರಖೇಡೆ ನಿರೂಪಿಸಿದರು.
ಇದಕ್ಕೂ ಮೊದಲು ಬೆಳಿಗ್ಗೆ ಪೂಜ್ಯ ಡಾ.ಗಂಗಾಂಬಿಕಾ ಅಕ್ಕನವರ ನೇತೃತ್ವದಲ್ಲಿ ಸಾಮೂಹಿಕ ಇಷ್ಟಲಿಂಗಪೂಜೆ, ಶರಣೆಯರಿಂದ ಅಕ್ಕನ ತೊಟ್ಟಿಲು ಕಾರ್ಯಕ್ರಮ ಹಾಗೂ ಮುಖ್ಯದ್ವಾರದಿಂದ ಗವಿಯವರೆಗೆ ಪೂಜ್ಯರ ಸಾನಿಧ್ಯದಲ್ಲಿ ಅಕ್ಕನ ಭಾವಚಿತ್ರದ ಮೆರವಣಿಗೆ ನಡೆಯಿತು. ಮೆರವಣಿಗೆಯಲ್ಲಿ ಅಕ್ಕನ ವೇಷಧಾರಿ ಮಕ್ಕಳು, ನೂರಾರು ಶರಣ ಶರಣೆಯರು ತಲೆಯ ಮೆಲೆ ವಚನಗಳ ಗ್ರಂಥಗಳು ಹೊತ್ತು, ವಚನ ಗಾಯನಕ್ಕೆ ಹೆಜ್ಜೆ ಹಾಕಿದ್ದು ವಿಶೇಷವಾಗಿ ಗಮನ ಸೆಳೆಯಿತು.
