ಕಲಬುರ್ಗಿ
12ನೇ ಶತಮಾನದ ಶರಣ ಪರಂಪರೆಯ ಮಹಾನ್ ದಾರ್ಶನಿಕರಾದ ಅಕ್ಕಮಹಾದೇವಿಯವರ ಜೀವನ, ವೈರಾಗ್ಯ, ತತ್ವಚಿಂತನೆ ಮತ್ತು ಆತ್ಮಗೌರವವನ್ನು ಕೇಂದ್ರವಿಟ್ಟುಕೊಂಡು ಜಗನ್ಮಾತೆ ಅಕ್ಕಮಹಾದೇವಿ ಚಿತ್ರವನ್ನು ರೂಪಿಸಲಾಗಿದೆ.
ಶುದ್ಧ ಆಧ್ಯಾತ್ಮಿಕ ಸಾಧನೆ, ನಿಷ್ಠುರ ನಿಲುವು ಮತ್ತು ವೈಚಾರಿಕ ಪ್ರಭಾವದಿಂದ ಹಿರಿಯ ಶರಣರಿಂದಲೂ “ಅಕ್ಕ” ಎಂಬ ಗೌರವಪದ ಪಡೆದ ಅಕ್ಕಮಹಾದೇವಿಯವರ ವ್ಯಕ್ತಿತ್ವ ಈ ಚಿತ್ರದ ಮೂಲ ಶಕ್ತಿ.
ಬುದ್ಧ, ಮಹಾವೀರ, ಬಸವಣ್ಣ, ಅಲ್ಲಮಪ್ರಭುಗಳ ಸಾಲಿನಲ್ಲಿ ನಿಲ್ಲಬಹುದಾದ ದಾರ್ಶನಿಕೆಯಾಗಿರುವ ಅಕ್ಕಮಹಾದೇವಿಯವರ ಬದುಕನ್ನು ತೆರೆಗೆ ತರಲು ಮಾಡಿದ ಪ್ರಯತ್ನ ಶ್ಲಾಘನೀಯ. ಆದರೆ ಇಂತಹ ಘನವಾದ ವಿಷಯವನ್ನು ಪರಿಣಾಮಕಾರಿಯಾಗಿ ನಿರೂಪಿಸುವಲ್ಲಿ ಚಿತ್ರ ಸಫಲವಾಗಿಲ್ಲ ಎನ್ನುವುದು ಸ್ಪಷ್ಟ.

ಚಿತ್ರ ಪೌರಾಣಿಕ ಶಿವ–ಪಾರ್ವತಿ ಪ್ರವೇಶದೊಂದಿಗೆ ಆರಂಭವಾಗುತ್ತದೆ. ಪಾರ್ವತಿಯ ಅವತಾರಿಣಿಯಾಗಿ ಅಕ್ಕಮಹಾದೇವಿಯನ್ನು ತೋರಿಸಿರುವ ಕಲ್ಪನೆಗೆ ಶರಣತತ್ವದ ಐತಿಹಾಸಿಕ ಅಂಶಗಳನ್ನು ಸೇರಿಸಿ ಗೊಂದಲ ಉಂಟುಮಾಡುತ್ತದೆ.
ಎಲ್ಲ ಪ್ರೇಕ್ಷಕರನ್ನೂ ಸೆಳೆಯಲು ಹಿಂದೂ-ಶೈವ–ವೀರಶೈವ–ಲಿಂಗಾಯತಗಳ ನಡುವೆ ಸಮತೋಲನ ಕಾಯ್ದುಕೊಳ್ಳಲು ಪ್ರಯತ್ನಿಸಿರುವುದು ಸಮಸ್ಯೆಯಾಗಿದೆ. “ವೀರಶೈವ ಧರ್ಮ” ಎಂಬ ಪದಪ್ರಯೋಗವನ್ನು ಅಕ್ಕಮಹಾದೇವಿಯವರ ಕಾಲಕ್ಕೇ ಸೇರಿಸುವುದು ಅಸಂಬದ್ಧ. ಒಟ್ಟಾರೆ, ಅಕ್ಕಮಹಾದೇವಿಯವರ ತಾತ್ವಿಕ ಆಳ, ವೈಚಾರಿಕ ತೀವ್ರತೆ ಇನ್ನೂ ಗಟ್ಟಿಯಾಗಿ ಮೂಡಿಬರಬಹುದಿತ್ತು. ಶರಣ ಸಿದ್ಧಾಂತದ ಕುರಿತು ಇನ್ನಷ್ಟು ಆಳವಾದ ಅಧ್ಯಯನ ಮತ್ತು ವಾಸ್ತವಾಧಾರಿತ ನಿರೂಪಣೆ ಅಗತ್ಯವಾಗಿತ್ತು.
ಸುಲಕ್ಷ ಕೈರಾ ಅವರು ಅಕ್ಕಮಹಾದೇವಿಯ ಪಾತ್ರವನ್ನು ಸರಳತೆ ಮತ್ತು ಭಕ್ತಿಭಾವದೊಂದಿಗೆ ನಿರ್ವಹಿಸಿದ್ದಾರೆ.
ಸುಚೇಂದ್ರ ಪ್ರಸಾದ್ (ಅಲ್ಲಮಪ್ರಭು) ಪಾತ್ರಕ್ಕೆ ಘನತೆ ಮತ್ತು ತೂಕ ನೀಡಿದ್ದಾರೆ. ತಬಲಾ ನಾಣಿ ಸಹಜ ಅಭಿನಯದಿಂದ ಗಮನ ಸೆಳೆಯುತ್ತಾರೆ. ಬಹುತೇಕ ಸ್ಥಳೀಯ ಕಲಾವಿದರನ್ನು ಚಿತ್ರಕ್ಕೆ ಆಯ್ಕೆ ಮಾಡಿದ್ದು ವಿಶೇಷ.

ನಿರ್ದೇಶಕ–ನಿರ್ಮಾಪಕರಾದ ವಿಷ್ಣುಕಾಂತ ಬಿ.ಜೆ. ಅವರು ಕೌಶಿಕನ ಮತ್ತು ಬಸವಣ್ಣನವರ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ ರಾಜ ಕೌಶಿಕ ಪಾತ್ರದಲ್ಲಿ ಅಗತ್ಯವಾದ ರಾಜಗಾಂಭೀರ್ಯ, ಕಾಠಿಣ್ಯತೆ ಮತ್ತು ಪ್ರೌಢಿಮೆ ಅಭಿನಯದಲ್ಲಿ ಕೊರತೆಯಾಗಿ, ಕೆಲವೊಮ್ಮೆ ರಂಗಭೂಮಿ ಶೈಲಿಯಂತೆ ಕಾಣುತ್ತದೆ.
ಎರಡೆರಡು ಪಾತ್ರಗಳಲ್ಲಿ ಒಬ್ಬ ನಟರೇ ವಿವಿಧ ಕಡೆ ಕಾಣಿಸಿಕೊಳ್ಳುವುದು ಪ್ರೇಕ್ಷಕರಿಗೆ ಎದ್ದು ಕಂಡು ಗಮನಭಂಗ ಉಂಟುಮಾಡುತ್ತದೆ. ಅಕ್ಕಮಹಾದೇವಿಯವರ ಕಲ್ಯಾಣದ ಪ್ರವೇಶ ಹಾಗೂ ಶರಣರ ಸಂವಾದದ ದೃಶ್ಯಗಳು ಮಾತ್ರ ಮನೋಜ್ಞವಾಗಿ ಮೂಡಿಬಂದಿವೆ.
ಚಿತ್ರವು ಪೌರಾಣಿಕ ಭಕ್ತಿಪ್ರಧಾನವೋ, ಶರಣ ಸಿದ್ಧಾಂತ ಪ್ರಧಾನವೋ ಎಂಬ ಸ್ಪಷ್ಟ ನಿರ್ಧಾರಕ್ಕೆ ಬರದೆ ಗೊಂದಲದಲ್ಲಿದೆ. ಇದರಿಂದ ಅನೇಕಡೆ ಕಥನದ ದಿಕ್ಕು ತಪ್ಪಿದೆ.

ಚಿತ್ರದಲ್ಲಿ ಇನ್ನೂ ಅನೇಕ ಸಮಸ್ಯೆಗಳಿವೆ. ಅಕ್ಕಮಹಾದೇವಿಯವರೊಂದಿಗೆ ಕೌಶಿಕನ ಅನವಶ್ಯಕ ಡುಯೆಟ್ ಹಾಡಿನಿಂದ ಪಾತ್ರದ ವೈರಾಗ್ಯದ ನಿರೂಪಣೆಗೆ ಧಕ್ಕೆಯಾಗಿದೆ. ಇಂದಿನ ದಿನಗಳಲ್ಲಿ ಬಳಕೆಯಲ್ಲಿರುವ ವಸ್ತುಗಳು ಕೆಲವು ದೃಶ್ಯಗಳಲ್ಲಿ ಕಾಣಿಸಿಕೊಳ್ಳುವುದು ಚಿತ್ರದಲ್ಲಿ ಕಾಲಭ್ರಮೆಯೂ ಉಂಟುಮಾಡುತ್ತದೆ.
ಚಿತ್ರದ ದೊಡ್ಡ ಶಕ್ತಿ ಸಂಗೀತ. ಬಸವಣ್ಣ ಹಾಗೂ ಅಕ್ಕಮಹಾದೇವಿಯವರ ವಚನಗಳನ್ನು ಆಧರಿಸಿ ರಚಿಸಲಾದ 3 ಹಾಡುಗಳು ಭಕ್ತಿಭಾವವನ್ನು ಉಂಟುಮಾಡುತ್ತವೆ.

ಬೀದರ್ ಮತ್ತು ಶ್ರೀಶೈಲಂ ಪ್ರದೇಶಗಳ ನೈಸರ್ಗಿಕ ಸೌಂದರ್ಯ ಚಿತ್ರಕ್ಕೆ ಐತಿಹಾಸಿಕ–ಆಧ್ಯಾತ್ಮಿಕ ಹಿನ್ನಲೆಯಲ್ಲಿ ಸಹಕಾರಿಯಾಗಿದೆ.
ಒಟ್ಟಾರೆ, ಜಗನ್ಮಾತೆ ಅಕ್ಕಮಹಾದೇವಿ ಒಂದು ಪ್ರಾಮಾಣಿಕ ಪ್ರಯತ್ನ. ಆದರೆ ಇಂತಹ ಘನವಾದ ವಿಷಯದ ಚಲನಚಿತ್ರ ರೂಪಾಂತರ ಇನ್ನೂ ಗಟ್ಟಿ, ಸ್ಪಷ್ಟ ಮತ್ತು ತಾತ್ವಿಕವಾಗಿ ಸಮೃದ್ಧವಾಗಬೇಕಿತ್ತು. (ರೇಟಿಂಗ್:2.5/5)


ಅಕ್ಕಮಹಾದೇವಿ ಪೌರಾಣಿಕ ವ್ಯಕ್ತಿ ಅಲ್ಲ, ಇದು ಪುರಾಣದ ಕಥೆಯಲ್ಲ.ಚರಿತ್ರೆಗೆ ಅಪಚಾರ ವಾಗಿದೆ. ಆದರೂ ನಿರ್ಮಾಪಕ ಹಾಗೂ ನಿರ್ದೇಶಕರು ಅದ ವಿಷ್ಟುಕಾಂತರ ಪರಿಶ್ರಮಕ್ಕೆ ನಾವೆಲ್ಲ ಮೆಚ್ಚಾಲೇಬೇಕು.
ಅಕ್ಕ ಮಹಾದೇವಿಯವರ ಜನನದ ಬಗ್ಗೆ ಆ ಸಮಯದಲ್ಲಿದ್ದ ಪ್ರಚಲಿತ ಕತೆ/ ಪುರಾಣ/ಇತ್ಯಾದಿ ಆಕರಗಳಲ್ಲಿ ಇದ್ದದ್ದನ್ನೇ ಅಳವಡಿಸಿದ್ದಾರೆ. ಇಂದು ಅಕ್ಕ ಶಿಕ್ಷಿತ/ಅಶಿಕ್ಷಿತ ಜನರ ಮನದಲ್ಲಿ ಪೂಜ್ಯ ಭಾವನೆಯಿಂದ ನೆಲೆಸಿರಬೇಕಾದರೆ 3-4 ದಶಕಗಳ ಹಿಂದೆ ಹಳ್ಳಿ ಹಳ್ಳಿಗಳಲ್ಲಿ ಅಕ್ಕನ ಬಳಗ ಕಟ್ಟಿಕೊಂಡು ವಾರಕ್ಕೊಂದು ದಿನ ಅಕ್ಕ ನನ್ನು ಸ್ತುತಿಸಿ ಭಕ್ತಿ ಭಾವದಿಂದ ಅಕ್ಕಂದಿರು, ತಾಯಂದಿರು ಭಜನೆ ಮಾಡುತ್ತಿದ್ದುದೇ ಕಾರಣ. ಅನೇಕ ಊರುಗಳಲ್ಲಿ ಭಕ್ತಿಯಿಂದ ಕಟ್ಟಿಸಿದ ಗುಡಿಗಳನ್ನೂ ನೋಡಬಹುದು. ಅಂದಿನ ಜನರಲ್ಲಿ ಈಗಿನಂತೆ ವೀರಶೈವ / ಲಿಂಗಾಯತ ಭೇದಭಾವವಾಗಲಿ/ ಜಟಾಪಟಿಗಳಾಗಲಿ ಇರಲಿಲ್ಲ.
ಇಂದು ಬಸವಣ್ಣನವರ/ಚನ್ನಬಸವಣ್ಣನವರ ಹಾಗು ಇತರರ ವಚನಗಳಲ್ಲಿ ವೀರಶೈವ/ ವೀರಶೈವ ಧರ್ಮ ಎಂಬ ಶಬ್ದಗಳು ಇರುತ್ತವೆ. ಅಷ್ಟೇಕೆ ಕೆಲವೇ ಕೆಲ ವರ್ಷಗಳ ಹಿಂದೆ ನಾವೆಲ್ಲರೂ ಖುಷಿ/ಖುಷಿಯಿಂದ ವೀರಶೈವ ಎಂದು ಜನಗಣತಿಯಲ್ಲಿ ಬರೆಸಿದ್ದುಂಟು.
ಬಹುಶ: ಈ ಎರಡು ಶಬ್ದಗಳ ಜಂಜಾಟ ಅರಿತೇ ವಚನಗಳಲ್ಲಿ ಉಲ್ಲೇಖವಿರುವ, ಇತ್ತೀಚಿನವರೆಗೂ ಒಮ್ಮತದಿಂದ ಬಳಕೆಯಲ್ಲಿದ್ದ ಶಬ್ದ ಬಳಸಿರುವುದು ನಿರ್ದೇಶಕರ ಜಾಣ ನಡೆ.
ನಮ್ಮ ವಿಚಾರಗಳೇ ಸತ್ಯ ಅದೇ ಚರಿತ್ರೆ ವಿರುದ್ಧ ವಾದರೆ ಅದು ಪುರಾಣ ಎಂಬುವುದು ಸರಿಯಲ್ಲ.
ಕೇವಲ ಅಶ್ಲೀಲತೆ, ಅಮಾನವೀಯ, ಜನತೆಗೆ ಕೆಟ್ಟ ಸಂದೇಶ ನೀಡುವ ಚಲನ ಚಿತ್ರಗಳೇ ಬರುತ್ತಿರುವ ಈ ಕಾಲದಲ್ಲಿ ಇಂತಹ ಚಾರಿತ್ರಿಕ ಶರಣೆ ಅಕ್ಕನ ಜೀವನ ಚರಿತ್ರೆ ಆಧಾರಿತ ಚಿತ್ರ ನೀಡಿದ ತಂಡಕ್ಕೆ ಪ್ರೋತ್ಸಾಹಿಸಿದಲ್ಲಿ ಮುಂದೆಯೂ ಇಂತಹ ಚಿತ್ರಗಳನ್ನು ನಾವು ಇತರ ನಿರ್ಮಾಕರಿಂದಲೂ ಆಶಿಸಬಹುದು.
ಡುಯೆಟ್ ಬಗ್ಗೆ : ಈ ಹಿಂದೆ ಬಂದಿದ್ದ ಕ್ರಾಂತಿಯೋಗಿ ಬಸವಣ್ಣ ಚಿತ್ರದಲ್ಲಿಯೂ ಇತ್ತು. ಮುಂದೆ ಬರುವ ಈ ರೀತಿಯ ಚಿತ್ರಗಳಲ್ಲಿ ಇರದೇ ಇರಲೆಂದು ಆಶಿಸೋಣ.