ಏಪ್ರಿಲ್ 4 ಕಲಬುರಗಿಯಲ್ಲಿ ಅಕ್ಕ ಪ್ರಶಸ್ತಿ ಪ್ರದಾನ ಸಮಾರಂಭ

ಕಲಬುರಗಿ:

ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕ ಹಾಗೂ ಮಹಿಳಾ ಘಟಕದ ವತಿಯಿಂದ ವೈರಾಗ್ಯನಿಧಿ ಅಕ್ಕಮಹಾದೇವಿ ಜಯಂತಿ ಅಂಗವಾಗಿ ಜಾಗತಿಕ ಮಹಿಳಾ ಶಕ್ತಿ ಅಕ್ಕ ಪ್ರಶಸ್ತಿ ಪ್ರದಾನ ಸಮಾರಂಭ ಏಪ್ರಿಲ್ 4ರಂದು ಬೆಳಗ್ಗೆ 10.30ಕ್ಕೆ ನಗರದ ಶರಣಬಸವೇಶ್ವರ ದೇವಾಸ್ಥಾನ ಆವರಣದ ಡಾ. ಶರಣಬಸವೇಶ್ವರ ಸಭಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ನಳಿನಿ ಮಹಾಗಾಂವಕರ ತಿಳಿಸಿದರು.

ಶರಣಬಸವೇಶ್ವರ ಸಂಸ್ಥಾನದ  ಪೂಜ್ಯ ಡಾ. ದಾಕ್ಷಾಯಿಣಿ ಎಸ್. ಅಪ್ಪ ಸಾನಿಧ್ಯ ವಹಿಸಲಿದ್ದಾರೆ. ವಿಜಯಪುರ ಮಹಿಳಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ವಿಜಯಾಕುಮಾರ ಕೋರಿಶೆಟ್ಟರ ಉದ್ಘಾಟಿಸುವರು. ಸಿಯುಕೆ ಪ್ರಾಧ್ಯಾಪಕಿ ಪ್ರೊ. ಶಿವಗಂಗಾ ರುಮ್ಮಾ ವಿಶೇಷ ಉಪನ್ಯಾಸ ನೀಡಲಿದ್ದಾರೆ ಎಂದು  ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ರೇಶ್ಮಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷೆ ಭಾರತಿ ರೇಶ್ಮಿ, ಪಂಚ ಗ್ಯಾರಂಟಿ ಯೋಜನೆಯ ಜಿಲ್ಲಾಧ್ಯಕ್ಷೆ ಚಂದ್ರಿಕಾ ಪರಮೇಶ್ವರ, ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ಆರ್.ಜಿ.‌ ಶೆಟಗಾರ‌ ಆಗಮಿಸಲಿದ್ದು, ನಳಿನಿ ಮಹಾಗಾಂವಕರ ಅಧ್ಯಕ್ಷತೆ ವಹಿಸುವರು ಎಂದು ಹೇಳಿದರು.

ಮಧ್ಯಾಹ್ನ 12 ಗಂಟೆಗೆ ಅಕ್ಕನ ವಚನಗಳಲ್ಲಿ ಸಾಮಾಜಿಕ ಕಳಕಳಿ ಮತ್ತು‌ ಸಾಮರಸ್ಯ  ಕುರಿತು ಸಿಯುಕೆ ಭಾಷಾ ನಿಕಾಯದ ಮುಖ್ಯಸ್ಥೆ ಮಂಜುಳಾಕ್ಷಿ ಎಲ್. ಮಾತನಾಡಲಿದ್ದಾರೆ. ಹಿರಿಯ ಕವಯತ್ರಿ ಡಾ. ಶಕುಂತಲಾ ದುರ್ಗಿ ಅಧ್ಯಕ್ಷತೆ ವಹಿಸಲಿದ್ದಾರೆ. ನಂತರ ವಚನ ಉಗ್ಘಡಣೆ, ವಚನ ಗಾಯನ, ನೃತ್ಯ, ಕೋಲಾಟ ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿದ್ದು ಕಲಬುರಗಿ ರಂಗಾಯಣದ ನಿರ್ದೇಶಕಿ ಡಾ. ಸುಜಾತಾ ಜಂಗಮಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ತಿಳಿಸಿದರು.

ಸಂಜೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಬೀದರ ಬಸವಸೇವಾ ಸೇವಾ ಪ್ರತಿಷ್ಠಾನದ ಅಧ್ಯಕ್ಷೆ ಡಾ. ಗಂಗಾಂಬಿಕಾ ಪಾಟೀಲ ಸಮಾರೋಪ ಭಾಷಣ ಮಾಡಲಿದ್ದಾರೆ. ಅಕ್ಕಮಹಾದೇವಿ ಆಶ್ರಮದ ಪ್ರಭುಶ್ರೀ ತಾಯಿಯವರು ಸಾನಿಧ್ಯ ವಹಿಸಲಿದ್ದಾರೆ. ಬಸವ ಸಮಿತಿ ಅಧ್ಯಕ್ಷೆ ಡಾ. ವಿಲಾಸವತಿ ಖೂಬಾ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಅಶೋಕ ಘೂಳಿ, ಜಯಶ್ರೀ ಕೋಣಿನ ಉಪಸ್ಥಿತರಿರಲಿದ್ದಾರೆ ಎಂದು ವಿವರಿಸಿದರು. ಡಾ. ಸುಲೇಖಾ ಮಾಲಿಪಾಟೀಲ, ಛಾಯಾ ಪಟ್ಟಣಶೆಟ್ಟಿ, ಆರ್.ಜಿ. ಶೆಟಗಾರ, ಅಶೋಕ ಘೂಳಿ ಮತ್ತಿತರರು ಗೋಷ್ಠಿಯಲ್ಲಿದ್ದರು.

ಇವರಿಗೆಲ್ಲ ಪ್ರಶಸ್ತಿ ಪ್ರದಾನ:

ಭಾಗ್ಯಶ್ರೀ ಶರಣಪ್ರಕಾಶ ಪಾಟೀಲ (ವೈದ್ಯಕೀಯ), ಅಮರೇಶ್ವರಿ ಬಾಬುರಾವ ಚಿಂಚನಸೂರ (ಉದ್ಯಮ), ಸುರೇಖಾ ರಾಜಕುಮಾರ (ಕೃಷಿ), ಡಾ. ಫರ್ವೀನ್ ಸುಲ್ತಾನಾ (ಸಾಹಿತ್ಯ), ಮಾಲಾ ಕಣ್ಣಿ (ಸಾಮಾಜಿಕ).

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/FjCpFjdZ7HXLwuA2LCEhga

Share This Article
Leave a comment

Leave a Reply

Your email address will not be published. Required fields are marked *