ಬಸವಣ್ಣನವರನ್ನು ಇತ್ತಿತ್ತಲಾಗಿ ವೇದ ಮತ್ತು ಲಿಂಗತತ್ವದ ಸಮನ್ವಕಾರರೆಂಬ ಬಿಂಬಿಸುವ ಕೆಲವೊಂದು ಮನುವಾದಿಗಳ ಪ್ರಯತ್ನ ನಡೆಯುತ್ತಿದೆ. ಇದು ಜನರನ್ನು ದಾರಿತಪ್ಪಿಸುವˌ ಸತ್ಯವನ್ನು ತಿರುಚುವ ಹುಸಿ ಪ್ರಯತ್ನ. ಬಸವಾದಿ ಶರಣರ ಲಿಂಗಾಯತ ಧರ್ಮವನ್ನು ಹಾಗೂ ಧರ್ಮದ ಜನಾಂಗವನ್ನು ತಮ್ಮ ಮನುಧರ್ಮದಲ್ಲಿ ಸೇರಿಸಿಕೊಳ್ಳುವ ಪ್ರಯತ್ನ.
ಸನಾತನ ವೈದಿಕ ಧರ್ಮದಲ್ಲಿ ಹೊಸತನಕ್ಕೆ ಹಾಗೂ ಟೀಕೆ ಟಿಪ್ಪಣಿಗಳಿಗೆ ಮುಕ್ತ ಅವಕಾಶವಿದೆ ಎಂದು ಹೇಳುವವರುಂಟು. ಸನಾತನ ವೈದಿಕ ಧರ್ಮವು ಕಾಲಕಾಲಕ್ಕೆ ಬಂದ ದಾರ್ಶನಿಕರುˌ ತತ್ವಜ್ಞಾನಿಗಳುˌ ಮಹಾಪುರುಷರು ಮಾಡಿದ ಟೀಕೆ ಆರೋಪಗಳನ್ನು ತೆಗೆದುಕೊಂಡು ಬದಲಾವಣೆಗಳನ್ನು ಅತ್ಯಂತ ಮುಕ್ತವಾಗಿ ಸ್ವಾಗತಿಸಿದೆ. ಮುಂದುವರೆದು 12ನೇಯ ಶತಮಾನದಲ್ಲಿ ಬಸವಣ್ಣನವರು ಹಿಂದೂ ಧರ್ಮ ಶಾಸ್ರ್ತಗ್ರಂಥಗಳಲ್ಲಿ ಉತ್ತಮ ಅಂಶಗಳನ್ನು ಒಪ್ಪಿ ˌ ಪ್ರಮಾದಗಳ ವಿರುದ್ದ ಧ್ವನಿಎತ್ತಿ ˌ ಬೇಕಾದಲ್ಲಿ ಪ್ರಮಾಣಗಳನ್ನು ಕೊಟ್ಟು ˌ ತಪ್ಪಿದ್ದಲ್ಲಿ ಕಟುವಾದ ಟೀಕೆಮಾಡಿ ಧರ್ಮ ಉತ್ಥಾನಕ್ಕೆ ಕಾರಣರಾದ ದಾರ್ಶನಿಕ ಎಂಬ ವಾದ ಇತ್ತಿಚಿಗೆ ಮಂಡಿಸುತ್ತಿದ್ದಾರೆ . ಇನ್ನೂ ಮುಂದುವರೆದು ಆಚಾರ್ಯ ಶಂಕರಾಚಾರ್ಯರ ನಂತರ ಬಸವಣ್ಣನವರು ಸನಾತನಧರ್ಮ ಸುಧಾರಕ ಹಾಗೂ ಸಮರ್ಥಕ ಎಂದೆಲ್ಲಾ ಹೇಳುತ್ತಾರೆ . ಇವರ ಈ ವಾದದ ಸತ್ಯಾಸತ್ಯತೆ ಸತ್ಯದ ಓರೆಗಲ್ಲಿಗೆ ಹಚ್ಚಿ ನೋಡಬೇಕಾದ ಅವಶ್ಯಕತೆ ಇದೆ.
ಬಸವಣ್ಣನವರು ಸನಾತನ ವೈದಿಕಧರ್ಮ ಸುಧಾರಕರಾಗಿದ್ದರೆ ಮತ್ತು ಆ ಧರ್ಮ ಒಪ್ಪಿದವರಾಗಿದ್ದರೆˌ ಸಾವಿರಾರು ಶರಣರು ತಮ್ಮ ವಚನಗಳಲ್ಲಿ ತಮ್ಮದು ಲಿಂಗವಂತ ಧರ್ಮ ˌ ಎಮ್ಮದು ಬಸವ ಧರ್ಮ ˌ ಶರಣ ಧರ್ಮ ಎಂದೆಲ್ಲಾ ಹೇಳಿದರೆ ಹೊರತು ˌ ಅಪ್ಪಿತಪ್ಪಿಯೂ ಶರಣರು ತಮ್ಮದು ಸನಾತನ ವೈದಿಕ ಧರ್ಮ ಎಂದು ಹೇಳಲಿಲ್ಲ. ಎರಡನೇಯದಾಗಿ ವೈದಿಕರು ಶಂಕರಾಚಾರ್ಯರನ್ನು ರಾಮಾನುಜಾಚಾರ್ಯರನ್ನು ಹಾಗೂ ಮಧ್ವಾಚಾರ್ಯರನ್ನು ಸನಾತನಧರ್ಮದ ಆಚಾರ್ಯತ್ರಯರು ಎಂದು ಒಪ್ಪಿಕೊಂಡಂತೆ ಬಸವಣ್ಣನವರನ್ನು ಅದೆ ಆಚಾರ್ಯರ ಸಾಲಿನಲ್ಲಿ ಏಕೆ ಸೇರಿಸಿಕೊಂಡಿಲ್ಲ ?
ಬಸವಣ್ಣನವರಾಗಲಿ ಶರಣರಾಗಲಿ ವೇದಗಳಲ್ಲಿನ ಯಾವ ಅಂಶವನ್ನು ಒಪ್ಪಿಕೊಂಡಿದ್ದರು ಎಂಬುದು ಗೋತ್ತಾಗಬೇಕಲ್ಲವೆ ?. ವೇದಗಳಲ್ಲಿ ಬರುವ ಮೂವತ್ತುಮೂರು ಕೋಟಿ ( ಅಂದರೆ ಅತ್ಯುನ್ನತ ಶ್ರೇಷ್ಟ) ದೇವತೆಗಳನ್ನು ಒಪ್ಪಿಕೊಂಡಿದ್ದರೆ ? ವೇದಪುರುಷರೆಂದು ಗೋತ್ರಪುರುಷರೆಂದು ಹೇಳುವ ಮಹರ್ಶಿಗಳನ್ನು ಒಪ್ಪಿದ್ದರೆ ? ವೇದಗಳಲ್ಲಿನ ಕರ್ಮಕಾಂಡ ಒಪ್ಪಿದ್ದರೆ ?
ಮೊದಲನೇಯದಾಗಿ ವೇದಗಳಲ್ಲಿ ದೇವತೆಗಳೆಂದು ವರ್ಣಿಸಲ್ಪಡುವ ಇಂದ್ರನಾಗಲಿˌ ಅಗ್ನಿದೇವತೆಯಾಗಲಿ ವರುಣನಾಗಲಿ ವಾಯುದೇವನಾಗಲಿ ಚಂದ್ರ ಸೂರ್ಯ ಹೀಗೆ ಒಟ್ಟು ಮೂವತ್ತುಮೂರು ಕೋಟಿ( ಉಚ್ಚತಮ ಶ್ರೇಷ್ಟ) ಯಾವ ದೇವತೆಯನ್ನು ಬಸವಾದಿ ಶರಣರು ತಮ್ಮ ದೇವರೆಂದು ಒಪ್ಪಿಕೊಂಡಿಲ್ಲ ಎಂಬುದಕ್ಕೆ ಅವರ ವಚನಗಳೆ ಸಾಕ್ಷಿ.
ಎರಡನೇಯದಾಗಿ ವೇದಗಳಲ್ಲಿ ಗೋತ್ರಪುರುಷರೆಂದು ಕರೆಯಲ್ಪಡುವ ಕಶ್ಯಪ ˌ ಅತ್ರಿ ˌಭಾರದ್ವಾಜˌ ಶಾಂಡಿಲ್ಯ ಬ್ರಘುˌ ಗೌತಮˌ ವಶಿಷ್ಠ ಉಪಮನ್ಯು ಮುಂತಾದ ಮಹರ್ಷಿಗಳೆ ಶ್ರೇಷ್ಟರುˌ ಆದರ್ಶಪ್ರಾಯರುˌ ವೇದಗಳಲ್ಲಿ ಅಗ್ರಗಣ್ಯರು ಪೂಜ್ಯರು.
ಆದರೆ ಬಸವಣ್ಣನವರ ವಚನಗಳಲ್ಲಿ ಯಾರನ್ನು ಸಮಾಜ ದಶ್ಶು ಅಸ್ರ್ಪುಷ್ಯರೆಂದು ಶೂದ್ರರೆಂದು ತಿರಸ್ಕರಿಸಲ್ಪಟ್ಟಿತ್ತೊ ಅಂತಹ ವ್ಯಕ್ತಿಗಳಾದ ಮಾದಾರ ಚೆನ್ನಯ್ಯ ˌ ಡೋಹಾರ ಕಕ್ಕಯ್ಯ ˌ ನಾಗಿಮಯ್ಯ ˌ ಮಡಿವಾಳ ಮಾಚಯ್ಯ ˌ ಅಂಬಿಗೇರ ಚೌಡಯ್ಯ ˌ ಬೇಡರ ಶ್ವಪಚಯ್ಯ ˌ ಅಲ್ಲಮಪ್ರಭುಗಳು ˌ ಒಕ್ಕಲಿಗ ಮುದ್ದಣ್ಣˌ ˌ ಆಯ್ದಕ್ಕಿ ಮಾರಯ್ಯ ˌ ನುಲಿಯ ಚಂದಯ್ಯ ˌ ಹೂಗಾರ ಮಾದಯ್ಯˌ ಮಾದಾರ ಧೂಳಯ್ಯˌ ˌ ಕುರುಬ ಗೋಲ್ಲಾಳˌ ಸತ್ಯಕ್ಕ ˌ ಕಾಳವ್ವೆ ˌ ಹಡಪದ ಅಪ್ಪಣ್ಣ ˌ ಲಿಂಗಮ್ಮ ಮುಂತಾದವರು ಶ್ರೇಷ್ಟ ಶಿವಶರಣರುˌ ಆದರ್ಶಪ್ರಾಯರು .ಅಗ್ರಗಣ್ಯರುˌ ಪೂಜ್ಯರು.
ಬಸವಣ್ಣನವರು ಇಂತಹ ಶರಣರೆ ತನ್ನನ್ನು ಹೆತ್ತವರೆಂದುˌ ಗೋತ್ರಜರುˌ ತಾನು ಇವರ ತೊತ್ತಿನ ಮಗನೆಂದು ಹೇಳಿದ್ದಾರೆ. ಇದಕ್ಕೆ ಅವರ ಈ ವಚನಗಳ ಕೆಲವು ಸಾಲುಗಳೆ ಸಾಕ್ಷಿ ” ಅಪ್ಪನು ನಮ್ಮ ಮಾದಾರ ಚೆನ್ನಯ್ಯˌ ˌ ಬೊಪ್ಪನು ನಮ್ಮ ಡೋಹಾರ ಕಕ್ಕಯ್ಯ ˌ ಚಿಕ್ಕಯ್ಯ ನಮ್ಮಯ್ಯ ˌ ಅಣ್ಣನ್ನು ನಮ್ಮ ಕಿನ್ನೂರಿ ಬ್ರಮ್ಮಯ್ಯ”.
ಕುಲತಿಲಕ ( ಎಲ್ಲ ಕುಲಗಳಲ್ಲಿ ಶ್ರೇಷ್ಟ) ನಮ್ಮ ಮಾದಾರಚೆನ್ನಯ್ಯ ಎಂದಿದ್ದಾರೆ ಸ್ವತಃ ಬಸವಣ್ಣನವರು. ಇನ್ನೂ ಮುಂದುವರೆದು ಬಸವಣ್ಣನವರು “ಮಾದಾರ ಚೆನ್ನಯ್ಯನು ತಿಂದು ಉಗುಳಿದ ತಾಂಬೂಲವನ್ನು ಸೇವಿಸಿ ಬದುಕುವೆನಯ್ಯ” ಎಂದು ಹೇಳಿದ್ದಾರೆ.
ಅಪ್ಪಿತಪ್ಪಿಯೂ ಯಾವ ಶರಣರಾಗಲಿ ಬಸವಣ್ಣನವರಾಗಲಿ ವೇದಗಳಲ್ಲಿ ಬರುವ ಗೋತ್ರಪುರುಷ ಮಹರ್ಷಿಗಳನ್ನು ಅಥವಾ ಮೂವತ್ತುಮೂರು ಕೋಟಿ ದೇವತೆಗಳನ್ನುˌ ಅವರ ಆದರ್ಶವನ್ನಾಗಿ ಒಪ್ಪಿಕೊಂಡಿರುವದಿಲ್ಲ ಎಂಬ ಅಂಶ ಬಸವಾದಿ ಶರಣರ ವಚನಗಳಿಂದ ತಿಳಿದುಕೊಳ್ಳಬಹುದು .
ಬದಲಾಗಿ ಬಸವಣ್ಣನವರು ತಮ್ಮ ವಚನದಲ್ಲಿ “ಭಕ್ತಿ ಇಲ್ಲದ ಬಡವ ನಾನಯ್ಯ. ಕಕ್ಕಯ್ಯನ ಮನೆಯಲ್ಲೂ ಬೇಡಿದೆ . ಚೆನ್ನಯ್ಯನ ಮನೆಯಲ್ಲೂ ಬೇಡಿದೆˌ ದಾಸಯ್ಯನ ಮನೆಯಲ್ಲೂ ಬೇಡಿದೆˌ ಎಲ್ಲ ಪುರಾತನರು ನೆರೆದು ಭಕ್ತಿಯ ಬಿಕ್ಷೆಯನಿಕ್ಕಿದಡೆ ಎನ್ನ ಪಾತ್ರೆ ತುಂಬಿತ್ತು ಕೂಡಲಸಂಗಮದೇವ” ಎಂದಿದ್ದಾರೆ. ಅಪ್ಪಿತಪ್ಪಿಯೂ ವೇದಗಳಲ್ಲಿ ಬರುವ ಗೋತ್ರಪುರುಷ ಮಹರ್ಷಿಗಳನ್ನು ˌ ದೇವತೆಗಳನ್ನು ತಮ್ಮ ಭಕ್ತಿಸಾಧನೆಗಾಗಿ ಅಂಗಲಾಚಿದ್ದಾಗಲಿ ಆಶ್ರಯಿಸುವದಾಗಲಿ ಯಾವ ವಚನಗಳಲ್ಲಿ ಇಲ್ಲ.
“ವೇದಗಳು ಗಡ ನಡುಗಿದವು ˌ ಶಾಸ್ರ್ತಗಳು ಕೈಜಾರಿ ಬಿದ್ದವೊ …ˌ ಹೀಗೆ ಬಸವಣ್ಣವರು ಹಾಗೂ ಬಸವಾದಿ ಶರಣರು ವೇದಗಳನ್ನು ಮಾನ್ಯಮಾಡುವುದು ಒತ್ತಟ್ಟಿಗಿರಲಿ ಬದಲಿಗೆ ಶರಣರ ಆದರ್ಶ ವಿಚಾರಧಾರೆ ವೇದಗಳ ವಿರುದ್ದ ಪ್ರವಾಹದಲ್ಲಿ ಸಾಗಿದ್ದವು ಎನ್ನುವದಕ್ಕೆ ಅವರ ಬಹಳ ವಚನಗಳೆ ಸಾಕ್ಷಿ.
ಮೂರನೆಯದಾಗಿ ವೇದಗಳಲ್ಲಿ ಬರುವ ಕರ್ಮಕಾಂಡ ಬಗ್ಗೆ ಹೇಳುವದಾದರೆ ಹರನ ಅಂಶಜನಾದ ವೀರಭದ್ರನು ಸಾಕ್ಷಾತ ಬ್ರಹ್ಮನ ಮಗನಾದ ದಕ್ಷ ಪ್ರಜಾಪತಿಯ ರುಂಡ ಕಡಿದು ಹಾಕಿದˌ ಯಜ್ಞಗಳನ್ನು ಖಂಡಿಸಿದ್ದು ಬಸವಣ್ಣನವರು ವೀರಭದ್ರ ದೆವರ ಪರ ಸಮರ್ಥಿಸಿರುವುದು ಸಾಕ್ಷಾತ ಅವರ ವಚನಗಳಲ್ಲಿಯೆ ಕಂಡುಬರುತ್ತದೆ. ಇಲ್ಲಿ ಬಸವಣ್ಣನವರು ವೇದಗಳ ಹಾಗೂ ಯಜ್ಞಗಳ ಪರ ಸಮರ್ಥಿಸಿದೆ ಅದನ್ನು ಖಂಡಿಸಿದ ವೀರಭದ್ರ ದೇವರ ಪರ ನಿಂತಿರುವುದು ಬಸವಾದಿ ಶರಣರ ನಿಲುವು ವೇದಗಳ ಪರ ಇಲ್ಲವೆಂದು ಸ್ಪಷ್ಟವಾಗುತ್ತದೆ. ಬಸವಾದಿ ಪ್ರಮಥರು ಯಜ್ಞಗಳನ್ನು ಮೂರ್ತಿಪೂಜೆಯನ್ನು ˌ ಬಲಿಕೊಡುವ ಪದ್ದತಿˌ ಸ್ವರ್ಗ ನರಕಗಳನ್ನು ˌ ಪುನರ್ಜನ್ಮ ˌ ಬಹುದೇವೊಪಾಸನೆ ಮುಂತಾದವುಗಳನ್ನು ಖಡಾಖಂಡಿತವಾಗಿ ಒಪ್ಪಿರುವದಿಲ್ಲ.
ಭಗವದ್ಗೀತೆಯ ಘನಸಂಗತಿಗಳನ್ನು ಸಾಮಾನ್ಯರಿಗೂ ಅರ್ಥವಾಗುವಂತೆ ಬಸವಾದಿ ಶರಣರು ತಮ್ಮ ವಚನಗಳ ಮೂಲಕ ತಿಳಿಸಿದ್ದಾರೆ ಎಂದು ವಾದ ಮಾಡುವವರು ಭಗವದ್ಗೀತೆಯ ಹಾಗೂ ವಚನಸಾಹಿತ್ಯದ ಘನತಿರುಳು ಅರ್ಥಮಾಡಿಕೊಂಡಿಲ್ಲ ಎಂದೆನಿಸುತ್ತದೆ.
ಭಗವತ್ಗೀತೆಯಲ್ಲಿ ಶ್ರೀಕ್ರಿಷ್ಣನು ತನ್ನ ಅವತಾರದ ಉದ್ದೇಶ ಅಧರ್ಮ ನಾಶ ಮಾಡಿ ಧರ್ಮ ಸ್ಥಾಪನೆ ಮಾಡುವುದು ಎಂದು ಹೇಳಿರುವುದು ಸ್ಪಷ್ಟ. ಹಾಗಾದರೆ ಅಧರ್ಮ ಎಂದರೆ ಯಾವುದು ? ಭಗವತ್ಗೀತೆಯ ಅಧ್ಯಾಯ 1 ಶ್ಲೋಕ 41ರಿಂದ 45ರಲ್ಲಿ ಅಧರ್ಮ ಎಂದರೆ ಏನು ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿ ಇದೆ.
ಆ ಶ್ಲೋಕಗಳಲ್ಲಿ ಸ್ವಯಂ ಶ್ರೀಕ್ರಿಷ್ಣನು ಅರ್ಜುನನಿಗೆ ವರ್ಣಸಂಕರವೆ ಅಧರ್ಮ ಎಂದು ಹೇಳಿರುವುದು ಗೊತ್ತಾಗುತ್ತದೆ. ವರ್ಣ ಸಂಕರವೆಂದರೆ ವರ್ಣ ವ್ಯವಸ್ತೆˌ ˌ ಜಾತಿ ವ್ಯವಸ್ತೆಯಲ್ಲಿ ಏರುಪೇರಾಗುವುದುˌ ಮೇಲ್ಜಾತಿಯ ಕನ್ನೆಯನ್ನು ಕೆಳಜಾತಿಯವನು ಮದುವೆಯಾಗುವುದುˌ ಕೆಳಜಾತಿಯವನು ಶೂದ್ರನು ಮೇಲ್ಜಾತಿಯವರು ಮಾಡುವ ಪೂಜೆ ಪುನಸ್ಕಾರ ˌ ಆಚಾರ್ಯನಾಗುವುದು ˌ ಮಂತ್ರಗಳನ್ನು ಪಠಿಸುವುದು ಹೀಗೆ ಜಾತಿವ್ಯವಸ್ತೆ ಹದಗೆಟ್ಟು ನಾಶದತ್ತ ಹೋಗುವುದೆ ವರ್ಣಸಂಕರವೆನ್ನುತ್ತಾರೆ. ಇಂತಹ ವರ್ಣಸಂಕರವನ್ನು ಅಧರ್ಮವೆನ್ನುತ್ತಾರೆ. ಇಂತಹ ಅಧರ್ಮ ನಾಶಮಾಡಿ ವರ್ಣವ್ಯವಸ್ತೆ ಪುನರಸ್ಥಾಪಿಸುವುದೆ ಧರ್ಮಎಂದು ಶ್ರೀಕ್ರಿಷ್ಣನ ಅವತಾರದ ಉದ್ದೇಶ ಸ್ಪಷ್ಟವಾಗುತ್ತದೆ.
ಆದರೆ ಬಸವಾದಿ ಶರಣರು ವರ್ಣವ್ಯವಸ್ಥೆ ಜಾತಿವ್ಯವಸ್ಥೆಯೆ ಅಮಾನವಿಯವಾದದ್ದು ಅಗ್ರಜನಿಂದ ಅಂತ್ಯಜನ ವರೆಗೆ ಎಲ್ಲರಿಗೂ ಶಿವಭಕ್ತನೆಂಬೆನಯ್ಯ ˌ ಒಬ್ಬೊಬ್ಬರಿಗೆ ಒಂದೊಂದು ನ್ಯಾಯ ಸಲ್ಲದು ಎಂದು ಜಾತಿ ವ್ಯವಸ್ತೆಯನ್ನು ನಾಶಮಾಡಿ ಮತ್ತು ಒಂದು ಹೊಸ ಸಮಾನತೆಯ ಸಮಾಜ ನಿರ್ಮಾಣ ಮಾಡಿದರು. ಇದಕ್ಕೆ ಸ್ವಯಂ ಬಸವಣ್ಣನವರ ವಚನಗಳ ಕೆಲವೊಂದು ಸಾಲುಗಳೆ ಸಾಕ್ಷಿ
” ಹೊಲೆಗಂಡಲ್ಲದೆ ಪಿಂಡದ ನೆಲಗಾಶ್ರಯವಿಲ್ಲ. ಜಲಬಿಂದು ವ್ಯವಹಾರ ಒಂದೆ ಇರಲು ಕರ್ಣದಲಿ ಜನಿಸಿದವರುಂಟೆ ಜಗದೊಳಗೆ ” “ನೆಲವೊಂದೆ ಹೊಲಗೆರಿ ಶಿವಾಲಯಕ್ಕೆ”. ಸಮಗಾರ ಹರಳಯ್ಯನ ಮಗ ಹಾಗೂ ವಿಪ್ರ ಮಧುವರಸನ ಮಗಳ ಜೊತೆ ಮದುವೆ ಮಾಡಿ ವರ್ಣಸಂಕರಕ್ಕೆ ಜಾತಿನಾಶಕ್ಕೆ ಕಾರಣಕರ್ತರಾದರು. ಮಧುವರಸರು ವಿಪ್ರಕುಲದವರಾದರೂ ಅಂದು 12ನೇಯ ಶತಮಾನದಲ್ಲಿ ಅವರು ಮಾಡಿದ ತ್ಯಾಗಕ್ಕೆ ನಾವು ತಲೆಬಾಗಲೆಬೇಕು.
ಅನುಭವ ಮಂಟಪದ ಮಹಾಪೀಠದ ಮೇಲೆ ಬೇಡಕುಲದ ಅಲ್ಲಮ ಪ್ರಭುಗಳನ್ನು ಕೂರಿಸಿದರು. ಧರ್ಮದ ಅಧಿಕಾರ ಸಮಾಜದ ಕಟ್ಟಕಡೆಯ ವ್ಯಕ್ತಿಯವರೆಗೆ ವಿಸ್ತರಿಸಿದರು. ಬಸವಾದಿ ಶರಣರು ವೈದಿಕ ಪರಂಪರೆಯಾಗಲಿ ˌ ಬ್ರಹ್ಮಚರ್ಯ ˌ ಗ್ರಹಸ್ತ ˌ ವಾನಪ್ರಸ್ತ ಮತ್ತು ಸನ್ಯಾಸ ಆಶ್ರಮಗಳನ್ನು ಪಾಲಿಸುವದಾಗಲಿ ˌ ವರ್ಣಾಶ್ರಮ ಜಾತಿವ್ಯವಸ್ತೆಯಾಗಲಿ ˌ ಮೂರ್ತಿಪೂಜೆ ˌ ಯಜ್ಞಪರಂಪರೆಯಾಗಲಿ ˌ ಇಂದ್ರ ˌ ಚಂದ್ರ ವಾಯು ವರುಣ ಮುಂತಾದ ಮೂವತ್ತುಮೂರು ಕೋಟಿ ದೇವತೆಗಳಾಗಲಿ ˌ ಸ್ವರ್ಗ ನರಕಗಳೆ ಆಗಲಿ ಒಪ್ಪಿಕೊಂಡಿಲ್ಲ ಎಂದ ಮೇಲೆ ಶರಣರು ವೇದ ಮತ್ತು ಲಿಂಗತತ್ವದ ಸಮನ್ವಯ ಸಾಧಿಸಿರುವದಾದರು ಏನು ?
ವೇದಶಾಸ್ರ್ತ ಆಗಮ ಪುರಾಣಂಗಳೆಲ್ಲವು ಕೊಟ್ಟಣವ ಕುಟ್ಟಿದ ನುಚ್ಚು ತೌಡುಕಾಣಿಭೊ ! ಅವಕುಟ್ಟಲೇಕೆ ಕುಸುಕಲೇಕೆ ? ಎಂದು ಬಸವಾದಿ ಶರಣರು ವೇದ ಶಾಸ್ರ್ತಆಗಮ ಪುರಾಣಗಳನ್ನು ಚಲಾವಣೆ ಇಲ್ಲದನಾಣ್ಯದಂತೆ ನುಚ್ಚು ತೌಡುಗಳಿಗೆ ಹೋಲಿಸಿದ್ದಾರೆ.
ಬಸವಾದಿ ಶರಣರು ಯುಗಮಾನಗಳಿಂದಲೂ ನಡೆದುಬಂದಂತಹ ಸಂಪ್ರದಾಯವನ್ನು ಟೀಕಿಸಿದ್ದಲ್ಲದೆ ಒಂದು ಹೊಸದಾದನ್ನು ಪ್ರತಿಕಾಲದಲ್ಲೂ ಪ್ರಸ್ತುತವಾದ ನವಸಮಾಜದ ಪರಿಕಲ್ಪನೆ ಕೊಟ್ಟಿದ್ದರು. 12ನೇಯ ಶತಮಾನದಲ್ಲಿ ಬಸವಾದಿ ಶರಣರು ಸತ್ಯದ ಪಥ ˌ ಸಮಾನಬದುಕು ˌ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸ್ವಧರ್ಮ ಆಚರಿಸುವˌ ಮುಕ್ತವಾಗಿ ಬದುಕುವ ˌ ಸರ್ವರಿಗೂ ಒಂದೆ ನ್ಯಾಯ (Common Civil Code) ತರುವ ನವಸಮಾಜದ ನಿರ್ಮಾಣದಲ್ಲಿ ತೊಡಗಿದ್ದರು.
ಅಂದು 12ನೇಯ ಶತಮಾನದಲ್ಲಿ ಬಸವಾದಿ ಶರಣರ ಹೊಸತನವನ್ನು ವೈದಿಕ ಸನಾತನ ಧರ್ಮ ಮುಕ್ತವಾಗಿ ಒಪ್ಪಿಕೊಂಡಿತ್ತೆ ? ಹೊಸತನವನ್ನು ಒಪ್ಪಿಕೊಳ್ಳುವವರು 12ನೇಯ ಶತಮಾನದಲ್ಲಿ ಶರಣರ ಲಕ್ಷ ಲಕ್ಷಗಟ್ಟಲೆ ಬರೆದಿರುವ ವಚನ ಸಾಹಿತ್ಯವನ್ನು ಸುಟ್ಟು ಹಾಕುತ್ತಿದ್ದರೆ ? ಬಸವಾದಿ ಶರಣರ ಟೀಕೆಟಿಪ್ಪಣಿಗಳನು ಮುಕ್ತಮನಸ್ಸಿನಿಂದ ಸ್ವಿಕಾರ ಮಾಡುವುದೆ ಆಗಿದ್ದರೆ ಲಕ್ಷ ಲಕ್ಷ ಶರಣರ ಸಾಮೂಹಿಕ ವಧೆ ಮಾಡಿಸಿದವರು ಯಾರು ?
ಹರಳಯ್ಯನ ಮಗನ ವಿವಾಹ ವಿಪ್ರಮಧುವರಸರ ಮಗಳಜೊತೆ ನಡೆದಿದ್ದನ್ನು ವಿರೋಧಿಸಿ ಅವರಿಗೆ ಮರಣದಂಡನೆ ಕೊಟ್ಟಿರುವದು ವೈದಿಕ ಸಂಪ್ರದಾಯಕ್ಕಿಂತ ವಿಭಿನ್ನವಾಗಿದ್ದವು ಎಂದಲ್ಲವೆ ? ಅಂದರೆ ಇಷ್ಟೆಲ್ಲಾ ವೀರೋಧವಾಗಿದ್ದು ವೇದಗಳು ಮತ್ತು ವಚನಸಾಹಿತ್ಯ ˌ ಲಿಂಗತತ್ವ ವಿಭಿನ್ನವಾಗಿದೆಯತಂಲ್ಲವೆ ?
ಶಂಕರ ಮಧ್ವ ರಾಮಾನುಜಾಚಾರ್ಯ ಆಚಾರ್ಯತ್ರಯರು ಪ್ರತಿಪಾದಿಸಿರುವ ಅಧ್ವೈತˌ ಧ್ವೈತ ˌ ವಿಶಿಷ್ಟಾಧ್ವೈತ ಸಿದ್ದಾಂತಗಳಿಗೆ ವೇದˌ ಬ್ರಹ್ಮಸೂತ್ರ ˌ ಉಪನಿಷತ್ಗಳೆ ಆಧಾರ ಎಂಬುದು ನಿರ್ವಿವಾದ . ಅದರಂತೆ ಆರ್ಯಸಮಾಜ ಸ್ಥಾಪಿಸಿದ ಸ್ವಾಮಿ ದಯಾನಂದ ಸರಸ್ವತಿಯವರು ವೇದಪರಂಪರೆಯನ್ನು ಮುಂದುವರೆಸಿದರೆಂಬೆದು ಸಹ ನಿರ್ವಿವಾದ. ಕರ್ನಾಟಕದಲ್ಲಿ ರಚನೆಯಾದ ದಾಸಸಾಹಿತ್ಯ ವೈದಿಕ ಧರ್ಮಕ್ಕೆ ಪೂರಕವಾಗಿದ್ದವು. ಅದನ್ನು ಸಹ ಯಾರು ಅಲ್ಲಗಳೆಯುವಂತಿಲ್ಲ.
ಬೌದ್ಧ ಪರಂಪರೆ ˌ ಜೈನ ಪರಂಪರೆ ˌ ಬಸವಾದಿ ಶರಣರ ಪರಂಪರೆ ˌ ಸಿಖ್ಖಧರ್ಮ ˌ ಜ್ಯೋತಿಬಾ ಫುಲೆಯವರ ಸತ್ಯಶೋಧಕ ಸಮಾಜವುಗಳನ್ನು ವೈದಿಕ ಪರಂಪರೆಗೆ ವಿಭಿನ್ನವಾದವುಗಳೆಂಬುದು ಸಹ ನಿರ್ವಿವಾದ. ರಾಷ್ರ್ಟಕವಿ ಕುವೆಂಪು ಹೇಳಿರುವ ಸರ್ವ ಜನಾಂಗದ ಶಾಂತಿಯ ತೋಟ ಎಂಬಂತೆ ವಿಶ್ವದಲ್ಲಿಯೆ ಭಾರತವು ಬಹುಭಾಷೆ ˌ ಬಹುಸಂಸ್ರ್ಕುತಿ ˌ ಬಹುಜನಾಂಗದಿಂದ ಕೂಡಿದಂತೆ ಬಹು ಧರ್ಮಗಳಿಂದಲೂ ಕೂಡಿದೆ. ಇದು ಈ ನಮ್ಮ ದೇಶದ ವೈಶಿಷ್ಟ್ಯವೆಂದು ನಾವೆಲ್ಲರು ಅಭಿಮಾನ ಪಡಬೇಕು ˌ ಅವುಗಳನ್ನು ಯಥಾವತ್ತಾಗಿ ಸ್ವೀಕಾರ ಮಾಡುವ ಪ್ರವ್ರುತ್ತಿ ಬೆಳೆಸಿಕೊಳ್ಳಬೇಕು. ಅವುಗಳನ್ನು ನಮ್ಮ ಮೂಗಿನ ನೇರಕ್ಕೆ ಬಳಸುವುದು ಸಮಂಜಸವಲ್ಲ. ಅಂತಹುದು ಬಹಳ ದಿನ ಉಳಿಯಲಾರದು.
ಹಿಂದೆ ತಥಾಗತ ಗೌತಮ ಬುದ್ದರನ್ನು ವಿಷ್ಣುವಿನ ದಶಾವತಾರಗಳಲ್ಲಿ ಒಬ್ಬರೆಂದು ಹೇಳುವ ಮೂಲಕ ಇಡಿ ಬೌದ್ದ ಧರ್ಮ ವೈದಿಕ ಧರ್ಮದೆಡೆ ಸೇರಿಸಿಕೊಳ್ಳುವ ವಿಫಲ ಪ್ರಯತ್ನನಡೆಯಿತು. ಜನ ಒಪ್ಪಬೇಕಲ್ಲ ? ಇಂದಿಗೂ ವೈದಿಕ ಪರಂಪರೆಯವರು ತಥಾಗತ ಬುದ್ದರನ್ನು ವಿಷ್ಣುವಿನ ಎಲ್ಲ ಅವತಾರಗಳನ್ನು ಒಪ್ಪಿ ಪೂಜಿಸುವಂತೆ ಬುದ್ದರನ್ನು ಒಪ್ಪುವದಾಗಲಿ ಪೂಜಿಸುವದಾಗಲಿ ಮಾಡುತ್ತಿಲ್ಲ . ಏಕೆಂದರೆ ಬೌದ್ದಮತ ˌ ವೈದಿಕಮತ ಒಂದಕ್ಕೊಂದು ವಿಭಿನ್ನವಾಗಿದ್ದರಿಂದಲ್ಲವೆ.
ಇಂದಿಲ್ಲ ನಾಳೆ ಕೊನೆಗೆ ಸತ್ಯವೆ ಉಳಿಯುತ್ತದೆ. ಸತ್ಯವನ್ನು ಮರೆಮಾಚುವ ವಿಫಲಪ್ರಯತ್ನ ಮಾಡದೆ ಉದಾತ್ತಮನೊಭಾವ ಬೆಳೆಸಿಕೊಳ್ಳೋಣ. ಇದೆ ನಿಜವಾದ ಭಾರತಿಯತೆ .