ಗದಗ:
ಅಲ್ಲಮರ ವಚನಗಳು ಅಂತರಂಗ ಮತ್ತು ಬಹಿರಂಗದ ಶೋಧಕ್ಕೆ ಮಹತ್ವ ನೀಡುತ್ತವೆ. ಅನೇಕ ವಚನಗಳು, ನೈಜಭಕ್ತಿ ಮತ್ತು ವೈರಾಗ್ಯದ ಪ್ರತೀಕವಾಗಿವೆ ಎಂದು ಡಾ. ತೋಂಟದ ಸಿದ್ದರಾಮ ಮಹಾಸ್ವಾಮಿಗಳು ಹೇಳಿದರು.
ಲಿಂಗಾಯತ ಪ್ರಗತಿಶೀಲ ಸಂಘದ ವತಿಯಿಂದ ನಡೆದ 2768 ನೆಯ ಶಿವಾನುಭವದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು. ಅಲ್ಲಮನ ಬೆಡಗಿನ ವಚನಗಳು ಬೆರಗು ಮೂಡಿಸುತ್ತವೆ. ಅಲ್ಲಮ ಒಬ್ಬ ಶ್ರೇಷ್ಠ ಯೋಗಿ, ಸಿದ್ದಿಪುರುಷ. ಅಜ್ಞಾನದ ಪ್ರತೀಕವಾದ ಮಾಯೆಯನ್ನು ಸೋಲಿಸಿ ಮಾಯಾ ಕೋಲಾಹಲನಾದವ. ಅನಿಮಿಷ ಯೋಗಿಯಿಂದ ಇಷ್ಟಲಿಂಗ ಪಡೆದವ ಅಲ್ಲಮ.
ಗೋರಕ್ಷಕನಿಗೂ ಅಲ್ಲಮನಿಗೂ ಭೇಟಿಯಾಗಿ ಸಂವಾದ ನಡೆದಾಗ, ಖಡ್ಗವನ್ನು ತೆಗೆದುಕೊಂಡು ನನ್ನ ಕಾಯಕ್ಕೆ ಹೊಡೆ ಎಂದಾಗ ಅಲ್ಲಮ ಹೊಡೆದರೂ ಏನೂ ಆಗುವುದಿಲ್ಲ. ಆವಾಗ ಗೋರಕ್ಷಕ ನಾನು ತಪಸ್ಸು ಮಾಡಿ ವಜ್ರಕಾಯನಾಗಿದ್ದೇನೆ. ನೀನು ಹೊಡೆದ ಖಡ್ಗ ಏನೂ ಮಾಡುವುದಿಲ್ಲ ಎಂದು ಹೇಳಿದಾಗ, ಅಲ್ಲಮ ಹೌದಾ ಹಾಗಾದರೆ ನೀನು ಈ ಖಡ್ಗ ತೆಗೆದುಕೊಂಡು ನನಗೆ ಹೊಡೆ ಎಂದಾಗ, ಗೋರಕ್ಷಕ ಹೊಡೆಯಲು ಹೋಗುತ್ತಾನೆ.
ಖಡ್ಗ ಗಾಳಿಯಲ್ಲಿ ತೇಲುತ್ತದೆ ಹೊರತು ಅಲ್ಲಮನ ಕಾಯಕ್ಕೆ ಏನು ಮಾಡುವುದಿಲ್ಲ. ಆವಾಗ ಅಲ್ಲಮ ಹೇಳುತ್ತಾರೆ, ಯಾವುದಕ್ಕೆ ನಾಶವಿದೆಯೋ ಅದಕ್ಕೆ ಖಡ್ಗ ಚುಚ್ಚುತ್ತದೆ ಎಂದಾಗ, ಗೋರಕ್ಷಕ ಶರಣಾಗುತ್ತಾನೆ. ಅನುಭವ ಮಂಟಪದ ಮೊದಲ ಅಧ್ಯಕ್ಷರು ಅಲ್ಲಮ ಪ್ರಭುಗಳು ಎಂದು ಅಲ್ಲಮರ ವಚನಗಳ ವೈಭವನ್ನು ತಿಳಿಸಿದರು.
ಉಪನ್ಯಾಸಕರಾಗಿ ಆಗಮಿಸಿದ, ಗದುಗಿನ ಸನ್ಮಾರ್ಗ ಪದವಿಪೂರ್ವ ಕಾಲೇಜಿನ ಉಪನ್ಯಾಸಕರಾದ ಪ್ರೊ. ಎಚ್ ಎಸ್. ದಳವಾಯಿ ಅವರು, ‘ಅಂತರಂಗದ ಅನ್ವೇಷಣೆ ಅಲ್ಲಮಪ್ರಭುಗಳ ವಚನಗಳ ತತ್ವಪಥ’ ಎಂಬ ವಿಷಯ ಕುರಿತು ಮಾತನಾಡುತ್ತಾ, ಅಲ್ಲಮನು ಶಿವಾಂಶ ಸಂಭೂತನಾಗಿದ್ದ. ಕಾಮಾದಿ ಗುಣಗಳು ಅವನಿಗೆ ಸೋಂಕುವುದೇ ಇಲ್ಲ. ಅಲ್ಲಮರ ವಚನಗಳಲ್ಲಿ ಆಂತರಿಕ ಅನುಭಾವ, ದೈವಿಕ ಭಕ್ತಿ ಆಚರಣೆಗಳು ಟೀಕೆಗಳನ್ನು ವಿವರಿಸುತ್ತವೆ. ಸಾಂಪ್ರದಾಯಕ ನಂಬಿಕೆಗಳಿಗೆ ಸವಾಲು ಹಾಕಲು ಅಲ್ಲಮರು ವಿರೋಧಾಭಾಸ ಮತ್ತು ರೂಪಕಗಳನ್ನು ಬಳಸಿದ್ದಾರೆ ಎಂದು ಅರ್ಥಪೂರ್ಣವಾಗಿ ವಚನಗಳನ್ನು ವಿಶ್ಲೇಷಿಸಿದರು.
ಗೋಜನೂರ ಮೂರಾರ್ಜಿ ದೇಸಾಯಿ ವಸತಿ ಶಾಲೆಯ 9ನೇ ತರಗತಿ ವಿದ್ಯಾರ್ಥಿ ಪುನೀತರೆಡ್ಡಿ ಎನ್.ಎ, ರಾಜ್ಯಮಟ್ಟದ ಪ್ರಥಮ ಟೆಲಿಸ್ಕೋಪ್ ತರಬೇತಿಯಲ್ಲಿ ಭಾಗವಹಿಸಿ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್, ಏಷ್ಯಾ ಬುಕ್ ಆಫ್ ರೆಕಾರ್ಡ್ಸ್ ಮತ್ತು ವರ್ಡ್ಸ್ ಬುಕ್ ಆಫ್ ರೆಕಾರ್ಡ್ಸ್ ದಾಖಲಿಸಿದ ನಿಮಿತ್ಯ ಅವರನ್ನು ಸನ್ಮಾನಿಸಲಾಯಿತು

ಮಾರ್ಗದರ್ಶನ ಮಾಡಿದ ಶಿಕ್ಷಕರಾದ ನಿಂಗಪ್ಪ ಹತ್ತಿಕಾಳು, ಮಾಯಮ್ಮನವರ ಹಾಗೂ ಅವರ ತಂದೆ ತಾಯಿಯವರಾದ ಅಶ್ವಥರೆಡ್ಡಿ ಎನ್ ಟಿ ಹಾಗೂ ಸುಧಾ ಹುಚ್ಚಣ್ಣನವರ ಉಪನ್ಯಾಸಕರು ಎಫ್ ಎಂ ಡಬಾಲಿ ಕಾಲೇಜು ಶಿರಹಟ್ಟಿ ಇವರು ಉಪಸ್ಥಿತರಿದ್ದರು.
ಮೃತ್ಯುಂಜಯ ಹಿರೇಮಠ ಹಾಗೂ ಗುರುನಾಥ ಸುತಾರ ವಚನ ಸಂಗೀತ ಸೇವೆಯನ್ನು ನಡೆಸಿಕೊಟ್ಟರು. ಧಾರ್ಮಿಕ ಗ್ರಂಥ ಪಠಣವನ್ನು ಕುಮಾರಿ ಸಿಂಧು ಖಟವಟೆ ಹಾಗೂ ವಚನ ಚಿಂತನವನ್ನು ಜಮುನಾ ಖಾಟ್ವಾ ನಡೆಸಿದರು. ದಾಸೋಹ ಸೇವೆಯನ್ನು ಸರೋಜಿನಿ ಶಿಂತ್ರಿ ಸಾ. ಬೆಂಗಳೂರ ಇವರು ವಹಿಸಿದ್ದರು.
ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ಬಾಲಚಂದ್ರ ಭರಮಗೌಡ್ರ, ಉಪಾಧ್ಯಕ್ಷ ಡಾ ಉಮೇಶ ಪುರದ, ಕಾರ್ಯದರ್ಶಿ ವೀರಣ್ಣ ಗೋಟಡಕಿ, ಸಹಕಾರ್ಯದರ್ಶಿ ಸೋಮು ಪುರಾಣಿಕ ಹಾಗೂ ನಾಗರಾಜ ಹಿರೇಮಠ, ಸಂಘಟನಾ ಕಾರ್ಯದರ್ಶಿ ಮಹೇಶ ಗಾಣಿಗೇರ, ಕೋಶಾಧ್ಯಕ್ಷ ಬಸವರಾಜ ಕಾಡಪ್ಪನವರ ಹಾಗೂ ಶಿವಾನುಭವ ಸಮಿತಿಯ ಸಹಚೇರ್ಮನ್ ಶಿವಾನಂದ ಹೊಂಬಳ ಹಾಗೂ ಮಠದ ಭಕ್ತರು ಉಪಸ್ಥಿತರಿದ್ದರು. ಶಿವಾನುಭವ ಸಮಿತಿಯ ಚೇರ್ಮನ್ ಐ.ಬಿ. ಬೆನಕೊಪ್ಪ ಸ್ವಾಗತಿಸಿದರು. ವಿದ್ಯಾ ಗಂಜಿಹಾಳ ಕಾರ್ಯಕ್ರಮ ನಿರೂಪಿಸಿದರು.
