ಶಿವಮೊಗ್ಗದಲ್ಲಿ ಒಂದು ತಿಂಗಳ ಅಲ್ಲಮರ ವಚನ ಚಿಂತನ ಕಾರ್ತಿಕ

ಬಸವ ಮೀಡಿಯಾ
ಬಸವ ಮೀಡಿಯಾ

ಶಿವಮೊಗ್ಗ:

ನಗರದ ಬಸವ ಕೇಂದ್ರದ  ಒಂದು ತಿಂಗಳಿನ ‘ಚಿಂತನ ಕಾರ್ತಿಕ’ ಕಾರ್ಯಕ್ರಮ ಈಚೆಗೆ ಉದ್ಘಾಟನೆಯಾಯಿತು. ಪ್ರತಿವರ್ಷವೂ ಈ ಕಾರ್ಯಕ್ರಮ ನಡೆಸಿಕೊಂಡು ಬರಲಾಗುತ್ತಿದೆ. ಈ ವರ್ಷದ ಚಿಂತನೆಗಳು ಅಕ್ಟೋಬರ್ 24, 2025 ರಿಂದ ನವೆಂಬರ್ 23, 2025 ರವರೆಗೆ ನಡೆಯುತ್ತವೆ. ಸುಮಾರು 30 ಜನ ವಿವಿಧ ಚಿಂತಕರು ಅಲ್ಲಮಪ್ರಭುವಿನ ವಚನಗಳ ಸಾಲಿನ ಆಧಾರದ ಮೇಲೆ ಅನುಭಾವ ನೀಡಲಿದ್ದಾರೆ.

ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಡಾ. ಬಸವ ಮರುಳಸಿದ್ದ ಸ್ವಾಮಿಗಳು, ಈ ಹಿಂದೆ ನಾವು ಸಮಾಜ ಕಟ್ಟಿದ ಮಹಾನ್ ವ್ಯಕ್ತಿಗಳ, ಮಹಾತ್ಮರಾದ ಸ್ವಾಮೀಜಿಗಳ ಬಗ್ಗೆ ಚಿಂತನ ಕಾರ್ತಿಕ ನಡೆಸಿದ್ದೆವು. ಈ ವರ್ಷ ಅಲ್ಲಮನ ವಚನದ ಸಾಲುಗಳನ್ನು ಇಟ್ಟುಕೊಂಡು ಜನರೊಂದಿಗೆ ಮುಖಾಮುಖಿ ನಡೆಸಲು ತೀರ್ಮಾನಿಸಿ ಈ ಕಾರ್ಯಕ್ರಮ ನಡೆಸುತ್ತಿದ್ದೇವೆ.

ಸೋಮರಾಜ ಕವಿ ಅಲ್ಲಮ್ಮಪ್ರಭುಗಳ ಬಗ್ಗೆ ಮಾತನಾಡಿ ಶೈವರು ಶಿವನೆಂದು, ವೈಷ್ಣವರು ವಿಷ್ಣುವೆಂದು, ಬ್ರಾಹ್ಮಣನು ಬ್ರಹ್ಮನೆಂದು, ಜೈನರು ಜಿನನೆಂದು ಹೀಗೆ ಎಲ್ಲರೂ ತಮ್ಮವನೆಂದು ಭಾವಿಸಿ ಪೂಜಿಸಲು ಸರ್ವಮುಖಗಳಿಂದ ಅವರ ಪೂಜೆಯನ್ನು ಒಲಿದು ಸ್ವೀಕರಿಸಿ ಸದಾ ವಿಲಾಸಯುಕ್ತನಾಗಿ ಮೆರೆಯುವ ಅಲ್ಲಮನು ನನ್ನ ಹೃದಯ ಕಮಲದಲ್ಲಿ ಅಗಲದಂತಿರಲಿ ಎಂದಿದ್ದಾರೆ.

ಇಂಥ ಪ್ರಭುದೇವರ ಬಗ್ಗೆ ಚಾಮರಸ ಪ್ರಭುಲಿಂಗಲೀಲೆ ಎಂಬ ಕೃತಿಯನ್ನು ಬರೆದಿದ್ದು ಆ ಕಾಲದಲ್ಲಿ ಇದು ಹಲವು ಭಾಷೆಗಳಲ್ಲಿ ಪ್ರಕಟವಾಯಿತು ಎಂದರು. ಒಟ್ಟಿನಲ್ಲಿ ಚಿಂತನ ಕಾರ್ಯಕ್ರಮದ ಮುಖಾಂತರ ನಮ್ಮ ಅರಿವಿನ ವಿಸ್ತಾರ ಹೆಚ್ಚಿಸಿಕೊಳ್ಳಬೇಕು ಎಂದರು.

ಪ್ರಾಸ್ತಾವಿಕವಾಗಿ ಜಿ. ಬೆನಕಪ್ಪ ಮಾತನಾಡಿ, ಇಂತಹ ಕಾರ್ಯಕ್ರಮಕ್ಕೆ ಧನಸಹಾಯವನ್ನು ಕೊಟ್ಟು ಸಹಕರಿಸಿದ ವಿದ್ಯುತ್ ಇಲಾಖೆಯ ವೀರಶೈವ ಲಿಂಗಾಯತ ನೌಕರರ ಕ್ಷೇಮಾಭಿವೃದ್ಧಿ ಸಂಘ ಶಿವಮೊಗ್ಗಕ್ಕೆ ಧನ್ಯವಾದಗಳು ಅರ್ಪಿಸಿ, 2007 ರಿಂದ ಈ ಚಿಂತನ ಕಾರ್ಯಕ್ರಮ ಪ್ರಾರಂಭವಾಗಿ 19 ವರ್ಷದಿಂದ ನಡೆದುಕೊಂಡು ಬರುತ್ತಿದೆ. ಇಂತಹ ಕಾರ್ಯಕ್ರಮಕ್ಕೆ ಸಹಕರಿಸಿದ ಎಲ್ಲರಿಗೂ ಶುಭ ಹಾರೈಸಿದರು. ಇದೇ ಸಂದರ್ಭದಲ್ಲಿ ವಿದ್ಯುತ್ ಇಲಾಖೆಯ ಸೇವಾರ್ತಿಗಳನ್ನು ಸನ್ಮಾನಿಸಲಾಯಿತು,

ಕಾರ್ಯಕ್ರಮದಲ್ಲಿ ಸಾಹಿತ್ಯ ಅಕಾಡೆಮಿ ಪುರಸ್ಕೃತ ಡಾ. ಸಾಸ್ವೆಹಳ್ಳಿ ಸತೀಶ್ ಮಾತನಾಡಿ, ಅಲ್ಲಮಪ್ರಭುಗಳ ಪ್ರೇರಣೆಯಿಂದ ಅನೇಕ ವ್ಯಕ್ತಿಗಳು ಚಿತ್ರಸಾಹಿತ್ಯ ಮತ್ತು ಚಿತ್ರಗೀತೆಗಳನ್ನು ರಚಿಸಿದ್ದಾರೆ. ತಾವು ಪ್ರಶಸ್ತಿಗಾಗಿ ಯಾವುದೇ ಕೆಲಸ ಮಾಡಿಲ್ಲ ಆದರೆ ಅನೇಕ ಪ್ರಶಸ್ತಿಗಳು ನನಗೆ ಬಂದಿವೆ, ಅದರಲ್ಲೂ ಈಸೂರಿನ ಕಥೆಯ ನಾಟಕಕ್ಕೆ ಬಹುಮಾನ ಬಂದಿರುವುದು ಸಂತೋಷವಾಗಿದೆ.

ಕಾರ್ಯಕ್ರಮದಲ್ಲಿ ಕುಮಾರಿ ತನ್ಮಯಿ ಪ್ರಾರ್ಥನೆ ಮಾಡಿದರು. ಕಾರ್ಯಕ್ರಮದ ನಂತರ ಪ್ರಸಾದ ದಾಸೋಹ ಸೇವೆ ಮಾಡಲಾಗಿತ್ತು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/H81yNL3dGRcHb7EBxL5oqr

Share This Article
Leave a comment

Leave a Reply

Your email address will not be published. Required fields are marked *