ಬಸವ ಕಲ್ಯಾಣ
ಸಂಸತ್ ಭವನದ ಚಳಿಗಾಲ ಅಧಿವೇಶನದಲ್ಲಿ ಮಾತನಾಡುತ್ತ ಕೇಂದ್ರ ಗೃಹ ಸಚಿವರಾದ ಅಮಿತ್ ಶಾ ಅವರು ಅಂಬೇಡ್ಕರ್ ಹೆಸರು ಈಗ ಫ್ಯಾಷನ್ ಆಗಿದೆ, ಅಂಬೇಡ್ಕರ್, ಅಂಬೇಡ್ಕರ್, ಅಂಬೇಡ್ಕರ್, ಅಂಬೇಡ್ಕರ್ ಎಂದು ಹೆಸರು ಹೇಳುವ ಬದಲು ಇಷ್ಟೊಂದು ಬಾರಿ ದೇವರು ಹೆಸರು ಹೇಳಿದ್ದರೆ ಸ್ವರ್ಗಕ್ಕೆ ಹೋಗಬಹುದಿತ್ತು ಎಂದು ಹೇಳಿದ್ದಾರೆ.

ಅಂಬೇಡ್ಕರ ಅವರನ್ನು ಈ ಪರಿಯಲ್ಲಿ ಅವಮಾನಗೊಳಿಸಿದ ಅಮಿತ್ ಶಾ ಅವರ ನಡೆಗೆ ದಿಕ್ಕಾರವಿರಲಿ. ಕಾಂಗ್ರೇಸ್ ನವರನ್ನು ತೆಗಳುವ ನೆಪದಲ್ಲಿ ಆ ಮಾನವತಾವಾದಿ ಅಂಬೇಡ್ಕರ್ ಹೆಸರನ್ನೇ ಬಳಸಿಕೊಳ್ಳಬೇಕಿತ್ತಾ? ನಿಮ್ಮ ರಾಜಕೀಯ ದೊಂಬರಾಟ, ಹರಕುಬಾಯಿ ಪ್ರದರ್ಶನ ಕಾರಣವಾಗಿ ದೇಶದಲ್ಲಿ ಎಂತಹ ವಿಷಬೀಜ ಬಿತ್ತಲು ಹೊರಟಿರುವಿರಿ.
ದೇಶದ ಅಭಿವೃದ್ಧಿಯನ್ನು ಚರ್ಚಿಸದೆ ಬರೀ ಒಬ್ಬರನ್ನು ಒಬ್ಬರು ಬೈಯ್ದಾಡಿಕೊಳ್ಳುತ್ತಾ, ಪ್ರತಿಭಟನೆ ಮಾಡುತ್ತಾ ವ್ಯರ್ಥ ಕಾಲಹರಣ ಮಾಡುವಿರಲ್ಲಾ? ದೇಶದ ಜ್ವಲಂತ ಸಮಸ್ಯೆಗಳಾದ ರೈತನ ಸಮಸ್ಯೆ, ನಿರುದ್ಯೋಗ ಸಮಸ್ಯೆ, ಭ್ರಷ್ಟಾಚಾರ ವ್ಯವಸ್ಥೆ ಕಡೆ ಗಮನ ಹರಿಸದೆ, ಇಂತಹದ್ದೊಂದು ಹೇಳಿಕೆ ನೀಡಿ ಬೇರೊಂದು ಕಡೆ ಗಮನ ಸೆಳೆದು ದೇಶದ ಜನರ ಕಣ್ಣಿಗೆ ಮಣ್ಣೆರೆಚಿ, ದೇಶದ ಜನರ ಹಣವನ್ನು ಎಷ್ಟು ಹಾಳು ಮಾಡುತ್ತಿರುವಿರಲ್ಲಾ ನಿಮ್ಮ ಈ ನಡೆ ನಮ್ಮ ರಕ್ತವನ್ನು ಕುದಿಯುವಂತೆ ಮಾಡುತ್ತಿದೆ. ಈಗ ನಮ್ಮ ಪರಿಸ್ಥಿತಿ “ಬಡವನ ಕೋಪ ಅವುಡಿಗೆ ಮೂಲ ಎನ್ನುವಂತಾಗಿದೆ”.
ಅಂಬೇಡ್ಕರ್ ಹೆಸರು ಹೇಳಿದರೆ ಫ್ಯಾಷನ್ನಾ? ದೇವರು ಹೆಸರು ಹೇಳಿದರೆ ಸ್ವರ್ಗಾನಾ? ಅಂತೂ ನಿಮ್ಮ ಮನುವಾದಿ ಚಡ್ಡಿಗುಣ ತೋರಿಸಿ ಬಿಟ್ಟಿರಲ್ಲಾರೀ!
ದೇವಲೋಕದ ಸ್ವರ್ಗದ ಬಗ್ಗೆ, ಅಸ್ಪೃಶ್ಯರ ಕರ್ಮದ ಬಗ್ಗೆ ಹೇಳುವ ‘ಮನು’ ಗ್ರಂಥವನ್ನು ಅಂಬೇಡ್ಕರ್ ನೀವು ನಿಂತ ಜಾಗದಲ್ಲಿ ಸುಟ್ಟು ಎಸೆದುದನ್ನು ನೆನಪಿಸಿಕೊಳ್ಳಿ. ನಿಮಗೆ ಮನುಷ್ಯ ಧರ್ಮದ ದ್ವೇಷಿ ಮನು ದೇವರಾದರೆ, ನಮಗೆ ಮನುಷ್ಯರನ್ನು ಸ್ವತಂತ್ರಗೊಳಿಸುವ ಅಂಬೇಡ್ಕರ್ ದೇವರಾಗಬಾರದಾ? ಅವರು ಹೆಸರು ಒಂದು ಬಾರಿ ಅಲ್ಲ, ನೂರು ಬಾರಿ ಅಲ್ಲ, ನಮ್ಮ ಉಸಿರುಸಿರಿಗೂ ಅಂಬೇಡ್ಕರನ್ನು ಸ್ಮರಿಸಿದರು ಅದು ಕಡಿಮೆ. ಅಷ್ಟೊಂದು ಋಣ ನಮ್ಮ ಮೇಲೆ ಈ ದೇಶದ ಮೇಲೆ ಅಷ್ಟೇ ಏಕೆ ನಿಮ್ಮ ಮೇಲೆಯೂ ಇದೆ ಎಂಬುದನ್ನು ಮರೆಯದಿರಿ.
ಬಿಟ್ಟಿ ಕೂಳು ತಿಂದು ಸ್ವೇಚ್ಛಾಚಾರದಿ ನಡೆದಾಡುವ ಕಾಲ್ಪನಿಕ ಸ್ವರ್ಗವೆಂಬುದು ಚಂದ್ರಶೇಖರನೆಂಬ ಹೆಡ್ಡನ, ಜೀವಗಳ್ಳರ ಗುಂಪಿನ ಸಂತೆ ಎಂಬುದನ್ನು ಗುರು ಬಸವಾದಿ ಪ್ರಮಥರು 12ನೇ ಶತಮಾನದಲ್ಲಿಯೇ ವಚನಗಳ ಮೂಲಕ ಹೀಗಳೆದಿದ್ದಾರೆ. ಇಂತಹ ಸ್ವರ್ಗವು ನಿಮಗೆ ಶ್ರೇಷ್ಟವಾಗುವುದಾದರೆ ಆಗಲಿ ನಮ್ಮದೇನು ತಕರಾರಿಲ್ಲ. ಆದರೆ 545 ಸದಸ್ಯರನ್ನು ಯಾವುದೇ ಜಾತಿ ಮತ ಪಂಥ ಪಂಗಡ ಧರ್ಮ ಭಾಷೆ ಹೆಣ್ಣು ಗಂಡು ಬೇಧವಿಲ್ಲದೆ ಒಟ್ಟಿಗೆ ಸೇರಿಸಿ ಸಂವಿಧಾನದ ಸ್ವರ್ಗದಲ್ಲಿ ತೇಲುವಂತೆ ಮಾಡಿದ ಅಂಬೇಡ್ಕರ್ ನಮ್ಮ ದೇವರಾದರೆ, ಅವರ ಹೆಸರನ್ನು ಸಾವಿರ ಬಾರಿ ಬಳಸಿದರೆ ನಿಮಗಾಗುವ ನೋವೇನು?. ನಿಮ್ಮದೇ ಪ್ರತಿಬಿಂಬವಾಗಿರುವ ಅಥವಾ ನಿಮ್ಮ ಅಣ್ಣನೇ ಆಗಿರುವ ಕಾಂಗ್ರೇಸ್ ನವರನ್ನು ಟೀಕೆ ಮಾಡಲು ನಮ್ಮ ದೇವರ ಹೆಸರಿಗೆ (ಅಂಬೇಡ್ಕರ್) ಅಪಮಾನ ಮಾಡಿರುವುದಕ್ಕೆ ತೀವ್ರವಾಗಿ ಖಂಡಿಸುತ್ತೇವೆ ಅಲ್ಲದೆ ರಾಜನಾಮೆಗೆ ಒತ್ತಾಯಿಸುತ್ತೇವೆ.
ದೇವರ ದೃಷ್ಟಿಯಲ್ಲಿ ಸಮಾನತೆಗಿಂತ, ಮನುಷ್ಯರ ದೃಷ್ಟಿಯಲ್ಲಿ ಸಮಾನತೆ ಬೇಕೆಂದು ತನ್ನ ಜೀವನವನ್ನೇ ಉರಿಯುವ ಕರ್ಪೂರದಂತೆ ಸವೆಸಿ ಹೋರಾಡಿ ನಿಮ್ಮನ್ನೊಳಗೊಂಡಂತೆ ನಿಮ್ಮ ಜೊತೆಗಾರ ಪ್ರಧಾನಿ ಮೋದಿಯನ್ನೊಳಗೊಂಡಂತೆ ನಿಮ್ನ ವರ್ಗದವರಿಗೆ ದೇವರ ಸ್ಥಾನ (ಅಧಿಕಾರ ಅನುಭವಿಸಲು ಅವಕಾಶ)ಕಲ್ಪಿಸಿಕೊಟ್ಟ ದಾತನನ್ನೇ ಅವಮಾನಗೊಳಿಸುತ್ತಿರುವುದಕ್ಕೆ ತಕ್ಕ ಬೆಲೆ ತೆರಲೇಬೇಕಾಗುತ್ತದೆ.
ಹಲವಾರು ವರ್ಷಗಳಿಂದ ಜ್ವಾಲಾಮುಖಿಯಂತೆ ಕೊತಕೊತನೇ ಕುದಿಯುತ್ತಿದ್ದ ಅಂಬೇಡ್ಕರರ ಬಗೆಗಿನ ಹೊಟ್ಟೆಯೊಳಗಿನ ಕಿಚ್ಚು ಅಂತೂ ಇಂತೂ ಕಾರಿಬಿಟ್ಟಿರುವಿರಿ ಮತ್ತು ನಿಮ್ಮ ಗೋಡ್ಸೆ ನೀತಿಯನ್ನು ಸಾಭೀತು ಮಾಡಿಬಿಟ್ಟಿರುವಿರಿ. ಎಷ್ಟು ದಿನ ಅಂತ ಇಟ್ಟುಕೊಳ್ಳಲು ಸಾಧ್ಯ ಹೇಳಿ ನಿಮ್ಮೊಳಗಿನ ಆ ಕಿಚ್ಚು.
ಈಗ ನಿಮ್ಮ ಅರೆ ಪ್ರಜ್ಞಾವಸ್ಥೆಯಿಂದ ಸತ್ಯ ಹೊರಬಂದಾಗಿದೆ. ‘ಕದ್ದಿರುವ ಕಳ್ಳ ತಪ್ಪೊಪ್ಪಿಕೊಂಡು ಕ್ಷಮೆ ಕೇಳಿದರೆ ಕಳ್ಳನೆಂಬ ಹಣೆ ಪಟ್ಟಿ ಅಳಿಸಲಾದೀತೆ’? ‘ಅಡಿಕೆಗೆ ಹೋದ ಮಾನ ಆನೆ ಕೊಟ್ಟರೂ ಮರಳಿ ಬಂದೀತೆ’? ಈಗ ನೀವು ಸ್ಪಷ್ಟನೆ ಕೊಟ್ಟಿರುವುದು ಅಂಬೇಡ್ಕರರನ್ನು ಅಂದು ಒಪ್ಪಿಕೊಳ್ಳದ ಅಂದಿನ ಕಾಂಗ್ರೇಸ್ ನವರಿಗೆ ಆದರೆ ಅಂಬೇಡ್ಕರವಾದಿಗಳಿಗಲ್ಲ.
ನಿಮ್ಮ ಈ ಹೇಳಿಕೆ ಈ ದೇಶದ ಜನತೆಯನ್ನು ಎರಡು ಭಾಗವಾಗಿ ಒಡೆದು ಮನುವಾದಿಗಳು, ಅಂಬೇಡ್ಕರ್ ವಾದಿಗಳು ಎಂದು ವಿಂಗಡಿಸುವಂತೆ ಮಾಡಿದೆ. ದೇಶ ವಿಭಜನೆಯ ದ್ರೋಹಿ ಎಂಬ ಪಟ್ಟಕ್ಕೆ ನಿನ್ನೆ ನೀವು ಪಾತ್ರರಾದಿರಿ. ‘ಮಿಂಚಿ ಹೋದ ಕಾಲಕ್ಕೆ ಚಿಂತಿಸಿ ಫಲವೇನು’ ಮನುವಾದವನ್ನು ಬೆಂಬಲಿಸಿ ಅಂಬೇಡ್ಕರ ಭಾರತವನ್ನು ಎದುರಿಸಿರಿ. ಸಂವಿಧಾನ ಶಿಲ್ಪಿ ಅಂಬೇಡ್ಕರವರ ಸಂವಿಧಾನ ನೀಡಿದ ಗೃಹ ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಿ ಅಧಿಕಾರದಿಂದ ಕೆಳಗಿಳಿದು ಮನುವಾದದ ಹುಳುಕುಂಡದಲ್ಲಿ ಹೊರಳಾಡಿರಿ ಎಂಬ ಎಚ್ಚರಿಕೆಯ ನಮ್ಮ ಉತ್ತರ.
ಅಧ್ಬುತ ಲೇಖನ ಶ್ರೀಗಳದ್ದು , ಬಹಳ ಸ್ಪಷ್ಟವಾಗಿ ಅವರ ವಿಚಾರಧಾರೆಯನ್ನು ಖಂಡಿಸಿದ್ದೀರಿ , ಈ ರೀತಿಯ ಬಸವಣ್ಣ ,ಅಂಬೇಡ್ಕರ್ ,ಸಂವಿಧಾನ ,ಮನುಸ್ಮೃತಿ ,ಜಡ್ಡು ಸಂಪ್ರದಾಯ ಕುರಿತ ಸ್ಪಷ್ಟ ಯೋಚನೆಗಳೇ ನಮಗೆ ದಾರಿದೀಪ.
ಕಾಣದ ದೇವರ ಹೆಸರು ಹೇಳಿಕೊಂಡು ಅರ್ಥವಾಗದ ಮಂತ್ರ ಕೇಳಿಕೊಂಡು ಇದ್ದರೆ ಇವರ ರಾಜಕೀಯ ಬೇಳೆ ಬೇಯುವದು,, ಅಂಬೇಡ್ಕರ್ ಮತ್ತು ಸಂವಿಧಾನ ಸ್ಮರಣೆ ಮಾಡಿದರೆ ಜನರಿಗೆ ತಮ್ಮ ಸಾಂವಿಧಾನಿಕ ಹಕ್ಕುಗಳು ಮತ್ತು ಗೌರವದ ಬಗ್ಗೆ ಜ್ಞಾನ ಜಾಗೃತಿ ಮೂಡಿಸುವುದು,,,ಆಗ ಈ ಲಂಗೋಟಿಗಳ ರಾಜಕೀಯ ಬೇಳೆ ನೆನೆಗುದಿಗೆ ಬೀಳುವುದು,,