ಬೀದರ:
ಪೂಜ್ಯಶ್ರೀ ಅಕ್ಕ ಅನ್ನಪೂರ್ಣತಾಯಿ ಮರೆಯಾಗಲಿಲ್ಲ, ಪ್ರಭುದೇವ ಮಹಾಸ್ವಾಮೀಜಿಯವರಲ್ಲಿ ಜೀವಂತವಾಗಿದ್ದಾರೆ. ತನ್ನೆಲ್ಲ ಕನಸುಗಳು ಸ್ವಾಮೀಜಿಯವರ ಮುಖಾಂತರ ನನಸು ಮಾಡಿಕೊಳ್ಳುತ್ತಿದ್ದಾರೆ ಎಂದು ಕೊಪ್ಪಳದ ವಿಶ್ವಗುರು ಬಸವೇಶ್ವರ ಟ್ರಸ್ಟಿನ ರಾಜೇಶ ಸಸಿಮಠ ನುಡಿದರು.
ಗೋರಟಾ ಗ್ರಾಮದ ಲಿಂಗಾಯತ ಮಹಾಮಠದಲ್ಲಿ ನಡೆದ ಮಾಸಿಕ ಶರಣ ಸಂಗಮ ಹಾಗೂ 2026 ವಚನ ವಿಜಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಪೂಜ್ಯಶ್ರೀ ಅಕ್ಕನವರು ನಾಡು ಕಂಡ ಅಪ್ರತಿಮ ಪ್ರವಚನಕಾರರು, ಅನುಭವಿಗಳು. ಲಿಂಗಾಯತ ಮಹಾಮಠವನ್ನು ಸ್ಥಾಪಿಸಿ ಪೂಜ್ಯ ಪ್ರಭುದೇವ ಮಹಾಸ್ವಾಮೀಜಿಯವರ ಪ್ರತಿಭೆಯನ್ನು ಕಂಡು ಮಠದ ಪೀಠಾಧಿಪತಿಯಾಗಿ ಪಟ್ಟವನ್ನು ಕಟ್ಟಿ ತನ್ನೆಲ್ಲಾ ಸಂಕಲ್ಪ ಕಾರ್ಯಗಳು ಪೂಜ್ಯರ ಮುಖಾಂತರ ಪೂರ್ಣಗೊಳಿಸಿಕೊಳ್ಳುತ್ತಿದ್ದಾರೆ.
ಇಂದಿಗೂ ಅಕ್ಕನವರ ಹೆಜ್ಜೆಯಲ್ಲಿ ಹೆಜ್ಜೆ ಇಟ್ಟು ಪೂಜ್ಯರು ಹಳ್ಳಿಹಳ್ಳಿಗಳಲ್ಲಿ 770 ಪ್ರವಚನಗಳು ಹಮ್ಮಿಕೊಂಡು ಪ್ರತಿ ಗ್ರಾಮದಲ್ಲಿ ವಚನಗಳ ಮೆರವಣಿಗೆ, ವಚನಗಳಿಗೆ ಪಟ್ಟಕಟ್ಟುವ ಕಾರ್ಯವನ್ನು ಮಾಡುತ್ತಾ ಅಕ್ಕನವರು ಕನಸು ನನಸು ಮಾಡುತ್ತಿದ್ದಾರೆ ಎಂದು ತಿಳಿಸಿದರು.

ಕಾರ್ಯಕ್ರಮದ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ವಿಶ್ವಗುರು ಬಸವೇಶ್ವರ ಟ್ರಸ್ಟಿನ ಅಧ್ಯಕ್ಷರಾದ ವೀರಭದ್ರಪ್ಪ ನಂದ್ಯಾಳ, ಪ್ರತಿವರ್ಷ ಬಸವ ಜಯಂತಿಯ ನಿಮಿತ್ಯ ಕೊಪ್ಪಳ ನಗರದಲ್ಲಿ ನಡೆಯುವ ಪ್ರವಚನವನ್ನು ಈ ವರ್ಷ 15 ದಿನಗಳ ಪರಿಯಂತರ ಪೂಜ್ಯರ ಪ್ರವಚನ ನಡೆಸಲು ತೀರ್ಮಾನಿಸಲಾಗಿದೆ. ಪೂಜ್ಯರ ಪ್ರವಚನ ಕೇಳುವುದು ಆನಂದ ಎಂದು ತಿಳಿಸಿದರು.
ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದ ಲಿಂಗಾಯತ ಮಹಾಮಠ ಪೀಠಾಧಿಪತಿಗಳಾದ ಪ್ರಭುದೇವ ಮಹಾಸ್ವಾಮೀಜಿ, ಹಿಂದೆ ಲೋಕ ನಡೆದು ಬರಲೆಂದು ಶರಣರು ನಮಗೆ ವಚನ ಸಾಹಿತ್ಯದ ಸೆರಗು ಕೊಟ್ಟು ಹೋಗಿದ್ದಾರೆ. ಇತಿಹಾಸದ ಪುಟ ತೆಗೆದು ನೋಡಿದಾಗ ಹೆಣ್ಣು ಹೊನ್ನು ಮಣ್ಣಿಗಾಗಿ ಅನೇಕ ಕ್ರಾಂತಿಗಳು ಘಟಿಸಿವೆ. ಆದರೆ ಮನುಕುಲದ ಏಳಿಗೆಯಾಗಿ ಘಟಿಸಿದ ಕ್ರಾಂತಿಯೆಂದರೆ ಅದು ಕಲ್ಯಾಣ ಕ್ರಾಂತಿ.
ವಚನದ ಆಳ ಅರಿಯಬೇಕಾದರೆ ಸಾಧನೆ ಅವಶ್ಯಕತೆ. ಸಾಧನೆ ಇಲ್ಲದೆ ವಚನ ಅರಿಯಲು ಹೋದರೆ ಕಬ್ಬಿನ ಹೊರಗಿನ ಎಲೆ ಮೇಲಿದಂತಾಗುತ್ತದೆ. ಕಬ್ಬು ತಿಂದಾಗ ಮಾತ್ರ ಅದರ ಸಿಹಿ ನಮಗಾಗುವಂತೆ, ಸಾಧನೆಯಾಗ ಮಾತ್ರ ವಚನದ ಆಳ ಅಗಲ ಅರಿಯಲು ಸಾಧ್ಯವೆಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ನೂತನವಾಗಿ ಆಯ್ಕೆಯಾಗಿರುವ ಸಿದ್ದಾಪುರವಾಡಿ ಗ್ರಾಮದ ನೀಲಮ್ಮನ ಬಳಗ ಅಧ್ಯಕ್ಷರಾದ ಸುಪ್ರಿಯಾ ಲೋಕೇಶ್ ಭೂರೆ ಹಾಗೂ ಮುಸ್ತಾಪುರ ನೀಲಮ್ಮನ ಬಳಗದ ಅಧ್ಯಕ್ಷರಾದ ರಾಜಶ್ರೀ ಸಿದ್ದು ಪಾಟೀಲ ಹಾಗೂ ಎಲ್ಲಾ ಸದಸ್ಯರನ್ನು ಅಭಿನಂದಿಸಲಾಯಿತು.
ಆರಂಭದಲ್ಲಿ ಷಟಸ್ಥಲ ಧ್ವಜಾರೋಹಣವನ್ನು ದಯಾನಂದ ಪಾಟೀಲ ಮುಸ್ತಪೂರ ನಡೆಸಿಕೊಟ್ಟರು. ವಿಶ್ವಗುರು ಬಸವೇಶ್ವರ ಟ್ರಸ್ಟಿನ ಸದಸ್ಯರಾದ ಗವಿಸಿದ್ದಪ್ಪ ಪಲ್ಲೇದ ವಚನ ಗಾಯನ ನಡೆಸಿಕೊಟ್ಟರು.
ಕಾರ್ಯಕ್ರಮದಲ್ಲಿ ರೇವಣಪ್ಪ ಪಾಟೀಲ, ಲೀಲಾವತಿ ಜಗಶೆಟ್ಟೆ, ವಿಜಯಲಕ್ಷ್ಮಿ ರಾಜೋಳೆ, ಬಾಬುರಾವ ರಾಜೋಳೆ, ಶ್ರೀಮಂತಪ್ಪ ರಾಜೇಶ್ವರೆ, ಚಂದ್ರಕಾಂತ ಕಣಜೆ, ಸುಭಾಷ ಪತಂಗೆ, ಶಿವರಾಜ ಕನಕಟ್ಟೆ, ಚನ್ನಬಸಪ್ಪ ಪತಂಗೆ ಮುಂತಾದವರು ಭಾಗವಹಿಸಿದ್ದರು.
ಗುರುಪೂಜೆ ಸಂಗೀತ ಬಸವರಾಜ ಕಣಜೆ ನಡೆಸಿಕೊಟ್ಟರು. ಮಹಾದೇವಿ ಸಂಗ್ರಾಮಪ್ಪ ಕಣಜೆ ಭಕ್ತಿ ದಾಸೋಹ ಗೈದರು. ಪ್ರಜ್ವಲ ಪತಂಗೆ ನಿರೂಪಣೆ ಮಾಡಿದರು. ಪ್ರಜ್ವಲ ರಾಜೋಳೆ ಸ್ವಾಗತ ಕೋರಿದರು. ಗೋರ್ಟಾ ಗ್ರಾಮದ ನೀಲಮ್ಮನ ಬಳಗದ ಶರಣೆಯರು ಪ್ರಾರ್ಥನೆ ನಡೆಸಿಕೊಟ್ಟರು.
