ಭಾಲ್ಕಿ:
ತಾಲೂಕಿನ ತಳವಾಡ ಕೆ. ಗ್ರಾಮದ ಶಿವಪ್ರಕಾಶ ಮಹಾದೇವ ಕುಂಬಾರ ಅವರ ‘ಬಸವ ಬೆಳಗು’ ಮನೆಯಲ್ಲಿ 11 ನೇ ಮಹಾಮನೆ ಕಾರ್ಯಕ್ರಮ ನಡೆಯಿತು. ಸಂಪನ್ಮೂಲ ವ್ಯಕ್ತಿ ಪ್ರಭು ಡಿಗ್ಗೆ ಅವರು ಬಸವ ಗುರುಪೂಜೆ ಹಾಗೂ ಜ್ಯೋತಿ ಪ್ರಜ್ವಲನೆ ಮಾಡಿ ಕಾರ್ಯಕ್ರಮ ಚಾಲನೆಗೊಳಿಸಿದರು.
ತಾಲೂಕ ಕನ್ನಡ ಸಾಹಿತ್ಯ ಪರಿಷತ್ತು ಮಹಿಳಾ ಘಟಕದ ಅಧ್ಯಕ್ಷೆ ಚಂದ್ರಕಲಾ ಪ್ರಭು ಡಿಕೆ ಅವರು ಅನುಭಾವವನ್ನು ನೀಡುತ್ತಾ, ವಿಶ್ವಗುರು ಬಸವಣ್ಣನವರು ಹಾಕಿಕೊಟ್ಟ ಸಪ್ತಸೂತ್ರಗಳನ್ನು ನಾವು ನೀವೆಲ್ಲರೂ ಜೀವನದಲ್ಲಿ ಅಳವಡಿಸಿಕೊಂಡಾಗ ಸಮಾಧಾನದಿಂದ ಸಂಸಾರದಲ್ಲಿ ಪರಮ ಸತ್ಯವನ್ನು ಕಾಣಲು ಅನುಕೂಲವಾಗುತ್ತದೆ ಎಂದು ತಮ್ಮ ಅನುಭಾವ ನುಡಿಯಲ್ಲಿ ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗುಂಡಪ್ಪ ಸಂಗಮಕರ ವಹಿಸಿಕೊಂಡು ಮಾತನಾಡುತ್ತ, ಬಸವಾದಿ ಶಿವಶರಣರ ಆಶಯದಂತೆ ಕಾಯಕವನ್ನು ಮಾಡಿ ಅದನ್ನು ಸಮಾಜದ ಒಳಿತಿಗಾಗಿ ದಾಸೋಹ ಮಾಡುವ ಮೂಲಕ ಜೀವನವನ್ನು ಸಾರ್ಥಕ ಮಾಡಿಕೊಳ್ಳಬೇಕು.
ಬಹಿರಂಗದಲ್ಲಿ ಪರಮಾತ್ಮನ್ನು ಕಾಣುವ ಬದಲು ಅಂತರಂಗದಲ್ಲಿ ಗುರು ಕೊಟ್ಟ ಇಷ್ಟಲಿಂಗವನ್ನು ನಿಷ್ಠೆಯಿಂದ ಪೂಜೆ ಮಾಡಬೇಕು. ಈ ಒಂದು ಶಿವಯೋಗದ ಮೂಲಕ ನಾವು ಪರಮಾತ್ಮನನ್ನು ಕಾಣಲು ಒಳ್ಳೆಯ ಮಾರ್ಗವಾಗಿದೆ ಎಂದು ಮಾರ್ಮಿಕವಾಗಿ ವಿವರಿಸಿದರು.

ಅಕ್ಕಮಹಾದೇವಿ ಮಹಿಳಾ ಬಳಗದಿಂದ ವಚನ ಪ್ರಾರ್ಥನೆ ನಡೆಯಿತು. ಶ್ರೀ ಚನ್ನಬಸವೇಶ್ವರ ಗುರುಕುಲದ ಸಂತೋಷ ಇನಾಮತೆ, ವಿಜಯಕುಮಾರ ತರನಳ್ಳಿ, ರಾಜೇಶ್, ಕಲ್ಬುರ್ಗಿಯ ಆಶಾ ಹಾಗೂ ಅಕ್ಕಮಹಾದೇವಿ ಬಳಗದ ಸದಸ್ಯರು ಉಪಸ್ಥಿತರಿದ್ದರು.
ಪ್ರಭು ಡಿಗ್ಗೆ ದಂಪತಿಗಳಿಗೆ ಬಸವ ಬೆಳಗು ಮಹಾಮನೆಯ ವತಿಯಿಂದ ಗೌರವಿಸಲಾಯಿತು. ಕಾರ್ಯಕ್ರಮವನ್ನು ಪ್ರಜ್ವಲ ಕುಂಬಾರ ನಿರೂಪಿಸಿದರು. ಶ್ರೀದೇವಿ ಕುಂಬಾರ ಶರಣು ಸಮರ್ಪಣೆ ಸಲ್ಲಿಸಿದರು.

