ಅನುಭವ ಮಂಟಪ: ಸಾಮಾನ್ಯ ಪ್ರವಾಸಿ ಸ್ಥಳವಾಗಬಾರದು – ಭಾಗ 2

ಮೂಲ ಆಶಯಗಳಿಗೆ ಜೀವ ತುಂಬದಿದ್ದರೆ ಈ ಕಟ್ಟಡಕ್ಕೆ ಯಾವುದೇ ಬೆಲೆಯಿರುವುದಿಲ್ಲ

ಬೆಂಗಳೂರು

ಉತ್ತಂಗಿ ಚೆನ್ನಪ್ಪನವರು ಹೇಳುವಂತೆ “ಯಾವ ಸ್ಥಳದಲ್ಲಿ ಅನುಭಾವಿಗಳು ಅನುಭವ ವಿನಿಮಯಕ್ಕಾಗಿ ಸಭೆ ಸೇರುತ್ತಾರೊ ಅದೇ ಅನುಭವ ಮಂಟಪ.”

ಅನುಭವ ಮಂಟಪ ಕೇವಲ ಕಲ್ಲು, ಮಣ್ಣು ಸಿಮೆಂಟ್, ಕಬ್ಬಿಣ ಬಳಸಿ ಕಟ್ಟಿದ ಸ್ಥಾವರವಲ್ಲ.

ಅದು ನಿರ್ಜೀವ ಕಟ್ಟಡವಲ್ಲ. ಅದಕ್ಕೆ ತನ್ನದೇ ಆದ ವಿಶೇಷ ಲಕ್ಷಣಗಳಿವೆ, ಪರಿಕಲ್ಪನೆ ಇದೆ, ಸಿದ್ಧಾಂತವಿದೆ, ಇತಿಹಾಸವಿದೆ.

ಬಸವ ಕಲ್ಯಾಣದಲ್ಲಿ ತಲೆಯೆತ್ತುತ್ತಿರುವ ಕಟ್ಟಡವು ಉದ್ಘಾಟನೆಯಾದ ನಂತರ ಅಲ್ಲಿ ಮೂಲ ಅನುಭವ ಮಂಟಪದಲ್ಲಿ ನಡೆಯುತ್ತಿದ್ದ ಕೆಲವಾದರೂ ಕಾರ್ಯಕ್ರಮಗಳು ನಡೆಯದಿದ್ದರೆ ಈ ಕಟ್ಟಡಕ್ಕೆ ಯಾವುದೇ ಬೆಲೆ ಇರುವುದಿಲ್ಲ. ಅದು ಸ್ಥಾವರ ಮತ್ತು ಜಂಗಮಗಳ ಸಮತೋಲಿತ ಕೇಂದ್ರವಾಗದಿದ್ದರೆ ಇಷ್ಟೊಂದು ದೊಡ್ಡ ಪ್ರಮಾಣದ ಹಣ ಖರ್ಚು ಮಾಡುವ ಅಗತ್ಯವಿರಲಿಲ್ಲ.

ಅನುಭವ ಮಂಟಪದಲ್ಲಿ ಬಸವ ತತ್ವಗಳ ಪ್ರಸಾರ, ಪ್ರಚಾರ ಆಗದಿದ್ದರೆ ದೊಡ್ಡ ಪ್ರಮಾದವಾಗುತ್ತದೆ.

ಹಾಗಾದರೆ, ಅವು ಎಂಥ ಕಾರ್ಯಕ್ರಮಗಳಾಗಿರಬೇಕು? ಅವುಗಳನ್ನು ರೂಪಿಸುವ, ನಿರ್ವಹಿಸುವ ಹೊಣೆಯನ್ನು ಯಾರು ಹೊರಬೇಕು? ಇವು ಬಹಳ ಮುಖ್ಯವಾದ ಪ್ರಶ್ನೆಗಳು.

ಗೊ.ರು.ಚ ಸಮಿತಿಯ ಶಿಫಾರಸ್ಸುಗಳಂತೆ ಈ ಕಟ್ಟಡ ನಿರ್ಮಾಣವಾದಾಗ ಅದೊಂದು ಅತ್ಯಂತ ಆಕರ್ಷಕವಾದ ಭವ್ಯ ಕಟ್ಟಡವಾಗುತ್ತದೆ.

ಆದರೆ ಅದಕ್ಕೆ ತಕ್ಕಂತೆ ಸೂಕ್ತ ಕಾರ್ಯಕ್ರಮಗಳು ಅದರಲ್ಲಿ ನಡೆಯದಿದ್ದರೆ, ಬಸವ ತತ್ವಗಳ ಪ್ರಸಾರ, ಪ್ರಚಾರ ಆಗದಿದ್ದರೆ, ಬಸವ ತತ್ವಗಳನ್ನು ಸಾಕಾರಗೊಳಿಸುವ ಸಂಘಟಕರು, ವ್ಯಕ್ತಿಗಳು, ಸಂಘ ಸಂಸ್ಥೆಗಳು ಈಗಿನಿಂದಲೇ ಕೈ ಜೋಡಿಸದಿದ್ದರೆ ಅದೊಂದು ದೊಡ್ಡ ಪ್ರಮಾದವಾಗುತ್ತದೆ.

ಮುಂದಿನ ವರ್ಷ ರಾಜಕಾರಣಿಗಳಿಂದ ಅದು ಉದ್ಘಾಟನೆಗೊಳ್ಳುತ್ತದೆ. ಯಾರೋ ಬರೆದುಕೊಟ್ಟ ಉದ್ದುದ್ದ ಭಾಷಣಗಳನ್ನು ಆ ಸಮಾರಂಭದಲ್ಲಿ ಮಾಡುತ್ತಾರೆ. ತದನಂತರ ಯಾರೂ ಅದರ ಸೂಕ್ತ ನಿರ್ವಹಣೆಯ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ.

ಕಾಲಕ್ರಮೇಣ ಅಲ್ಲಿಗೆ ಹೋಗುವವರ ಸಂಖ್ಯೆ ಕ್ಷೀಣಿಸುತ್ತ ಹೋಗುತ್ತದೆ. ಅದು ಜೀವವಿಲ್ಲದ ದೇಹದಂತೆ, ಮೂರ್ತಿ ಇಲ್ಲದ ಗುಡಿಯಂತೆ, ಬಾಹ್ಯಾಡಂಬರವುಳ್ಳ ಸತ್ವರಹಿತ ಸ್ಥಾವರವಾಗಿ ಉಳಿಯಬಲ್ಲದು.

ನೂತನ ಅನುಭವ ಮಂಟಪ ಲಿಂಗಾಯತರ ಭಂಡ
ಅಭಿಮಾನದ ಕೇಂದ್ರವಾಗಬಾರದು.

ಅಥವಾ ಅನುಭವ ಮಂಟಪ ಒಂದು ಸಾಮಾನ್ಯ ಪ್ರವಾಸಿ ಸ್ಥಳವಾಗಬಹುದಷ್ಟೆ.

ಆ ಮೂಲಕ ಬಸವತತ್ವಗಳನ್ನೇ ಆಚರಿಸದ ಮತ್ತು ಧರ್ಮಸ್ಥಳ, ಸಾಯಿಬಾಬ, ಬ್ರಹ್ಮಕುಮಾರಿ, ಇಶಾ ಫೌಂಡೇಶನ್ ಮುಂತಾದ ಕಡೆ ಶರಣು ಹೋಗುತ್ತಿರುವ ಲಿಂಗಾಯತರು ಭಂಡ ಅಭಿಮಾನ ಪಡಬಹುದು! ಅದಷ್ಟೇ ಆದರೆ ಸಾಕೇ? ಅಷ್ಟಕ್ಕಾಗಿ ಇಷ್ಟೊಂದು ಬೃಹತ ಕಟ್ಟಡವನ್ನು ಇಷ್ಟೊಂದು ಖರ್ಚಿನಲ್ಲಿ ಕಟ್ಟಬೇಕಾಗಿತ್ತೆ? ನೂತನ ಅನುಭವ ಮಂಟಪ ಲಿಂಗಾಯತರ ಭಂಡ ಅಭಿಮಾನದ ಕೇಂದ್ರವಾಗಬಾರದು.

ಭಾಗ 1: ಅನುಭವ ಮಂಟಪ ಸ್ಥಾವರವಾಗದೆ, ಜಂಗಮವಾಗಲಿ

(ಈ ಸರಣಿ ಲೇಖನಗಳಿಗೆ ನಿಮ್ಮ ಪ್ರತಿಕ್ರಿಯೆ ಹಾಗೂ ಅನುಭವ ಮಂಟಪವನ್ನು ಜಂಗಮವಾಗಿಸುವ ಬಗ್ಗೆ ನಿಮ್ಮ ಸಲಹೆಗಳನ್ನು ಸ್ವಾಗತಿಸುತ್ತೇವೆ. ನಿಮ್ಮ ಫೋನ್ ನಂಬರ್ ಸಹಿತ ನಿಮ್ಮ ಆಲೋಚನೆಗಳನ್ನು ನಮಗೆ ಇಮೇಲ್ ಅಥವಾ ವಾಟ್ಸ್ ಆಪ್ ಮಾಡಬಹುದು. ಇಮೇಲ್ ವಿಳಾಸ -
basavamedia1@gmail.com)

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/FjCpFjdZ7HXLwuA2LCEhga

Share This Article
1 Comment
  • ಲೇಖಕರೂ, ಜಾಗತಿಕ ಲಿಂಗಾಯತ ಮಹಾಸಭಾದ ಮಹಾ ಪ್ರಧಾನ ಕಾರ್ಯದರ್ಶಿಗಳೂ, ಬಸವ ಕಲ್ಯಾಣದ ಹಲವು ಯೋಜನೆಗಳಲ್ಲಿ ಸರ್ಕಾರೀ ಪ್ರಾಯೋಜಕತ್ವದ ಯೋಜನೆಗಳಲ್ಲಿ ಜವಾಬ್ದಾರಿಯುತ ಸ್ಥಾನಗಳಲ್ಲಿ ಕಾರ್ಯನಿರ್ವಾಹಿಸಿ ಅನುಭವವುಳ್ಳವರೂ ಆಗಿರುವ ಶರಣ ಎಸ್. ಎಂ. ಜಾಮದಾರ್ ಅವರು ಎಲ್ಲಾ ಹಿತಾಸಕ್ತಿದಾರರನ್ನು ಒಂದೇ ವೇದಿಕೆಯಲ್ಲಿ ಒಟ್ಟುಗೂಡಿಸಿ, ದೊಡ್ಡ ಮಟ್ಟದ ಚರ್ಚೆ ಸಂವಾದ ನಡೆಸಿ ಅಲ್ಲಿ ನಡೆಸಬೇಕಾಗಿರುವ ಕಾರ್ಯಕ್ರಮಗಳ ಪಟ್ಟಿ ಹಾಗೂ ಜವಾಬ್ದಾರಿ ಹೊರುವವರ ಅಥವಾ ಹೊರಬೇಕಾಗಿರುವವರ ಸಮಿತಿಗಳ ರೂಪುರೇಶೆಗಳನ್ನು ಸಿದ್ಧಪಡಿಸುವ ಜವಾಬ್ದಾರಿಯನ್ನು ಹೊರಲಿ ಮತ್ತು ಅಂತಹ ಸಮಿತಿ ಸರ್ಕಾರಕ್ಕೆ ಮಾರ್ಗದರ್ಶನ ನೀಡಲಿ.

Leave a Reply

Your email address will not be published. Required fields are marked *

ಪ್ರಧಾನ ಕಾರ್ಯದರ್ಶಿ, ಜಾಗತಿಕ ಲಿಂಗಾಯತ ಮಹಾಸಭಾ