ಬೆಂಗಳೂರು
ಭಾಗ 1: ಅನುಭವ ಮಂಟಪ ಸ್ಥಾವರವಾಗದೆ, ಜಂಗಮವಾಗಲಿ
ಭಾಗ 2: ಅನುಭವ ಮಂಟಪ: ಸಾಮಾನ್ಯ ಪ್ರವಾಸಿ ಸ್ಥಳವಾಗಬಾರದು
ಭಾಗ 3 : ಅನುಭವ ಮಂಟಪದಲ್ಲಿ ಮಾಡಬೇಕಾದ ಕಾರ್ಯಕ್ರಮಗಳು
ಭಾಗ 4: ಬಸವ ಸ್ವಯಂಸೇವಕರಿಂದ ಅನುಭವ ಮಂಟಪದ ನಿರ್ವಹಣೆಯಾಗಲಿ
ಭಾಗ 5 – ಸಿಖ್ಖರ ಸುವರ್ಣ ಮಂದಿರದಂತೆ ಅನುಭವ ಮಂಟಪ ನಿರ್ವಹಣೆಯಾಗಲಿ
ಭಾಗ 6: ಅನುಭವ ಮಂಟಪದ ಮೇಲೆ ಬಸವ ವಿರೋಧಿಗಳ ಕೆಂಗಣ್ಣಿದೆ
ಅನುಭವ ಮಂಟಪದ ಮೂಲ ಕಲ್ಪನೆಯಂತೆ ಬಸವ ಕಲ್ಯಾಣದಲ್ಲಿ ಈಗ ನಿರ್ಮಾಣವಾಗುತ್ತಿರುವ ಭವ್ಯ ಕಟ್ಟಡ ಕಾರ್ಯನಿರ್ವಹಿಸಿದರೆ ಅದು ರಾಜ್ಯಕ್ಕೆ, ರಾಷ್ಟ್ರಕ್ಕೆ, ಇಡೀ ವಿಶ್ವಕ್ಕೆ ಬೆಳಕು ತೋರುವ ದೀಪಸ್ತಂಭವಾಗುತ್ತದೆ.
ಈ ಮಹತ್ವಾಕಾಂಶೆಯ ಯೋಜನೆ ಸಫಲವಾಗುವಂತೆ ನೋಡಿಕೊಳ್ಳುವ ಜವಾಬ್ದಾರಿ ನಮ್ಮೆಲ್ಲರ ಮೇಲೆ ಮುಖ್ಯವಾಗಿ ವಿರಕ್ತ ಮಠಗಳ ಮೇಲಿದೆ. ಸಮಸ್ತ ವಿರಕ್ತ ಮಠಗಳು ಒಂದುಗೂಡಿ ಅನುಭವ ಮಂಟಪದ ಮುಂದಿರುವ ಎಲ್ಲಾ ಸವಾಲುಗಳನ್ನು ಕೂಲಂಕಷವಾಗಿ ಚರ್ಚಿಸಲು ಒಂದೆರಡು ದಿನಗಳ ಕಾರ್ಯಾಗಾರ ಮಾದರಿಯ ಸಭೆ ಸೇರಿಸಬೇಕು.
ಆ ಸಭೆಯಲ್ಲಿ ಕೆಲವು ಸೂಕ್ತ ಉಪಸಮಿತಿಗಳನ್ನು ರಚಿಸಿ, ಅವುಗಳ ಕಾರ್ಯಗಳನ್ನು ಸರ್ಕಾರದ ಸಹಭಾಗಿತ್ವದಲ್ಲಿ ಯಾವ ರೀತಿಯಲ್ಲಿ ನಿರ್ವಹಿಸಬೇಕು ಎನ್ನುವುದನ್ನು ನಿರ್ಧರಿಸಬೇಕು.
ಇಂತಹ ಕೆಲವು ಉಪಸಮಿತಿಗಳ ಜವಾಬ್ದಾರಿಗಳನ್ನು ಕೆಳಗೆ ಸೂಚಿಸಲಾಗಿದೆ:
1) ಸಾಹಿತ್ಯ ಸಮಿತಿ
ವಚನಶಾಸ್ತ್ರದ ಸಂಕ್ಷಿಪ್ತ ಪರಿಚಯ, ಅವುಗಳ ಇತಿಹಾಸ, ಶರಣ ಚಳುವಳಿಯ ಗುರಿಗಳು, ಇಂದಿನ ಪ್ರಸ್ತುತತೆ ಮುಂತಾದ ವಿಷಯಗಳ ಬಗ್ಗೆ ಕಿರುಪುಸ್ತಕ, ಕರ ಪತ್ರಗಳನ್ನು ಪ್ರಕಟಿಸಿ ದಿನನಿತ್ಯ ಅಲ್ಲಿಗೆ ಬರುವ ಪ್ರವಾಸಿಗರಿಗೆ ಉಚಿತವಾಗಿ ಇಲ್ಲವೆ ಅತಿಕಡಿಮೆ ಬೆಲೆಗೆ ಮಾರುವ ಸೂಕ್ತ ವ್ಯವಸ್ಥೆ ಮಾಡುವುದು.
2) ದಾಸೋಹ ಸಮಿತಿ
ದಿನ ನಿತ್ಯ ನಾಲ್ಕಾರು ಸಾವಿರ ಜನರು ಅಲ್ಲಿಗೆ ಬರುತ್ತಾರೆ. ಅವರಿಗೆ ನಮ್ಮ ಬಹುತೇಕ ಮಠಗಳಲ್ಲಿ ಇರುವಂತೆ ಪ್ರಸಾದ ವ್ಯವಸ್ಥೆ ಮಾಡುವುದು.
ಅದಕ್ಕೆ ಸೂಕ್ತ ಸಿಬ್ಬಂದಿ, ಹಣಕಾಸು ಮುಂತಾದವುಗಳನ್ನು ಚರ್ಚಿಸಿ ಯೋಜನೆ ಹಾಕಿಕೊಳ್ಳುವುದು. ಈ ಕಾರ್ಯಗಳನ್ನು ಯಾವ ಯಾವ ಮಠಗಳಿಗೆ ವಹಿಸಬೇಕು ಅಥವಾ ಒಂದೊಂದು ತಿಂಗಳು ಒಂದೊಂದು ಮಠಕ್ಕೆ ಅಥವಾ ಎರಡು ಮೂರು ಮಠಗಳಿಗೆ ವಹಿಸಬಹುದೇ? ಇಂತಹ ವಿಷಯಗಳನ್ನು ಚರ್ಚಿಸಿ ಸೂಕ್ತ ನಿರ್ಣಯ ತೆಗೆದುಕೊಳ್ಳಬೇಕು.
3) ಕಾರ್ಯಕ್ರಮಗಳ ಉಸ್ತುವಾರಿ ಉಪಸಮಿತಿ
ಅ) ಪ್ರಾರ್ಥನೆ, ವಚನ ಗಾಯನ, ಭಜನೆ ಮುಂತಾದ ನಿತ್ಯ ಕಾರ್ಯಕ್ರಮಗಳನ್ನು ನಡೆಸುವುದು. ರಾಜ್ಯದ ಮೂಲೆ ಮೂಲೆಗಳಲ್ಲಿರುವ ಕಲಾವಿದರನ್ನು, ಗಾಯನ, ನೃತ್ಯ ತಂಡಗಳನ್ನು ಗುರುತಿಸಿ ಆಹ್ವಾನಿಸಬೇಕು.
ಆ) ಕರಡಿ ಮಜಲುಗಳು, ಡೊಳ್ಳಿನ ಕುಣಿತ, ನಂದಿಕೋಲು ಇತ್ಯಾದಿ ತಂಡಗಳನ್ನು ಗುರುತಿಸಿಟ್ಟುಕೊಂಡು ಅವರನ್ನು ಆಗಾಗ ನಡೆಯುವ ಅನುಭವ ಮಂಟಪದ ಕಾರ್ಯಕ್ರಮಗಳಲ್ಲಿ ಭಾಗವಹಿಸುವಂತೆ ಮಾಡಬೇಕು.
ಇ) ಆಯ್ದ ವಿಷಯಗಳ ತಜ್ಞರನ್ನು ಕರೆಸಿ ಪ್ರವಚನ, ಚಿಂತನ ಗೋಷ್ಠಿಗಳನ್ನು ಏರ್ಪಡಿಸುವುದು.
4) ಸಮಸ್ತ ಕಾರ್ಯಗಳ ಸಂಯೋಜನಾ ಸಮಿತಿ
ಈ ಸಮಿತಿಯಲ್ಲಿ ರಾಜ್ಯದ ಮತ್ತು ಇತರ ರಾಜ್ಯಗಳ ಪ್ರಮುಖ ಮಠಾಧೀಶರನ್ನು ಸೇರಿಸಿ ಬಸವ ಕಲ್ಯಾಣ ಅಭಿವೃದ್ಧಿ ಮಂಡಳಿಗೆ ವಹಿಸಿಕೊಟ್ಟಿರುವ ಕೆಲವು ಕಾರ್ಯಗಳನ್ನು ನಿರ್ವಹಿಸಲು ನೆರವಾಗಬೇಕು. ಉದ್ಯಾನ, ಕಟ್ಟಡ, ರಸ್ತೆಗಳ ನಿರ್ವಹಣೆ, ನೀರು ಮತ್ತು ವಿದ್ಯುತ್ ಪೂರೈಕೆ, ನೈರ್ಮಲ್ಯ ರಕ್ಷಣೆ, ರಿಪೇರಿ ಮಾಡಿಸುವುದು, ಸೆಕ್ಯುರಿಟಿ ನೇಮಿಸುವುದು – ಇದರ ಕಾರ್ಯವ್ಯಾಪ್ತಿಗೆ ಕೆಲವು ಉದಾಹರಣೆಗಳು.
ಇದರ ಜೊತೆ ಮೇಲೆ ವಿವರಿಸಿದ ಎಲ್ಲ ಕಾರ್ಯಗಳನ್ನು ಸಂಯೋಜನೆ ಮಾಡುವ ಹೊಣೆಯನ್ನು ಈ ಸಮಿತಿ ನಿರ್ವಹಿಸಬಹುದು. ಈ ಸಮಿತಿಯಲ್ಲಿ ಪ್ರಭಾವಿ, ಹಿರಿಯ ಹಾಗೂ ಸಶಕ್ತ ಮಠಗಳ ಸ್ವಾಮಿಗಳಿದ್ದರೆ ಸೂಕ್ತವೆನಿಸುತ್ತದೆ.
ಈ ಸಮಿತಿಯು ಲಿಂಗಾಯತರು ಹೆಚ್ಚಿನ ಸಂಖ್ಯೆಯಲ್ಲಿರುವ ರಾಜ್ಯಗಳಲ್ಲಿನ ದೊಡ್ಡ ದೊಡ್ಡ ಶಿಕ್ಷಣ ಸಂಸ್ಥೆಗಳನ್ನು ಲಿಂಗಾಯತ ವ್ಯಾಪಾರಿಗಳನ್ನು , ಉದ್ಯಮಿಗಳನ್ನು ಮತ್ತು ಇತರ ದಾಸೋಹಿಗಳನ್ನು ಸಂಪರ್ಕಿಸಿ ಅವರ ನೆರವಿನಿಂದ ಅನುಭವ ಮಂಟಪ ನಿರ್ವಹಿಸಬಹುದು.
ಮುಂದಿನ ಹೆಜ್ಜೆಗಳು
1) ಲಿಂಗಾಯತ ಮಠಾಧೀಶರ ಒಕ್ಕೂಟವು ಒಂದು ವಿಶೇಷ ಸಭೆಯನ್ನು ಏರ್ಪಡಿಸಿ ಬಸವಪರ ಮಠಾಧೀಶರನ್ನು ಆಮಂತ್ರಿಸಬಹುದು. ಅದರಲ್ಲಿ ಈ ವಿಷಯದ ಬಗ್ಗೆ ಮುಕ್ತ ಚಿಂತನೆ ಮಾಡಲು ಪ್ರಾರಂಭಿಸಬೇಕು.
2) ತದನಂತರ ನೂರಾರು ಸಣ್ಣ ದೊಡ್ಡ ಲಿಂಗಾಯತ ಶಿಕ್ಷಣ ಸಂಸ್ಥೆಗಳ ಪ್ರಮುಖರನ್ನೂ ಸೇರಿಸಿ ಮತ್ತೊಂದು ಸಮಾಲೋಚನಾ ಸಭೆಯನ್ನು ನಡೆಸಿ ಅವರ ಸಹಾಯ, ಸಲಹೆಗಳನ್ನು ಪಡೆಯಬಹುದು.
3) ಆನಂತರ ದೊಡ್ಡ ದೊಡ್ಡ ಉದ್ಯಮಿಗಳನ್ನು, ವ್ಯಾಪಾರಸ್ಥರನ್ನು, ಉದಾರ ದಾಸೋಹಿಗಳನ್ನು ಸಂಪರ್ಕಿಸಿ ಅವರನ್ನೂ ಈ ಬೃಹತ್ ಕಾರ್ಯದಲ್ಲಿ ತೊಡಗಿಸಿಕೊಳ್ಳಬಹುದು.
4) ಕೊನೆಗೆ ಸರ್ಕಾರದೊಂದಿಗೆ ಸಮಾಲೋಚನೆ ಮಾಡಬಹುದು. ಆಗ ಇದಕ್ಕೆ ಒಂದು ಸೂಕ್ತವಾದ ಸ್ಪಷ್ಟ ರೂಪ ಬರುತ್ತದೆ.
(ಈ ಸರಣಿ ಲೇಖನಗಳಿಗೆ ನಿಮ್ಮ ಪ್ರತಿಕ್ರಿಯೆ ಹಾಗೂ ಅನುಭವ ಮಂಟಪವನ್ನು ಜಂಗಮವಾಗಿಸುವ ಬಗ್ಗೆ ನಿಮ್ಮ ಸಲಹೆಗಳನ್ನು ಸ್ವಾಗತಿಸುತ್ತೇವೆ. ನಿಮ್ಮ ಫೋನ್ ನಂಬರ್ ಸಹಿತ ನಿಮ್ಮ ಆಲೋಚನೆಗಳನ್ನು ನಮಗೆ ಇಮೇಲ್ ಅಥವಾ ವಾಟ್ಸ್ ಆಪ್ ಮಾಡಬಹುದು. ಇಮೇಲ್ ವಿಳಾಸ -
basavamedia1@gmail.com)
