ಬಸವಕಲ್ಯಾಣ
ಬಸವಾದಿ ಶರಣರು ನುಡಿದಂತೆ ನಮ್ಮ ಮಾತುಗಳು ಮೃದುವಾಗಿರಬೇಕು. ಸೇಡಿನ ಮನೋಭಾವ ಬಿಟ್ಟು ಎಲ್ಲರನ್ನು ಪ್ರೀತಿಯಿಂದ ಕಾಣಬೇಕು. ಒಳ್ಳೆಯದನ್ನು ಮಾತ್ರ ಮನಸಲ್ಲಿ ತುಂಬಿಕೊಂಡಿರಬೇಕು. ಅಹಂಕಾರ ಭಾವ ಇರಬಾರದು, ಹಪಹಪಿತನ ಇಲ್ಲದೇ ಸಂತೃಪ್ತ ಭಾವ ಹೊಂದಬೇಕು. ಇದು ಭಕ್ತ, ಮಹೇಶ ಹಾಗೂ ಪ್ರಸಾದಿ ಸ್ಥಳಕ್ಕೆ ಹೋಗುವ ದಾರಿ ಎಂದು ಮನಗೂಳಿ ವಿರಕ್ತಮಠದ ಪೂಜ್ಯ ವಿರತೀಶಾನಂದ ಸ್ವಾಮೀಜಿ ಹೇಳಿದರು.
ನಗರದಲ್ಲಿ ಬಸವ ಮಹಾಮನೆ ಟ್ರಸ್ಟ್ ವತಿಯಿಂದ ಬಸವ ಮಹಾಮನೆ ಪರಿಸರದಲ್ಲಿ ಆಯೋಜಿಸಲಾಗಿರುವ ಅನುಭವ ಮಂಟಪ ಸಂಸತ್ತು ೭ನೇ ಅಧಿವೇಶನದ ಎರಡನೇ ದಿನವಾದ ಶನಿವಾರ ಷಟಸ್ಥಲ ಒಂದು ವಿಜ್ಞಾನ, ಭಕ್ತ, ಮಹೇಶ, ಪ್ರಸಾದಿ ಸ್ಥಲ ಸ್ವರೂಪ ಕುರಿತು ಶ್ರೀಗಳು ವಚನಾಧಾರಿತ ವಿಷಯವಾಗಿ ಮಾತನಾಡಿದರು.

ಶಿವಯೋಗ ಸರ್ವಶ್ರೇಷ್ಠ ಯೋಗ. ಇದು ಎಲ್ಲ ಯೋಗಗಳಿಗೂ ಸಮನ್ವಯ ಯೋಗ. ದೇಹವನ್ನು ಲಿಂಗಮಯವನ್ನಾಗಿ ಮಾಡಿಕೊಂಡಿದ್ದ ಶರಣರು ವಿಜ್ಞಾನಕ್ಕೂ ಹೇಳಲಾಗದ ನಿಗೂಢ ಸತ್ಯವನ್ನು ಶರಣರು ಶಿವಯೋಗದಲ್ಲಿ ಕಂಡುಕೊಂಡಿದ್ದರು. ಲಿಂಗಾಂಗ ಸಮರಸದಿಂದ ಶೂನ್ಯತ್ವ ಪ್ರಾಪ್ತಿಯಾಗುತ್ತದೆ. ಭವಿ ಭಕ್ತನಾಗಬೇಕಾದರೆ ಸರಿಯಾದ ಜ್ಞಾನ ಪಡೆಯಬೇಕಾಗುತ್ತದೆ. ಇದಕ್ಕೆ ಸಮರ್ಥ ಗುರುವಿನಿಂದ ದೀಕ್ಷಾ ಸಂಸ್ಕಾರ ಅವಶ್ಯಕ. ಭಕ್ತನಾಗಲು ಗುರು ಕಾರುಣ್ಯ ಬೇಕೆ, ಬೇಕು ಎಂದು ಉಳವಿಯ ಬಸವ ಧಾಮದ ಪೂಜ್ಯ ಚನ್ನಬಸವ ಸ್ವಾಮೀಜಿ ನುಡಿದರು.
ಬಸವ ಮಹಾಮನೆ ಟ್ರಸ್ಟ್‌ನ ಅಧ್ಯಕ್ಷರಾದ ಶ್ರೀ ಡಾ.ಸಿದ್ದರಾಮ ಶರಣರು ಬೆಲ್ದಾಳ ನೇತೃತ್ವ ವಹಿಸಿದ್ದರು. ಟ್ರಸ್ಟ್‌ನ ಪೂಜ್ಯ ಗಾಯಿತ್ರಿತಾಯಿ ಪ್ರಾಸ್ತಾವಿಕ ಮಾತನಾಡಿ, ಅರಿವಿನ ಜತೆಗೆ ಆಚಾರ ಮುಖ್ಯ. ಶರಣರ ವಚನಗಳನ್ನು ಅರಿಯುವ ಜತೆಗೆ ಜೀವನದಲ್ಲಿ ಅವನ್ನು ಅಳವಡಿಸಿಕೊಳ್ಳಬೇಕೆಂದರು.
ಕರ್ನಾಟಕ ಲಿಂಗಾಯತ ಸಮನ್ವಯ ಸಮಿತಿ ಸಂಚಾಲಕ ಶ್ರೀಕಾಂತಸ್ವಾಮಿ, ಸತ್ಯದೇವಿ ಮಾತಾಜಿ, ಬಂದವರ ಓಣಿ ಸತ್ಯಕ್ಕತಾಯಿ, ಗಂಗಾಧರ ದೇವರು, ಓಂಪ್ರಕಾಶ ರೊಟ್ಟಿ, ರಘುನಾಥರಾವ, ರೇಣುಕಾ ಕರಿಗೌಡರ ಮತ್ತಿತರರು ಉಪಸ್ಥಿತರಿದ್ದರು.