ಜಗತ್ತಿನ ಪ್ರಪ್ರಥಮ ವಯಸ್ಕರ ಶಾಲೆ ಅನುಭವ ಮಂಟಪ: ಶರಣಬಸವ ಶ್ರೀ

ಬಸವ ಮೀಡಿಯಾ
ಬಸವ ಮೀಡಿಯಾ

ಕಲಬುರ್ಗಿ

ಜಗತ್ತಿನ ಬಹುತೇಕ ಧಾರ್ಮಿಕ ಪುರುಷರೆಲ್ಲ ತನಗೆ ನಂಬಿ ಬಂದ ಜಗದ ಜನರನ್ನು ತನ್ನ ಅನುಯಾಯಿಗಳನ್ನಾಗಿಸಿಕೊಂಡರು. ಆದರೆ ಶರಣರು ಅನುಭವ ಮಂಟಪ ಕಟ್ಟಿ ನಿರಾಕಾರ ದೇವರನ್ನು ಪೂಜಿಸಲು ಹೇಳಿದರು. ಅನಕ್ಷರಸ್ತರಿಗೆ ಅಕ್ಷರ ಜ್ಞಾನಕೊಟ್ಟು ಸುಜ್ಞಾನಿಯಾಗಿಸಿ, ವಿಚಾರವಂತರನ್ನಾಗಿಸಿದರು.

ಹೀಗಾಗಿ ಜಗತ್ತಿನ ಮೊಟ್ಟಮೊದಲ ವಯಸ್ಕರ ಶಿಕ್ಷಣ ನೀಡಿದ ಶಾಲೆ ಅನುಭವ ಮಂಟಪವಾಗಿದೆ. ಇದನ್ನು ಆರಂಭಿಸಿದವರು ಬಸವಣ್ಣನವರು, ಎಂದು ಬೆಳಗಾವಿಯ ಬಸವ ಬೆಳವಿಯ ಚರಂತೇಶ್ವರ ಮಠದ ಪೂಜ್ಯರಾದ ಶರಣಬಸವ ಸ್ವಾಮಿಗಳು ಹೇಳಿದರು.

ಜಯನಗರದ ಬಸವ ಸಮಿತಿಯ ಅನುಭವ ಮಂಟಪದಲ್ಲಿ ಒಂದು ತಿಂಗಳಪರ್ಯಂತ ಜರುಗುತ್ತಿರುವ ವಚನ ಆಷಾಡ ಪ್ರವಚನದ 24ನೇ ದಿನದಂದು ಮಾತನಾಡಿದರು.

ಜಗತ್ತಿನಲ್ಲಿ ಶಕುನ ಅಪಶಕುನವೆಂಬುದಿಲ್ಲ, ಶುಭಗಳಿಗೆ ಅಶುಭಗಳಿಗೆ ಎಂಬುದಿಲ್ಲ, ಶರಣರು ಮನಸ್ಸು ಮಾಡಿ ಕೆಲಸ ಮಾಡಿದ ಗಳಿಗೆಯೇ ಶುಭ ಗಳಿಗೆಯಾಗಿದೆ. ಪೃಥ್ವಿ ಪುಣ್ಯದ ಆಲಯವಾಗಿದೆ, ಸ್ವರ್ಗಲೋಕ ಮರ್ತ್ಯಲೋಕವೆಂಬುದು ಬೇರಿಲ್ಲ ಕಾಣಿರೋ, ಸತ್ಯ ನುಡಿದರೆ ಸ್ವರ್ಗಲೋಕ ,ಮಿಥ್ಯ ನುಡಿದರೆ ಮರ್ತ್ಯಲೋಕವೆಂದು ಹೇಳಿದರು. ಶರಣರು ಕೈಲಾಸ ಎಂಬುದು ಭ್ರಮೆ, ಅನುಭವ ಮಂಟಪ ವಾಸ್ತವ ಕೈಲಾಸವಾಗಿದೆ ಎಂದರು.

ಮನುಷ್ಯನಲ್ಲಿಯ ದುಷ್ಟ ಪ್ರವೃತ್ತಿಗಳನ್ನು ಕಿತ್ತೊಗೆಯಲು ಬಸವಣ್ಣನವರು ಅನುಭವ ಮಂಟಪ ಕಟ್ಟಿದರು. ಕನ್ನಡಿ ಮಾಡಲು ಬಳಸುವ ಲೋಹ, ಪಾತ್ರೆ ಮಾಡಲು ಬಳಸುವ ಲೋಹ ಎರಡು ಒಂದೇ ಆಗಿರುತ್ತವೆ. ತಿಕ್ಕಿ ತಿಕ್ಕಿ ಹೊಳಪಾಗಿಸಿದ್ದು ಕನ್ನಡಿಯಾಗುತ್ತದೆ, ಅಂತೆಯೇ ದುರ್ಗುಣ ದುಶ್ಚಟಗಳನ್ನು ತಿಕ್ಕಿ ತಿಕ್ಕಿ ತೆಗೆದರೆ ನರ ಹರನಾಗುತ್ತಾನೆ.

ಮಾನವನಿಗೆ ಮೈಯೆಲ್ಲಾ ಅಸೂಯೆ ತುಂಬಿದೆ, ಮನುಷ್ಯ ಮನುಷ್ಯರ ನಡುವೆ ದ್ವೇಷ ಸಾಧಿಸಿ ನಾವೇನು ಸಾವಿರ ವರ್ಷ ಈ ಭೂಮಿಯ ಮೇಲೆ ಜೀವಿಸಲು ಬಂದಿಲ್ಲ. ಮಾನವ ಮಾನವರ ನಡುವೆ ಪ್ರೀತಿ ಸ್ನೇಹವಿರಬೇಕು. ನಾವು ನಮ್ಮ ಸಂಪತ್ತನ್ನು ಯಾರಿಗೂ ಕೊಡುವುದು ಬೇಡ, ಪರರೊಂದಿಗೆ ನಲ್ನುಡಿ ನುಡಿದರೆ ಸಾಕು ಎಂದು ಶರಣರು ಹೇಳುತ್ತಾರೆ. ಯಯಾತಿ ಮಹಾರಾಜ ತನ್ನ ಮಗನ ಯೌವನ ಪಡೆದು ಬಯಕೆಗಳನ್ನು ತಣಿಯದೆ ಹಪಹಪಿಸಿ ಸತ್ತನು. ಮಾನವನ ಬಯಕೆಗಳಿಗೆ ಕೊನೆಯಿಲ್ಲ. ಯಯಾತಿಯಂತೆ ಸುಖ ಲೋಲುಪಗಳಿಗೆ ಒಳಗಾಗದೆ ಶರಣ ಮಾರ್ಗದಲ್ಲಿ ನಡೆದು ನಿರಂಜನನಾಗಿ ಬದುಕುವೆಡೆಗೆ ಹವಣಿಸಬೇಕು.

ಹಲ್ಲು ಹೋಗಿ ಬೆನ್ನು ಬಾಗಿ ಮುಪ್ಪಾಗಿ ರೋಗಗಳು ಶರೀರಕ್ಕೆ ಅಂಟಿಕೊಂಡಾಗ ಶಿವ ಧ್ಯಾನ ಶಿವ ಚಿಂತೆ ಮಾಡಲಾಗದು. ಶರೀರ ಗಟ್ಟಿಯಾಗಿದ್ದಾಗ ಲಿಂಗವನ್ನು ಪೂಜಿಸಬೇಕು.

ಪ್ರಸಾದ ದಾಸೋಹಿಗಳನ್ನು ಸನ್ಮಾನಿಸಲಾಯಿತು. ಕಲಬುರ್ಗಿ ಬಸವ ಸಮಿತಿಯ ಅಧ್ಯಕ್ಷರಾದ ಡಾ. ವಿಲಾಸವತಿ ಖೂಬಾ, ಡಾ. ವೀರಣ್ಣ ದಂಡೆ, ಡಾ. ಜಯಶ್ರೀ ದಂಡೆ, ಕಾರ್ಯದರ್ಶಿಗಳಾದ ಡಾ. ಆನಂದ ಸಿದ್ಧಾಮಣಿ, ಶರಣಗೌಡ ಪಾಟೀಲ ಪಾಳಾ, ಡಾ . ಕೆ.ಎಸ್. ವಾಲಿ, ಬಂಡಪ್ಪ ಕೇಸುರ ನಳಿನಿ, ಬಸವರಾಜ ಮಾಲಿಪಾಟೀಲ,ಗೀತಾಂಜಲಿ, ಪುಷ್ಪಾಂಜಲಿ, ನಾರಾಯಣರಾವ್ ಅವರು ಹಾಜರಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/JREWkVu0WPE5tE1y0tzNQ1

Share This Article
Leave a comment

Leave a Reply

Your email address will not be published. Required fields are marked *