ಬಸವಕಲ್ಯಾಣ
ಶರಣಭೂಮಿ ಬಸವಕಲ್ಯಾಣದ ಸಮೀಪವಿರುವ ಗುಣತೀರ್ಥವು 12ನೇ ಶತಮಾನದ ಶರಣೆ ದಾನಮ್ಮನ ತಪೋಕ್ಷೇತ್ರವಾಗಿದ್ದು ಏಪ್ರಿಲ್ 5 ಮತ್ತು 6ರಂದು ಎರಡು ದಿನ ಪೂಜ್ಯ ಶ್ರೀ ಸದ್ಗುರು ಬಸವಪ್ರಭು ಸ್ವಾಮೀಜಿಯವರ ಸಾನಿಧ್ಯದಿಂದ ಗುಣತೀರ್ಥವಾಡಿಯ ಕಲ್ಯಾಣ ಮಹಾಮನೆಯಲ್ಲಿ ದಾನಮ್ಮ ಉತ್ಸವ ಹಾಗೂ ತೃತೀಯ ಶರಣ ಸಮಾಗಮ ಜ್ಞಾನ ಶಿಬಿರ ಹಮ್ಮಿಕೊಳ್ಳಲಾಗಿದೆ.
ಎರಡು ದಿನದ ಉತ್ಸವದಲ್ಲಿ ಐದು ಶರಣ ಜ್ಞಾನ ಗೋಷ್ಠಿಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಗುರುವಂದನಾ ಹಾಗೂ ಜ್ಯೋತಿ ಯಾತ್ರೆಯ ಸಮಾರೋಪ ಸಮಾರಂಭ ನೆರವೇರಲಿದೆ ಎಂದು ಕಲ್ಯಾಣ ಮಹಾಮನೆಯ ಅಧ್ಯಕ್ಷರಾದ ಪೂಜ್ಯ ಶ್ರೀ ಸದ್ಗುರು ಬಸವಪ್ರಭು ಸ್ವಾಮೀಜಿಯವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕಾರ್ಯಕ್ರಮದ ಉದ್ಘಾಟನೆಗೆ ದಾನಮ್ಮ ಜ್ಯೋತಿ
ಶರಣೆ ದಾನಮ್ಮನ ಉತ್ಸವದ ಉದ್ಘಾಟನೆಗಾಗಿ ಗುಡ್ಡಾಪೂರದಿಂದ ದಾನಮ್ಮನ ಜ್ಞಾನ ಜ್ಯೋತಿ ಯಾತ್ರೆಯನ್ನು ಹೊರಡಿಸಿ ಈಗಾಗಲೇ ಸೋಲಾಪುರ, ವಿಜಯಪುರ, ಸಾಂಗ್ಲಿ, ಕೋಲಾಪೂರ, ಕಲಬುರಗಿ, ಬೀದರ ಸೇರಿದಂತೆ ಆರು ಜಿಲ್ಲೆಯಲ್ಲಿ ಎರಡು ತಂಡ ರಚಿಸಿ ಪ್ರಚಾರ ಮಾಡಲಾಗಿದೆ ಎಂದು ಹೇಳಿದರು.
ಎರಡು ದಿನ ಕಾರ್ಯಕ್ರಮಗಳ ವಿವರ
ಶರಣೆ ದಾನಮ್ಮ ಉತ್ಸವದ ವೇದಿಕೆಯಲ್ಲಿ ದಿನಾಂಕ 5ರಂದು 5 ರಿಂದ 6 ಗಂಟೆಗೆ ಪತಂಜಲಿ ಯೋಗಗುರು ಮಾತೆಯರಾದ ಶರಣೆ ತುಳಜಾ, ಶರಣೆ ಮೇಘಾ ಯೋಗಾಸನ ಹೇಳಿಕೊಡಲಿದ್ದಾರೆ. ಬೆಳಿಗ್ಗೆ 7 ರಿಂದ 9ರವರೆಗೆ ಸಾಮೂಹಿಕ ಇಷ್ಟಲಿಂಗ ಪೂಜೆ ಮತ್ತು ಇಷ್ಟಲಿಂಗ ದೀಕ್ಷೆ ಕಾರ್ಯಕ್ರಮ ಹಾಗೂ ವಚನ ಪಠಣ ನೆರವೇರಲಿದೆ. ಬೆಳಿಗ್ಗೆ 10 ಗಂಟೆಗೆ ಪೂಜ್ಯರ ಮತ್ತು ಸರ್ವ ಶರಣರ ಸಮ್ಮುಖದಲ್ಲಿ ಷಟಸ್ಥಲ ಧ್ವಜಾರೋಹಣ ನೆರವೇರಲಿದೆ.
ಕಾರ್ಯಕ್ರಮದ ಉದ್ಘಾಟನೆಯನ್ನು ನಿವೃತ್ತ ನ್ಯಾಯಾಧೀಶರಾದ ಶರಣ ಸುಭಾಶ್ಚಂದ್ರ ನಾಗರಾಳೆ ನೆರವೇರಿಸಲಿರುವರು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಿರಂಕಾರಿ ಸಂತ ದಂಪತಿಗಳಾದ ಸುನಿತಾ ವಿಜಯಕುಮಾರ ವಹಿಸಿಕೊಂಡು ಜಗದಗಲ ಪರಮಾತ್ಮನ ದರ್ಶನ ಕುರಿತು ವಿಶೇಷ ಅನುಭಾವ ನೀಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶರಣ ದಿಲೀಪ ಶಿಂದೆ, ರೇವಣಪ್ಪ ಹೆಗ್ಗಣೆ ಆಗಮಿಸಲಿರುವರು. ಇದೇ ಸಂದರ್ಭದಲ್ಲಿ ಪೂಜ್ಯ ಶ್ರೀ ಸದ್ಗುರು ಬಸವಪ್ರಭು ಸ್ವಾಮೀಜಿಯವರು ಬರೆದ “ಅಕ್ಕನ ಚರಿತಾಮೃತ” ಕೃತಿ ಬಿಡುಗಡೆಗೊಳ್ಳಲಿದ್ದು, ಅಮರಜ್ಯೋತಿ ಅಕ್ಕಮಹಾದೇವಿ ನಾಟಕ ಖ್ಯಾತಿಯ ರಂಗಭೂಮಿ ಕಲಾವಿದೆ ಸೋಲಾಪುರದ ರಾಜಶ್ರೀ ಥಳಂಗೆಯವರು ಕೃತಿಯನ್ನು ಬಿಡುಗಡೆ ಮಾಡಲಿದ್ದಾರೆ.

ಕಲಬುರ್ಗಿಯ ಆಕಾಶವಾಣಿ ಕಲಾವಿದರಾದ ವಿಜಯಲಕ್ಷ್ಮಿ ಕೆಂಗನಾಳ ಅವರು ವಚನ ಸಂಗೀತವನ್ನು ನಡೆಸಿಕೊಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಹಾವೇರಿ ಮೊರಾರ್ಜಿ ದೇಸಾಯಿ ಕಾಲೇಜಿನ ಪ್ರಾಂಶುಪಾಲರಾದ ಸೋಮನಾಥ ಡಿ, ಲಕ್ಷ್ಮಣ ಮೇತ್ರೆ, ನಾಗಶೆಟ್ಟಿ ಗೋರ್ಟಾ ಆಗಮಿಸಲಿದ್ದಾರೆ.
ಮದ್ಯಾಹ್ನ 3 ರಿಂದ 5 ರವರೆಗೆ ನಡೆಯುವ ಎರಡನೇ ಶರಣ ಜ್ಞಾನ ಗೋಷ್ಟಿಯ ನೇತೃತ್ವವನ್ನು ಸಸ್ತಾಪುರದ ಪೂಜ್ಯ ಸದಾನಂದ ಸ್ವಾಮೀಜಿಯವರು, ಸಮ್ಮುಖವನ್ನು ಬೀದರ-ಗೋರ್ಟಾ ಲಿಂಗಾಯತ ಮಹಾಮಠದ ಪೂಜ್ಯ ಪ್ರಭುದೇವ ಮಹಾಸ್ವಾಮಿಗಳು ವಹಿಸಲಿದ್ದಾರೆ. ‘ಲಿಂಗವ ನೋಡುವ ಅಣ್ಣಗಳಿರಾ ಜಂಗಮದ ಮುಖವ ನೋಡಿ’ ಎಂಬ ವಿಷಯದ ಕುರಿತು ಪ್ರೊ. ಶಿವಶರಣಪ್ಪ ಹುಗ್ಗಿ ಪಾಟೀಲ ಮತ್ತು ಪ್ರೊ. ಶ್ರೀಶೈಲ ಮಸೂತೆ ವಿಶೇಷ ಅನುಭಾವ ನೀಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಂಜೆ 6 ರಿಂದ 9ರವರೆಗೆ ನಡೆಯುವ ಮೂರನೇ ಶರಣ ಜ್ಞಾನ ಗೋಷ್ಟಿಯಲ್ಲಿ ಬಸವಕಲ್ಯಾಣ ಅನುಭವ ಮಂಟಪದ ಅಧ್ಯಕ್ಷರಾದ ಪೂಜ್ಯ ಬಸವಲಿಂಗ ಪಟ್ಟದ್ದೇವರು ವಹಿಸಲಿದ್ದು, ‘ಲಿಂಗಾಂಗಯೋಗದ ಅರಿವು ಮತ್ತು ಆಚಾರ’ ವಿಷಯದ ಕುರಿತು ಬೆಂಗಳೂರಿನ ಭಾರತಿ ಕೆಂಪಯ್ಯ ಅವರು ವಿಶೇಷ ಅನುಭಾವ ನೀಡಲಿದ್ದಾರೆ.
ಮುಖ್ಯ ಅತಿಥಿಯಾಗಿ ಶರಣೆ ಲೀಲಾವತಿ ಕರಡಿ, ಮಹಾದೇವಿ ಅಂಕಲಗಿ, ಜಗದೇವಿ ಚೆಟ್ಟಿ, ಸವಿತಾ ಭಂಡಾರ ಕವಟೆ, ಶ್ರೀದೇವಿ ಉಜಳಂಬೆ, ಗಿರಿಜಾ ಸಿದ್ಧಣ್ಣ ಆಗಮಿಸಲಿದ್ದಾರೆ.
ದಿನಾಂಕ 6 ರಂದು ನಾಲ್ಕನೇ ಶರಣ ಜ್ಞಾನ ಗೋಷ್ಟಿಯ ಅಧ್ಯಕ್ಷತೆಯನ್ನು ಪೂಜ್ಯ ಸಿದ್ಧರಾಮ ಬೆಲ್ದಾಳ ಶರಣರು ವಹಿಸಲಿದ್ದು, ಪ್ರೊ. ಸಿದ್ದು ಯಾಪಲಪರವಿ, ಶರಣ ಸಾಹಿತಿಗಳಾದ ಮಹಾಂತೇಶ ಕುಂಬಾರ, ಬಸವ ತತ್ವ ಚಿಂತಕರಾದ ಶಿವಸ್ವಾಮಿ ವಿಶೇಷ ಅನುಭಾವ ನೀಡಲಿದ್ದಾರೆ. ಮದ್ಯಾಹ್ನ ಐದನೇ ಗೋಷ್ಟಿಯಲ್ಲಿ ಬಸವತತ್ವ ಪ್ರಚಾರಕ್ಕಾಗಿ ಶರಣ ಸೇವಾದಳದ ಉದ್ಘಾಟನೆ ನೆರವೇರಿಸಲಿದ್ದು, ಸಾನಿಧ್ಯ ಬೇಲೂರಿನ ಪಂಚಾಕ್ಷರಿ ಸ್ವಾಮೀಜಿ ವಹಿಸಲಿದ್ದಾರೆ. ಭಾಲ್ಕಿ ತಾಲೂಕಾ ವಚನ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಗುಂಡಪ್ಪ ಸಂಗಮಕರ್, ನಾಗೇಂದ್ರಪ್ಪ ನಿಂಬರ್ಗಿ, ಬಿಎಸ್ಎಪ್ ಯೋಧರಾದ ಸಿದ್ಧಪ್ಪ ಮುಗನೂರು ಸಂಘಟನೆ ಕುರಿತು ಮಾತನಾಡಲಿದ್ದಾರೆ.
ಸಂಜೆ 6 ರಿಂದ 9ರವರೆಗೆ 14ನೇ ಶರಣೆ ದಾನಮ್ಮ ದೇವಿಯ ಜ್ಯೋತಿಯಾತ್ರೆಯ ಸಮಾರೋಪ ಸಮಾರಂಭ ಹಾಗೂ ಗುರುವಂದನೆ ಕಾರ್ಯಕ್ರಮ ನಡೆಯಲಿದ್ದು, ಸಾನಿಧ್ಯವನ್ನು ಹುಲಸೂರಿನ ಪೂಜ್ಯ ಶಿವಾನಂದ ಮಹಾಸ್ವಾಮಿಗಳು, ಮಾದಾರ ಚೆನ್ನಯ್ಯ ಪೀಠದ ಕಾಂತ ಸ್ವಾಮಿಗಳು, ನುಲಿಯ ಚಂದಯ್ಯ ಗವಿಯ ಮಾತೆ ಚಿತ್ರಮ್ಮ ವಹಿಸಲಿದ್ದು, ಪೂಜ್ಯ ನಿಜಲಿಂಗ ಸ್ವಾಮೀಜಿ ಪ್ರಾಸ್ತಾವಿಕವಾಗಿ ಮಾತನಾಡಲಿದ್ದಾರೆ. ಉದ್ಘಾಟನೆಯನ್ನು ಸಚಿವರಾದ ಈಶ್ವರ ಖಂಡ್ರೆ ನೆರವೇರಿಸಲಿದ್ದು, ಗುರು ಬಸವ ಪೂಜೆಯನ್ನು ಸಂಸದರಾದ ಸಾಗರ ಖಂಡ್ರೆ ಮಾಡಲಿದ್ದಾರೆ. ಬಸವಕಲ್ಯಾಣದ ಶಾಸಕರಾದ ಶರಣು ಸಲಗರ ಧ್ವಜಾರೋಹಣ ನೆರವೇರಿಸಲಿದ್ದು, ವಿಶೇಷ ಆಹ್ವಾನಿತರಾಗಿ ಹುಮನಾಬಾದ ಶಾಸಕರಾದ ಸಿದ್ಧು ಪಾಟೀಲ, ಕಾಂಗ್ರೆಸ್ ಧುರೀಣರಾದ ಬಿ.ಮಾಲಾ, ಧನರಾಜ ತಾಡಂಪಳ್ಳಿ, ವಿಜಯ ಸಿಂಗ್, ಅರ್ಜುನ ಕನಕ, ಶಿವರಾಜ ನರಶೆಟ್ಟಿ, ಮುಖ್ಯ ಅತಿಥಿಗಳಾಗಿ ಉದ್ದಿಮೆದಾರರಾದ ಅಲ್ಲಮಪ್ರಭು ನಾವದಗೆರೆ, ಬಸವರಾಜ ಸ್ವಾಮಿ, ಆಗಮಿಸಲಿದ್ದಾರೆ. ವಿಶೇಷ ಅನುಭಾವವನ್ನು ಕೆಎಎಸ್ ನಿವೃತ್ತ ಅಧಿಕಾರಿಯಾದ ಎಸ್. ದಿವಾಕಾರ ನೀಡಲಿದ್ದಾರೆ. ಡಾ. ಗವಿಸಿದ್ದಪ್ಪ ಪಾಟೀಲ, ತಹಶೀಲ್ದಾರ್ ಶಿವಾನಂದ ಮೇತ್ರೆ, ಸುಧಾಕರ್ ರೆಡ್ಡಿ, ಬಂಡೆಪ್ಪ ಕುಂಬಾರೆ, ಎಮ್. ಡಿ. ಅಸ್ಲಾಂ, ಜಯಪ್ರಕಾಶ ಸದಾನಂದೆ ಉಪಸ್ಥಿತರಿರುವರು.
ಪ್ರಶಸ್ತಿ ಪ್ರದಾನ:
ಈ ವರ್ಷದ ದಾನಮ್ಮದೇವಿ ಪ್ರಶಸ್ತಿಯನ್ನು ಹಿರಿಯ ಸಾಹಿತಿಗಳು, ಕನ್ನಡ-ಮರಾಠಿ ಸಾಹಿತ್ಯದ ಶ್ರೇಷ್ಟ ಅನುವಾದಕರಾದ ಪ್ರೊ. ಶಾಲಿನಿ ದೊಡ್ಡಮನಿಯವರಿಗೆ ನೀಡಲಾಗುತ್ತಿದೆ. ಕಲ್ಯಾಣ ರತ್ನ ಪ್ರಶಸ್ತಿಯನ್ನು ಕೇಂದ್ರ ಸಾಹಿತ್ಯ ಅಕಾಡೆಮಿಯ ಸದಸ್ಯರು, ವೈಚಾರಿಕ ಚಿಂತಕರು ಮತ್ತು ಗಜಲ್ ಸಾಹಿತಿಗಳಾದ ಡಾ.ಜಯದೇವಿ ಗಾಯಕವಾಡ ಅವರಿಗೆ ನೀಡಲಾಗುತ್ತಿದೆ.
ಭರದ ಸಿದ್ಧತೆ:
ಈಗಾಗಲೇ ಕರ್ನಾಟಕ-ಮಹಾರಾಷ್ಟ್ರ ಗಡಿಭಾಗದ ಐದು ಜಿಲ್ಲೆಯಲ್ಲಿ ಪ್ರಚಾರ ಮಾಡಲಾಗಿದ್ದು, ಸಾವಿರಾರು ಬಸವ ಭಕ್ತರು ಹಾಗೂ ದಾನಮ್ಮತಾಯಿ ಭಕ್ತರು ಆಗಮಿಸಲಿದ್ದು ಅವರಿಗೆ ಉಳಿದುಕೊಳ್ಳಲು ತಾತ್ಕಾಲಿಕ ಶಾಮಿಯಾನ್ ಟೆಂಟ ಹಾಕಿಸಲಾಗುತ್ತಿದೆ ಮತ್ತು ಅನುಭವ ಮಂಟಪ ಹಾಗೂ ಯಾತ್ರೆ ನಿವಾಸದಲ್ಲಿ ರೂಂ ವ್ಯವಸ್ಥೆ ಮಾಡಲಾಗಿದೆ.
ಪ್ರಸಾದ ವ್ಯವಸ್ಥೆ:
ಎರಡು ದಿನದ ಕಾರ್ಯಕ್ರಮದಲ್ಲಿ ಆಗಮಿಸುವ ಭಕ್ತರಿಗೆ ಹೋಳಿಗೆ ತುಪ್ಪ, ಲಾಡು, ಗೋಧಿ ಹುಗ್ಗಿ, ರೊಟ್ಟಿ, ಚಪಾತಿ, ಮೊಸರ ಚಟ್ನೆ, ಮಜ್ಜಿಗೆ ಇರಲಿದೆ. ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ.
ಎರಡು ದಿನದ ಕಾರ್ಯಕ್ರಮದಲ್ಲಿ ಬಸವಕಲ್ಯಾಣ ತಾಲೂಕಿನ ಶಾಲಾ ಮಕ್ಕಳಿಂದ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ತಾಲೂಕಿನ ಉತ್ತಮ ಶಿಕ್ಷಕರೆಂದು ಆಯ್ಕೆಯಾದ ಶಿಕ್ಷಕರಿಗೆ ಸತ್ಕರಿಸಲಾಗುತ್ತಿದೆ, ವಚನ ಕಂಠಪಾಠ ಸ್ಪರ್ಧೆಯಲ್ಲಿ ಪ್ರಥಮ, ದ್ವಿತೀಯವಾಗಿ ಆಯ್ಕೆಯಾದ ಮಕ್ಕಳಿಗೆ ಬಹುಮಾನದೊಂದಿಗೆ ಪ್ರಶಸ್ತಿಯನ್ನು ನೀಡಲಾಗುವುದು. ಕಾರ್ಯಕ್ರಮದಲ್ಲಿ ಸ್ಥಳಿಯ ಪೂಜ್ಯರು, ಬಸವಪರ ಸಂಘಟನೆಗಳ ಅಧ್ಯಕ್ಷರು ಮತ್ತು ಸದಸ್ಯರು ಭಾಗವಹಿಸುವರು.
ಅಚ್ಚುಕಟ್ಟಾಗಿ ಕಾರ್ಯಕ್ರಮ ನೆರವೇರಲಿದ್ದು ಸರ್ವರೂ ಭಾಗಿಯಾಗಬೇಕೆಂದು ಪೂಜ್ಯ ಶ್ರೀ ಸದ್ಗುರು ಬಸವಪ್ರಭು ಸ್ವಾಮೀಜಿಯವರು ಕರೆ ಕೊಟ್ಟಿದ್ದಾರೆ.