ನರಗುಂದ
ಹಿಂದುಳಿದ ಪ್ರದೇಶಗಳಲ್ಲಿ ಅನೇಕ ಮಕ್ಕಳು ಇನ್ನೂ ಸರಿಯಾದ ಶಾಲಾ ಅವಕಾಶಗಳನ್ನು ಹೊಂದಿಲ್ಲ, ಸಮಾನ ಶೈಕ್ಷಣಿಕ ಪ್ರವೇಶವನ್ನು ಉತ್ತೇಜಿಸುವ ಮಹತ್ವವನ್ನು ಬಲಪಡಿಸಬೇಕು ಆ ನಿಟ್ಟಿನಲ್ಲಿ ಸರಕಾರಿ ಶಾಲೆಗಳನ್ನು ಇನ್ನೂ ಹೆಚ್ಚು ಬಲಪಡಿಸಬೇಕೆಂದು ಪೂಜ್ಯ ಶಾಂತಲಿಂಗ ಶ್ರೀಗಳು ಹೇಳಿದರು.
ಅವರು ತಾಲೂಕಿನ ಭೈರನಹಟ್ಟಿ ಗ್ರಾಮದ ದೊರೆಸ್ವಾಮಿ ವಿರಕ್ತಮಠದಲ್ಲಿ ಶ್ರೀ ದೊರೆಸ್ವಾಮಿ ವಿವಿದೋದ್ಧೇಶ ಟ್ರಸ್ಟ್ ಹಾಗೂ ಶ್ರೀಗುರು ಬ್ರಹ್ಮಾನಂದ ಶಿವಾನುಭವ ಧರ್ಮ ಸಂಸ್ಥೆಯ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ೩೬೪ ನೇ ಮಾಸಿಕ ಶಿವಾನುಭವ ಹಾಗೂ ಮಕ್ಕಳ ದಿನಾಚರಣೆ ಸಮಾರಂಭದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಮಾತನಾಡಿದರು.
ಮಕ್ಕಳ ದಿನವು ಕೇವಲ ಆಚರಣೆಯ ದಿನವಲ್ಲ ಅದು ಮಗುವಿಗೆ ಅಮೂಲ್ಯವಾದ ಜೀವನ ಪಾಠಗಳನ್ನು ನೀಡಲು ಸೂಕ್ತವಾದ ಸಂದರ್ಭವಾಗಿದೆ. ಅವರ ಭವಿಷ್ಯಕ್ಕಾಗಿ ಬಲವಾದ ಅಡಿಪಾಯವಾಗಿ ಕಾರ್ಯನಿರ್ವಹಿಸುವ ಅಗತ್ಯ ಮೌಲ್ಯಗಳು ಮತ್ತು ಕೌಶಲ್ಯಗಳನ್ನು ಅವರಿಗೆ ಕಲಿಸಬೇಕಾಗಿರುವುದು ಪ್ರತಿಯೊಬ್ಬರ ಆದ್ಯಕರ್ತವ್ಯವಾಗಿದೆ ಎಂದು ಅವರು ನುಡಿದರು.
ಮುಖ್ಯಅತಿಥಿಗಳಾಗಿ ಆಗಮಿಸಿದ್ದ ನರಗುಂದ ಪುರಸಭೆ ಸದಸ್ಯ ಅಪ್ಪಣ್ಣ ನಾಯ್ಕರ ಮಾತನಾಡಿ, ಇಂದಿನ ಮಕ್ಕಳೆ ಮುಂದಿನ ಪ್ರಜೆಗಳು ಹೀಗಾಗಿ ಪಾಲಕರು ಮಕ್ಕಳಿಗೆ ಸೂಕ್ತ ನಿರ್ದೇಶನ ಮಾಡಿ ಅವರನ್ನು ಸತ್ಪ್ರಜೆಗಳನ್ನಾಗಿಸುವಂತೆ ಮಾರ್ಗದರ್ಶನ ಮಾಡಬೇಕಾಗಿದೆ. ಇತ್ತಿಚಿಗೆ ಮಕ್ಕಳಲ್ಲಿ ಓದುವ ಹವ್ಯಾಸ ಕಡಿಮೆಯಾಗುತ್ತಿದೆ ಅವರಿಗೆ ಮೋಬೈಲ್ ಗೀಳನ್ನು ತಪ್ಪಿಸಿ ಅವರಿಗೆ ಪುಸ್ತಕದ ಮಹತ್ವವನ್ನು ತಿಳಿಸಿಕೊಡಬೇಕು ಎಂದು ಪಾಲಕರಿಗೆ ಕಿವಿಮಾತು ಹೇಳಿದರು.
ಈ ಸಂದರ್ಭದಲ್ಲಿ ಕ್ರೀಡಾಕೂಟದಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾದ ಸರಕಾರಿ ಪ್ರೌಢ ಶಾಲೆ ಅರಿಷಿಣಗೋಡಿ ಕುಮಾರಿ ದೇವಕ್ಕ ರ. ಕಲಾರಿ ಹಾಗೂ ಮೂರಾರ್ಜಿ ವಸತಿ ಶಾಲೆಯ ಕುಮಾರ ಸಂದೀಪ ರಾ. ಕಿತ್ತೂರ ಅವರನ್ನು ಶ್ರೀಮಠದಿಂದ ಅಭಿನಂದಿಸಿ ಸತ್ಕರಿಸಲಾಯಿತು.
ವೇದಿಕೆ ಮೇಲೆ ರತ್ನಕ್ಕ ಶಿಳ್ಳಿನ, ವಿಜಯಕುಮಾರ ಮಾಳವಾಡ, ಲಕ್ಮೀಬಾಯಿ ಪಾಟೀಲ, ಜ್ಯೋತಿ ಯಳ್ಳೂರ, ಮಂಗಳಾ ಪಾಟೀಲ, ಸಂಗನಗೌಡ ಪಾಟೀಲ, ಜಗದೀಶ ಕೊಣ್ಣೂರ, ಸುಕನ್ಯಾ ಸಾಲಿ, ನಾಗವ್ವ ಕುಳಗೇರಿ, ಸರಸ್ವತಿ ಹಿರೇಮಠ, ಪ್ರಮುಖರು ಉಪಸ್ಥಿತರಿದ್ದರು. ಶ್ರೀಮಠದ ವ್ಯವಸ್ಥಾಪಕ ಮಹಾಂತೇಶ ಹಿರೇಮಠ ಕಾರ್ಯಕ್ರಮ ನಿರ್ವಹಿಸಿದರು.
ಕನಕದಾಸ ಜಯಂತಿ ಆಚರಣೆ
ಭೈರನಹಟ್ಟಿ ಗ್ರಾಮದ ದೊರೆಸ್ವಾಮಿ ವಿರಕ್ತಮಠದಲ್ಲಿ ಶ್ರೀಗುರು ಬ್ರಹ್ಮಾನಂದ ಸಂಸ್ಕೃತ ಪಾಠ ಶಾಲೆಯಲ್ಲಿ ದಾಸಶ್ರೇಷ್ಠ ಕನಕದಾಸ ಅವರು ೫೩೭ ನೇ ಜಯಂತ್ಯುತ್ಸವವನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ ಭೈರನಹಟ್ಟಿ-ಶಿರೋಳ ಮಠದ ಪೂಜ್ಯ ಶಾಂತಲಿಂಗ ಶ್ರೀಗಳು, ನಿವೃತ್ತ ಶಿಕ್ಷಕ ವೀರಯ್ಯ ಸಾಲಿಮಠ, ಮುಖ್ಯಶಿಕ್ಷಕ ಮಹಾಂತೇಶ ಹಿರೇಮಠ, ಶರಣಯ್ಯ ಕೊಣ್ಣೂರಮಠ, ಬಿ ಸಿ. ಐನಾಪೂರ, ಅಜ್ಜಪ್ಪ ಖನ್ನೂರ ಹಾಗೂ ಪಾಠಶಾಲೆಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.