ಬಸವ ಸಂಸ್ಕೃತಿ ಮೇಳ, ಮುಕ್ತಾಯಿ ಮಹಿಳಾ ಬಳಗದ ರಜತ ಮಹೋತ್ಸವ

ಬಸವ ಮೀಡಿಯಾ
ಬಸವ ಮೀಡಿಯಾ

ಅಥಣಿ:

ಮಹಿಳೆ ಮನುಕುಲದ ಜೀವಕಳೆ. ಮಹಿಳಾ ಸಬಲೀಕರಣ, ಸಾಮಾಜಿಕ ಜಾಗೃತಿ ಹಾಗೂ ಸ್ವಾವಲಂಬನೆಯ ಕಲ್ಪನೆ ನೀಡಿದ್ದು ಬಸವಾದಿ ಶರಣರು ಎಂದು ಮೋಟಗಿಮಠದ ಪ್ರಭುಚನ್ನಬಸವ ಸ್ವಾಮಿಜಿ ಅಭಿಮತ ವ್ಯಕ್ತಪಡಿಸಿದರು.

ಈಚೆಗೆ ನಡೆದ ಮೋಟಗಿಮಠದ ಬಸವ ಸಂಸ್ಕೃತಿ ಮೇಳ ಮತ್ತು ಮುಕ್ತಾಯಿ ಮಹಿಳಾ ಬಳಗದ ರಜತ ಮಹೋತ್ಸವ, ಮುಕ್ತಾಯಿ ಮಹಿಳಾ ರತ್ನ ಪ್ರಶಸ್ತಿ ಪ್ರಧಾನ ಸಮಾರಂಭದ ನೇತೃತ್ವ ವಹಿಸಿ ಮಾತನಾಡಿದರು.

ಮಹಿಳಾ ಸಬಲೀಕರಣ, ಸಾಮಾಜಿಕ ಜಾಗೃತಿ ಹಾಗೂ ಸ್ವಾವಲಂಬನೆಯ ದಿಟ್ಟ ಸಂಕಲ್ಪದೊಂದಿಗೆ ಕಾರ್ಯನಿರ್ವಹಿಸುತ್ತಿರುವ ಮುಕ್ತಾಯಿ ಮಹಿಳಾ ಬಳಗ ತನ್ನ ಸೇವಾ ಪಯಣದ ೨೫ ವರ್ಷಗಳ ಸಂಭ್ರಮದ ರಜತ ಮಹೋತ್ಸವವನ್ನು ಅತ್ಯಂತ ಅರ್ಥಪೂರ್ಣವಾಗಿ ಆಚರಿಸಿದೆ.

ಇದು ಕೇವಲ ಒಂದು ದಿನದ ಸಂಭ್ರಮವಲ್ಲ, ಮಹಿಳೆಯರ ಆತ್ಮವಿಶ್ವಾಸ, ಶ್ರಮ ಮತ್ತು ಸಾಧನೆಗಳ ಪ್ರತೀಕವಾಗಿ ನಿರಂತರವಾಗಿರುವ ಸೇವಾಕಾರ್ಯವಾಗಿದೆ ಎಂದರು.

ಗ್ರಾಮೀಣ ಮತ್ತು ನಗರದ ಮಹಿಳೆಯರ ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಅಭಿವೃದ್ದಿಗೆ ಶ್ರಮಿಸುತ್ತ ಬಂದಿದೆ. ಉದ್ಯೋಗ ಕೌಶಲ್ಯ ತರಬೇತಿ, ಆರೋಗ್ಯ ಜಾಗೃತಿ, ಶಿಕ್ಷಣದ ಜತೆಗೆ ಶಿವಶರಣರ ಸಂದೇಶವನ್ನು ಮಕ್ಕಳಲ್ಲಿ ಬೆಳೆಸುವುದು ಸ್ವಸಹಾಯ ಗುಂಪುಗಳ ರಚನೆಯಿಂದ ಉಳಿತಾಯದೊಂದಿಗೆ ಕುಟುಂಬ ನಿರ್ವಹಣೆ ಜತೆಗೆ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿರುವುದು ಮಾದರಿಯಾಗಿದೆ ಎಂದರು.

ಮುಕ್ತಾಯಿ ಮಹಿಳಾ ರತ್ನ ಪ್ರಶಸ್ತಿ ಸ್ವಿಕರಿಸಿದ ಬೆಳಗಾವಿ ಸಾಹಿತಿ ನೀಲಗಂಗಾ ಚರಂತಿಮಠ ಮಾತನಾಡಿ, ಆಧುನಿಕ ಕಾಲಘಟ್ಟದಲ್ಲಿ ಮಹಿಳೆಯರ ಪಾತ್ರ ಪ್ರಮುಖವಾಗಿದೆ. ಹೊರಗಿನ ಆಹಾರಗಳನ್ನು ಮನೆಗೆ ತಂದು ತಿನ್ನುವ ಬದಲು, ರುಚಿ ಹಾಗೂ ಶುಚಿಯಾದ ಆಹಾರಗಳನ್ನು ಮನೆಯಲ್ಲಿ ಮಾಡಿ ಮಕ್ಕಳಿಗೆ ಮನೆಯವರಿಗೆ ಉಣಬಡಿಸಿದರೆ ಅದರಂತಹ ಆರೋಗ್ಯಕರ ವಿಷಯ ಮತ್ತೊಂದಿಲ್ಲ. ಮುಕ್ತಾಯಿ ಮಹಿಳಾ ಬಳಗವು ಮಹಿಳೆಯರನ್ನು ಕೇವಲ ಆರ್ಥಿಕವಾಗಿ ಮಾತ್ರವಲ್ಲ ಮಾನಸಿಕವಾಗಿಯೂ ಬಲಿಷ್ಠರನ್ನಾಗಿಸಿದೆ. ಸಮಾಜದ ಬದಲಾವಣೆಗೆ ಮಹಿಳೆಯರ ಪಾತ್ರ ಅತ್ಯಂತ ಮಹತ್ವದ್ದು ಎಂದರು.

ಬೆಳಗಾವಿ ರುದ್ರಾಕ್ಷಿಮಠದ ಡಾ. ಅಲ್ಲಮಪ್ರಭು ಸ್ವಾಮಿಜಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಬಸವ ಸಂಸ್ಕೃತಿ ಮಾನವೀಯತೆಯನ್ನು ಪ್ರತಿಬಿಂಬಿಸುತ್ತದೆ. ಜಾತಿ, ಧರ್ಮ, ವರ್ಗಗಳ ಬೇದವಿಲ್ಲದೆ ಎಲ್ಲರೂ ಒಂದೇ ಎನ್ನುವ ಭಾವ ನಮ್ಮಲ್ಲಿ ಮೂಡಬೇಕು.

ಭೌತಿಕತೆಯ ಯುಗದಲ್ಲಿ ಮೌಲ್ಯಗಳ ಕುಸಿತ ಕಂಡುಬರುತ್ತಿರುವ ಸಂದರ್ಭದಲ್ಲಿ ಬಸವ ಸಂಸ್ಕೃತಿ ಮೇಳವು ನೈತಿಕತೆ, ಸಮಾನತೆ ಮತ್ತು ಸಮಾಜ ಸೇವೆಯ ಸಂದೇಶವನು ಸಾರುತ್ತದೆ. ಈ ಮೇಳವು ಕೇವಲ ಆಚರಣೆ ಮಾತ್ರವಲ್ಲ ಸಮಾಜದ ಪರಿವರ್ತನೆಗೆ ಪ್ರೇರಣೆಯಾಗಿ ಪರಿಣಮಿಸುತ್ತದೆ ಎಂದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/HxAWJ403uVgK5HFZlxTVut

Share This Article
Leave a comment

Leave a Reply

Your email address will not be published. Required fields are marked *