ಪ್ರಜೆಗಳ ಆತ್ಮ ಗೌರವ ಹೆಚ್ಚಿಸಿದ ವಚನ ಸಾಹಿತ್ಯ: ಸಿದ್ಧರಾಮೇಶ್ವರ ಶ್ರೀ

ಬಾಗಲಕೋಟೆ

ಪ್ರಜೆಗಳ ಆತ್ಮಗೌರವ ಹೆಚ್ಚಿಸುವ ವಚನಗಳು ಪರಂಪರೆಯ ಅಪೂರ್ವ ಆಸ್ತಿಯಾಗಿವೆ. ಆತ್ಮಕಲ್ಯಾಣದೊಂದಿಗೆ ಸಮಾಜ ಕಲ್ಯಾಣವನ್ನೂ ಕಾರ್ಯಗತಗೊಳಿಸಲು ಹೋರಾಡಿ ಮಡಿದ ಹುತಾತ್ಮರ ಸಾಹಿತ್ಯವೇ ವಚನಗಳು ಎಂದು ಭೋವಿ ಗುರುಪೀಠದ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಹೇಳಿದರು.

ನಗರದ ಸಿದ್ಧರಾಮೇಶ್ವರ ಮಹಾಸಂಸ್ಥಾನ, ಶರಣಬಸವಾಶ್ರಮ ಸಹಯೋಗದಲ್ಲಿ ಶ್ರಾವಣ ಸೋಮವಾರದ ಅಡ್ಡಪಲ್ಲಕ್ಕಿ ಉತ್ಸವದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ವಚನಗಳು ಚಳವಳಿ ಸಾಹಿತ್ಯ ಪ್ರಕಾರವಾಗಿವೆ. ವಿದ್ವತ್ ಸಾಹಿತ್ಯಕ್ಕಿಂತ ದೈಹಿಕ ಶ್ರಮದ ಸಾಹಿತ್ಯ ಹೇಗೆ ಭಿನ್ನವಾಗಿದೆ ಎಂಬುದನ್ನು ಕಾಣಬೇಕಾದರೆ ವಚನ ಸಾಹಿತ್ಯ ಅರಿತುಕೊಳ್ಳಬೇಕು ಎಂದರು.

ಕೊರಟಗೆರೆಯ ಮಹಾಲಿಂಗ ಸ್ವಾಮೀಜಿ ಮಾತನಾಡಿ, ಭಾರತದಲ್ಲಿ ಆತ್ಮೋದ್ಧಾರದ ಬಗ್ಗೆ ಉದಾತ್ತ ತತ್ವಗಳನ್ನು ಪ್ರತಿಪಾದಿಸುತ್ತ ಬಂದಿದ್ದರೂ ಸಮಾಜೋದ್ದಾರದ ಬಗ್ಗೆ ಉಪೇಕ್ಷೆ ಬೆಳೆದು, ಅಲ್ಲಿ ಶೋಷಣೆ ವರ್ಧಿಸುತ್ತ ಬಂದಿತ್ತು. 12ನೇ ಶತಮಾನದಲ್ಲಿ ಉಲ್ಬಣಗೊಂಡಿದ್ದ ಈ ವಿಷಮ ಪರಿಸ್ಥಿತಿ ನಾಶಗೊಳಿಸಿ. ಸಮಪರಿಸ್ಥಿತಿಯನ್ನು ಸ್ಥಾಪಿಸಲು ಹೋರಾಡಿದವರು ಕಲ್ಯಾಣದ ಶರಣರು. ಈ ಕಾರಣಕ್ಕಾಗಿ ಅವರು ಕೈಕೊಂಡ ಜನಪರ ಆಂದೋಲನ ದೇಶದ ಇತಿಹಾಸದಲ್ಲಿಯೇ ವಿಶಿಷ್ಟ ಘಟನೆಯಾಗಿದೆ ಎಂದು ಹೇಳಿದರು.

ಹಡಪದ ಗುರುಪೀಠದ ಅನ್ನದಾನಿ ಭಾರತೀ ಅಪ್ಪಣ್ಣ ಸ್ವಾಮೀಜಿ ಮಾತನಾಡಿ, ಶರಣರ ಕಾಲಘಟ್ಟದಲ್ಲಿ ಪುರುಷ-ಸ್ತ್ರೀ, ಪ್ರಭು-ಪ್ರಜೆ, ಬ್ರಾಹ್ಮಣ-ಶೂದ್ರರಲ್ಲಿ ಸಮಾನತೆ ಸಾಧ್ಯವಿಲ್ಲವೆಂಬ ಭೇದ ಸಂಸ್ಕೃತಿ ಇತ್ತು. ಈಗ, ಶೂದ್ರನಿಗೆ ದೇವನಾಗುವ ಅರ್ಹತೆಯಿದೆ. ಸ್ತ್ರೀಗೂ ಪುರುಷನಷ್ಟು, ಪ್ರಜೆಗೂ ಪ್ರಭುವಿನಷ್ಟು, ಶೂದ್ರನಿಗೂ ಬ್ರಾಹ್ಮಣನಷ್ಟು ಅಧಿಕಾರವಿದೆ ಎಂದು ಶರಣರು ವಾದಿಸಿದರು. ಇದರ ಫಲವಾಗಿ, ಹೊಸ ಸಮಾಜವೊಂದು ಸೃಷ್ಟಿಯಾಯಿತು ಎಂದರು.

ಇರಕಲ್ ಮಠದ ಬಸವ ಪ್ರಸಾದ ಸ್ವಾಮೀಜಿ ಮಾತನಾಡಿ, ಮೂಲತಃ ವಚನ ಸಾಹಿತ್ಯ ಜನರಿಂದ ಜನರಿಗಾಗಿ ಹುಟ್ಟಿ, ಜನರ ಮಧ್ಯದಲ್ಲಿ ಬಾಳಿದ ಸಾಹಿತ್ಯವಾಗಿದೆ. ವಚನಗಳು ಆಚಾರ್ಯರ ಸಾಹಿತ್ಯವಲ್ಲ, ಅನುಭಾವಿಗಳ ಸಾಹಿತ್ಯ ಎಂದರು.

ರಾಚಯ್ಯ ಶಾಸ್ತ್ರಿ, ಸಂಗನಗೌಡರ, ಕೃಷ್ಣರೆಡ್ಡಿ, ಮಲ್ಲಿಕಾರ್ಜುನ ಕೋಲ್ಹಾರ, ಸಿದ್ದರಾಮಪ್ಪ ಪಾತ್ರೋಟಿ, ಯಲ್ಲಪ್ಪ ಪಾತ್ರೋಟಿ, ಬಸವರಾಜ ಕೊಳ್ಳಿ ಪಾಲ್ಗೊಂಡಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/Bo3i1f468pxBcYJIXNRpTK

Share This Article
Leave a comment

Leave a Reply

Your email address will not be published. Required fields are marked *