ಜಮಖಂಡಿ
ಅವ್ವ ಎನ್ನುವ ಪದದಲ್ಲಿ ಶಕ್ತಿ ಇದೆ. ಮಕ್ಕಳಿಗಾಗಿ ತಾಯಿ ಎಲ್ಲವನ್ನು ತ್ಯಾಗ ಮಾಡುತ್ತಾಳೆ ಎಂದು ಮಾಜಿ ಶಾಸಕ ಆನಂದ ನ್ಯಾಮಗೌಡ ಹೇಳಿದರು.
ನಗರದ ಬಸವ ಭವನದಲ್ಲಿ ವಿಶ್ವ ಮಹಿಳಾ ದಿನಾಚರಣೆ ಹಿನ್ನೆಲೆಯಲ್ಲಿ ಸಾವಿತ್ರಿಬಾಯಿ ಫುಲೇ ಮಹಿಳಾ ಮಂಡಳ, ಬಸವ ಸಮಿತಿ, ಬಸವ ಕೇಂದ್ರದ ಆಶ್ರಯದಲ್ಲಿ ಭಾನುವಾರ ನಡೆದ ‘ಅವ್ವ ನನ್ನವ್ವ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸ್ವಾತಂತ್ರ್ಯ ಹೋರಾಟದಲ್ಲಿ ಮಹಿಳೆಯರು ಹೋರಾಡಿದ್ದಾರೆ. ರಾಣಿ ಚನ್ನಮ್ಮ, ಬೆಳವಡಿ ಮಲ್ಲಮ್ಮನಂತಹ ಅಸಂಖ್ಯಾತ ಮಹಿಳೆಯರು ಬ್ರಿಟಿಷರ್ ವಿರುದ್ದ ಹೋರಾಡಿದ್ದಾರೆ. ಮಹಿಳೆಯರು ಪುರುಷರಗಿಂತ ಯಾವುದರಲ್ಲೂ ಕಡಿಮೆ ಇಲ್ಲ. ಇಂದು ಎಲ್ಲ ಕ್ಷೇತ್ರಗಳಲ್ಲಿ ಮಹಿಳೆಯರು ಸಾಧನೆ ಮಾಡುತ್ತಿದ್ದಾರೆ ಎಂದರು.
ಗೋಠೆ ಬಸವ ಕೇಂದ್ರದ ಗಂಗಾಶ್ರೀ ಅನಂತಪೂರ ಮಾತನಾಡಿ, ಮಗು ಶಿಕ್ಷಣ ಪಡೆಯುವುದಕ್ಕಿಂತ ಮುಂಚೆ ತಾಯಿ ನೈತಿಕ ಶಿಕ್ಷಣ ನೀಡುತ್ತಾಳೆ. ಸಮಾಜದಲ್ಲಿ ಹೇಗಿರಬೇಕು ಎಂದು ಕಲಿಸುತ್ತಾಳೆ. ಮಹಿಳೆ ನಿಸರ್ಗದ ಜೊತೆ ಬೆಳೆದು ಬಂದಿದ್ದಾಳೆ, ಗೂಡು ಕಟ್ಟಿಕೊಳ್ಳುದರಿಂದ ಹಿಡಿದು ಕೃಷಿಗೆ ಮೂಲ ಬೇರು ಎನಿಸಿಕೊಂಡಿದ್ದಾಳೆ ಎಂದರು.
ಓಲೆಮಠದ ಆನಂದ ದೇವರು ಮಾತನಾಡಿ, ಮಹಿಳೆಯರ ಸಾಧನೆಗೆ ಮೂಲ ಬಸವಣ್ಣನವರಾಗಿದ್ದಾರೆ. ಮಕ್ಕಳಿಗೆ ಒಳ್ಳೆಯ ಸಂಸ್ಕಾರ ನೀಡಬೇಕು. ಮಕ್ಕಳ ಮುಂದೆ ಪಾಲಕರು ಹಾದಿ ತಪ್ಪಬಾರದು. ಮಕ್ಕಳಲ್ಲಿ ಒಳ್ಳೆ ಸಂಸ್ಕಾರ ಬೆಳೆಸಬೇಕು ಎಂದರು.
ಇಳಕಲ್ ಚಿತ್ತರಗಿ ವಿಜಯ ಮಹಾಂತೇಶ್ವರ ಸಂಸ್ಥಾನಮಠದ ಗುರುಮಹಾಂತ ಸ್ವಾಮೀಜಿ, ಮುತ್ತಿನಕಂತಿ ಹಿರೇಮಠದ ಶಿವಲಿಂಗ ಪಂಡಿತಾರಾಧ್ಯ ಶಿವಾಚಾರ್ಯರು, ಬಾಗಲಕೋಟ ಜಿಲ್ಲಾ ಜಾಗತಿಕ ಲಿಂಗಾಯತ ಮಹಾಸಭಾದ ಅಧ್ಯಕ್ಷ ಅಶೋಕ ಬರಗುಂಡಿ ಮಾತನಾಡಿದರು.
ಸುಮಿತ್ರಾ ನ್ಯಾಮಗೌಡ, ಹೇಮಾ ಮಂಟೂರ, ಗಂಗೂಬಾಯಿ ಮುಧೋಳ, ಅನ್ನಪೂರ್ಣಾ ಮಾಳಿ, ಆಶಾದೇವಿ ಗುಡಗುಂಟಿ, ಅರ್ಚನಾ ಶಹಾ, ನಂದಿನಿ ಬಾಂಗಿ, ರತ್ನಾ ದಳವಾಯಿ, ವಿಮಲಾ ಕುಬಕಡ್ಡಿ, ಜ್ಯೋತಿ ಪಾಟೀಲ ಇದ್ದರು.
ಸರಸ್ವತಿ ಸಬರದ ವಚನ ಗಾಯನ ಮಾಡಿದರು, ಲಕ್ಷ್ಮೀ ಮಾಳಿ ಸ್ವಾಗತಿಸಿದರು, ಪೂರ್ಣಿಮಾ ಮಾಳಿ ನಿರೂಪಿಸಿದರು, ರುಕ್ಮಿಣಿ ಮುರಕಟನಾಳ ವಂದಿಸಿದರು.