ಬಿ ಎಲ್ ಸಂತೋಷ್ ಅವರೇ ಶರಣು ಶರಣಾರ್ಥಿ…
ಮೊಟ್ಟಮೊದಲು ನಿಮಗೆ ಸಂತಾಪಗಳು. ಅನಂತರ ಅಭಿನಂದನೆಗಳು.
ಇದಕ್ಕೆ ಕಾರಣಗಳಿವೆ. ಉರಿಗೌಡ ಮತ್ತು ನಂಜೇಗೌಡ ಹುಟ್ಟಿ ಒಕ್ಕಲಿಗರಿಂದ ಸರಿಯಾದ ಪೋಷಣೆ ಸಿಗದೇ ಎರಡೇ ವರ್ಷಕ್ಕೆ ತೀರಿಕೊಂಡ ಕಾರಣಕ್ಕೆ ಅದರ ನೋವಿನಲ್ಲೇ ಇದ್ದೀರಿ ಅಂದುಕೊಂಡಿದ್ದೆ. ಆದರೆ ನೀವು ಸುಮ್ಮನೆ ಇರುವ ಚಾಳಿಯವರಲ್ಲ. ಮತ್ತೆ ನೀವು ಮತ್ತು ನಿಮ್ಮ ಕುಲಬಾಂಧವರೆಲ್ಲಾ ಸೇರಿ ಪುರಾಣದ ಎಲ್ಲಾ ದರ್ಶನಗಳನ್ನು ಬಿಟ್ಟು ನಿಮ್ಮ ವಿಷ್ಣುವಿನ ಮತ್ತೊಂದು ಅವತಾರ ತಾಳಿ, ಒಕ್ಕಲಿಗರನ್ನು ಬಿಟ್ಟು ಲಿಂಗಾಯತ ಮಂದಿಗೆ ವಚನದರ್ಶನ ತಂದಿದ್ದೀರಿ. ಇದರ ಮೂಲಕ ವಿಷ್ಣು ಸ್ಥಾಪಿಸಿದ ಸೂಪರ್ ವೈಕುಂಠದಿಂದ ಕೈಲಾಸಕ್ಕೆ ಬರುವುದು ಹೇಗೆ ಎಂದು ತೋರಿಸುತ್ತಿದ್ದೀರ? ಅಥವಾ ವೈಕುಂಠದೊಳಗೆ ಕೈಲಾಸವಿತ್ತು ಎಂದು ನಿರೂಪಿಸಲು ಕಥೆ ಕಟ್ಟುತ್ತಿದ್ದೀರಾ?
ನೀವು ಆರ್ ಎಸ್ ಎಸ್ ಶಾಖೆಗಳಲ್ಲಿ ವಚನಗಳನ್ನು ಕಲಿತಿದ್ದೀರಿ ಎಂದು ಕೇಳಿ ತುಂಬಾ ಸಂತೋಷವಾಯಿತು. ಆದರೆ ಶರಣರಿಂದ ಖಾಲಿಯಾಗಿದ್ದ ಶೂನ್ಯ ಪೀಠವನ್ನು ನೀವು ಏನಾದರೂ RSS ಪೀಠ ಮಾಡಲು ಹೊರಟಿದ್ದೀರಾe ಎಂಬ ವದಂತಿಯಿದೆ. ಅದು ನಿಜವೇ ಆಗಿದ್ದರೆ ಜೋಕೆ!
ಮೊನ್ನೆ ನೀವು ಭಾಷಣದ ಶುರುವಿನಲ್ಲೇ ನಾನು ಶಾಖೆಯಲ್ಲಿ ಸರ್ವಜ್ಞನ ವಚನಗಳು, ಅಕ್ಕಮಹಾದೇವಿಯವರ ವಚನಗಳು ಮತ್ತು ಬಸವಣ್ಣನವರ ವಚನಗಳು ಕಲಿಯುತ್ತಿದ್ದೇನೆ ಎಂದು ಹೇಳಿದ್ದೀರಿ. ಹೀಗೆ ಶುರುವಾದ ಭಾಷಣ ನಂತರ ಅಲ್ಲಲ್ಲೇ ರಾಮಾಯಣವನ್ನು ಮಹಾಭಾರತವನ್ನು ತೋರುತ್ತಾ, ಮಧ್ಯ ಮಧ್ಯ ನಮ್ಮ ಅಕ್ಕಮಹಾದೇವಿರ ಸೌಮ್ಯವಾದ ಕೆಲವು ವಚನಗಳನ್ನುಆಯ್ದುಕೊಂಡು ಮೊಬೈಲಲ್ಲಿ ನೋಡಿಕೊಂಡು ತೊದಲುತ್ತಾ ನುಡಿಯುತ್ತ ವಚನದರ್ಶನವನ್ನು ತಿಳಿಹೇಳಿದ್ದೀರಿ. ಹಾಗೆಯೇ ಮುಂದುವರೆದು ರಾಮ ಸಮಾಜದ ಕಟ್ಟುಪಾಡುಗಳನ್ನು ಮೀರಲಿಲ್ಲ. ಅದಕ್ಕೆ ಅವನು ಮರ್ಯಾದಾ ಪುರುಷೋತ್ತಮನಾದ. ಆದರೆ ವಚನಕಾರರು ಈ ಎಲ್ಲಾ ಸಮಾಜದ ಕಟ್ಟುಪಾಡುಗಳನ್ನು ಮೀರಿ ಬೆಳೆದವರು ಎಂದು ಹೇಳಿದ್ದೀರಿ. ಇದರ ಅರ್ಥವೇನು?
900 ವರ್ಷಗಳ ಹಿಂದೆ ಶರಣರೆಲ್ಲ ಕೂಡಿದ್ದು ಕೇವಲ ಭಕ್ತಿ ಪಂಥಕ್ಕೆ ಹೊರತು ಬೇರೆ ಯಾವ ವೈಚಾರಿಕ ಪ್ರಜ್ಞೆಯಿಂದ ಅಲ್ಲ ಎಂದು ಹೇಳಿದ್ದೀರಿ. ಇದನ್ನು ಕೇಳಿ ಸ್ವಲ್ಪ ಮುಜುಗರವಾಯಿತು. ಆದರೆ ವಿಷಯವನ್ನು ತಿರುಚುವುದರಲ್ಲಿ ನೀವು ನಿಸ್ಸೀಮರು ಎಂಬುದು ಗೊತ್ತು.
ಶರಣರ ವಚನಗಳನ್ನು ಅನುಭಾವದ ಮೂಲಕ ಹೇಳಿದ್ದಾರೆ. ಆದರೆ ದಾಸ ಸಂತತಿಯವರು ರಾಗಬದ್ಧವಾಗಿ, ಲಯಬದ್ಧವಾಗಿ ಹಾಡಿದ್ದಾರೆ ಎಂದು ಹೇಳುತ್ತೀರಿ. ಇರಲಿ ಒಳ್ಳೆಯದೇ.
ಈಗಿನ ಕಲ್ಯಾಣನಾಡಿನಲ್ಲಿ ಶರಣರ ಮುಂದಿನ ವಾರಸುದಾರರೇ ಇಲ್ಲವೇನೋ ಎಂದು ನಾವು ಚಿಂತಾಕ್ರಾಂತ ರಾಗಿದ್ದಾಗ ನೀವು ದಿಗ್ಗನೆ ಎದ್ದು ಬಂದು ಲಿಂಗಾಯಿತರ ಆಪದ್ಬಂಧು ತರ ಗೋಚರಿಸಿದ್ದೀರಿ. ನೀವು ಇದನ್ನು ಒಪ್ಪಿಕೊಳ್ಳುತ್ತೀರಾ ಎಂದು ನಂಬಿ ಸಲುಗೆಯಿಂದ ಒಂದೆರಡು ಅನುಮಾನಗಳನ್ನು ಪ್ರಸ್ತಾಪಿಸುವೆ.
ಒಂದು : ಈಗ ನಿಮ್ಮ ಶಾಖೆಗಳಲ್ಲಿ ಕಲಿಸುತ್ತಿರುವ ಚಿಂತನಗಂಗಾದ ವಿಷಯಗಳು, ಸದಾ ವತ್ಸಲೇ ಎಲ್ಲವನ್ನು ಒಂದಷ್ಟು ಕಾಲ ಬದಿಗಿಟ್ಟು ವಚನಗಳ ಕಲಿಕೆ, ವಚನಗಳ ಭಾವಾರ್ಥ ನಡೆ-ನುಡಿ ಕಲಿಸುವುದರಲ್ಲಿ ಪ್ರಯತ್ನಿಸಿ. ಏಕೆಂದರೆ ನಮ್ಮದು ಚಾತುರ್ವರ್ಣದ ದಾರಿಯಲ್ಲ. ನಮ್ಮದು ಎರಡೇ ದಾರಿ ಒಂದು ಭವಿ ಮತ್ತು ಮತ್ತೊಂದು ಭಕ್ತ. ಹಾಗಾಗಿ ಶಾಖೆಗಳಲ್ಲಿರುವ ಭವಿಗಳೆಲ್ಲಾ ವಚನಗಳನ್ನು ಅರಿತು ಭಕ್ತ-ಶರಣರಾಗಲಿ ಎಂಬುದು ನಮ್ಮ ಒಂದು ಆಶಯ. ಅದನ್ನ ನೆರವೇರಿಸುತ್ತೀರಿ ತಾನೇ?
ಎರಡು: ನಿಮಗೆ ಗೊತ್ತಿರುವಂತೆ ನಮ್ಮದು ಶರಣ ಪರಂಪರೆ. ಹಣೆಗೆ ವಿಭೂತಿ, ಕೊರಳಲ್ಲಿ ಇಷ್ಟಲಿಂಗಧಾರಣೆ ಇರಬೇಕು. ನೀವು ಬ್ರಾಹ್ಮಣ ಎಂದು ಗೊತ್ತು. ಆದರೂ ಬಸವಣ್ಣನಂತೆ ನೀವು ಜನಿವಾರ ತೆಗೆದು ಇಷ್ಟಲಿಂಗಧಾರಣೆ ಮಾಡಿಸಿಕೊಳ್ಳಿ. ಆಗಬಹುದೇ?
ಮೂರು: ನೀವು ರಾಜಕೀಯದಲ್ಲಿ ಬಿಜೆಪಿ ರಾಜ್ಯ ಸಂಘಟನಾ ಕಾರ್ಯದರ್ಶಿ ಸ್ಥಾನದಿಂದ ಕೆಳಗಿಳಿದ ಮೇಲೆ ಜಂಗಮ ಸ್ವರೂಪಿಯಾಗಿದ್ದರಂತೆ. ಮುಂದಿನ ರಾಜಕಾರಣಕ್ಕೆ ವೇದಿಕೆಗಳನ್ನ ಸಿದ್ಧ ಮಾಡಲು ರಾಜ್ಯದ ತುಂಬಾ ತಿರುಗಾಡುತ್ತಿದ್ದಿರಂತೆ. ಹಾಗೆ ಲಿಂಗಾಯತರನ್ನು ಸೆಳೆಯಲು ವಚನಗಳ ಮೇಲೆ ಪಿ ಎಚ್ ಡಿ ಕೂಡ ಮಾಡುವಿರಂತೆ ಎಂದು ನಿಮ್ಮ ನಿಂದಕರು ಹೇಳುತಿದ್ದಾರೆ.
ಕೊನೆಯದಾಗಿ ನಿಮ್ಮ ಎಲ್ಲಾ ಪ್ರಯತ್ನಗಳಿಗೆ ನನ್ನ ಪ್ರತಿಕ್ರಿಯೆ: ಎಲ್ಲಿಂದಲೋ ಒಮ್ಮೆಲೇ ಬಂದು ವಚನಗಳ ಸಾರವನ್ನ ಗಬ್ಬೆಬ್ಬಿಸಲು ಮನುವಾದಿಗಳು ಮತ್ತೆ ಸೃಷ್ಟಿಯಾಗಿದ್ದಾರೆ. ಇವರುಗಳಿಗೆ ನಮ್ಮ ಶರಣರ ವಚನಗಳ ಮೂಲಕವೇ ಏಟು ಕೊಟ್ಟು ಇಲ್ಲಿಂದ ಗಾಯಬ್ ಮಾಡಬೇಕು.
ಧನ್ಯವಾದ