ಬಸವ ಗಣಾಚಾರಿ ಬಸವರಾಜಪ್ಪ ಅವರಿಗೆ ಶರಣ ಸಮಾಜದ ನುಡಿ ನಮನ

ಹೊಳಲ್ಕೆರೆ

ಬಸವ ತತ್ವಕ್ಕಾಗಿ ಜೀವನವಿಡೀ ದುಡಿದ ಹೊಳಲ್ಕೆರೆ ತಾಲ್ಲೂಕಿನ ಆರ್.ನುಲೇನೂರು ಗ್ರಾಮದ ಲಿಂಗೈಕ್ಯ ಜಿ .ಎನ್. ಬಸವರಾಜಪ್ಪ (1940-2025) ಅವರು ಸೋಮವಾರ ಲಿಂಗೈಕ್ಯರಾದರು.

ಮಂಗಳವಾರ ನಡೆದ ನುಡಿನಮನ ಕಾರ್ಯಕ್ರಮದಲ್ಲಿ ಹಲವಾರು ಪೂಜ್ಯರು, ಮತ್ತು ಒಡನಾಡಿಗಳು ಲಿಂಗೈಕ್ಯ ಶರಣರನ್ನು ಸ್ಮರಿಸಿಕೊಂಡರು.

ಗುರುಬಸವ ಸ್ವಾಮೀಜಿ, ಪಾಂಡೋಮಟ್ಟಿ

ಹೊಳಲ್ಕೆರೆ ತಾಲ್ಲೂಕಿನ ಆರ್ ನುಲೇನೂರಿಗೂ ಹನ್ನೆರಡನೆಯ ಶತಮಾನದ ಶರಣ ಚಳವಳಿಗೂ ಒಂದು ಅವಿನಾಭಾವ ಸಂಬಂಧ. ಕಾಯಕ ನಿಷ್ಠೆಯ ವಚನಕಾರ ನುಲಿಯ ಚಂದಯ್ಯ ತನ್ನ ಕೊನೆಯ ದಿನಗಳನ್ನು ಕಳೆದದ್ದು ಈ ನುಲೇನೂರಿನಲ್ಲಿ. ಈ ಊರಿಗೆ ನುಲೇನೂರು ಎಂಬ ಹೆಸರು ಬರಲು ಕಾರಣ ಈ ಚಂದಯ್ಯನೇ (ನುಲಿಯಯ್ಯನ ಊರು- ನುಲೇನೂರು) ಕಾರಣ.

ಈ ಊರಿನ ನಿವೃತ್ತ ಶಿಕ್ಷಕರಾಗಿದ್ದ ಬಸವರಾಜಪ್ಪನವರು ಬಸವ ತತ್ತ್ವ ಪಾಲನೆ, ಪ್ರಚಾರದಲ್ಲಿ ಮುಂಚೂಣಿಯಲ್ಲಿದ್ದವರು. ಅ‌ನುಭಾವಿಗಳಾಗಿದ್ದ ಇವರು ನುಲಿಯಚಂದಯ್ಯನ ಐಕ್ಯಸ್ಥಳ ಹೊರಜಗತ್ತಿಗೆ ತಿಳಿಯುವಂತೆ ಮಾಡಿದವರು. ಕ್ಷೇತ್ರಕಾರ್ಯಕ್ಕೆ ಬರುತ್ತಿದ್ದ ಸಂಶೋಧಕರಿಗೆ ಮಾರ್ಗದರ್ಶನ ಮಾಡುತ್ತಿದ್ದವರು.

ಹೊಳಲ್ಕೆರೆ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ಗೌರವಕ್ಕೆ ಪಾತ್ರರಾಗಿದ್ದ ಬಸವರಾಜಪ್ಪನವರು ಮೊನ್ನೆ ಸಂಜೆ ತುಮಕೂರಿನ ತಮ್ಮ ಮಗಳ‌ ಮನೆಯಲ್ಲಿ ಲಿಂಗೈಕ್ಯರಾಗಿದ್ದಾರೆ. ಬಸವರಾಜಪ್ಪನವರ‌ ಶಿವ ಸಾಯುಜ್ಯ ಒಬ್ಬ ನಿಷ್ಠಾವಂತ ಶರಣತತ್ತ್ವ ಪ್ರೇಮಿಯನ್ನು ಕಳೆದುಕೊಂಡಂತಾಗಿದೆ. ಅವರಿಗೆ ಬಸವಾದಿ ಶಿವಶರಣರು ಶಾಂತಿಯನ್ನು ಕರುಣಿಸಲಿ.

ಡಾ. ಬಸವಕುಮಾರ ಮಹಾಸ್ವಾಮಿಗಳು, ಮುರುಘರಾಜೇಂದ್ರ ಬೃಹನ್ಮಠ

ಬಸವ ತತ್ವ ಮತ್ತು ಅನುಷ್ಠಾನಕ್ಕೆ ಹೆಸರಾಗಿದ್ದ ಮಠಗಳಲ್ಲಿ ಒಂದಾದ ಪಾಂಡೋಮಟ್ಟಿಯ ವಿರಕ್ತಮಠದ ಹಿಂದಿನ ಹಿರಿಯ ಚೇತನ ಲಿಂಗೈಕ್ಯ ಚೆನ್ನಬಸವ ಮಹಾಸ್ವಾಮಿಗಳವರಲ್ಲಿ ಬಸವರಾಜಪ್ಪ ಅವರು ಬಸವ ತತ್ವ ಪರಿಪಾಲನೆಯ ಪಟ್ಟುಗಳನ್ನು ಕಲಿತವರಾಗಿದ್ದರು.

ಶಿಕ್ಷಕ ವೃತ್ತಿಯ ಜೊತೆಗೆ ಶರಣ ತತ್ವವನ್ನು ಅಳವಡಿಸಿಕೊಂಡು ಆ ಮೂಲಕ ನಾಡಿನಲ್ಲಿ ಅನೇಕ ಉಪನ್ಯಾಸಗಳನ್ನು ನೀಡುತ್ತಾ ತತ್ವ ಪ್ರಸಾರ ಮತ್ತು ಪ್ರಚಾರಕ್ಕೆ ತಮ್ಮನ್ನು ಒಳಗು ಮಾಡಿಕೊಂಡಿದ್ದರು. ನಾಡಿನಲ್ಲಿ ನುಡಿ ಮತ್ತು ನಡೆ ಒಂದಾದ ಕೆಲ ತತ್ವ ಚಿಂತಕರ ಸಾಲಿನಲ್ಲಿ ಇವರು ಒಬ್ಬರಾಗಿದ್ದರು.

ನಿವೃತ್ತಿಯ ನಂತರ ಚಿತ್ರದುರ್ಗದ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ಬಸವತತ್ವ ಮಹಾವಿದ್ಯಾಲಯದಲ್ಲಿ ಸಾಧಕ-ಬೋಧಕ ಹಾಗೂ ಸುಧಾರಕ ತರಗತಿಗಳಿಗೆ ಇಟ್ಟಿದ್ದ ವಿಷಯಗಳಿಗೆ ಸಾಧಕರಿಗೆ ಇತರ ಆಸಕ್ತರಿಗೆ ತರಗತಿಗಳಲ್ಲಿ ಪಾಠ ಪ್ರವಚನ ನಡೆಸಿಕೊಟ್ಟಿದ್ದರು.

ನಿಷ್ಠಾವಂತ ಬಸವ ತತ್ವ, ಬಸವ ಪ್ರಜ್ಞೆಯ ವ್ಯಕ್ತಿತ್ವ ಕಣ್ಮರೆಯಾಗಿರುವುದು ಅತೀವ ನೋವು ತಂದಿದೆ. ಅಗಲಿಕೆಯ ನೋವನ್ನು ಸಹಿಸಿಕೊಳ್ಳುವ ಶಕ್ತಿಯನ್ನು ಅವರ ಕುಟುಂಬ ವರ್ಗದವರಿಗೆ ಬಸವಾದಿ ಶಿವಶರಣರು ಹಾಗೂ ಮುರುಘೇಶರು ಕರುಣಿಸಲಿ ಎಂದು ಪ್ರಾರ್ಥನೆ.

ಪಂಡಿತಾರಾಧ್ಯ ಮಹಾಸ್ವಾಮಿಗಳು, ಸಾಣೆಹಳ್ಳಿ

ಲಿಂಗೈಕ್ಯ ಜಿ .ಎನ್ ಬಸವರಾಜಪ್ಪ ಅವರು ಆರ್. ನುಲೇನೂರು ಗ್ರಾಮವನ್ನು 12ನೇ ಶತಮಾನದ ಶಿವಶರಣರಾದ ನುಲಿಯ ಚಂದಯ್ಯ ಅವರ ಐತಿಹ್ಯವನ್ನು ಸ್ಮಾರಕವನ್ನಾಗಿಸಲು ಬಹಳ ಶ್ರಮಪಟ್ಟರು. ಅದು ಇಂದು ಚರಿತ್ರೆಯಲ್ಲಿ ದಾಖಲಾಗಿದೆ. ಇದು ಲಿಂಗೈಕ್ಯರ ಅವಿರತ ಶ್ರಮದಿಂದ ಸಾಧ್ಯವಾಗಿದೆ. ಬಸವರಾಜಪ್ಪ ಅವರು ನಮ್ಮೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿ ಇದ್ದು ಅನೇಕ ವಿಚಾರಗಳ ಬಗ್ಗೆ ಚರ್ಚೆ ನಡೆಸುತ್ತಿದ್ದರು. ಬಸವಾದಿ ಶಿವಶರಣರ ವಿಚಾರಕ್ಕೆ ಏನಾದರೂ ಕುಂದುಂಟಾದರೆ, ಅಪಮಾನ, ಅವಹೇಳನ ಒದಗಿ ಬಂದಾಗ ಅವರು ಗಣಾಚಾರ ಪ್ರವೃತ್ತಿಯಿಂದ ನಿರ್ಭಿಡೆಯಿಂದ ಖಂಡಿಸುವ ಪ್ರವೃತ್ತಿ ಅವರದಾಗಿತ್ತು.

ಡಾ. ಬಸವಪ್ರಭು ಮಹಾಸ್ವಾಮಿಗಳು, ದಾವಣಗೆರೆ

ಆರ್.ನೂಲೇನೂರು ಗ್ರಾಮದಲ್ಲಿ 12ನೇ ಶತಮಾನದ ಶಿವಶರಣರಾದ ನುಲಿಯ ಚಂದಯ್ಯನವರ ಸ್ಮಾರಕವನ್ನು ನಿರ್ಮಾಣ ಮಾಡಿ ಶರಣರ ಜೀವನದ ಪಥ ದರ್ಶನವನ್ನು ಮಾಡಿಸುತ್ತಾ, ಗ್ರಾಮದ ಕೀರ್ತಿಯನ್ನು ನಾಡಿಗೆ ಪರಿಚಯಿಸಿದ ಕೀರ್ತಿ ನಮ್ಮ ಲಿಂಗೈಕ್ಯ ಬಸವರಾಜಪ್ಪ ಅವರಿಗೆ ಸಲ್ಲುತ್ತದೆ.

ಅವರು ನಮಗೆ ಬಸವತತ್ವ ಮಹಾವಿದ್ಯಾಲಯದ ತರಗತಿಯಲ್ಲಿ ವಿಷಯಕ್ಕೆ ಸಂಬಂಧಿಸಿದ ಅದರೊಂದಿಗೆ ಚರಿತ್ರಾರ್ಹ ಘಟನೆಗಳನ್ನು ಬಹಳ ವಿಸ್ಮಯವಾಗಿ ವರ್ಣಿಸುತ್ತಿದ್ದ ಪರಿ ಕಣ್ಣಿಗೆ ಕಟ್ಟುವಂತೆ ಇರುತ್ತಿತ್ತು. ನಾವೆಲ್ಲ ಅವರ ತರಗತಿಯಲ್ಲಿ ಕುತೂಹಲ ಭರಿತರಾಗಿ ಕೇಳುತ್ತಿದ್ದೆವು. ಅಂತಹ ವಾಕ್ಚಾತುರ್ಯ ಅವರಲ್ಲಿತ್ತು. ಜೀವನದಲ್ಲಿ ಶರಣ ತತ್ವ ಪಾಲನೆಯ ಮೂಲಕ ಆದರ್ಶ ವ್ಯಕ್ತಿತ್ವವನ್ನು ರೂಢಸಿಕೊಂಡಿದ್ದ ಅವರ ಸರಳ ಜೀವನದ ನಡೆ ಮಾದರಿ ಎನ್ನುವಂತಿತ್ತು.

ಬಸವ ತತ್ವ ಮಹಾವಿದ್ಯಾಲಯದಲ್ಲಿ ಗುರುವಾಗಿ ನಮಗೆ ಪಾಠ ಮಾಡುತ್ತಿದ್ದರು. ಆದರೆ ಪಾಠ ಮುಗಿಸಿ ಹೊರಗೆ ಬಂದಾಗ ಸಮಾಜ ಸೇವಾ ದೀಕ್ಷೆ ಪಡೆದ ನೀವುಗಳು ನನಗೂ ಹಾಗೂ ಸಮಾಜಕ್ಕೂ ಎಂದಿಗೂ ಗುರುಗಳು ಎಂದು ಸಂಬೋಧಿಸಿ ಮಾತನಾಡುತ್ತಾ, ನಮ್ಮನ್ನ ಗುರು ಸ್ಥಾನದಲ್ಲಿ ನೋಡುತ್ತಿದ್ದದ್ದು ಅವರ ಮೇಲೆ ತತ್ವದ ಪ್ರಭಾವ ಪರಿಣಾಮ ಹೇಗೆ ಬೀರಿತ್ತು ಎಂದೆನಿಸುತ್ತದೆ.

ಸಿದ್ದಬಸವ ಕಬೀರ ಮಹಾಸ್ವಾಮಿಗಳು, ಚಿಗರಳ್ಳಿ

“ಅನ್ಯ ಚಿತ್ತದಲ್ಲಿರಿಸದೆ, ನಿಮ್ಮ ಚಿತ್ತದಲ್ಲಿರಿಸು ಕೂಡಲಸಂಗಮದೇವಾ” ಎನ್ನುವ ವಚನದಂತೆ ಬಸವರಾಜಪ್ಪನವರು ನಡೆ-ನುಡಿ ಸಿದ್ದಾಂತ ಒಂದಾಗಿ ಬಾಳಿದವರು.

ಪ್ರಥಮವಾಗಿ ನಾನು ಚಿತ್ರದುರ್ಗ ಮುರುಘಾಮಠಕ್ಕೆ ಬಂದಾಗ ನಾವೆಲ್ಲ ಇವರ ಬಸವ ತತ್ವ ಕಂಡು ಬೆರಗಾಗಿದ್ದೆವು. ಎಲ್ಲೂ ರಾಜಿಯ ಮಾತೆ ಇಲ್ಲ, ನೇರ ನಿಷ್ಠುರ, ಸತ್ಯ- ಸದಾಚಾರಗಳನ್ನು ಮೈಗೂಡಿಸಿಕೊಂಡ ಇವರು ಶರಣ ವಾಣಿಯಂತೆ ಸಂಸಾರ ಯಾವತ್ತೂ ಹೇಯವಲ್ಲ ಎಂದು ಅಂದುಕೊಂಡಿದ್ದವರಲ್ಲಿ ಇವರೊಬ್ಬರು.

ಮೌಡ್ಯ, ಕಂದಾಚಾರ ಕಂಡಲ್ಲಿ ಮುಲಾಜಿಲ್ಲದೆ ಖಂಡಿಸುವ ಜಾಯಮಾನ ಅವರದಾಗಿತ್ತು. ಜೀವನದಲ್ಲಿ ಸಾಕಷ್ಟು ತಾಪತ್ರಯ ಇದ್ದರೂ ಅವನ್ನ ತೋರಗೊಡದೆ, ಬಸವತತ್ವಕ್ಕಾಗಿ ದುಡಿದ ಜೀವ. ಅಪರೂಪದ ಬಸವ ತತ್ವ ಪ್ರತಿಪಾದಕರನ್ನ ಇವತ್ತು ಬಸವ ಬಾನಿನಿಂದ ಕಳಚಿ ಬಯಲಲ್ಲಿ ಬಯಲಾಗಿ ಉಸಿರು ನಿಂತರೂ ; ಹೆಸರು ನಿಲ್ಲದಂತೆ ಬಾಳಿದ ಸರಳ ಸಜ್ಜನಿಕೆಯ ಪ್ರತಿರೂಪ ನಮ್ಮ ಬಸವರಾಜಪ್ಪ.

ರುದ್ರಮೂರ್ತಿ ಎಂ.ಜೆ

ಬಹಳಷ್ಟು ತ್ರಾಸದಾಯಕ ವಿಚಾರ ಅಂದರೆ ನುಡಿಯಲ್ಲಿ ನಡೆಯನ್ನ ಪೂರೈಸುವುದು. ಆದರೆ 12ನೇ ಶತಮಾನದಲ್ಲಿ ಬಸವಾದಿ ಶಿವಶರಣರು ಅದನ್ನ ನಿಭಾಯಿಸಿ, ಒಂದು ಆದರ್ಶ ತತ್ವ ಸಿದ್ಧಾಂತ, ಉದಾತ್ತ ಮೌಲ್ಯಗಳನ್ನು ಬಿಟ್ಟು ಹೋಗಿದ್ದಾರೆ.

ಅಂತಹ ಕಠಿಣ ಹಾದಿಯಲ್ಲಿ ಸಾಗಿದ ಹೊಳಲ್ಕೆರೆ ತಾಲ್ಲೂಕಿನ ಆರ್.ನುಲೇನೂರು ಗ್ರಾಮದ ಲಿಂಗೈಕ್ಯ ಜಿ .ಎನ್. ಬಸವರಾಜಪ್ಪ ಅವರು ಶಿಕ್ಷಕ ವೃತ್ತಿಯ ಜೊತೆಯಲ್ಲಿ ಬಸವ ತತ್ವದ ಕರ್ಣದಾರತ್ವ ದೀಕ್ಷೆ ಪಡೆದು, ತಮಗೆ ನಿಲುಕಿದಷ್ಟು ಪ್ರಚಾರ ಮಾಡಿದವರು.

ವೈಯಕ್ತಿಕ ನೆಲೆಯಲ್ಲಿ ಅವರು ಬಸವಾದಿ ಶಿವಶರಣರ ಆದರ್ಶಗಳನ್ನು ಮೈಗೂಡಿಸಿಕೊಂಡಿದ್ದರು. ಅಂತಹವರು ವೃತ್ತಿಯಿಂದ ನಿವೃತ್ತಿ ಪಡೆದ ಮೇಲೆ ಚಿತ್ರದುರ್ಗದ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ಬಸವ ತತ್ವ ಮಹಾವಿದ್ಯಾಲಯದಲ್ಲಿ ಪಾಠ- ಪ್ರವಚನದ ಮೂಲಕ ತತ್ವದ ಬೀಜಗಳನ್ನು ಬಿತ್ತಿದರು.

ಬಸವಮೂರ್ತಿ ಮಾದರ ಚೆನ್ನಯ್ಯ ಶ್ರೀ, ಮಾದಾರ ಚೆನ್ನಯ್ಯ ಗುರುಪೀಠ

ಬಸವರಾಜನಪ್ಪನವರು ವೃತ್ತಿಯಿಂದ ನಿವೃತ್ತರಾದರೂ, ಅವರು ಜೀವನದಲ್ಲಿ ಗುರುಪದವಿಗೆ ತಮ್ಮ ಶಿಷ್ಯರಿಂದ ಮುಂಬಡ್ತಿ ಪಡೆದುಕೊಂಡವರು. ಅವರು ತಮ್ಮ ಕೊನೆ ಉಸಿರಿರುವವರೆಗೂ ತಮ್ಮದೇ ಆದ ನೆಲೆಯಲ್ಲಿ ಬಸವಾದಿ ಶಿವಶರಣರ ತತ್ವ ಅರಿತಂತೆ ಅದನ್ನು ಬೋಧನೆ ಮಾಡುತ್ತಾ, ಪ್ರಚಾರವನ್ನು ಮಾಡಿದ್ದರು.

ತಾವೊಬ್ಬ ಶ್ವೇತವಸ್ತ್ರಧಾರಿಯಾಗಿದ್ದುಕೊಂಡೇ ಧರ್ಮಕಾರ್ಯವನ್ನು ಬಹು ನಿಷ್ಠೆಯಿಂದ ಮಾಡಿದವರಾಗಿದ್ದರು. ಅವರು ನಮ್ಮೊಂದಿಗೆ ಭೌತಿಕವಾಗಿ ಇಲ್ಲದೇ ಇದ್ದರೂ, ಅವರ ಕುಟುಂಬಕ್ಕೆ ದುಃಖವಾಗಿದ್ದರೂ ತತ್ವದ ಆಚರಣೆ, ಅನುಷ್ಠಾನ ಮತ್ತು ಮಾರ್ಗದರ್ಶನಗಳಿಂದ ಅವರು ನಮ್ಮೊಂದಿಗೆ ಸದಾ ಇದ್ದಾರೆ ಎನ್ನುವುದು ನಿಶ್ಚಿತ. ಅವರಿರುವಷ್ಟು ಕಾಲ ನುಡಿದಂತೆ ನಡೆದಿದ್ದಾರೆ.

ಶಾಂತವೀರ ಗುರುಮುರುಘರಾಜೇಂದ್ರ ಶ್ರೀ, ಗುರುಮಠಕಲ್

ಶರಣರ ವಿಚಾರಧಾರೆಗಳು ಎಂದರೆ ಲಿಂಗೈಕ್ಯ ಬಸವರಾಜಪ್ಪನವರಿಗೆ ಅವರಿಗೆ ಮೈ-ಮನ ರೋಮಾಂಚನಕಾರಿಯಾಗಿರುತ್ತಿತ್ತು ಅಂತಹ ವಿಷಯಗಳನ್ನು ಹೇಳುವಾಗ ಅವರು ಬೋಧಿಸಿದ ಪ್ರವಚನ-ಪಾಠಗಳಾಗಲಿ ನಮ್ಮ ನೆನಪಿನಂಗಳದಲ್ಲಿ ಸದಾ ಇನ್ನೂ ಗುನುಗುಟ್ಟುತ್ತಲೇ ಇದೆ.

ಅವರು ಕಲಿಸಿದ ಷಟಸ್ಥಲ, ಪಂಚಾಚಾರ, ಅಷ್ಟಾವರಣ ತರಗತಿಗಳು ನಮಗೆ ಪ್ರೇರಕವಾಗಿವೆ. ಅಂತಹ ಬಸವರಾಜಪ್ಪನವರು ನಿತ್ಯವೂ ನೂಲೇನೂರಿನಿಂದ ಬಸ್ಸಿನಲ್ಲಿ ಪ್ರಯಾಣ ಮಾಡಿ ಬಸವ ತತ್ವ ಮಹಾವಿದ್ಯಾಲಯದಲ್ಲಿ ತಮಗೊಪ್ಪಿಸಿದ ಕಾರ್ಯವನ್ನು, ಕರ್ತವ್ಯವನ್ನು ಅತ್ಯಂತ ನಿಷ್ಠೆ, ಪ್ರಾಮಾಣಿಕತೆಯಿಂದ ಮಾಡಿದ್ದಾರೆ. ಬಸವ ಹೃದಯವೊಂದು ನಮ್ಮಿಂದ ಆಗಲಿರುವುದು ನೋವಿನ ಸಂಗತಿ.

ಶ್ರೀ ಬಸವ ಮಹಾಂತ ಸ್ವಾಮೀಜಿ, ಶಿರಸಂಗಿ

ಬಸವ ತತ್ವ ಸಿದ್ಧಾಂತವನ್ನು, ಆಚರಣೆಯ ಧೈರ್ಯವನ್ನು, ಬೋಧನಾ ವಿಧಾನವನ್ನು ತುಂಬಾ ಸರಳವಾಗಿ ಹೇಳುವ ಪರಿಯನ್ನು ನಾನು ಕಲಿತ ರೀತಿ ಬಸವರಾಜಪ್ಪ ಗುರುಗಳಿಂದ, ಅವರ ತತ್ವ ಬದ್ಧ ಜೀವನ ನಮಗೆಲ್ಲ ಮಾದರಿ. ಭಾವಪೂರ್ಣ ಶ್ರದ್ಧಾಂಜಲಿ, ಓಂಶ್ರೀಗುರುಬಸವಲಿಂಗ.

ಶ್ರೀ ಚನ್ನಬಸವ ಸ್ವಾಮೀಜಿ, ಶಿಕಾರಿಪುರ

ಬಸರಾಜಪ್ಪನವರು ಬಸವತತ್ವ ಮಹಾವಿದ್ಯಾಲಯದಲ್ಲಿ ನಮಗೆಲ್ಲರಿಗೂ ಆಧ್ಯಾತ್ಮದ ತತ್ವ ಬೋಧನೆಯನ್ನು ತಿಳಿಸಿಕೊಟ್ಟಂತವರು. ನುಲಿಯ ಚಂದಯ್ಯ ನಾಡಿನಿಂದ ಬಂದು ಪ್ರತಿದಿನ ತತ್ವ ಬೋಧನೆಯ ಜೊತೆಗೆ ಜೀವನದ ಬೋಧನೆಯನ್ನು ತಿಳಿಸಿಕೊಟ್ಟವರು . ಸನ್ಯಾಸಿ ಆದವರು ಆಚಾರ, ವಿಚಾರ, ಅಧ್ಯಯನ, ಲಿಂಗ ಪೂಜೆ ಮತ್ತು ನಿಷ್ಠೆ ಸದಾ ಕಾಲ ಬೆಳೆಸಿಕೊಳ್ಳಬೇಕೆಂದು ಒತ್ತಿ ಹೇಳುತ್ತಿದ್ದರು. ಅಧ್ಯಯನಶೀಲರಾಗಬೇಕು, ಆಗ ಮಾತ್ರ ತಾವು ಸಮಾಜದಲ್ಲಿ ಮೇಲೆ ಬರಲು ಸಾಧ್ಯವೆಂದು ಹೇಳುತ್ತಿದ್ದರು. ಲಿಂಗೈಕ್ಯರಿಗೆ ಈ ಮೂಲಕ ನುಡಿ ನಮನವನ್ನು ಸಲ್ಲಿಸುತ್ತೇನೆ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ_
https://chat.whatsapp.com/GavGlyNxCLf7iBbDBH8P5b

Share This Article
2 Comments

Leave a Reply

Your email address will not be published. Required fields are marked *

ಜಿಲ್ಲಾಧ್ಯಕ್ಷ, ಜೆ.ಎಲ್.ಎಂ.ದಾವಣಗೆರೆ