ಬಬಲೇಶ್ವರ
‘ಬಸವಾದಿ ಶರಣರ ಹಿಂದೂ ಸಮಾವೇಶ’ ನಿರೀಕ್ಷಿಸಿದ ಮಟ್ಟದಲ್ಲಿ ಜನರ ಸೆಳೆಯಲು ವಿಫಲವಾಗಿದ್ದು ಚರ್ಚೆಗೆ ಗ್ರಾಸವಾಗಿದೆ. ಜೊತೆಗೆ ಸಮಾವೇಶದಲ್ಲಿ ಖಾಲಿ ಬಿದ್ದ ಕುರ್ಚಿಗಳ ವಿಡಿಯೋ ಕೂಡ ವೈರಲ್ ಆಗಿದೆ.
ಬಸವ ಸಂಸ್ಕೃತಿ ಅಭಿಯಾನಕ್ಕೆ ಕೌಂಟರ್ ನೀಡಲು ಸೋಮವಾರ ನಡೆದ ಸಮಾವೇಶಕ್ಕೆ ಜನ ಸೇರಿಸಲು ಹಲವಾರು ತಿಂಗಳಿಂದ ಸಿದ್ಧತೆ ನಡೆದಿತ್ತು.
ಎರಡು ತಿಂಗಳ ನಿರ್ಬಂಧದ ನಂತರ ಜಿಲ್ಲೆಗೆ ಬರುತ್ತಿದ್ದ ಕನ್ನೇರಿ ಸ್ವಾಮಿಯನ್ನು ಅಬ್ಬರದಿಂದ ಸ್ವಾಗತಿಸುವ, ಸಚಿವ ಎಂ ಬಿ ಪಾಟೀಲರಿಗೆ ಎಚ್ಚರಿಕೆಯ ಸಂದೇಶ ಕಳಿಸುವ ಹಲವಾರು ಉದ್ದೇಶಗಳು ಸಂಘ ಪರಿವಾರಕ್ಕಿದ್ದವು.
ಅದಕ್ಕೆ ವಿಜಯಪುರ ಮಾತ್ರವಲ್ಲದೆ ಬಾಗಲಕೋಟೆ, ಬೆಳಗಾವಿ, ಮಹಾರಾಷ್ಟ್ರದಿಂದಲೂ ಬೆಂಬಲಿಗರನ್ನು ಕರೆತರಲು ವಾಹನಗಳ ವ್ಯವಸ್ಥೆ ಮಾಡಲಾಗಿತ್ತು.
ಸೋಮವಾರ ಬೆಳಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಬಿಜೆಪಿ ಮುಖಂಡ ವಿಜುಗೌಡ ಪಾಟೀಲ ಸಮಾವೇಶಕ್ಕೆ 50,000 ಜನ ಬರಲಿದ್ದಾರೆಂದು ಹೇಳಿದ್ದರು.
ಆದರೆ ಪ್ರಮುಖ ಪತ್ರಿಕೆಯ ಸ್ಥಳೀಯ ಪತ್ರಕರ್ತರೊಬ್ಬರ ಪ್ರಕಾರ ವೇದಿಕೆಯ ಮುಂದೆ 7000 ಕುರ್ಚಿಗಳನ್ನು ಹಾಕಲಾಗಿತ್ತು. ಅದರಲ್ಲಿ ಅರ್ಧಕ್ಕೂ ಹೆಚ್ಚು ಖಾಲಿ ಬಿದ್ದಿದ್ದವು.
ಸಮಾವೇಶಕ್ಕೆ ಜನ ಬಾರದಿರುವುದಕ್ಕೆ ಕಾರಣ ಕ್ಷೇತ್ರದ ಮೇಲೆ ಎಂ ಬಿ ಪಾಟೀಲ ಅವರಿಗಿರುವ ಹಿಡಿತ. ಜಿಲ್ಲೆಯಲ್ಲಿ ಬಹಳಷ್ಟು ಬಿಜೆಪಿ ಮುಖಂಡರು ಕಾಂಗ್ರೆಸ್ ಸೇರುತ್ತಿದ್ದಾರೆ. ಒಂದು ವಾರದ ಹಿಂದೆ ಕನಮಡಿ ಮುಖಂಡ ಪ್ರಶಾಂತ ಸುಭಾಸಗೌಡ ಪಾಟೀಲ 120 ಬೆಂಬಲಿಗರೊಂದಿಗೆ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದರು ಎಂದು ಮೇಲಿನ ಮಾಹಿತಿ ನೀಡಿದ ಪತ್ರಕರ್ತರು ಹೇಳಿದರು.
ಜೊತೆಗೆ ಜಿಲ್ಲೆಯ ಮಠಾಧೀಶರ ಒಕ್ಕೂಟವೂ ಸಮಾವೇಶವನ್ನು ಬಹಿಷ್ಕರಿಸಿದ್ದರಿಂದ ಕೆಲವು ಸಣ್ಣ ಪುಟ್ಟ ಮಠಾಧೀಶರು ಮತ್ತು ಸಂಘ ಪರಿವಾರದ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುವ ಸಾಧುಗಳು ಮಾತ್ರ ಬಂದಿದ್ದರು.
ವಿಜುಗೌಡ ಪಾಟೀಲರೊಂದಿಗೆ ರಾಜಕೀಯ ವೈಷಮ್ಯವಿರುವ ಶಾಸಕ ಬಸನಗೌಡ ಯತ್ನಾಳ್ ಕೂಡ ಸಮಾವೇಶ ಬಹಿಷ್ಕರಿಸಿದರು.

ಕಣ್ಣೀರು ಶ್ರೀಗಳೆ ಹಿಂದೂ ಲಿಂಗಾಯತ ಎಂದು ಹೇಳಲು ನೀವ್ಯಾರು ನಮಗೆ ಸಂವಿಧಾನ ನಮಗೆ ಬೇಕು ಹೇಳಲು ಹಕ್ಕನ್ನು ಕೊಟ್ಟಿದೆ