ಬಗದಲ್ ಗ್ರಾಮದಲ್ಲಿ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ

ಬೀದರ

ಹೆಣ್ಣು ಹೆಣ್ಣಲ್ಲ ಹೆಣ್ಣು ರಕ್ಕಸಿಯಲ್ಲ ಹೆಣ್ಣು ಸಾಕ್ಷಾತ್ ಕಪಿಲಸಿದ್ಧಮಲ್ಲಿಕಾರ್ಜುನ ಎಂದು ಸ್ತ್ರೀ ಕುಲಕ್ಕೆ ದೈವತ್ವದ ಸ್ಥಾನಮಾನ ಕೊಟ್ಟವರು ಬಸವಾದಿ ಶರಣರು. ಸ್ತ್ರೀ ಸಮಾಜ ಎಲ್ಲವನ್ನು ಮರೆತರೂ ಬಸವಣ್ಣನವರ ಆದರ್ಶ ತತ್ವಗಳನ್ನು ಮಾತ್ರ ಎಂದಿಗೂ ಮರೆಯಬಾರದು ಎಂದು ಭಾಲ್ಕಿ ಹಿರೇಮಠ ಸಂಸ್ಥಾನದ ಪರಮಪೂಜ್ಯ ಗುರುಬಸವ ಪಟ್ಟದೇವರು ನುಡಿದರು.

ಬಗದಲ್ ಗ್ರಾಮದಲ್ಲಿ ನಡೆದ ತಿಂಗಳ ಅರಿವಿನ ಜ್ಯೋತಿ ಕಾರ್ಯಕ್ರಮದ ವಾರ್ಷಿಕೋತ್ಸವ ಹಾಗೂ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರು ಸಾನಿಧ್ಯ ವಹಿಸಿ ಮಾತನಾಡಿದರು.

ಶರಣೆ ಇಂದುಮತಿ ಕಾಶೀನಾಥ ಕೋಟೆ ಇವರ ಮನೆಯಲ್ಲಿ ನಡೆದ ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕಿ ಶರಣೆ ಆರತಿ ಪಾಟೀಲ್ ಅವರು ಮಾತನಾಡಿ, ಇಂದು ಸ್ತ್ರೀ ಸಮಾನತೆಗೆ ಆದ್ಯತೆ ಸಿಕ್ಕಿದೆ ಅಂದರೆ ಇದಕ್ಕೆ ಮೂಲ ಕಾರಣ 12ನೆಯ ಶತಮಾನದ ಬಸವಾದಿ ಶರಣರು. ಮಹಿಳೆಯನ್ನು ಅತ್ಯಂತ ಕೀಳಾಗಿ ಕಾಣುವ ಆ ಕಾಲಘಟ್ಟದಲ್ಲಿ ಸುಮಾರು 770 ಅಮರ ಗಣಂಗಳಲ್ಲಿ ಎಲ್ಲಾ ವರ್ಗದಿಂದ ಬಂದ ಮಹಿಳೆಯರಿಗೆ ಶಿಕ್ಷಣ ಸಾಧನೆ ಕಲಿಸಿ ಸಮಾನ ಸ್ಥಾನಮಾನ ಕೊಟ್ಟಿರುವುದು ಶರಣರು ಮಾಡಿದ ಮಾನವೀಯ ಬಹುದೊಡ್ಡ ಕ್ರಾಂತಿ ಎಂದರು.

ಕಾರ್ಯಕ್ರಮದ ನೇತೃತ್ವವನ್ನು ವಹಿಸಿದ್ದ ಇಂದುಮತಿ ಅಕ್ಕನವರು ಮನೆ ಮತ್ತು ಮನ ಬೆಳಗುವುದಕ್ಕೆ ಹೆಣ್ಣೆ ಮುಖ್ಯವಾಗುತ್ತಾಳೆ ಹೀಗಾಗಿ ಅವಳು ಸಂಸ್ಕಾರದಿಂದ ಕೂಡಿದವಳಾದರೆ ಮಾತ್ರ ಪ್ರಗತಿ ಸಾಧ್ಯ ಎಂದು ನುಡಿದರು.

ಕಾರ್ಯಕ್ರಮದ ಸಾನಿಧ್ಯ ಮನ್ನಾಎಖ್ಖೆಳ್ಳಿಯ ಬಸವ ಮಹಾಮಠದ ಪೂಜ್ಯ ಮಾತೆ ಮೈತ್ರಾದೇವಿ ತಾಯಿಯವರು ವಹಿಸಿದ್ದರು. ಶರಣ ನಾಗಶೆಟ್ಟಿ ಚಾಮಾ, ಶರಣಪ್ಪ ಪಿನ್ನಾ, ಅಲ್ಲಮಪ್ರಭು ನಾವದಗೆರೆ, ಶಾಂತಪ್ಪ ಧಡಿಮಾಳ, ವಿದ್ಯಾವತಿ ಸಜ್ಜನಶೆಟ್ಟಿ, ಕರುಣಾ ಷಟಕಾರ, ಸೂಗಮ್ಮ ನಾವದಗೇರೆ, ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಸಮಾಜದಲ್ಲಿ ಸಾಧನೆಗೈದ ಮಹಿಳೆಯರಿಗೆ ಸನ್ಮಾನಿಸಲಾಯಿತು, ಕುಮಾರಿ ಚಿನ್ಮಯಿ ದೀಪ್ತಿ ಅವರ ಪ್ರಾಸ್ತಾವಿಕ ನುಡಿ ಎಲ್ಲರ ಆಕರ್ಷಣೆಗೆ ಪಾತ್ರವಾಯಿತು. ಸಂಗೀತ ಕಲಾವಿದರಾದ ಶರಣೆ ನಿವೇದಿತಾ ಸ್ವಾಮಿಯವರು ವಚನ ಗಾಯನ ನಡೆಸಿಕೊಟ್ಟರು. ಬಸವಕೃಪೆ ಉದ್ಯಮದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಹೋದರಿಯರ ಮಕ್ಕಳ ಆಕರ್ಷಕ ವಚನ ನೃತ್ಯ ಎಲ್ಲರ ಗಮನ ಸೆಳೆಯಿತು.

ಶ್ರೀ ಸ್ವಾಮಿ ವಿವೇಕಾನಂದ ಯುವ ಚಳುವಳಿಯ ಸಹೋದರರು ಸಂಯೋಜಿಸಿದರು, ಪ್ರೊ. ಶಿವಲೀಲಾ ಚಟ್ನಹಳ್ಳಿ ಅವರು ಸ್ವಾಗತಿಸಿದರು. ಕಲಾವಿದ ವೈಜನಾಥ ಸಜ್ಜನಶೆಟ್ಟಿ ಅವರು ನಿರೂಪಿಸಿದರು. ಅಂಬುಜಾ ಹಮ್ಮಾ ಶರಣು ಸಮರ್ಪಣೆ ಮಾಡಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/E98vBDEsxjs5GHomGeoNMz

Share This Article
Leave a comment

Leave a Reply

Your email address will not be published. Required fields are marked *