ಗದಗ
ಇತ್ತೀಚೆಗೆ ಪಹಲ್ಗಾಮ್‌ದಲ್ಲಿ ಪ್ರವಾಸಿಗರ ಮೇಲೆ ನಡೆದ ಉಗ್ರವಾದಿಗಳ ದಾಳಿಗೆ ಪ್ರತೀಕಾರವಾಗಿ ಭಾರತೀಯ ಯೋಧರು ಉಗ್ರರ ಒಂಭತ್ತು ನೆಲೆಗಳ ಮೇಲೆ ದಾಳಿ ನಡೆಸಿ ಉಗ್ರರನ್ನು ಕೊಚ್ಚಿ ಹಾಕಿರುವುದು ಅಭಿನಂದನೀಯ ಸಂಗತಿ ಎಂದು ಡಂಬಳ-ಗದಗ ಜಗದ್ಗುರು ತೋಂಟದಾರ್ಯ ಸಂಸ್ಥಾನಮಠದ ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಹೇಳಿದ್ದಾರೆ.
ಭಾರತವು ಶಾಂತಿಪ್ರಿಯ ದೇಶವಾಗಿದ್ದರೂ ಈ ದೇಶದ ಶಾಂತಿ ಮತ್ತು ಸುವ್ಯವಸ್ಥೆಯನ್ನು ಕದಡುವ ಉಗ್ರರ ಹೀನ ಕೃತ್ಯಕ್ಕೆ ಪ್ರತಿಯಾಗಿ ಭಾರತೀಯ ಸೇನೆ ಆಪರೇಶನ್ ಸಿಂಧೂರ ಮೂಲಕ ಉಗ್ರರ ನೆಲೆಗಳನ್ನು ಪತ್ತೆ ಹಚ್ಚಿ ದಾಳಿ ನಡೆಸಿ ತಕ್ಕ ಉತ್ತರ ನೀಡಿದೆ.
ಸಮಸ್ತ ಭಾರತೀಯರು ಜಾತಿ, ಧರ್ಮ, ಪಕ್ಷ ಮತ್ತು ಪ್ರದೇಶಗಳ ಭೇದ ಮರೆತು ಭಾರತೀಯ ಸೇನೆಗೆ ಬೆಂಬಲ ವ್ಯಕ್ತಪಡಿಸಿರುವುದು ಈ ದೇಶದ ಐಕ್ಯತೆ ಹಾಗೂ ಸಮಗ್ರತೆಗೆ ಸಾಕ್ಷಿಯಾಗಿದೆ. ಇದು ನಮ್ಮ ಯೋಧರ ಬಲವನ್ನು ಹೆಚ್ಚಿಸಿದೆ ಎಂದವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿ, ಸ್ವಾಮೀಜಿ ಭಾರತೀಯ ಸೇನೆಯ ಯೋಧರನ್ನು ಹೃತ್ಪೂರ್ವಕವಾಗಿ ಅಭಿನಂದಿಸಿದ್ದಾರೆ.