ಯಾದಗಿರಿ
‘ಕಾಯಕವೇ ಕೈಲಾಸ’ ಸಂದೇಶ ಸಾಲಿನಿಂದ ನಾವೆಲ್ಲರೂ ಕಲಿಯುವುದು ಬಹಳಷ್ಟಿದೆ. ಬಸವಣ್ಣನವರ ವಚನಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದರಿಂದ ಶ್ರೀಮಂತ ಬದುಕು ನಮ್ಮದಾಗಿಸಿಕೊಳ್ಳಬಹುದು ಎಂದು ನಿಜಗುಣಾನಂದ ಶ್ರೀಗಳು ಹೇಳಿದರು.
ಯಾದಗಿರಿ ನಗರದ ಪಾಟೀಲ ಫಂಕ್ಷನ್ ಹಾಲ್ ನಲ್ಲಿ ಸಹಮತ ವೇದಿಕೆ ಮತ್ತು ಬಸವ ಸಂಸ್ಕೃತಿ ಅಭಿಯಾನ ಸಮಿತಿ ಆಯೋಜಿಸಿದ್ದ ಬಸವ ಸಂಸ್ಕೃತಿ ಅಭಿಯಾನದಲ್ಲಿ ಮಾತನಾಡಿದ ಅವರು, ಇಡೀ ಕರ್ನಾಟಕದ ಎಲ್ಲಾ ಜಿಲ್ಲೆಯ ಸಂಚರಿಸಿ, ಅಲ್ಲಿನ ವಿದ್ಯಾರ್ಥಿಗಳ ಜೊತೆ ಸಂವಾದ, ಪಾದಯಾತ್ರೆ ನಡೆಸಿ, ಸಂಜೆ ಸಮೂಹ ಭೇಟಿ ಮಾಡಿ ಬಸವಣ್ಣ, ಇನ್ನಿತರ ಶರಣರ ಬಗ್ಗೆ ತಿಳಿಸುವುದೇ ನಮ್ಮ ಅಭಿಯಾನ. ಬೃಹತ್ ಭಾರತದಲ್ಲಿ ಬಹುತ್ವ ಭಾರತ ನಿರ್ಮಿಸೋಣ ಎಂದರು.

ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ, ವೈಚಾರಿಕತೆ ಹಾಗೂ ಪ್ರಶ್ನೆ ಮಾಡುವ ಮನೋಭಾವನೆ ಇರಬೇಕು. ವೈಜ್ಞಾನಿಕತೆಯಲ್ಲಿ ವಿಚಾರ ವಿನಿಮಯ ಮಾಡಿಕೊಳ್ಳಬಹುದು. ಸುಳ್ಳು ಕಥೆಗಳಿಗೆ ಆಸ್ಪದವಿಲ್ಲ. ಧರ್ಮದ ದಂಗಲ್ ಗಿಂತ, ವೈಚಾರಿಕತೆ ದಂಗಲ್ ಬೇಕಾಗಿದೆ. ಧರ್ಮ, ದೇವರು ವ್ಯಾಪಾರವಾಗಿದೆ. 12ನೇ ಶತಮಾನಕ್ಕಿಂತ ಮೊದಲು ದೇವರು, ಧರ್ಮ ಉಳ್ಳವರ ಸ್ವತ್ತಾಗಿತ್ತು ಎಂದು ಮಾರ್ಮಿಕವಾಗಿ ಹುಲಿಕಲ್ ನಟರಾಜ ಹೇಳಿದರು.
ಧರ್ಮ ಯಾಕೆ ಬೇಕು ಎಂದು ಪ್ರಶ್ನೆ ಕೇಳಿದ ವಿದ್ಯಾರ್ಥಿನಿಗೆ ಶರಣ ಮಾರ್ಗದಲ್ಲಿ ನಡೆಯುವವರಿಗೆ ಧರ್ಮ, ದೇವರು ಮುಖ್ಯವಾಗಿರುವುದಿಲ್ಲ ಎಂದು ಸಾಣೇಹಳ್ಳಿ ಶ್ರೀ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಹಾಗೂ ಚಿಂತಕ ವಿಶ್ವರಾಧ್ಯ ಸತ್ಯಂಪೇಟೆ ಉತ್ತರಿಸಿದರು.
ಸಮಾರಂಭಕ್ಕೂ ಮುನ್ನ ವೇದಿಕೆ ಮೇಲೆ ಭಾರತದ ಸಂವಿಧಾನ ಪೂರ್ವ ಪೀಠಿಕೆ ಬೋಧಿಸಲಾಯಿತು.

ವೇದಿಕೆಯ ಮೇಲೆ ಭಾಲ್ಕಿಯ ನಾಡೋಜ ಡಾ. ಬಸವಲಿಂಗ ಪಟ್ಟದೇವರು, ಇಳಕಲ್ ಶ್ರೀ ಗುರುಮಹಾಂತ ಅಪ್ಪಗಳು, ಶ್ರೀ ಗುರುಪಾದ ಸ್ವಾಮಿ, ಶ್ರೀ ಪ್ರಭುಲಿಂಗ ಸ್ವಾಮಿ, ಶ್ರೀ ಸಿದ್ದಬಸವಸ ಕಬೀರಾನಂದ ಸ್ವಾಮಿ, ಶ್ರೀ ಜ್ಞಾನಪ್ರಕಾಶ ಸ್ವಾಮಿ, ಶ್ರೀ ಶಿವಕುಮಾರ ಸ್ವಾಮಿಗಳು, ಶ್ರೀ ಪಂಚಮ ಸಿದ್ದಲಿಂಗ ಸ್ವಾಮಿಗಳು, ಶ್ರೀ ಸಿದ್ದಲಿಂಗ ದೇವರು, ಶ್ರೀ ಶಂಭುಲಿಂಗೇಶ್ವರ ಸ್ವಾಮಿ, ಶ್ರೀ ಅಭಿನವ ಕೇದಾರ ದೇವರು ಹಾಗೂ ಗುರುಮಠಕಲ್ ಖಾಸಾ ಮಠದ ಶ್ರೀ ಶಾಂತವೀರ ಸ್ವಾಮಿಗಳು ಉಪಸ್ಥಿತರಿದ್ದರು.