ಗುಳೇದಗುಡ್ಡ
ಬಸವ ಕೇಂದ್ರದ ಮನೆಯಲ್ಲಿ ಮಹಾಮನೆ ಕಾರ್ಯಕ್ರಮ ಶನಿವಾರ ಪ್ರದೀಪ ಸುರೇಶ ಕಂಚಾಣಿ ತಿಪ್ಪಾಪೇಟೆ ಅವರ ಮನೆಯಲ್ಲಿ ನಡೆಯಿತು.
ಬಾಲಸಂಗಯ್ಯನ ಕಾಬುದು ಜೀವನಲ್ಲ, ಕಾಣಿಸಿಕೊಂಬುದು ಪರಮನಲ್ಲ ವಚನವನ್ನು ವಿಶ್ಲೇಷಣೆಗಾಗಿ ಆಯ್ದುಕೊಳ್ಳಲಾಗಿತ್ತು.
ಪ್ರಾಸ್ತಾವಿಕವಾಗಿ ಮಾತನಾಡಿದ ಪ್ರೊ. ಶ್ರೀಕಾಂತ ಗಡೇದ ಅವರು, ಶರಣ ಬಾಲಸಂಗಣ್ಣ ಅವರ ಉಲ್ಲೇಖವು ಭೈರವೇಶ್ವರ ಕಾವ್ಯದ ಕಥಾ ಮಣಿಸೂತ್ರ ರತ್ನಾಕರದಲ್ಲಿ ಬರುತ್ತಿದ್ದು, ಈತ ಬಸವೇಶ್ವರರ ಸಮಕಾಲೀನ ಶರಣರಾಗಿದ್ದು, ಕಮಠೇಶ್ವರಲಿಂಗ ಎಂಬುದು ಅವರ ಅಂಕಿತವಾಗಿದೆ. ಅವರ ವಚನಗಳಲ್ಲಿ ಅಂಗ ಲಿಂಗದ ಸಾಮರಸ್ಯದ ಕುರಿತು ಇದ್ದು, ಅವರೊಬ್ಬ ಶ್ರೇಷ್ಠ ಅನುಭಾವಿಗಳು. ಹಿಂದೆ ಶರಣರು ನೀಡಿದ ಸ್ವಾತಂತ್ರ್ಯ, ಸಮಾನತೆಗಳನ್ನೇ ಇಂದು ನಾವು ಅನುಭವಿಸುತ್ತಿದ್ದೇವೆ ಎಂದರು.
ವಚನದ ವಿಶ್ಲೇಷಣೆ ಮಾಡಿದ ಶರಣ ಮಹಾಂತೇಶ ಸಿಂದಗಿ ಅವರು – ಈ ವಚನದಲ್ಲಿ ಶಿವ-ಜೀವರ ಸಂಬಂಧವನ್ನು ವಚನಕಾರರು ಬಿಚ್ಚಿಟ್ಟಿದ್ದಾರೆ. ಜೀವ ಚೈತನ್ಯ ಸಕಲ ವಸ್ತುಗಳಲ್ಲಿದೆ. ನಮ್ಮೊಳಗೆ ಬಿಟ್ಟು ಹೊರಜಗತ್ತಿನಲ್ಲಿ ಶಿವನನ್ನು ಕಾಣುವ ವ್ಯರ್ಥ ಹುಡುಕಾಟದಲ್ಲಿದ್ದೇವೆ. ಆತನನ್ನು ಕಾಣಲು ನಮ್ಮೊಳಗೆ ಹುಡುಕುವ ಸಾಹಸ ಮಾಡಬೇಕೆಂದು ವಚನಕಾರರು ಸೂಕ್ಷ್ಮವಾಗಿ ತಿಳಿಸುತ್ತಿದ್ದಾರೆ.

ಆ ಅರಿವು ಆಗುತ್ತಿದ್ದಂತೆ ಮನಸ್ಸು ಚಂಚಲವಾಗಿ ಬಿಡುತ್ತದೆ. ಕಾರಣ ಆ ಪರಮಾತ್ಮ ಅರಿಷಡ್ವರ್ಗ, ಅಷ್ಟಮದಗಳಿಂದಾಗಿ ಮರೆಯಾಗಿದ್ದಾನೆ. ಆತನನ್ನು ಹುಡುಕಬೇಕಾದರೆ ಇಷ್ಠಲಿಂಗವನ್ನು ಕಟ್ಟಿಕೊಳ್ಳಬೇಕು. ಮೂಲ ಚೈತನ್ಯ ಅಷ್ಟತನುಗಳ ಮೂಲಕ ಈ ಶರೀರದಲ್ಲಿಯೇ ಅಡಗಿದೆ. ಪರಶಿವನನ್ನು ಅಷ್ಠಾವರಣಗಳ ಮೂಲಕ ತಿಳಿಯಬೇಕು ಎಂದರು.
ಇದೇ ವಚನವನ್ನು ವಿಶ್ಲೇಷಿಸಲು ಪ್ರಾರಂಭಿಸಿದ ಶರಣ ಚಿದಾನಂದಸಾ ಕಾಟವಾ ಅವರು, ಮಣ್ಣು ಬಿಟ್ಟು ಮಡಿಕೆ ಇಲ್ಲ, ತನ್ನ ಬಿಟ್ಟು ದೇವರಿಲ್ಲ ಎನ್ನುವಂತೆ ಆ ಪರಶಿವನು ನಮ್ಮಲ್ಲಿಯೇ ಇದ್ದು ಆತ ನಿರಾಕಾರನೂ ಸರ್ವಭರಿತನೂ ಆಗಿದ್ದಾನೆ. ಜೀವ-ಶಿವ (ಪರಮ)ರ ನಡುವಣ ಸಂಬಂಧವನ್ನು ಅರಿಯಬೇಕು. ಕಾಣಬರುವ ಜೀವನೂ, ಕಾಣದಿರುವ ಪರಮನೂ ನಮ್ಮಲ್ಲಿದ್ದು ಅದರ ನಡುವಣ ನೆರಿಗೆಯನ್ನು ಅರಿಯಬೇಕು. ಇದು ಬಹಳ ಸೂಕ್ಷ್ಮವಾಗಿದೆ. ಇದನ್ನು ಅರಿತಾತನೇ ಶರಣನಾಗುತ್ತಾನೆ ಎಂದರು.
ಸಮಾರೋಪಗೈಯುತ್ತ ಪ್ರೊ. ಸಿದ್ಧಲಿಂಗಪ್ಪ ಬರಗುಂಡಿಯವರು, ಈ ವಚನವು ಬಹಳ ಸೂಕ್ಷ್ಮವಾಗಿದ್ದು, ಅಷ್ಟೇ ತಾತ್ವಿಕವಾಗಿದೆ. ಆ ಮಹಾಲಿಂಗವೇ ಈ ವಿಶ್ವವಾಗಿ ರೂಪುಗೊಂಡಾಗ ಅದರ ಕಣ ಕಣದಲ್ಲಿಯೂ ಆ ವಿಶ್ವಚೈತನ್ಯವೇ ಅಡಗಿದೆ. ಅದು ಪಂಚಭೂತಗಳಾಗಿ, ಪಂಚಸಾದಾಖ್ಯಗಳಿಂದಾಗಿ ವಿವಿಧ ರೂಪವನ್ನು ತಾಳಿದೆ ಅದರಲ್ಲಿ ಮಾನವ ಜೀವಿಯೂ ಒಂದು.

ಅದರಂತೆಯೇ ಜೀವ ಪರಮನ ಸಂಬಂಧವೂ ಇದನ್ನೇ ಅಲ್ಲಮರು ಒಂದೆಂಬೆನೆ ಎರಡಾಗಿದೆ, ಎರಡೆಂಬೆನೆ ಒಂದಾಗಿದೆ ಎಂದು ಹೇಳಿದ್ದು. ಮೇಲೆ ಕಾಣುವಂತಿರುವ ಅಂಗ, ಒಳಗಿರುವ ಲಿಂಗವೇ ಆಗಿದ್ದಾನೆ. ಹೀಗೆ ತೋರಿ ಅಡಗುವ ಅಥವಾ ಐಕ್ಯವಾಗುವ ಸ್ಥಿತಿಯನ್ನೇ ಮಾಯೆ ಎಂದು ಕರೆದಿದ್ದಾರೆ.
ಇದನ್ನು ನಿಜಗುಣರು ಕಲ್ಪಿತ ಪುರುಷ ಎಂದು ಕರೆದಿದ್ದಾರೆ. ಕೊನೆಯಲ್ಲಿ ಯಾರು ಈ ಸೂಕ್ಷ್ಮ ಭೇದವನು ಅಂದರೆ ಅವೆರಡೂ ಒಂದು ಬಿಟ್ಟು ಇನ್ನೊಂದಿಲ್ಲ ಎಂಬುದನ್ನು ಅರಿಯುತ್ತಾನೆಯೋ, ಅರಿದು ಆಚಾರಿಸುತ್ತಾನೆಯೋ ಆತನೇ ಶರಣನಾಗುತ್ತಾನೆ ಎಂಬುದು ಬಾಲಸಂಗಣ್ಣನವರ ಅಭಿಮತ ಎಂದು ತಿಳಿಸಿದರು.
ಪ್ರಾರಂಭದಲ್ಲಿ ಜಯಶ್ರೀ ಬರಗುಂಡಿ, ದಾನಮ್ಮ ಕುಂದರಗಿ, ಶ್ರೀದೇವಿ ಶೇಖಾ ಇವರಿಂದ ವಚನ ಪ್ರಾರ್ಥನೆ ನಡೆಯಿತು. ವಚನದೊಂದಿಗೆ ಮಂಗಲವಾಯಿತು
ಮಹಾಮನೆ ಜರುಗಲು ಅವಕಾಶ ಮಾಡಿಕೊಟ್ಟ ಮಹಾಮನೆಯ ಕುಟುಂಬದವರಿಗೆ ಹಾಗೂ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವರೆಲ್ಲರಿಗೂ ಕಾರ್ಯಕ್ರಮದ ಆಯೋಜಕರು ಎಲ್ಲರನ್ನು ಸ್ವಾಗತಿಸಿ ಕೊನೆಯಲ್ಲಿ ಶರಣು ಸಮರ್ಪಣೆ ಗೈದರು.
ಪ್ರೊ. ಬಸಲಿಂಗಯ್ಯ ಕಂಬಾಳಿಮಠ, ಪಾಂಡಪ್ಪ ಕಳಸಾ, ಪುತ್ರಪ್ಪ ಬೀಳಗಿ, ಶಿವಾನಂದ ಸಿಂದಗಿ, ಜಿರ್ಲಿ, ಪ್ರೊ. ಸುರೇಶ ರಾಜನಾಳ, ಹುಚ್ಚೇಶ ಯಂಡಿಗೇರಿ, ರಾಜಶೇಖರ ಶೆಟ್ಟರ, ಚಂದ್ರಶೇಖರ ತೆಗ್ಗಿ, ಮಹಾಲಿಂಗಪ್ಪ ಕರನಂದಿ, ಕುಮಾರ ಉಣಚಗಿ, ಬಸವರಾಜ ಖಂಡಿ, ಲೀಲಾ ಚಿಂದಿ, ಕಂಚಾಣಿ ಕುಟುಂಬದರು, ಮಹಾಮನೆಯ ಕುಟುಂಬದ ಬಂಧುಗಳಲ್ಲದೆ ನೆರೆಹೊರೆಯವರು ಸೇರಿದಂತೆ ಬಸವ ಭಾಂಧವರಲ್ಲದೆ ಪಟ್ಟಣದ ಹೊರವಲಯದ ಬಸವ ಕೇಂದ್ರದ ಸದಸ್ಯರು google meet ಮೂಲಕ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.